ಹುಬ್ಬಳ್ಳಿ-ಧಾರವಾಡ ಸುದ್ದಿ
ಮರಕ್ಕೆ ಕ್ರೂಸರ್ ಡಿಕ್ಕಿ: 9 ಸಾವು;   ಕರಾಳ ಶನಿವಾರ – ಬಾಡ ಬಳಿ ಭೀಕರ ಅಪಘಾತ

ಮರಕ್ಕೆ ಕ್ರೂಸರ್ ಡಿಕ್ಕಿ: 9 ಸಾವು; ಕರಾಳ ಶನಿವಾರ – ಬಾಡ ಬಳಿ ಭೀಕರ ಅಪಘಾತ

ನಿಶ್ಚಿತಾರ್ಥ ಮುಗಿಸಿ ಬರುವಾಗ ಅವಘಡ

ಧಾರವಾಡ: ರಸ್ತೆ ಬದಿಯ ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ನಿಶ್ಚಿತಾರ್ಥ ಮುಗಿಸಿ ವಾಪಸ್ಸಾಗುತ್ತಿದ್ದ 9 ಜನರು ಸಾವನ್ನಪ್ಪಿದ ಘಟನೆ ತಾಲೂಕಿನ ಬಾಡ ಗ್ರಾಮದ ಬಳಿ ಧಾರವಾಡ-ಹಳಿಯಾಳ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.


ಅಪಘಾತದಲ್ಲಿ ಗಾಯಗೊಂಡಿರುವ ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಇತರ ಗಾಯಾಳುಗಳಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಲೂಕಿನ ಬೆನಕಟ್ಟಿ ಗ್ರಾಮದ ಅನನ್ಯಾ ಮಲ್ಲಪ್ಪ ದಾಸನಕೊಪ್ಪ (14), ಹರೀಶ ಪ್ರಕಾಶ ಅಂಗಡಿ (13), ಶಿಲ್ಪಾ ಶಿವಾನಂದ ದಾಸನಕೊಪ್ಪ (34), ನೀಲವ್ವ ಕಲ್ಲಪ್ಪ ದಾಸನಕೊಪ್ಪ (60), ಮಹೇಶ್ವರ ಚನ್ನಬಸಪ್ಪ ತೋಟದ (11), ಶಿವಲಿಂಗಯ್ಯ ಚನಬಸಯ್ಯ ಹಿರೇಮಠ (35), ಮಧುಶ್ರೀ ಬಸವರಾಜ ದಾಸನಕೊಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಚನ್ನವ್ವ ನಿಗದಿ (46) ಮತ್ತು ಮನುಶ್ರೀ ಬಸವರಾಜ ದಾಸನಕೊಪ್ಪ (20) ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 13 ವರ್ಷದ ಮುತ್ತು ಮರಿಗೌಡರ ಮತ್ತು 6 ವರ್ಷದ ಆರಾಧ್ಯರ ಸ್ಥಿತಿ ಗಂಭೀರವಾಗಿದೆ.

ಬೆನಕನಕಟ್ಟಿ ಗ್ರಾಮದ ದಾಸನಕೊಪ್ಪ ಕುಟುಂಬದ ಮಂಜುನಾಥನ ಮದುವೆ ಇಂದು ಮನಸೂರ ಗ್ರಾಮದ ಶ್ರೀ ರೇವಣಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಮನಸೂರ ಗ್ರಾಮದ ಶ್ರೀ ರೇವಣಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ನಿಶ್ಚಿತಾರ್ಥ ಮುಗಿಸಿ ಮರಳಿ ಬೆನಕಟ್ಟಿಗೆ ತೆರಳುತ್ತಿದ್ದರು. ರಾತ್ರಿ 1.30 ರಿಂದ 2 ಗಂಟೆ ಸುಮಾರಿಗೆ ಅತಿ ವೇಗದಿಂದ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಚಾಲಕ ವಿನಾಯಕ ಕಮ್ಮಾರನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಚಾಲಕ ವಿನಾಯಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತಕ್ಕೀಡಾದ ಕ್ರೂಸರ್‌ನಲ್ಲಿ 20 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಭೇಟಿ ನೀಡಿದ್ದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

administrator

Related Articles

Leave a Reply

Your email address will not be published. Required fields are marked *