ಧಾರವಾಡ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ನರೇಂದ್ರ ಕ್ಷೇತ್ರದ ಸದಸ್ಯ ಚನವೀರಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಸಮಿತಿಯ ಸಭಾಂಗಣದಲ್ಲಿ ಜರುಗಿದ ಚುನಾವಣೆಯಲ್ಲಿ, ಚನವೀರಗೌಡ ಪಾಟೀಲ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆದ ತಹಶೀಲದಾರ ಡಾ.ಸಂತೋಷ ಬಿರಾದಾರ ಘೋಷಿಸಿದರು.
ಸಮಿತಿಯ ಉಪಾಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ, ಸದಸ್ಯರು ಮತ್ತು ಕಾರ್ಯದರ್ಶಿ ವಿ.ಜಿ.ಹಿರೇಮಠ ಉಪಸ್ಥಿತರಿದ್ದರು.
ಕಳೆದ ತಿಂಗಳು ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಹೊಸೂರ ರಾಜಿನಾಮೆ ಸಲ್ಲಿಸಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. 16 ಸದಸ್ಯ ಬಲದ ಸಮಿತಿಯಲ್ಲಿ ಸದ್ಯ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಅಧಿಕವಾಗಿದ್ದು, ಇದೀಗ ಬಿಜೆಪಿ ಬೆಂಬಲಿತ ಚನವೀರಗೌಡ ಪಾಟೀಲ ಮತ್ತೇ ಅಧ್ಯಕ್ಷ ಗಾದಿಗೇರಿದ್ದಾರೆ.
ಫಲಿತಾಂಶ ಪ್ರಕಟಣೆಯಾದ ನಂತರ ಧಾರವಾಡ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ರುದ್ರಪ್ಪ ಅರಿವಾಳ, ಗ್ರಾಮೀಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಂಕರ ಕೊಮಾರದೇಸಾಯಿ, ಬಿಜೆಪಿ ಮುಖಂಡರಾದ ಪರಮೇಶ ಉಳವಣ್ಣವರ, ಸಂಭಾಜಿ ಜಾಧವ, ನಿಂಗಪ್ಪ ಸಪೂರಿ, ನರೇಂದ್ರ ಗ್ರಾಪಂ ಉಪಾಧ್ಯಕ್ಷ ಆತ್ಮಾನಂದ ಹುಂಬೇರಿ, ಸದಸ್ಯರಾದ ನಾಗೇಶ ಹಟ್ಟಿಹೊಳಿ, ಅಪ್ಪಣ್ಣ ಹಡಪದ, ಅರ್ಜುನಗೌಡ ಪಾಟೀಲ ಮತ್ತಿತರರು ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.