ಇಂದಿನ ತಾಂತ್ರಿಕ ಯುಗದಲ್ಲಿ, ಜೀವನವನ್ನು ನಿರ್ವಹಿಸುವ ಒತ್ತಡದಲ್ಲಿ ನಮ್ಮ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಲೇ ಇದೆ. ಫಾಸ್ಟಫುಡ್ ತಿನ್ನುವ ಭರದಲ್ಲಿ, ಆರೋಗ್ಯವನ್ನು ಕಡೆಗಣಿಸಿದ್ದೇವೆ. ಹೀಗಾಗಿ ಇಂದು ಹೆಚ್ಚಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬೊಜ್ಜು ಸಾಮಾನ್ಯವಾಗಿಬಿಟ್ಟಿದೆ. ಹದಿಹರೆಯಕ್ಕೆ ಕಾಲಿಟ್ಟಾಗ ದೈಹಿಕ ಬದಲಾವಣೆಯ ಜೊತೆಗೆ ಮನಸ್ಸಿನ ಬದಲಾವಣೆಯು ಆಗುತ್ತದೆ. ದುಶ್ಚಟಗಳ ಆಕರ್ಷಣೆ ಅತಿಯಾಗಿರುತ್ತದೆ. ಸಹವಾಸದಿಂದ ಚಟಗಳನ್ನು ಕೂಡ ಅವಲಂಭಿಸಿರುತ್ತಾರೆ. ಚಟಗಳಿಂದ ಹೊರಬರಲಾರದೇ ಮಾನಸಿಕ ಒತ್ತಡ ಮತ್ತು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅನುಭವಿಸುತ್ತಿದ್ದಾರೆ.
ಮಾನಸಿಕ ಆರೋಗ್ಯ ಯಾರಿಗೆ ಬೇಡಾ! ಎಲ್ಲರೂ ಸ್ವಸ್ಥವಾಗಿರಬೇಕೆಂದೇ ಬಯಸುತ್ತೇವೆ. ಅದರಲ್ಲೂ ಮಾನಸಿಕ ಆರೋಗ್ಯಕ್ಕೆ ತುಂಬಾ ಮಹತ್ವವಿದೆ. ಪ್ರತಿವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚಣೆಯನ್ನು ಆಚರಿಸಲಾಗುತ್ತದೆ. ಹೊಸ ಘೋಷಣೆಗಳ ಜೊತೆಗೆ ಮಾನಸಿಕ ಕಾಯಿಲೆ ಹಾಗೂ ಮಾನಸಿಕ ಆರೋಗ್ಯದ ಕುರಿತು ಅರಿವನ್ನು ಮೂಡಿಸಲಾಗುತ್ತದೆ. ಎಷ್ಟೋ ಜನರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಸರಿಯಾದ ಚಿಕಿತ್ಸೆ, ಔಷೋಧೊಪಚಾರ ಪಡೆಯದೇ ತೊಂದರೆಯನ್ನು ಅನುಭವಿಸುತ್ತಿದ್ದರೂ, ಮುಂದೆ ಬಂದು ಚಿಕಿತ್ಸೆ ಪಡೆಯಲು ಸಂಕೋಚಪಡುತ್ತಾರೆ.
ಮಾನಸಿಕ ಕಾಯಿಲೆ ಹೊಂದಿದವರನ್ನು ಹುಚ್ಚರೆಂದು ಪರಿಗಣಿಸಿ, ಅವಮಾನವನ್ನು ಕೂಡ ಮಾಡುತ್ತಾರೆ. ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಇದೆ, ಅವರು ಸೂಕ್ತ ಚಿಕಿತ್ಸೆಯನ್ನು ಪಡೆದು ಸಾಮಾನ್ಯರಂತೆ ಜೀವನ ನಿರ್ವಹಿಸಬಹುದಾಗಿದೆ ಎಂಬ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಮ್ಮ ಮಾನಸಿಕ ಆರೋಗ್ಯವು, ನಮ್ಮ ದೈಹಿಕ, ಭಾವನಾತ್ಮಕ, ಮಾನಸಿಕ, ಕೌಟುಂಬಿಕ, ಸಾಮಾಜಿಕ, ಔದ್ಯೋಗಿಕ ಆರೋಗ್ಯವನ್ನು ಒಳಗೊಂಡಿದೆ. ಇವುಗಳಲ್ಲಿ ಏರುಪೇರುಗಳಾಗಿ, ಮಾನಸಿಕ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇವುಗಳ ಪ್ರಭಾವ ಗಳನ್ನು ನಾವು ಯಾವ ರೀತಿಯಾಗಿ ಸ್ವೀಕರಿಸುತ್ತೇವೆ ಎಂಬುದು ನಮ್ಮ ಮಾನಸಿಕ ಆರೋಗ್ಯವನ್ನು ಸೂಚಿಸುತ್ತದೆ. ನಮ್ಮ ಬಾಲ್ಯಾವಸ್ಥೆಯಿಂದ ಮುಪ್ಪಾವಸ್ಥೆಯವರೆಗೂ, ಪ್ರತಿಯೊಂದು ಹಂತದಲ್ಲಿ ಮಾನಸಿಕ ಆರೋಗ್ಯವು ಅತ್ಯಂತ ಮುಖ್ಯವಾಗಿರುತ್ತದೆ.
ಈ ವರ್ಷದ ಅತ್ಯಂತ ಸೂಕ್ತ ಘೋಷಣೆ “ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ” ಮನಸ್ಸು ತುಂಬ ಚಂಚಲ. ಹಿಡಿತದಲ್ಲಿಟುಕೊಳ್ಳದಿದ್ದರೆ ಸ್ವಾರ್ಥ ವನ್ನೇ ಬಯಸುತ್ತದೆ. ಅತಿಯಾದಾಗ ತನ್ನ ಸ್ಥಿಮಿತತೆಯನ್ನು ಕಳೆದುಕೊಂಡು ಮಾನಸಿಕ ವ್ಯಾಧಿಗಳಿಗೆ ತುತ್ತಾಗಬಹುದು. ಯಾವುದೇ ವಿಷಯದಲ್ಲಿ ವಾದ, ವಿವಾದ, ಚರ್ಚೆ, ಕೊನೆಗೆ ಸಿಟ್ಟು, ಕೋಪ, ದ್ವೇಷ, ಅಸೂಯೆ, ತಿರಸ್ಕಾರ, ಮನಸ್ಸಿನಲ್ಲಿ ಮನೆ ಮಾಡಿಬಿಡುತ್ತವೆ. ಇದರಿಂದ ನಾವು ಮಾಡುವಂಥ ಯಾವುದೇ ಕೆಲಸದಲ್ಲಿ ಮಾನಸಿಕ ಕಿರಿಕಿರಿಯನ್ನು ಅನುಭವಿಸುತ್ತಿದ್ದೇವೆ. ಇದನ್ನು ನಿಯಂತ್ರಿಸಲು ನಮ್ಮ ಮಾನಸಿಕ ಆರೋಗ್ಯ ಸ್ಥಿರವಾಗಿರಬೇಕಾಗು ತ್ತದೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ ಒಂದು ದೇಹಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಅಷ್ಟೇ ಮುಖ್ಯ. ಒಂದರ ಸಮತೋಲನ ಇನ್ನೊಂದಕ್ಕೆ ಆವಲಂಭಿಸಿರುತ್ತದೆ.
ಮಾನಸಿಕ ಒತ್ತಡ, ಸಮಸ್ಯೆಗಳಿಗೆ ಆಸ್ಪದ ಕೊಡದೇ, ಅವುಗಳನ್ನು ನಿಭಾಯಿಸುವ ಮತ್ತು ನಿಯಂತ್ರಿಸುವುದನ್ನು ತಿಳಿದಿರಬೇಕು. ಮಾನಸಿಕ ಕಾಯಿಲೆಗಳಿಗೆ ಮಾಟ ಮಂತ್ರಗಳು ಮದ್ದು ಬೇಕಾಗಿಲ್ಲ. ಅದಕ್ಕೆ ಅಗತ್ಯವಾಗಿರುವುದು ಪರಿಣಿತ ಮನೋವೈದ್ಯರ ಸೂಕ್ತ ಚಿಕಿತ್ಸೆ ಮತ್ತು ಔಷೋಧೋಪಚಾರ. ಇಂದು ಹಲವಾರು ಖಾಸಗೀ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ನುರಿತ ಮನೋವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಂದ ಉತ್ತಮ ಚಿಕಿತ್ಸೆಯನ್ನು ಪಡೆದು ಕುಟುಂಬದವರ ಸಹಕಾರದಿಂದ ಜೀವನ ನಿರ್ವಹಿಸಬಹುದಾಗಿದೆ. ಮಾನಸಿಕ ಆರೋಗ್ಯ ಯಾರಿಗೆ ಬೇಡಾ! ಎಲ್ಲರೂ ಸ್ವಸ್ಥವಾಗಿರಬೇಕೆಂದೇ ಬಯಸುತ್ತೇವೆ. ಅದರಲ್ಲೂ ಮಾನಸಿಕ ಆರೋಗ್ಯಕ್ಕೆ ತುಂಬಾ ಮಹತ್ವವಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ದಿಂದ ನಮ್ಮ ದೈನಂದಿನ ಜೀವನವನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ನಮ್ಮ ಮಾನಸಿಕ ಆರೋಗ್ಯ ನಮ್ಮ ವ್ಯಕಿತ್ವವನ್ನು ಬಿಂಬಿಸುತ್ತದೆ. ನಮ್ಮ ವರ್ತನೆಗಳು ನಮ್ಮ ಮಾನಸಿಕ ಆರೋಗ್ಯವನ್ನು ಹೊಂದಿರುತ್ತದೆ.
ಪ್ರತಿಯೊಂದು ಕಾರ್ಯಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯಕರ ವರ್ತನೆ, ವ್ಯಂಗ್ಯತೆಯ ಮಾತುಗಳು ಸಾಮಾನ್ಯವಾಗಿಯೇ ಕಂಡುಬರುತ್ತವೆ. ಇದರಿಂದ ಕಿರಿಕಿರಿ, ದ್ವೇಷ, ಸಿಟ್ಟು, ಅಹಂಕಾರ ವ್ಯಕ್ತವಾಗುತ್ತವೆ. ಇದರಿಂದ ವ್ಯಕ್ತಿಯ ವರ್ತನೆ ಹಾಗೂ ಮನದ ತೊಳಲಾಟ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ಮಾಡದೇ, ಪ್ರೀತಿ, ಸಹಾನು ಭೂತಿ, ಭರವಸೆಯ ಮಾತುಗಳು ವ್ಯಕ್ತಿಯ ಮನದಲ್ಲಿ ವಿಭಿನ್ನ ರೀತಿಯ ಶಕ್ತಿಯನ್ನು ತುಂಬುತ್ತದೆ. ಸಾಧಿಸಿ ಮುಂಬರುವ ಛಲವನ್ನು ಬಲಪಡಿಸುತ್ತದೆ. ನಕಾರಾತ್ಮಕ ಯೋಚನೆಗಳನ್ನು ಹೊಡೆದೋಡಿಸುತ್ತದೆ. ಮನದಲ್ಲಿ ಕೆಟ್ಟ ಆಲೋಚನೆಗಳಿಗೆ ಸ್ಥಳವೇ ಇರುವುದಿಲ್ಲ. ಸಾಧ್ಯ ಎನ್ನುವ ಮಾತು ನಮ್ಮಲ್ಲಿ ಆತ್ಮವಿಶ್ವಾಸ, ಧೈರ್ಯವನ್ನು ತುಂಬಿಸುತ್ತದೆ. ವ್ಯಕ್ತಿಯು ವ್ಯಕ್ತಿಗತ ಬದಲಾ ವಣೆಗೆ ಪ್ರಯತ್ನಿಸುವುದು ಅಷ್ಟೇ ಮುಖ್ಯ.
ವ್ಯಕ್ತಿಯ ಮನಸ್ಸು ಸಕಾರಾತ್ಮಕ ವಾಗಿದ್ದಲ್ಲಿ ಸಮಸ್ಯೆಗಳಿಗೆ ಅವಕಾಶವಿರುವುದಿಲ್ಲ. ಗೌರವಿಸುವ, ಅಭಿನಂದಿ ಸುವ, ಸ್ವೀಕರಿಸುವಂಥ ಮನೋಭಾವವನ್ನು ಬೆಳೆಸಿಕೊಂಡಾಗ ನಮ್ಮ ಮನಸ್ಸು ಮುದುಡಲು ಸಾಧ್ಯವೇ ಇಲ್ಲ. ಬೇರೆಯವರನ್ನು ತಿದ್ದಲು ಸಾಧ್ಯವಿಲ್ಲ. ಆದರೆ ನಮ್ಮನ್ನು ನಾವು ತಿದ್ದಿಕೊಂಡಾಗ ಮಾನಸಿಕ ನೆಮ್ಮದಿ, ಸಂತೋಷ, ಉತ್ಸಾಹ ಸದಾ ತುಂಬಿರುತ್ತದೆ.
ನಮ್ಮಲ್ಲಿರುವಂತಹ ಕೀಳರಿಮೆಯನ್ನು ದೂರ ಮಾಡಿಕೊಳ್ಳಬೇಕು. ಒಳ್ಳೆಯ ಉಪಯುಕ್ತ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಬೆಳೆಯುತ್ತದೆ. ಕೆಲಸದಲ್ಲಿ ಶ್ರದ್ದೆ, ವಿಶ್ವಾಸ ಹಾಗೂ ಸಮಾಜದ ದೃಷ್ಟಿಯಿಂದ ಒಳ್ಳೆಯದಾಗಿದ್ದರೆ ಆ ಕೆಲಸದಲ್ಲಿ ಸಿಗುವಂಥ ಆನಂದ, ತೃಪ್ತಿ, ಘನತೆ, ಗೌರವ ನಮ್ಮ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ. ಪ್ರತಿಯೊಬ್ಬರು ತಮ್ಮ ಮತ್ತು ಇತರರ ಮಾನಸಿಕ ಆರೋಗ್ಯದ ಅರಿವನ್ನು ಹೊಂದಿರಬೇಕು. ದೈನಂದಿನ ನಮ್ಮ ನಮ್ಮ ಕರ್ತವ್ಯಗಳಲ್ಲಿ, ನಮ್ಮ ಮಾತು ಗಳು, ವರ್ತನೆಗಳು ಹತೋಟಿಯಲ್ಲಿದ್ದರೆ, ಶುದ್ದವಾಗಿದ್ದರೆ, ತೊಂದರೆಗಳಿಗೆ ಅವಕಾಶಗಳೇ ಇರುವುದಿಲ್ಲ. ನಮ್ಮಲ್ಲಿಯ ಉತ್ತಮ ವೈಯಕ್ತಿಕ ಬದಲಾವಣೆ ಯಿಂದ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಾನಸಿಕ ಆರೋಗ್ಯವನ್ನು ಹೊಂದುವುದು ನಮ್ಮ ಕೈಯಲ್ಲಿಯೇ ಇದೆ.
- ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಿ.
- ಇಂಪಾದ ಸಂಗಿತ ಮನಸ್ಸನ್ನು ತಿಳಿಗೊಳಸುತ್ತದೆ.
- ಧ್ಯಾನ, ವ್ಯಾಯಾಮ, ನಿತ್ಯವೂ ಇರಲಿ.
- ಶುಚಿಯಾದ ಪೌಷ್ಠಿಕ ಆಹಾರ, ನೆಮ್ಮದಿಯ ನಿದ್ದೆ ಮನಸ್ಸನ್ನು ಶಾಂತವಾಗಿರಿಸುತ್ತದೆ.
- ಯಾವುದೇ ಕೆಲಸಕ್ಕೂ ಅವಲಂಭನೆ ಮಿತಿಯಾಗಿರಲಿ.
- ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬಂತಿರಲಿ ನಮ್ಮ ದುಡಿಮೆ.
- ಆಹ್ಲಾದಕರ ವಾತಾವರಣದಲ್ಲಿರಿ.
- ಅಹಿತಕರ ವಾತಾವರಣದಿಂದ ದೂರವಿರಿ.
- ಸಂಬಂಧವಿಲ್ಲದ ವಿಷಯಗಳ ಚರ್ಚೆ ಬೇಡವೇ ಬೇಡ.
- ಗೌರವ ಕೊಟ್ಟು ತೆಗೆದುಕೊಳ್ಳೋಣ.
- ಬೇರೆಯವರನ್ನು ಕೀಳಾಗಿ ಕಾಣದಿರಿ. ಅವರಿಗೂ ಅವರದೇ ಆದಂಥ ಗೌರವವಿದೆ.
- ನಮ್ಮ ಅಹಂ ನಮ್ಮಲ್ಲಿಯೇ ಇರಲಿ, ಪ್ರದರ್ಶನ ಬೇಡ.
- ಪ್ರತಿಯೊಂದರಲ್ಲಿ ಸಕಾರಾತ್ಮಕತೆ ಇರಲಿ.
- ತೆಗಳುವ ಅಥವಾ ಹಿಯಾಳಿಸುವ ಮನೋಭಾವ ಬೇಡ.
- ಇತರರಿಗೆ ಸಹಕಾರಿಯಾಗಿರೋಣ.
- ಉತ್ತಮ ಚಟುವಟಿಕೆ ಮತ್ತು ಯೋಚನೆ, ಮಾನಸಿಕ ಆರೋಗ್ಯದ ಮುಖ್ಯಗುಟ್ಟು.
- ನಮ್ಮನ್ನು ನಾವು ಗೌರವಿಸಿಕೊಳ್ಳೋಣ.
- ಶುಚಿಯಾದ ಪೌಷ್ಠಿಕ ಆಹಾರ, ನೆಮ್ಮದಿಯ ನಿದ್ದೆ ಮನಸ್ಸನ್ನು ಶಾಂತವಾಗಿರಿಸುತ್ತದೆ.
- ಪೈಪೋಟಿ ಬೇಡ. ಬೇಡಿಕೆಗಳು ನಿಯಂತ್ರಣದಲ್ಲಿರಲಿ.