ಹುಬ್ಬಳ್ಳಿ-ಧಾರವಾಡ ಸುದ್ದಿ
ಹೊರಟ್ಟಿಗೆ ರತ್ನಗಂಬಳಿ: ಬಿಜೆಪಿ ಸೇರ್ಪಡೆಗೆ ವರಿಷ್ಠರ ಸಮ್ಮತಿ

ಹೊರಟ್ಟಿಗೆ ರತ್ನಗಂಬಳಿ: ಬಿಜೆಪಿ ಸೇರ್ಪಡೆಗೆ ವರಿಷ್ಠರ ಸಮ್ಮತಿ

ಎಲ್ಲ ಕುತೂಹಲಕ್ಕೆ ಶಾ ತೆರೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ, ಜೆಡಿಎಸ್‌ನ ಹಿರಿತಲೆಗಳಲ್ಲಿ ಒಂದಾದ ಉತ್ತರ ಕರ್ನಾಟಕದ ಗಟ್ಟಿ ಧ್ವನಿ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪಕ್ಷದ ರಾಷ್ಟ್ರೀಯ ನಾಯಕರು ಸಮ್ಮತಿಸಿದ್ದಾರೆ.
ಕೇಸರಿ ಪಕ್ಷದ ಅಧಿಕೃತ ಸಿಗ್ನಲ್ ಸಿಗುತ್ತಿದ್ದಂತೆಯೇ ಇಂದು ಚುನಾವಣಾ ಚತುರ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಬಸವರಾಜ ಹೊರಟ್ಟಿ ಇಂದು ಭೇಟಿಯಾಗಿ ಹೂಗುಚ್ಛ ನೀಡಿ ಧನ್ಯವಾದ ಸಲ್ಲಿಸಿದರು.


ಬಿಜೆಪಿಗೆ ಹೊರಟ್ಟಿ ಸೇರ್ಪಡೆಗಾಗಿ ಒತ್ತಾಸೆ ನೀಡಿದ್ದ ಕೇಂದ್ರ ಸಚಿವ ಪ್ರಲ್ಹಾದಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಮ್ಮತಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುದ್ದು ಹಾಜರಿದ್ದು ಸಂತಸ ವ್ಯಕ್ತಪಡಿಸಿದರು.
ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಇದುವರೆಗೆ ಯಾರಿಗೂ ಟಿಕೆಟ್ ಘೋಷಿಸಿಲ್ಲ. ಹೊರಟ್ಟಿ ಸೇರ್ಪಡೆ ಬಳಿಕ ಘೋಷಣೆ ಮಾಡಲು ನಿರ್ಧರಿಸಲಾಗಿತ್ತು. ಹೊರಟ್ಟಿ ಸೇರ್ಪಡೆಗೆ ಇಂದು ಸ್ವತಃ ಷಾ ಅವರೇ ಅಸ್ತು ಎನ್ನುವ ಮೂಲಕ ವಯೋಮಿತಿ, ಕೆಲವರ ವಿರೋಧದ ಕಾರಣಕ್ಕೆ ಉಂಟಾಗಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಅಲ್ಲದೇ ಬಿಜೆಪಿ ಪಾಲಿಗೆ ಕಗ್ಗಂಟಾಗೆ ಉಳಿದಿದ್ದ ಪಶ್ಚಿಮ ಕ್ಷೇತ್ರ ಈ ಬಾರಿ ಕಮಲ ವಶವಾಗುವುದು ಖಚಿತವಾದಂತಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತ ನಾಯಕತ್ವ ಬಲಪಡಿಸಲು ಹಿರಿಯ ನಾಯಕ ಬಸವರಾಜ ಹೊರಟ್ಟಿಯವರನ್ನು ಪಕ್ಷಕ್ಕೆ ಕರೆತರಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಷಾ ಅವರನ್ನು ಭೇಟಿಯಾಗಿ ಹೊರ ಬಂದ ನಂತರ ಹೊರಟ್ಟಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಸಭಾಪತಿ ಸ್ಥಾನಕ್ಕೆ ಇಷ್ಟರಲ್ಲೇ ರಾಜೀನಾಮೆ ನೀಡುತ್ತೇನೆ. ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸುವುದಾಗಿ ಹೇಳಿದರು.
ಹೊರಟ್ಟಿಯವರು ೧೧ ರ ನಂತರ ಸಭಾಪತಿ ಹುದ್ದೆಗೆ ರಾಜೀನಾಮೆ ನೀಡುವ ಸಾದ್ಯತೆಗಳಿವೆ. ಅವರೇ ಪಶ್ಚಿಮ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಎಂಬುದನ್ನು ಸಚಿವ ಆರ್.ಅಶೋಕ ಅವರು ಖಚಿತಪಡಿಸಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಳಿಗೆ ಕೊರತೆಯಿಲ್ಲ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ತಾವೇ ಅಭ್ಯರ್ಥಿ ಎಂದು ಇತ್ತೀಚೆಗೆ ಪ್ರತಿಪಾದಿಸಿದ್ದರು. ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಜೂನ್ ನಲ್ಲಿ ನಡೆಯಲಿರುವ ಚುನಾವಣೆಗೆ ಬಿಜೆಪಿ ಏಪ್ರಿಲ್ ಮೊದಲ ವಾರದಲ್ಲಿ ಮೂರು ಕ್ಷೇತ್ರಗಳಿಗೆ ಅಧಿಕೃತ ಅಭ್ಯರ್ಥಿಗಳ ಹೆಸರು ಪ್ರಕಟಿಸಿ, ಹೊರಟ್ಟಿ ಪ್ರತಿನಿಧಿಸುವ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಹಾಗೆಯೇ ಉಳಿಸಿಕೊಂಡಿತ್ತು.
ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹಿಡಿತ ಹೊಂದಿದ್ದರೂ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಮೇಲೆ ಹೊರಟ್ಟಿ ಪ್ರಬಲ ಹಿಡಿತವಿದ್ದು, ಏಳು ಬಾರಿ ಗೆಲ್ಲುವ ಮೂಲಕ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೊರಟ್ಟಿ ಉತ್ಸಾಹಕ್ಕೆ ರಾಜ್ಯ ಬಿಜೆಪಿಯ ಕೆಲ ನಾಯಕರು ಮಣೆ ಹಾಕಿದರೂ ವಯಸ್ಸು ಅಡ್ಡಿಯಾಗಲಿದೆ ಎಂಬ ಕೆಲವರ ಲೆಕ್ಕಾಚಾರ ಉಲ್ಟಾ ಆಗಿದೆ.

administrator

Related Articles

Leave a Reply

Your email address will not be published. Required fields are marked *