’ಧರ್ಮಸಿರಿ’ ಉದ್ಘಾಟನೆಯಲ್ಲಿ ಪರಾಂಡೆ ಅಭಿಮತ
ಹುಬ್ಬಳ್ಳಿ: ರಾಷ್ಟ್ರದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದು, ಧರ್ಮದ ಆಧಾರದಲ್ಲೇ ದೇಶ ವಿಭಜನೆಯಾಗುವ ಅಪಾಯ ನಮ್ಮ ಮುಂದಿದೆ ಎಂಬ ಆತಂಕವನ್ನು ವಿಶ್ವ ಹಿಂದೂ ಪರಿಷತ್ನ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಆತಂಕ ವ್ಯಕ್ತಪಡಿಸಿದರು.
ವಿಶ್ವ ಹಿಂದು ಪರಿಷತ್(ವಿಎಚ್ಪಿ) ಉತ್ತರ ಕರ್ನಾಟಕ ಟ್ರಸ್ಟ್ ಹಾಗೂ ಪ್ರೇರಣಾ ಸೇವಾ ಸಂಸ್ಥೆಯಿಂದ ಇಲ್ಲಿನ ಶಿರೂರ ಪಾರ್ಕ್ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂಭಾಗದ ಪುರುಷೋತ್ತಮ ನಗರದಲ್ಲಿ ನಿರ್ಮಿಸಿರುವ ’ಧರ್ಮಸಿರಿ’ ಕಾರ್ಯಾಲಯ ಕಟ್ಟಡ ಉದ್ಘಾಟನೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದ ಅವರು ಕೇರಳ, ತಮಿಳ್ನಾಡಿನ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿರುವುದನ್ನು ಪ್ರಸ್ತಾಪಿಸಿ ಹಿಂದೂ ಧರ್ಮ ಬಿಟ್ಟು ಹೋದವರನ್ನು ಮತ್ತೆ ಕರುತರುವ ಕೆಲಸ ಆಗಬೇಕಾಗಿದೆ ಎಂದರು.
ಇಸ್ಲಾಂ, ಕ್ರಿಶ್ಚಿಯನ್ ಹಾಗೂ ಕಮ್ಯೂನಿಷ್ಟರು ಹಿಂಸಾಮಾರ್ಗವನ್ನು ಪ್ರಚೋಧನೆ ನೀಡುತ್ತಿದ್ದು ಅದನ್ನು ಮೆಟ್ಟಿನಿಲ್ಲುವ ಕೆಲಸವಾಗಬೇಕಿದೆ.ಹಿಂದೂ ಧರ್ಮದ ಎಲ್ಲಾ ದೇವರುಗಳು ಶಸ್ತ್ರಧಾರಿಗಳೇ ಆಗಿದ್ದು ಹಿಂಸಾಮಾರ್ಗ ಪ್ರತಿರೋಧಿಸುವ ಕೆಲಸವಾಗಬೇಕು ಎಂದರು.
ಹಿಂದೂ ಧರ್ಮದಲ್ಲಿಯೂ ಸಾಕಷ್ಟು ಲೋಪವಿದ್ದು, ಹೆಣ್ಣು ಭ್ರೂಣ ಹತ್ಯೆ, ಜಾತೀಯತೆ, ಅಸ್ಪ್ರಶ್ಯತೆ,ವಿವಾಹ ವಿಚ್ಛೇದನ ಶೇ.80ರಷ್ಟು ನಮ್ಮಲೇ ಆಗುತ್ತಿದೆ. ಇವಕ್ಕೆಲ್ಲ ಸಂತರ ಮಾರ್ಗದರ್ಶನದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಪರಾಂಡೆ ಹೇಳಿದರು.
ಆರ್ಎಸ್ಎಸ್ ದಕ್ಷಿಣ ಮಧ್ಯ ಕ್ಷೇತ್ರ ಸಂಘಚಾಲಕ ವಿ.ನಾಗರಾಜ ಮಾತನಾಡಿ ವಿಎಚ್ಪಿ ಧರ್ಮಾಚರಣೆಯೇ ರಾಷ್ಟ್ರ ಧರ್ಮಾಚರಣೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ ಧರ್ಮವೇ ನಿಜವಾದ ಅದರಿಂದಲೇ ನಮ್ಮೆಲ್ಲರ ಭವಿಷ್ಯ ಎಂದರು.
ಉಡುಪಿ ಪೇಜಾವರಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೊಲ್ಲಾಪುರ ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗದಗ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ, ವಿಜಯಪುರದ ಸೋಮಲಿಂಗ ಸ್ವಾಮೀಜಿ ಮುಂತಾದ ಮಠಾಧೀಶರು ಉಪಸ್ಥಿತರಿದ್ದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ.ಪಾಟೀಲ, ಮುರಗೇಶ ನಿರಾಣಿ, ಪ್ರಭು ಚವ್ಹಾಣ, ಗೋವರ್ಧನರಾವ, ವಿಎಚ್ಪಿ ಪ್ರಾಂತ ಅಧ್ಯಕ್ಷ ಡಾ.ಎಸ್.ಆರ್.ರಾಮನಗೌಡರ, ಪ್ರೇರಣಾ ಸಂಸ್ಥೆ ಅಧ್ಯಕ್ಷ ಸಂಜು ಬಡಸ್ಕರ, ಮಹಾಬಲೇಶ್ವರ ಹೆಗಡೆ, ಶಾಂತಣ್ಣ ಕಡಿವಾಳ, ಸೇರಿದಂತೆ ಅನೇಕ ಗಣ್ಯರು ಇದ್ದರು.
ಇದೇ ಸಂದರ್ಭದಲ್ಲಿ ಮನೋಹರ ಮಠದ ಅವರ ಸಂಪಾದಿಸಿದ ಚೈತನ್ಯ ಸಿಂಧು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ರಾಮಮಂದಿರಕ್ಕೆ ಕೋಟಿ ರೂಗಳಿಗಿಂತ ಹೆಚ್ಚಿಗೆ ದೇಣಿಗೆ ನೀಡಿದ ಸ್ವರ್ಣ ಸಮೂಹದ ಚೇರಮನ್ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ಹಾಗೂ ನಾಯಕ ಅವರನ್ನು ಸನ್ಮಾನಿಸಲಾಯಿತು.
ಬೆಳಿಗ್ಗೆ ೮ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.