ಹುಬ್ಬಳ್ಳಿ-ಧಾರವಾಡ ಸುದ್ದಿ

ಮಹಾನಗರ ಕಮಲ ಪಡೆಗೂ ಸರ್ಜರಿ !

ಅಧ್ಯಕ್ಷ ಸ್ಥಾನ ಶಾಸಕರಿಗೋ, ಮುಖಂಡರಿಗೋ ಕುತೂಹಲ

ಹುಬ್ಬಳ್ಳಿ : ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ರಾಜ್ಯ ಕಮಲಪಡೆಗೆ ಮೇಜರ್ ಸರ್ಜರಿ ಖಚಿತವಾಗಿದ್ದು ಮಹಾನಗರ ಬಿಜೆಪಿಯಲ್ಲೂ ಬದಲಾವಣೆ ಆಗಬಹುದೆಂಬ ಮಾತುಗಳು ಕೇಳಿ ಬರುತ್ತಿವೆ.
ಶಾಸಕ ಅರವಿಂದ ಬೆಲ್ಲದ ಅವರ ಉತ್ತರಾಧಿಕಾರಿಯಾಗಿ ಸಂಜಯ ಕಪಟಕರ ಅವರು ಪ್ರಸಕ್ತ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದು ಅವರೇ ಮುಂದುವರಿಯುವರೋ ಅಥವಾ ಬೇರೆಯವರಿಗೆ ಮಣೆ ಹಾಕಲಾಗುವುದೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.


ಮಹಾನಗರ ಬಿಜೆಪಿ ಪದಾಧಿಕಾರಿಗಳಾಗಿ ಅನುಭವವಿರುವ ಹಲವರ ಹೆಸರು ಕೇಳಿ ಬರಲಾರಂಭಿಸಿದ್ದು ಪಾಲಿಕೆ ಹಿರಿಯ ಸದಸ್ಯ ವಿಜಯಾನಂದ ಶೆಟ್ಟಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಪ್ರಸಕ್ತ ಮಹಾನಗರ ಪ್ರಧಾನ ಕಾರ್ಯದರ್ಶಿ, ಪಾಲಿಕೆಯ ಸದಸ್ಯರೂ ಆಗಿರುವ ತಿಪ್ಪಣ್ಣ ಮಜ್ಜಗಿ, ಇನ್ನೋರ್ವ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪೂರ್ವ ಕ್ಷೇತ್ರದ ಪಾಲಿಕೆಯ ಸದಸ್ಯ ಶಿವು ಮೆಣಸಿನಕಾಯಿ, ಅಲ್ಲದೇ ವಿವಿಧ ಪ್ರಕೋಷ್ಠಗಳ ಸಹ ಸಂಚಾಲಕ ಜಯತೀರ್ಥ ಕಟ್ಟಿ ಇವರ ಹೆಸರುಗಳು ಮುಂಚೂಣಿಗೆ ಬರುವ ಸಾಧ್ಯತೆಗಳಿವೆ.


ಶಾಸಕರಾದ ಬೆಲ್ಲದ ಅವರಿಗೆ ಸಂಘಟನಾ ಚಟುವಟಿಕೆಗೆ ಹೆಚ್ಚಿನ ಸಮಯ ನೀಡಲಾಗದ ಕಾರಣ ನಿಯುಕ್ತಿಗೊಂಡ ಸಂಜಯ ಕಪಟಕರ ಅವರು ಮುಂದುವರಿಯಲು ಯತ್ನ ನಡೆಸಬಹುದಾಗಿದ್ದರೂ ಮುಂದಿನ ಲೋಕಸಭಾ ಚುನಾವಣಾ ಲೆಕ್ಕಾಚಾರದಲ್ಲಿ ಪ್ರಮುಖ ಸಮುದಾಯಗಳಿಗೆ ಮಹತ್ವದ ಅಧ್ಯಕ್ಷ ಸ್ಥಾನ ನೀಡಬಹುದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಲಿಖಿತ ನಿಯಮ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿ ಈಗ ವಿಪಕ್ಷ ಸ್ಥಾನದಲ್ಲಿದ್ದು ಸಂಘಟನೆ ಸಮರ್ಥವಾಗಿ ಮುನ್ನಡೆಸಲು ಆಯಾ ಭಾಗದ ಶಾಸಕರಿಗೆ ಮಣೆ ಹಾಕಬೇಕೆಂಬ ಅಲಿಖಿತ ನಿಯಮ ಜಾರಿಗೊಳಿಸುವ ಚಿಂತನೆಯೂ ನಡೆದಿದ್ದು ಹಾಗಿದ್ದರೆ ಅವಳಿನಗರದ ಇಬ್ಬರು ಶಾಸಕರಾದ ಅರವಿಂದ ಬೆಲ್ಲದ ಅಲ್ಲದೇ ಪ್ರಸಕ್ತ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಹೇಶ ಟೆಂಗಿನಕಾಯಿ ಇಬ್ಬರಲ್ಲೊಬ್ಬರಿಗೆ ಅವಕಾಶ ನಿಶ್ಚಿತವಾಗಿದೆ. ಅಲ್ಲದೇ ಧಾರವಾಡ ಜಿಲ್ಲೆಯ ಏಕೈಕ ಸುಪ್ರಿಮೋ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯಾರು ಹೇಳುತ್ತಾರೋ ಅವರಿಗೆ ಪಟ್ಟ ಕಟ್ಟುವ ಸಾಧ್ಯತೆ ಇಲ್ಲದಿಲ್ಲ.


ಈ ತಿಂಗಳಾಂತ್ಯದೊಳಗೆ ರಾಜ್ಯ ಬಿಜೆಪಿಗೆ ಮೇಜರ್ ಸರ್ಜರಿ ಎನ್ನಲಾಗುತ್ತಿದ್ದು ಇಲ್ಲಿಯೂ ಡಿಸೆಂಬರ್ ಮಧ್ಯ ವೇಳೆಗೆ ಹೊಸಬರ ಅಲ್ಲದೇ ವಿವಿಧ ಕ್ಷೇತ್ರಗಳಿಗೂ ಅಧ್ಯಕ್ಷರ ನೇಮಕ ನಡೆಯುವ ಸಾಧ್ಯತೆಗಳಿವೆ. ಅವಳಿನಗರದಲ್ಲೂ ಅನೇಕ ಯಡಿಯೂರಪ್ಪ ಮತ್ತು ವಿಜಯೇಂದ್ರ ಹಿಂಬಾಲಕರಿದ್ದು ಅವರುಗಳು ಸಹ ಮಹಾನಗರ ಪದಾಧಿಕಾರಿಗಳ ಪಟ್ಟಿಯಲ್ಲಿ ಹೆಚ್ಚಿನ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಧಾರವಾಡ ಗ್ರಾಮೀಣ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಬಾರಿ ಧಾರವಾಡ ಗ್ರಾಮೀಣ ಅಥವಾ ಕಲಘಟಗಿ ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ದೊರೆತರೂ ಅಚ್ಚರಿಯಿಲ್ಲ. ಪ್ರಸಕ್ತ ಕೇಂದ್ರ ಸಚಿವರ ಆಪ್ತರಾಗಿರುವ ಅಧ್ಯಕ್ಷ ಬಸವರಾಜ ಕುಂದಗೋಳ ಮಠ ಸಹ ಮತ್ತೊಂದು ಅವಧಿ ಮುಂದುವರಿದರೂ ಅಚ್ಚರಿಯಿಲ್ಲ.ಇದಲ್ಲದೇ ಮಾಜಿ ಶಾಸಕಿ ಸೀಮಾ ಮಸೂತಿಯವರ ಹೆಸರೂ ಕೇಳಿ ಬರಲಾರಂಭಿಸಿದೆ.

administrator

Related Articles

Leave a Reply

Your email address will not be published. Required fields are marked *