ಸೆಂಟ್ರಲ್ ಕ್ಷೇತ್ರಕ್ಕೊಲಿದ ಎರಡು ಸ್ಥಾನ
ಹುಬ್ಬಳ್ಳಿ : 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಬಿಜೆಪಿ ಸರ್ಕಾರವು ಕೊನೆಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಗೆ ಐವರು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿದೆ.
ಈರಣ್ಣ ಹಪ್ಪಳಿ, ದೀಪಕ್ ಮೆಹರವಾಡೆ, ಭಾರತಿ ಟಪಾಲ್, ಮೋಹನ್ ರಾಮದುರ್ಗ ಹಾಗೂ ಪ್ರಶಾಂತ ಹಾವಣಗಿ ನೂತನವಾಗಿ ನಗರಾಭಿವೃದ್ಧಿ ಇಲಾಖೆಯಿಂದ ನಾಮ ನಿರ್ದೇಶನಗೊಂಡವರಾಗಿದ್ದಾರೆ.
ಪಾಲಿಕೆಗೆ ಬಲಗಾಲಿಡಲು ಸಾಕಷ್ಟು ಪೈಪೋಟಿಯಿತ್ತಾದರೂ ಕೊನೆಗೂ ಅಳೆದು ತೂಗಿ ಪಕ್ಷದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡಿದವರಿಗೆ ಮಣೆ ಹಾಕಲಾಗಿದೆ. ಕ್ಷೇತ್ರ, ಜಾತಿ, ಹಿರಿತನ ಮುಂತಾದವುಗಳು ಅಳತೆಗೋಲಾಗಿದ್ದವು.
ಅವಳಿನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮೀಣ,ಪಶ್ಚಿಮ ಹಾಗೂ ಪೂರ್ವ ಕ್ಷೇತ್ರಗಳ ತಲಾ ಒಬ್ಬರು ನಿಯುಕ್ತಿಗೊಂಡರೆ ಸೆಂಟ್ರಲ್ ಕ್ಷೇತ್ರಕ್ಕೆ ಎರಡು ಸ್ಥಾನ ದಕ್ಕಿದೆ.
ಮಾಜಿ ಸಿಎಂ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಬೆಲ್ಲದ, ಅಮೃತ ದೇಸಾಯಿ ಅಲ್ಲದೇ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಎಲ್ಲರೂ ತಮ್ಮ ಬೆಂಬಲಿಗರಿಗೆ ಪಟ್ಟ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.