ಷಣ್ಮುಗ ಗುಡಿಹಾಳ ನಿವಾಸದಲ್ಲಿ ಮಾರಕಾಸ್ತ್ರ ಜಪ್ತಿ
ಹುಬ್ಬಳ್ಳಿ: ಅವಳಿ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕಲು ಪೊಲೀಸರು ಮುಂದಾಗಿದ್ದು ಇಂದು ಅವಳಿ ನಗರದ ಒಟ್ಟು 172 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದು, ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಕಟ್ಟೆಚ್ಚರಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.
ರೌಡಿಶೀಟರ್ ಮನೆಗಳ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಅನಿರೀಕ್ಷಿತ ದಾಳಿ ನಡೆಸುವ ಮೂಲಕ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಉತ್ತರ, ದಕ್ಷಿಣ ಹಾಗೂ ಧಾರವಾಡ ಉಪವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟು 172ರೌಡಿಶೀಟರ್ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಯಿತು.
ದಾಳಿ ವೇಳೆ ಬೆಂಡಿಗೇರಿ ಪೊಲೀಸ್ ಠಾಣೆಯ ರೌಡಿಶೀಟರಾದ ಷಣ್ಮುಗ ರವೀಂದ್ರ ಗುಡಿಹಾಳ ಎಂಬುವವನ ಮನೆಯಲ್ಲಿ ಮಾರಕಾಸ್ತ್ರಗಳು ದೊರೆತಿದ್ದು, ಸದರಿಯವನ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿರುತ್ತದೆ.
05 ರೌಡಿಶೀಟರ್‌ಗಳ ಮೇಲೆ ಸಿಆರ್‌ಪಿಸಿ ಕಾಯ್ದೆಯಡಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿರುತ್ತದೆ. ವಿವಿಧ ಪ್ರಕರಣಗಳಲ್ಲಿ ವಾರಂಟ್ ಜಾರಿಯಾಗಿದ್ದರೂ ತಲೆ ಮರೆಸಿಕೊಂಡಿದ್ದ 03 ಜನ ರೌಡಿಶೀಟರ್‌ಗಳು ಸಿಕ್ಕಿಬಿದ್ದಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಮಹಾನಗರದಲ್ಲಿ ರೌಡಿಸಂ-ಪುಂಡಾಟ ಚಟುವಟಿಕೆಗಳಿಗೆ ಅವಕಾಶವಿಲ್ಲ ಒಂದು ವೇಳೆ ಅಂತಹ ಚಟುವಟಿಕೆಗಳು ಕಂಡುಬಂದಲ್ಲಿ ಅವರುಗಳ ವಿರುದ್ದ ಯಾವುದೇ ಮುಲಾಜಿಲ್ಲದೇ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತೆ ರೇಣುಕಾ ಸುಕುಮಾರ್ ಖಡಕ್ ಸಂದೇಶ ರವಾನಿಸಿದ್ದಾರೆ.