ಹುಬ್ಬಳ್ಳಿ-ಧಾರವಾಡ ಸುದ್ದಿ

ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಮೂರು ಮಕ್ಕಳ ತಂದೆ !

ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿಯೂ ದೂರು

ಹುಬ್ಬಳ್ಳಿ: ಹೆಂಡತಿಯಿದ್ದು, ಮೂವರು ಮಕ್ಕಳ ತಂದೆಯಾಗಿರುವ ವ್ಯಕ್ತಿಯೋರ್ವ 16 ವರ್ಷ 11 ತಿಂಗಳದ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಗಂಡನ ವಿರುದ್ದ ಇದೀಗ ಮೊದಲ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳಲ್ಲದೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಹು.ಧಾ ಶಹರ ಅಂಗನವಾಡಿ ಮೇಲ್ವಿಚಾರಕಿ ಸವಿತಾ ಬದ್ದಿ ಸಹ ತಮಗೆ ಬಂದ ದೂರಿನನ್ವಯ ಅಶೋಕ ನಗರ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.


ಮಾಧವನಗರ ನಿವಾಸಿಯಾಗಿರುವ ಹನಮಂತ ಉಪ್ಪಾರ ಕಳೆದ ಕೆಲ ದಿನಗಳ ಹಿಂದೆ ಹನಮಂತ ಉಪ್ಪಾರ ಹಣದಾಸೆ ತೋರಿಸಿ ಅಪ್ರಾಪ್ತ ಬಾಲಕಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಇಡಕಲ್ ಪಡೆಪ್ಪನ ದೇವಸ್ಥಾನದಲ್ಲಿ ದಿ.18-01-223 ರಂದು ಮದುವೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಮೊದಲ ಪತ್ನಿ ನೇತ್ರಾ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.


ಮೊದಲ ಹೆಂಡತಿ ಮೇಲೆ ಸಂಶಯ ಮಾಡಿ ಹನಮಂತ ಎರಡನೇ ಮದುವೆ ಯಾಗಿದ್ದಾನೆನ್ನಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಶು ಅಭಿವೃದ್ಧಿ ಅಧಿಕಾರಿಗಳು ಹುಬ್ಬಳ್ಳಿಯ ಅಶೋಕ ನಗರದಲ್ಲಿ ಹನಮಂತ ಉಪ್ಪಾರ ವಿರುದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತ ಬಾಲಕಿ ಮದುವೆಯಾದ ಹಿನ್ನಲೆ ಎರಡು ದೂರು ದಾಖಲಾಗುತ್ತಲೆ ಈತ ನಾಪತ್ತೆಯಾಗಿ ದ್ದಾನೆ.


12 ವರ್ಷಗಳ ಹಿಂದೆ ನೇತ್ರಾ ಜತೆ ಸಪ್ತಪದಿ ತುಳಿದಿದ್ದ ಹನುಮಂತನಿಗೆ ಮೂರು ಮಕ್ಕಳು ಇವೆ. ಕಳೆದ ಕೆಲ ವರ್ಷದಿಂದ ಹನಮಂತ ಉಪ್ಪಾರ ನೇತ್ರಾ ಮೇಲೆ ಸಾಕಷ್ಟು ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಗಂಡ ಹೆಂಡತಿ ಇಬ್ಬರು ಬೇರೆ ಬೇರೆ ಇದ್ದರು. ಮಕ್ಕಳನ್ನ ಮಾತ್ರ ಹನಮಂತ ತನ್ನ ಬಳಿ ಇಟ್ಟುಕೊಂಡಿದ್ದಾನೆ. ಅನುಮಾನ ಪಟ್ಟು ಮೊದಲ ಹೆಂಡತಿ ದೂರ ಮಾಡಿದ್ದ. ಸಾಕಷ್ಡು ಸಲ ಹಿರಿಯರು ಬುದ್ದಿ ಹೇಳಿದ್ರೂ ಗಂಡ ಹೆಂಡಿರ ಸಮಸ್ಯೆ ಬಗೆ ಹರದಿರಲಿಲ್ಲ. ಇದೇ ಕಾರಣಕ್ಕೆ ಹನಮಂತ ಮತ್ತೊಂದು ಮದುವೆಯಾಗಿದ್ದಾನೆ. ಹನುಮಂತ ಬಡ್ಡಿ ವ್ಯವಹಾರಿಯಾಗಿದ್ದು, ಹಣದಾಸೆ ತೋರಿಸಿ ಅಪ್ರಾಪ್ತ ಬಾಲಕಿಯನ್ನ ಮದುವೆಯಾಗಿದ್ದಾನೆ.


ತಮಗೆ ಬಂದ ಮಾಹಿತಿಯನ್ವಯ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬಾಲಕಿಯ ಶಾಲೆಯಲ್ಲಿ ದಾಖಲೆ ಪರಿಶೀಲಿಸಲಾಗಿ ಈಕೆ 15-02-2006 ರಲ್ಲಿ ಜನಿಸಿರುವುದು ಖಚಿತ ಪಟ್ಟಿದ್ದು ದಾಖಲೆಯನ್ನು ನೀಡಿ ದೂರನ್ನು ದಿ. 26ಕ್ಕೆ ದೂರು ದಾಖಲಿಸಿದ್ದಾರೆ. ಕೆಲ ಅಧಿಕಾರಿಗಳು ಹಾಗೂ ಮುಖಂಡರ ಒಡನಾಟ ಹೊಂದಿರುವ ಬಡ್ಡಿಕುಳ ಉಪ್ಪಾರ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

 

administrator

Related Articles

Leave a Reply

Your email address will not be published. Required fields are marked *