ಹುಬ್ಬಳ್ಳಿ : ಧಾರವಾಡ ಗ್ರಾಮೀಣ ಹಾಗೂ ಪಶ್ಚಿಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎಂಬ ಭಾವನೆ ತಾಳಿದ್ದ ಬಿಜೆಪಿಗೆ ಮಹಾನಗರಪಾಲಿಕೆ ಚುನಾವಣಾ ಫಲಿತಾಂಶ ಹೊಸ ದಿಕ್ಸೂಚಿಗೆ ನಾಂದಿ ಹಾಡಿದೆ.
ಎರಡೂ ಕ್ಷೇತ್ರ ವ್ಯಾಪ್ತಿಯ 34 ಕ್ಷೇತ್ರಗಳ ಪೈಕಿ 14 ಸ್ಥಾನ ಕಾಂಗ್ರೆಸ್ ಪಾಲಾಗಿದ್ದು ಒಂದರಲ್ಲಿ ಪಕ್ಷೇತರ, ಒಂದು ಜೆಡಿಎಸ್ ಗೆಲ್ಲುವುದರೊಂದಿಗೆ ಕಮಲ ಪಾಳೆಯದಲ್ಲಿ ಕಂಪನ ಹುಟ್ಟಿಸಿದೆ.
ಗ್ರಾಮೀಣ ವ್ಯಾಪ್ತಿಯಲ್ಲಿ ಮಾಜಿ ಸಚಿವ ವಿನಯಕುಲಕರ್ಣಿಯವರ ಅನುಪಸ್ಥಿತಿಯಲ್ಲೂ 9ರಲ್ಲಿ 4 ಕಾಂಗ್ರೆಸ್ ಪಾಲಾಗಿದೆ. ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಬಂಪರ್ ಲಾಟರಿ ಹೊಡೆದಿದ್ದಾರೆ. 25 ವಾರ್ಡಗಳಲ್ಲಿ 10ನ್ನು ಕಾಂಗ್ರೆಸ್ ತೆಕ್ಕೆಗೆ ಹಾಕಿಕೊಳ್ಳುವುದರೊಂದಿಗೆ ಕೈ ಪಾಳಯದಲ್ಲಿ ನವೋತ್ಸಾಹಕ್ಕೆ ಕಾರಣರಾಗಿದ್ದಾರೆ.
ಇನ್ನು 9ನೇ ವಾರ್ಡಿನಲ್ಲಿ ಕಾಂಗ್ರೆಸ್ 21 ಮತಗಳ ಸೋಲು ಕಂಡಿದೆ.ಅಲ್ಲದೇ ಹೊಸ ತಂಡ ಕಟ್ಟುವ ತಮಾಟಗಾರ ಯತ್ನ ಫಲ ನೀಡಿದೆ.
ಕೆಲ ವಾರ್ಡಗಳಲ್ಲಿ ಬಿಜೆಪಿಯ ಟಿಕೆಟ್ ಹಂಚಿಕೆ ಕೈ ಕೊಟ್ಟಿದೆ.ವಾರ್ಡೊಂದರಲ್ಲಿ ಪಾಲಿಕೆ ಸದಸ್ಯರೊಬ್ಬರ ಕಾರು ಚಾಲಕನಿಗೆ ಟಿಕೆಟ್ ಕೊಟ್ಟಿದ್ದು ಸಹ ಹಿನ್ನೆಡೆಗೆ ಕಾರಣವಾಯಿತು. 25ರಲ್ಲಿ 18 ತಮ್ಮದಾಗಬಹುದೆಂಬ ಲೆಕ್ಕಾಚಾರ ಹಾಕಿದ್ದ ಮಹಾನಗರ ಬಿಜೆಪಿ ಅಧ್ಯಕ್ಷರಾಗಿರುವ ಅರವಿಂದ ಬೆಲ್ಲದಗೆ ಈ ಚುನಾವಣೆ ಬೆಲ್ಲವನ್ನಂತೂ ತಂದಿಲ್ಲವಾಗಿದೆ.