ಧಾರವಾಡ: ದನಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಗರಗ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಗರಗ ಗ್ರಾಮದ ಮಡಿವಾಳಪ್ಪ ನಿಂಗಪ್ಪ ಮಲ್ಲೇದಿ, ಮಕ್ತುಂಸಾಬ ಹುಸೇನಸಾಬ ಶೇಖ, ನಿಂಗಪ್ಪ ಮಡಿವಾಳಪ್ಪ ವಾಲೀಕಾರ, ಮಹಾಂತೇಶ ನಿಂಗಪ್ಪ ಹಡಗಲಿ ಮತ್ತು ಧಾರವಾಡದ ರಮಜಾನಸಾಬ ಶರೀಫಸಾಬ ಬೇಪಾರಿ ಎಂಬುವರೇ ಬಂಧಿತ ಆರೋಪಿಗಳು. ಇವರಿಂದ 2.60 ಸಾವಿರ ರೂಪಾಯಿ ನಗದು ಮತ್ತು ದನಗಳ ಕಳ್ಳತನಕ್ಕೆ ಬಳಸುತ್ತಿದ್ದ 2 ಲಕ್ಷ ರೂಪಾಯಿ ಮೌಲ್ಯದ 1 ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಪಿಐ ಎಸ್.ಸಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಕಿರಣ ಮೋಹಿತೆ, ಎಎಸ್ಐ ಸಾತಪುತೆ, ಎಚ್.ಎಂ.ನರಗುಂದ, ಎಸ್.ಎಫ್. ತಿಮ್ಮಾಪುರ, ವೈ.ಜಿ.ಶಿವಮ್ಮನವರ, ಸಂತೋಷ್ ಜವಳಿ, ಎ.ಬಿ.ಸೊರಟೂರ, ಎಸ್.ಎಫ್.ಕಟ್ಟಿಮನಿ, ಮಂಜು ಕೆರೂರ ಅವರನ್ನೊಳಗೊಂಡ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ತಾಲೂಕಿನ ವಿವಿಧೆಡೆ ಎತ್ತು, ಎಮ್ಮೆ ಮತ್ತು ಹಸುಗಳನ್ನು ಕಳ್ಳತನ ಮಾಡುವ ಕೃತ್ಯಗಳು ನಡೆಯುತ್ತಿದ್ದವು. ಈ ಸಂಬಂಧ ರೈತರು ತೀವ್ರ ಆತಂಕಕ್ಕೊಳಗಾಗಿದ್ದರು. ಇದೀಗ ಕೆಲವು ಆರೋಪಿಗಳು ಬಲೆಗೆ ಬಿದ್ದಿದ್ದು, ಇನ್ನುಳಿದವರನ್ನು ಸಹ ಕಂಬಿಯ ಹಿಂದೆ ಕಳಿಸುವ ಕೆಲಸವನ್ನು ಪೊಲೀಸರು ಮಾಡಬೇಕಿದೆ.