ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ೮೨ ವಾರ್ಡುಗಳ ವಾರ್ಡ್‌ವಾರು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಒಟ್ಟು ೮,೧೧,೬೩೨ ಮತ ಚಲಾಯಿ ಸುವ ಹಕ್ಕು ಪಡೆದುಕೊಂಡಿದ್ದಾರೆ.
ನಿಗದಿತ ದಿನಾಂಕದೊಳಗೆ ನೀಡಿದ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ, ಮುದ್ರಕರಿಂದ ಬದಲಾವಣೆಗಳನ್ನು ಮಾಡಿಸಿ, ಚೆಕ್ ಲಿಸ್ಟ್ ಪರಿಶೀಲಿಸಿ ಮಹಾನಗರಪಾಲಿಕೆಯ ೮೨ ವಾರ್ಡುಗಳ ಅಂತಿಮ ಮತದಾರರ ಪಟ್ಟಿಯನ್ನು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ, ತಾಲೂಕ ಕಚೇರಿ, ಮಹಾನಗರ ಪಾಲಿಕೆ ಕಚೇರಿ, ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿ ಪ್ರಚುರಪಡಿಸಲಾಗಿದ್ದು ಈಗ ಎಲ್ಲರ ಚಿತ್ರ ಚುನಾವಣೆ ದಿನಾಂಕ ಯಾವಾಗ ಎನ್ನುವತ್ತ ನೆಟ್ಟಿದೆ.
ಚುನಾವಣಾ ಆಯೋಗ ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರಪಾಲಿಕೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಉದ್ದೇಶಿಸಿದ್ದು ನ್ಯಾಯಾಂಗ ನಿಂದನೆಯಾಗದಂತೆ ಅಗಸ್ಟ ೨೦ರೊಳಗೆ ಚುನಾವಣೆ ನಡೆಸುವುದು ನಿಶ್ಚಿತ ಎಂದು ಬೆಂಗಳೂರು ಮೂಲಗಳು ಖಚಿತಪಡಿಸಿವೆ.
ಬರುವ ದಿ.೧೫ರಂದು ಚುನಾವಣೆ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿದ್ದು ಹಾಗಾದಲ್ಲಿ ಸ್ವಾತಂತ್ರೋತ್ಸವದ ಮೊದಲೇ ಮತದಾನ ಪಕ್ಕಾ ಎನ್ನಲಾಗುತ್ತಿದೆ.
ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಾಳೆಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಅನೇಕ ವಾರ್ಡಗಳಲ್ಲಿ ಅರ್ಧ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.
ಮೀಸಲಾತಿಯ ಸಮಸ್ಯೆಯಿದ್ದವರು ತಮ್ಮ ಪತ್ನಿ, ತಾಯಂದಿರನ್ನು ಅಖಾಡಾಕ್ಕಿಳಿಸಲು ಸಜ್ಜಾಗಿದ್ದು,ಕೆಲವರು ಪಕ್ಕದ ವಾರ್ಡಗಳತ್ತ ಲಕ್ಷ್ಯ ಹರಿಸಿದ್ದು, ಸದ್ದಿಲ್ಲದೇ ಕಾರ್ಯ ನಡೆಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಕಣಕ್ಕಿಳಿಯಲಿರುವ ಆಪ್ ಹಾಗೂ ಎಐಎಂಐಎಂ ಪಕ್ಷಗಳು ಪಕ್ಷ ಬೇರು ಬಿಡಲು ಯತ್ನ ನಡೆಸಿದ್ದು ಇವೆರಡು ಪಕ್ಷಗಳು ಪಾಲಿಕೆಗೆ ಎಂಟ್ರಿ ಕೊಡಲು ಹರಸಾಹಸ ನಡೆಸಿವೆ.
ಎಲ್ಲೆಡೆ ಆಪ್ ಬಿಜೆಪಿಗೆ ತೊಡರುಗಾಲಾದರೆ, ಪೂರ್ವ ಕ್ಷೇತ್ರದಲ್ಲಿ ಓವೈಸಿ ಪಕ್ಷ ಕಾಂಗ್ರೆಸ್‌ಗೆ ಮಗ್ಗಲಮುಳ್ಳಾಗಿದೆ. ರಾಜಣ್ಣ ಕೊರವಿ ನಿರ್ಗಮನದ ನಂತರ ಜೆಡಿಎಸ್ ಇರುವ ಬಲವನ್ನೂ ಕಳೆದುಕೊಂಡಿದ್ದು ಕೆಲ ವಾರ್ಡಗಳಲ್ಲಿ ಸ್ಪರ್ಧೆಗಿಳಿವ ಸಾಧ್ಯತೆಗಳಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ಆಕಾಂಕ್ಷಿಗಳಲ್ಲಿ ಅನೇಕರು ಟಿಕೆಟ್ ದೊರೆಯದೇ ಇದ್ದಲ್ಲಿ ಬಂಡಾಯದ ಬಾವುಟ ಹಾರಿಸುವದು ನಿಕ್ಕಿಯಾಗಿದ್ದು, ಮೂರನೇ ಬಾರಿ ಅಧಿಕಾರಕ್ಕೇರಲು ಬಿಜೆಪಿ ಸಿದ್ದತೆ ನಡೆಸಿದ್ದರೆ, ಕಮಲ ಪಾಳೆಯದ ಗೆಲುವಿನ ಸರಪಳಿ ತುಂಡರಿಸಲು ಕಾಂಗ್ರೆಸ್ ಯತ್ನ ನಡೆಸಿದೆ.
ಪೂರ್ವ ಕ್ಷೇತ್ರದಲ್ಲಂತೂ ೧೮ ಕ್ಷೇತ್ರಗಳು ಮಹಿಳೆಯರ ಪಾಲಾಗಿದೆ.ಎಸ್‌ಸಿ ಮೀಸಲಿನಲ್ಲಿ ನ್ಯೂನ್ಯತೆಯಾಗಿದೆ ಎಂದು ಬಸವ ಜನಶಕ್ತಿಯ ಬಸವರಾಜ ತೇರದಾಳ ಹೈಕೋರ್ಟ ಕದ ತಟ್ಟಿದ್ದು ಈಗಾಗಲೇ ಸರ್ಕಾರ,ನೋಟಿಸ್ ಜಾರಿಯಾಗಿದೆ.
ಬಿಜೆಪಿ ಪಾಳಯದಲ್ಲಿನ ಸಿದ್ದತೆಗಳನ್ನು ಸೂಕ್ಷ್ಮವಾಗಿ ನೋಡಿದಾಗ ಅಗಸ್ಟನಲ್ಲಿ ಚುನಾವಣೆ ನಿಕ್ಕಿ ಎನ್ನಲಾಗುತ್ತಿದೆ.
ಪಾಲಿಕೆಯ ಒಟ್ಟೂ ೮೨ ವಾರ್ಡಗಳಲ್ಲಿ ೪,೦೩,೬೫೭ ಪುರುಷರು, ೪,೦೭,೮೯೧ ಮಹಿಳೆಯರು ಮತ್ತು ೮೪ ಇತರ ಮತದಾರರು ಇದ್ದಾರೆ. ೩೩ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಅಂದರೆ ೧೩,೬೪೮ ಮತದಾರರು ಇದ್ದಾರೆ. ೭೯ನೇ ವಾರ್ಡ್‌ನಲ್ಲಿ ಕಡಿಮೆ ೫,೯೨೪ ಜನ ಮತದಾರರು ಪಟ್ಟಿಯಲ್ಲಿದ್ದಾರೆ.