ವಿಶ್ವಾಸಕ್ಕೆ ತೆಗೆದುಕೊಳ್ಳದೇ ಆಯೋಜನೆಗೆ ಆಕ್ರೋಶ
ಕಲಘಟಗಿ : ಕಾಂಗ್ರೆಸ್ ಪ್ರಜಾಧ್ವನಿ ಆಗಮನದ ಸಂದರ್ಭದಲ್ಲಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಚಿವ ಸಂತೋಷ ಲಾಡ್ ಮತ್ತು ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ನಡುವಣ ಸಮರ ಬೀದಿಗೆ ಬಂದಿದೆ.
ಪ್ರಜಾಧ್ವನಿ ಯಾತ್ರೆ ಸಂತೋಷ ಲಾಡ್ ಆಯೋಜಿಸಿದ್ದು, ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳದಿರಲು ಛಬ್ಬಿ ಬಣ ತೀರ್ಮಾನ ಕೈಗೊಂಡಿದೆ. ಛಬ್ಬಿಯವರನ್ನು ಗಣನೆಗೆ ತೆಗೆದುಕೊಳ್ಳದೇ ಆಯೋಜನೆ ಮಾಡಲಾಗಿದೆ ಎಂಬುದು ಛಬ್ಬಿ ಗುಂಪಿನ ವಾದವಾಗಿದೆ. ಅಲ್ಲದೇ ಇನ್ನೋರ್ವ ಆಕಾಂಕ್ಷಿ ಬಂಗಾರೇಶ ಹಿರೇಮಠಗೂ ಅಹ್ವಾನವಿಲ್ಲವೆನ್ನಲಾಗಿದೆ.ಈ ಹಿಂದೆ ನವಲಗುಂದ, ಧಾರವಾಡ ಮುಂತಾದೆಡೆ ಎಲ್ಲ ಆಕಾಂಕ್ಷಿಗಳನ್ನು ಒಟ್ಟುಗೂಡಿಸಿ ಪ್ರಜಾಧ್ವನಿ ಆಯೋಜಿಸಿದ್ದು ಆದರೆ ಇಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡಲಾಗಿದೆ. ಜಿಲ್ಲಾಧ್ಯಕ್ಷ ಅನಿಲ ಪಾಟೀಲ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಂತೋಷ ಲಾಡ್‌ಗೆ ಮಣೆ ಹಾಕಿದ್ದಾರೆಂದು ಛಬ್ಬಿ ಬಣ ಹೇಳುತ್ತಿದೆ.
ಪ್ರಜಾಧ್ವನಿ ಯಾತ್ರೆಗೆ ಛಬ್ಬಿ ಸೇರಿದಂತೆ ಅವರ ಬೆಂಬಲಿಗರು ಭಾಗವಹಿಸಲ್ಲ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುನಾಥ ದಾನವೇನವರ ಹೇಳಿದ್ದಾರೆ. ಒಟ್ಟಿನಲ್ಲಿ ಕಲಘಟಗಿಯಲ್ಲಿ ಕಾಂಗ್ರೆಸ್‌ಗೆ ಮುಜುಗರ ಆಗುವ ವಾತಾವರಣವಿದೆ. ಅಲ್ಲದೇ ಕಲಘಟಗಿ ಪ್ರಜಾಧ್ವನಿ ಸಾಯಂಕಾಲ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಕುಂದಗೋಳ ಮುಂದೂಡಲಾಯಿತು ಎಂಬ ಗುಸು ಗುಸು ಇದೆ. ಲಾಡ್ ಸಿದ್ದರಾಮಯ್ಯ ಆಪ್ತರಾಗಿದ್ದು, ಛಬ್ಬಿ ಡಿಕೆಶಿ ಬಣದಲ್ಲಿದ್ದಾರೆಂಬುದು ವಿಶೇಷವಾಗಿದೆ.