ತ್ವರಿತ ರಸ್ತೆ ಕಾಮಗಾರಿ ಕೈಗೊಳ್ಳಲು ನಿರ್ದೇಶನ
ಹುಬ್ಬಳ್ಳಿ: ಮಳೆಗಾಲ ಆರಂಭವಾಗಿದ್ದು ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಹಾಗೂ ತ್ವರಿತವಾಗಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ವಾರ್ಡ್ ನಂ. ೨೭ರ ಸಿದ್ದೇಶ್ವರ ನಗರದಲ್ಲಿ, ಪಾಲಿಕೆ ಸಾಮಾನ್ಯ ಅನುದಾನದಡಿ ೪೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ದಾನಮ್ಮ ಗುಡಿ ರಸ್ತೆಯ ಕಾಂಕ್ರೀಟ್ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ನಗರದಲ್ಲಿ ಹಲವು ಕಡೆ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಹುಬ್ಬಳ್ಳಿ ರೈಲ್ವೇ ಡಿ.ಆರ್.ಎಂ. ಆಸ್ಪತ್ರೆಯಲ್ಲಿ ನಿರ್ಮಿಸುತ್ತಿರುವ ಸಿ.ಸಿ. ರಸ್ತೆಯನ್ನು ಪೂರ್ಣ ಗೊಳಿಸಿ ವಾಹನ ಓಡಾಟಕ್ಕೆ ಮುಕ್ತ ಮಾಡುವಂತೆ ಹೇಳಿದ್ದೇನೆ. ಸ್ಟೇಷನ್ ರಸ್ತೆ ಕಾಮಗಾರಿಯನ್ನು ಸ್ಮಾರ್ಟ್ ಸಿಟಿ ಅಡಿ ಕೈಗೊಳ್ಳುತ್ತಿದ್ದು, ೧೦ ದಿನಗಳಲ್ಲಿ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹುಬ್ಬಳ್ಳಿ ವರ್ತಲ ರಸ್ತೆಕಾಮಗಾರಿ ವೇಗವಾಗಿ ನಡೆಯುತ್ತಿದೆ.
ಬಿಜಾಪುರ ಹಾಗೂ ಗದಗ ರಸ್ತೆಯ ನಡುವಿನ ವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಗದಗ ರಸ್ತೆಯಿಂದ ಬಿಡನಾಳದ ಸೇತುವೆ ವರೆಗೆ ಕಾಮಗಾರಿ ಪೂರ್ಣಗೊಳಿಸಿ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಮೇಲಿನ ಸಂಚಾರ ಒತ್ತಡ ಕಡಿಮೆಯಾಗಲಿದೆ. ಇದರಿಂದ ಟ್ರಾಫಿಕ್ ಐ ಲ್ಯಾಂಡ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅನುಕೂಲವಾಗಲಿದೆ.
ರಾಜ್ಯಕ್ಕೆ ೧೨೦೦ ಮೆಟ್ರಿಕ್ ಟನ್ ಆಕ್ಸಿಜನ್ ಕೋಟಾ ನಿಗದಿಯಾಗಿದೆ. ಇದರಲ್ಲಿ
೫೦೦ ಮೆಟ್ರಿಕ್ ಟನ್ ಆಕ್ಸಿಜನ್ ಕೋವಿಡ್ ನಿರ್ವಹಣೆಗಾಗಿ ಇಟ್ಟುಕೊಂಡು, ೪೦೦ ಮೆಟ್ರಿಕ್ಟನ್ ಆಕ್ಸಿಜನ್ ಕೈಗಾರಿಕೆಗಳಿಗೆ ನೀಡಲು ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗಳು ಆದ್ಯತೆ ಮೇರೆಗೆ ಆಕ್ಸಿಜನ್ ಹಂಚಿಕೆ ಮಾಡಲಿದ್ದಾರೆ. ಇದುವರೆಗೂ ಯಾವ ಕೈಗಾರಿಕೆಗಳು ಆಕ್ಸಿಜನ್ ಕೊರತೆ ಕುರಿತು ದೂರು ನೀಡಿಲ್ಲ. ಎಲ್ಲಾ ಕೈಗಾರಿಕೆಗಳಿಗೂ ಆಕ್ಸಿಜನ್ ಸರಬರಾಜು ಆಗುತ್ತಿದೆ ಎಂದರು.
ಇನ್ವೆಸ್ಟ್ ಕರ್ನಾಟಕ ಸಮ್ಮೇಳನದ ನಿರ್ಣಯದಂತೆ ಯಪ್ಲೇಕ್ಸ್ ಕಂಪನಿಗೆ ಮಮ್ಮಿಗಟ್ಟಿ ಬಳಿ ೫೦ ಎಕರೆ ಜಮೀನು ಮಂಜೂರು ಮಾಡಲಾಗಿದೆ. ಲಾಕ್ಡೌನ್ ಮಧ್ಯೆಯೂ ಕಂಪನಿಯಿಂದ ಜಮೀನು ಅಭಿವೃದ್ಧಿ ಕಾರ್ಯಕೈಗೊಂಡಿದ್ದು ಶೀಘ್ರವಾಗಿ ಕಂಪನಿಯು ತನ್ನ ಕಾರ್ಯಾಚರಣೆ ಆರಂಭಿಸಲಾಗಿದೆ.
ಏಕಸ್ ಸಂಸ್ಥೆಗೆ ೩೫೮ ಎಕರೆ ಜಮೀನು ನೀಡಲಾಗಿದೆ. ರಾಜೇಶ್ ಎಕ್ಸ್ಪೋರ್ಟ್ ೧೫೦ ಎಕರೆ ಜಮೀನನ್ನು ಬೇಲೂರು ಕೈಗಾರಿಕಾ ಪ್ರದೇಶ ಮಂಜೂರು ಮಾಡಲಾಗಿದೆ. ಈ ಕಂಪನಿಗಳಿಂದ ೨೫ ಸಾವಿರ ಕೋಟಿ ಬಂಡವಾಳ ಹೂಡಿಕೆ ಆಗಲಿದೆ ಎಂದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ, ಅಶ್ವಿನಿ ಮಜ್ಜಗಿ, ರಾಜಣ್ಣಾ ಕೊರವಿ, ಬಸಣ್ಣ ಹೆಬ್ಬಳ್ಳಿ, ಚನ್ನಬಸಪ್ಪ ಧಾರವಾಡಶೆಟ್ರು, ನಂದೀಶ ವಡ್ಡಟ್ಟಿ ಹಾಗೂ ಇನ್ನಿತರೆ ಸ್ಥಳೀಯ ಪ್ರಮುಖರು ಹಾಜರಿದ್ದರು.