ಹಿರಿತನ, ಜಾತಿ, ಕ್ಷೇತ್ರ, ಅನುಭವ ಲೆಕ್ಕಾಚಾರ
ಹುಬ್ಬಳ್ಳಿ: ನಾಡಿದ್ದು ಶನಿವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದ್ದು ಮೂರನೇ ಅವಧಿಗೆ ಕೇಸರಿ ಬಾವುಟ ಹಾರುವುದು ನಿಶ್ಚಿತವಾಗಿದ್ದು, ಬಿಜೆಪಿ ಪಾಳಯದಲ್ಲಿ ಸದ್ದಿಲ್ಲದೇ ನಡೆದಿದ್ದರೂ, ಇಂದು ಮತ್ತು ನಾಳೆ ತೀವ್ರಗೊಳ್ಳಲಿದೆ.
ಇಂದು ರಾತ್ರಿ ವೇಳೆಗೆ ಬಿಜೆಪಿ ಕೋರ್ ಕಮೀಟಿ ಸಭೆ ನಡೆಯಲಿದ್ದು ನಾಳೆ ಸಮಾಲೋಚನೆ ನಡೆಸಿ ಎಲ್ಲ ಸದಸ್ಯರ ಅಭಿಪ್ರಾಯ ಆಲಿಸಿ ತೀರ್ಮಾನಕ್ಕೆ ಬಂದರೂ,ನಾಡಿದ್ದು ಬೆಳಿಗ್ಗೆ ನಾಮಪತ್ರ ಸಲ್ಲಿಸಲು ಕೆಲ ನಿಮಿಷ ಮೊದಲು ಘೋಷಣೆಯಾಗುವುದು ನಿಶ್ಚಿತವಾಗಿದೆ.
ಬಸವರಾಜ ಹೊರಟ್ಟಿಯವರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹುಬ್ಬಳ್ಳಿಗೆ ಆಗಮಿಸಿದ್ದು ಚುನಾವಣೆ ನಂತರವೇ ತೆರಳಲಿದ್ದು ಅವರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿರ್ಧಾರವೇ ಅಂತಿಮವಾಗಲಿದೆ.
ಮೇಯರ್ ಗೌನ್ ಭಾಗ್ಯ ಸಾಮಾನ್ಯರಿಗೆ ಮೀಸಲಾಗಿರುವದರಿಂದ ಸಾಮಾನ್ಯ ಸ್ಥಾನದಿಂದ ಆಯ್ಕೆಯಾದವರಿಗೆ ಮಾತ್ರ ನೀಡಬೇಕೆಂಬ ವಿಚಾರ ಕಳೆದೆರಡು ದಿನಗಳಿಂದ ಮುನ್ನೆಲೆಗೆ ಬಂದಿದ್ದು, ಧಾರವಾಡಕ್ಕೆ ನೀಡಬೇಕೋ ಅಥವಾ ಹುಬ್ಬಳ್ಳಿಗೋ ಎಂಬುದು ಇನ್ನೊಂದು ಜಿಜ್ಞಾಸೆ ತೀವ್ರವಾಗಿದೆ.ಅಲ್ಲದೇ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಜಾತಿ ಲೆಕ್ಕಾಚಾರ ಆರಂಭಗೊಂಡಿದ್ದು, ಇಷ್ಟೆ ಅಲ್ಲದೇ ಈ ಹಿಂದೆ ಅಧಿಕಾರ ಮಾಡಿದ ಅನುಭವಿಗಳಿಗೆ ಮಣೆ ಹಾಕಬೇಕೋ ಅಥವಾ ಹಿರಿತನವನ್ನು ಪರಿಗಣಿಸಬೇಕೋ ಎಂಬುದು ದೊಡ್ಡ ಪ್ರಶ್ನೆಗಳಾಗಿದೆ.
ಧಾರವಾಡದವರಿಗೆ ಪಟ್ಟ ಕಟ್ಟುವ ವಿಚಾರಕ್ಕೆ ಬಂದರೆ ಈರೇಶ ಅಂಚಟಗೇರಿ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ ಶಂಕರ ಶೇಳಕೆ ಇದ್ದರೆ, ಹುಬ್ಬಳ್ಳಿಯ ಕೋಟಾದಡಿ ಮಾಜಿ ಮೇಯರ್ ವೀರಣ್ಣ ಸವಡಿ, ರಾಮಣ್ಣ ಬಡಿಗೇರ, ರಾಜಣ್ಣಕೊರವಿ, ತಿಪ್ಪಣ್ಣ ಮಜ್ಜಗಿ, ಮಲ್ಲಿಕಾರ್ಜುನ ಗುಂಡೂರ, ಉಮೇಶ ಕೌಜಗೇರಿ, ಚಂದ್ರಶೇಖರ ಮನಗುಂಡಿ, ಶಿವು ಮೆಣಸಿನಕಾಯಿ ಹಾಗೂ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ ಹೆಸರು ಬರಲಿದೆ ಎನ್ನಲಾಗಿದೆ. ಶಾಸಕ ಬೆಲ್ಲದ ಪಶ್ಚಿಮ ಕ್ಷೇತ್ರದ ವ್ಯಾಪ್ತಿಯ ವಿಜಯಾನಂದ ಶೆಟ್ಟಿ, ಚಂದ್ರಶೇಖರ ಮನಗುಂಡಿ ಅಥವಾ ಹಿರಿತನ ಪರಿಗಣಿಸಿದಲ್ಲಿ ಶಿವು ಹಿರೇಮಠರ ಪ್ರಸ್ತಾಪ ಮಾಡಿದ್ದಾರೆನ್ನಲಾಗಿದೆ.
ಅಲ್ಲದೇ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು ಪೂರ್ವದಲ್ಲಿ ಪಕ್ಷ ಅನಾಥವಾಗಿದ್ದು, ಪಕ್ಷ ಸಂಘಟನೆಗೆ ಅನೂಕೂಲವಾಗುವ ನಿಟ್ಟಿನಲ್ಲಿ ಪೂರ್ವಕ್ಕೆ ಗೌನಭಾಗ್ಯ ನೀಡಿ ಎಂಬ ಬೇಡಿಕೆಯೂ ಬಲವಾಗಿದೆ.
ಈಗಾಗಲೇ ಬಿಜೆಪಿ ಮೇಯರ್ ಆಕಾಂಕ್ಷಿಗಳು ಬಹುತೇಕ ಸದಸ್ಯರನ್ನು ಸಂಪರ್ಕಿಸಿ ವರಿಷ್ಠರ ಮುಂದೆ ತಮ್ಮ ಹೆಸರನ್ನು ಹೇಳುವಂತೆ ಒತ್ತಡ ಆರಂಭಸಿದ್ದು ಇಷ್ಟರಲ್ಲೇ ಪಕ್ಷದಿಂದ ವಿಪ್ ಜಾರಿ ಮಾಡುವರೆನ್ನಲಾಗಿದೆ.
ಸಾಮಾನ್ಯ ಮಹಿಳೆಯರಿಗೆ ಉಪ ಮೇಯರ್ ಸ್ಥಾಣ ಮೀಸಲಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಆಯ್ಕೆಯಾದವರಿಗೆ ಮೊದಲ ಆದ್ಯತೆ ನೀಡಬೇಕೆಂಬ ಕೂಗು ಎದ್ದಿದ್ದು ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಅವರ ಆತ್ಮೀಯ ವಲಯದಲ್ಲಿರುವ ರೂಪಾ ಶೆಟ್ಟಿ , ಹಾಲಿ ಹುಡಾ ಸದಸ್ಯೆಯೂ ಆಗಿರುವ ಮೀನಾಕ್ಷಿ ವಂಟಮೂರಿ, ನಿನ್ನೆ ತಾನೆ ೨೫ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಓಬಿಸಿ ಮುಖಂಡ ಸತೀಶ ಶೇಜವಾಡ್ಕರ್ ಪತ್ನಿ ಪೂಜಾ ಶೇಜವಾಡಕರ, ಶೆಟ್ಟರ್ ವಾರ್ಡಿನ ಉಮಾ ಉಮಾ ಮುಕುಂದ ಇವರುಗಳಲ್ಲದೇ ಹಿರಿಯ ಮುಖಂಡ ಸಿದ್ದು ಮೊಗಲಿಶೆಟ್ಟರ್ ಪತ್ನಿ ಸೀಮಾ ಮೊಗಲಿಶೆಟ್ಟರ್ ಪ್ರಭಲವಾಗಿ ಪರಿಗಣನೆಗೆ
ಧಾರವಾಡಕ್ಕೆ ಉಪಮೇಯರ್ ಹೋದಲ್ಲಿ ಜ್ಯೋತಿ ಪಾಟೀಲ ( 19) ಹಾಗೂ ಅನಿತಾ ಚಳಗೇರಿ ( 1ನೇ ವಾರ್ಡ) ಹೆಸರುಗಳು ಮುಂಚೂಣಿಯಲ್ಲಿ ಇದೆ ಎನ್ನಲಾಗುತ್ತಿದೆ. ರತ್ನಾ ನಾಝರೆ(9) ಹಾಗೂ ನೀಲಮ್ಮ ಅರವಾಳದ ಅವರೂ ಆಯ್ಕೆಯಾದ ಇತರರಾಗಿದ್ದಾರೆ.
ಕಾಂಗ್ರೆಸ್ ಸ್ಪರ್ಧೆ ನಿಕ್ಕಿ
ಮೇಯರ್- ಉಪಮೇಯರ್ ಪಟ್ಟದ ವಿಷಯದಲ್ಲಿ ಸಂಖ್ಯಾ ಬಲದ ಕೊರತೆ ಹೊಂದಿರುವದರಿಂದ ಹರ ಸಾಹಸ ಪಡಬೇಕಾಗಿರುವ ಕಾಂಗ್ರೆಸ್ ಈಗಾಗಲೇ ನೂತನ ಪಾಲಿಕೆ ಸದಸ್ಯರ ಸಭೆಯನ್ನು ಮಯೂರ ರೆಸಾರ್ಟದಲ್ಲಿ ನಡೆಸಿದ್ದು ಎಲ್ಲರ ಅಭಿಪ್ರಾಯವನ್ನು ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಸಹಿತ ಹಿರಿಯ ಮುಖಂಡರು ಆಲಿಸಿದ್ದು ಅವಿರೋಧ ಆಯ್ಕೆ ನಡೆಯದಂತೆ ಅಂತಿಮವಾಗಿ ಸಮರ್ಥರಿಬ್ಬರನ್ನು ಮೇಯರ್ ಉಪಮೇಯರ್ ಸ್ಥಾನಕ್ಕೆ ನಿಲ್ಲಿಸುವ ಸಾಧ್ಯತೆಗಳಿವೆ. ಮೇಯರ್ ಸ್ಥಾನಕ್ಕೆ ಮಯೂರ್ ಮೋರೆ, ನಿರಂಜನಯ್ಯಾ ಹಿರೇಮಠ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದ್ದು ನಾಳೆ ಸಂಜೆ ಅಥವಾ ನಾಡಿದ್ದು ಬೆಳಿಗ್ಗೆ ಅಂತಿಮಗೊಳಿಸುವರೆನ್ನಲಾಗಿದೆ.