ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಉದಯಾಸ್ತಮಾನವೆಂಬೆರಡು ಕೊಳಗ

ವಚನ ಬೆಳಕು; ಉದಯಾಸ್ತಮಾನವೆಂಬೆರಡು ಕೊಳಗ

ಉದಯಾಸ್ತಮಾನವೆಂಬೆರಡು ಕೊಳಗ

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ
ಶಿವನ ನೆನೆಯಿರೆ, ಶಿವನ ನೆನೆಯಿರೆ ಈ ಜನ್ಮ ಬಳಿಕಿಲ್ಲ.
ಚೆನ್ನಮಲ್ಲಿಕಾರ್ಜುನದೇವರ ನೆನೆದು
ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು.
                                                           -ಅಕ್ಕಮಹಾದೇವಿ
ಜನಿಸಿದ ಪ್ರತಿಯೊಂದು ಜೀವಿ ಪ್ರತಿಕ್ಷಣ ಸಾವಿನ ದವಡೆಯ ಕಡೆಗೇ ಸಾಗುತ್ತಿರುತ್ತದೆ. ಸಾವು ಬರುವ ಮೊದಲೇ ಮಂಗಳಕರವಾದ ಶಿವನನ್ನು ನೆನೆದು ಮಂಗಳಕರವಾದುದನ್ನೇ ಮಾಡಿರಿ. ಇನ್ನೊಂದು ಜನ್ಮ ಇಲ್ಲದ ಕಾರಣ ಏನಾದರೂ ಮಂಗಳಕರವಾದುದನ್ನು ಮಾಡಲು ಸಾಧ್ಯವಿದ್ದರೆ ಇದೇ ಜನ್ಮದಲ್ಲಿ ಸಾಧ್ಯ. ಇಂಥ ಮಂಗಳಕರವಾದ ಮತ್ತು ಮಂಗಳಕರವಾದುದನ್ನೇ ಮಾಡಲು ಪ್ರೇರೇಪಿಸುವ ಶಿವನಾದ ಚೆನ್ನಮಲ್ಲಿಕಾರ್ಜುನದೇವರ ನೆನೆದು ಆ ಮೂಲಕ ಸದ್ಭಕ್ತರಾಗಿ ಮಂಗಳಕರವಾದುದನ್ನೇ ಸಾಧಿಸಿ ಮುಕ್ತಿಪಡೆದವರಲ್ಲಿ ಪಂಚಮಹಾಪಾತಕರೂ ಇದ್ದಾರೆ. ಬ್ರಹ್ಮಹತ್ಯೆ, ಸುರಾಪಾನ, ಕಳ್ಳತನ, ಗುರುವಿನ ಪತ್ನಿಯ ಕಡೆಗೆ ಲಕ್ಷ್ಯ ಕೊಡುವುದು ಮತ್ತು ಇಂಥವರ ಜೊತೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಪಂಚ ಮಹಾಪಾತಕ ಎಂದು ಕರೆಯುತ್ತಾರೆ. ಅವರು ತಾವು ಮಾಡಿದ ಪಾಪ ಕಾರ್ಯಗಳಿಗೆ ಪಶ್ಚಾತ್ತಾಪ ಪಟ್ಟು ಪರಿಶುದ್ಧರಾದ ಕಾರಣ ಮುಕ್ತಿಯನ್ನು ಹೊಂದಿದವರಾಗಿದ್ದರೆ ಎಂದು ಅಕ್ಕ ತಿಳಿಸುತ್ತಾಳೆ.
ಮಾನವರೆಲ್ಲ ಕಾಲದ ಕಟ್ಟಳೆಯಲ್ಲೇ ಬದುಕುತ್ತಿದ್ದಾರೆ. ಆಯುಷ್ಯವನ್ನು ಅಳೆಯಲು ಸೂರ್ಯ ಹುಟ್ಟುವ ಸಮಯವಾದ ಬೆಳಗು ಮತ್ತು ಸೂರ್ಯ ಮುಳುಗುವ ಸಂಜೆ ಎಂಬ ಎರಡು ಕೊಳಗಗಳಿವೆ. ಹಗಲು ಮತ್ತು ರಾತ್ರಿಯನ್ನು ಸೂಚಿಸುವ ಈ ಕೊಳಗಗಳು ನಮಗೆ ಸಂಬಂಧಿಸಿದ ತಮ್ಮ ಕರ್ತವ್ಯವನ್ನು ಮುಗಿಸುವ ಮೊದಲೇ, ಅಂದರೆ ನಮ್ಮ ಆಯುಷ್ಯ ತೀರುವ ಮೊದಲೇ ನಾವು ನಮ್ಮ ಕರ್ತವ್ಯವನ್ನು ಮುಗಿಸಬೇಕಿದೆ. ಸಕಲ ಜೀವರಾಶಿಗೆ ಒಳ್ಳೆಯದಾಗುವಂಥ ಮಂಗಲಮಯವಾದ ಕರ್ತವ್ಯವನ್ನು ಪಾಲಿಸುವುದೇ ನಮ್ಮ ಗುರಿಯಾಗಿರಬೇಕಾಗಿದೆ.
ಶರಣರಿಗೆ ಮರಣವೇ ಮಹಾನವಮಿಯಾದ ಕಾರಣ ಅವರು ಬದುಕಿನಲ್ಲಿ ಯಾವುದಕ್ಕೂ ಅಂಜಲಿಲ್ಲ. ದೇವರ ಆರಾಧನೆಗಾಗಿ ಆಯುಷ್ಯ ತೀರುವವರೆಗೂ ಕಾಯಲಿಲ್ಲ. ಬದುಕಿನ ಕೊನೆಗಾಲದಲ್ಲಿರುವವರ ತತ್ತ್ವಜ್ಞಾನ ಇದಲ್ಲ. ಆಯುಷ್ಯ ತೀರುವ ಮೊದಲೇ ಪ್ರತಿಯೊಬ್ಬರು ನಿಜದ ಸಾಕ್ಷಾತ್ಕಾರವನ್ನು ಹೊಂದಬೇಕಾಗುತ್ತದೆ.
ಜೀವನ್ಮುಖಿಯಾದ ಅನುಭಾವ ತತ್ತ್ವಜ್ಞಾನವನ್ನು ಹೊಂದಿರುವ ಬಸವಾದಿ ಶರಣರ ಈ ಲಿಂಗವಂತ ಧರ್ಮವು ಈ ಭೂಮಿಯ ಮೇಲೆ ಕಲ್ಯಾಣರಾಜ್ಯವನ್ನು ಕಟ್ಟುವ ಉದ್ದೇಶವನ್ನು ಹೊಂದಿದೆ. ಇದು ಮುಖ್ಯವಾಗಿ ಯುವಕ ಯುವತಿಯರ ಧರ್ಮವಾಗಿದೆ. ಅಂತೆಯೆ, ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ ಶಿವಸಾಕ್ಷತ್ಕಾರ ಮಾಡಿಕೊಳ್ಳಬೇಕೆಂದು ಅಕ್ಕ ಹೇಳಿದ್ದಾಳೆ. ಶರಣರ ಶಿವ ಅಗಮ್ಯ, ಅಗೋಚರ, ಅಗೋಚರ ಮತ್ತು ಅಪ್ರತಿಮನಾಗಿದ್ದಾನೆ. ಶಿವ ಎಂದರೆ ಮಂಗಳಕರ. ಸತ್ಯವು ಮಂಗಳಕರವಾಗಿರುತ್ತದೆ. ಸತ್ಯ ಮತ್ತು ಮಂಗಲಮಯವಾಗಿರುವಂಥದ್ದು ಸುಂದರವಾಗಿರುತ್ತದೆ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *