ಹುಬ್ಬಳ್ಳಿ-ಧಾರವಾಡ ಸುದ್ದಿ
ಶಿಕ್ಷಣ ಇಲಾಖೆ ಗೊಂದಲಗಳಿಗೆ ಅಧಿಕಾರಿಗಳೇ ಕಾರಣ

ಶಿಕ್ಷಣ ಇಲಾಖೆ ಗೊಂದಲಗಳಿಗೆ ಅಧಿಕಾರಿಗಳೇ ಕಾರಣ

ಪತ್ರಿಕಾ ಸಂವಾದದಲ್ಲಿ ಹೊರಟ್ಟಿ ಹೇಳಿಕೆ

ಹುಬ್ಬಳ್ಳಿ: ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆ ಗೊಂದಲಗಳಿಗೆ ಅಧಿಕಾರಿಗಳೇ ಕಾರಣ ಎಂದು 8ನೇ ಬಾರಿ ವಿಧಾನಪರಿಷತ್ ಸದಸ್ಯರಾಗಿ ಐತಿಹಾಸಿಕ ಗೆಲುವು ಸಾಧಿಸಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿಂದು ನಡೆದ ಪತ್ರಿಕಾ ಸಂವಾದದಲ್ಲಿ ಮುಕ್ತವಾಗಿ ಮಾತನಾಡಿದ ಅವರು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿದ್ದರೆ ಪಠ್ಯಪುಸ್ತಕ ವಿವಾದವು ಸೃಷ್ಟಿಯಾಗುತ್ತಿರಲಿಲ್ಲ ಎಂದರು.


ಶಿಕ್ಷಣ ಇಲಾಖೆಯನ್ನು ಸುಧಾರಿಸಲು ಹರಿ ಬ್ರಹ್ಮರಿಂದಲೂ ಸಾಧ್ಯವಿಲ್ಲ. ಒಂದು ಸಮಸ್ಯೆ ಮುಗಿಯುವುದರೊಳಗಾಗಿ ಮತ್ತೊಂದು ಸಮಸ್ಯೆ ಬಂದಿರುತ್ತೆ. ಯಾರೇ ಸಚಿವರಾದರೂ ಇಲಾಖೆಯನ್ನು ಸುಧಾರಿಸುವುದು ದೊಡ್ಡ ಸವಾಲು ಎಂದರು.
ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಸರ್ಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ವಿಷಯದಲ್ಲಿ ಯಾರು ಕಮರ್ಷಿಯಲ್ ಆಗಬಾರದು. ಇದೀಗ ಪಠ್ಯಪುಸ್ತಕ, ಸಮವಸ್ತ್ರ ಸರಿಯಾಗಿ ಮಕ್ಕಳಿಗೆ ತಲುಪುತ್ತಿಲ್ಲ. ಅದನ್ನು ಸರ್ಕಾರ ಮತ್ತು ಅಧಿಕಾರಿಗಳು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಬೇಕು. ತಮ್ಮ ಅಧಿಕಾರದ ಅವಧಿಯಲ್ಲಿ ಮೇ ತಿಂಗಳಲ್ಲಿಯೇ ಸೈಕಲ್, ಪುಸ್ತಕ ಕೊಡುವ ಪದ್ದತಿ ಇತ್ತು ಎಂದು ಹೇಳಿದರು.


ಪಾಲಕರು ಸಹ ಇಂದು ನೂರಕ್ಕೆ ನೂರು ಅಂಕಗಳಿಸುವ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಅದರ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕೊಡಿಸುವ ಕೆಲಸವು ಆಗಬೇಕು. ಶಿಕ್ಷಣ ಸಂಸ್ಥೆಗಳು ದುಡ್ಡು ಮಾಡುವ ಸಂಸ್ಥೆಗಳಾಗುತ್ತಿವೆ. ತಾವು ಶಿಕ್ಷಣ ಸಚಿವರಾಗಿದ್ದಾಗ ನೀತಿಪಾಠದ ಬೋಧನೆಯಿದ್ದುದನ್ನು ಸ್ಮರಿಸಿದರು.
ವರ್ಗಾವಣೆ ನೀತಿ ಸರಿಯಾಗಿ ಅನುಷ್ಠಾನವಾಗಬೇಕಿದೆ. ಆದರೆ ಈಚೆಗೆ ಸರ್ಕಾರಗಳು ತೇಪೆ ಹಚ್ಚುವ ಕೆಲಸ ಮಾಡುತ್ತವೆ. ಪ್ರತಿ ವರ್ಷ ಶಿಕ್ಷಕರ ನೇಮಕ ಆಗಬೇಕಿದೆ. ಹಾಗಿದ್ದಲ್ಲಿ ಮಾತ್ರ ಅನುಕೂಲ. ಕೆಲ ಅಧಿಕಾರಿಗಳಿಂದ ಅತಿಥಿ ಶಿಕ್ಷಕರ ಕೆಟ್ಟ ಪದ್ಧತಿ ಬಂದಿದೆ ಎಂದರು.


ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಸಾಧ್ಯವಿಲ್ಲವಾದರೂ ಸರ್ಕಾರಿ ಶಾಲಾ ಕಟ್ಟಡಗಳ ಸುರಕ್ಷತೆ, ವರ್ಗಾವಣೆ ಸಹಿತ ಮೂರು ವಿಷಯಗಳ ಕುರಿತು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಲ್ಲದೇ ಅದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.ಹಾಗಾಗಿ ಬರುವ ಸದನದಲ್ಲಿ ಪ್ರಮುಖವಾಗಿ ಮೂರು ವಿಷಯಗಳನ್ನು ಚರ್ಚೆ ಮಾಡುವೆ ಎಂದರು.
ಒಂದೂವರೆ ಗಂಟೆ ಕಾಲ ತಮ್ಮ ರಾಜಕೀಯ ಜೀವನದ ನೆನಪುಗಳ ಸುರುಳಿ ಬಿಚ್ಚಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಗಣಪತಿ ಗಂಗೊಳ್ಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳು ಹಾಗೂ ವಿವಿಧ ಪತ್ರಿಕೆಗಳ ಬ್ಯುರೋ ಮುಖ್ಯಸ್ಥರುಗಳು ಸೇರಿ ಸಂಘದ ವತಿಯಿಂದ ದಾಖಲೆ ಗೆಲುವು ಸಾಧಿಸಿದ ಹೊರಟ್ಟಿಯವರನ್ನು ಸನ್ಮಾನಿಸಲಾಯಿತು.

ಸೋಲಿಗಾಗಿ ಹರಕೆ ಹೊತ್ತಿದ್ದ ಪತ್ನಿ

ರಾಜಕೀಯದಲ್ಲಿ ಇರುವ ಹಿನ್ನೆಲೆಯಲ್ಲಿ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗುತ್ತಿಲ್ಲ. ಹೀಗಾಗಿಯೇ ಈ ಹಿಂದೆ ಪತ್ರಿಕೆಯೊಂದರ ಸಂದರ್ಶನದಲ್ಲಿ ನನ್ನ ಪತ್ನಿ ನಾನು ಸೋಲಬೇಕೆಂದು ಹರಕೆ ಹೊತ್ತಿದ್ದ ಬಗ್ಗೆ ಹೇಳಿದ್ದಳೆಂಬ ವಿಷಯ ಬಿಚ್ಚಿಟ್ಟ ಹೊರಟ್ಟಿ ಆದರೆ ಆ ಬಯಕೆ ಈಡೇರಲಿಲ್ಲ ಎಂದು ಸಂವಾದದಲ್ಲಿ ನೆನಪು ಬಿಚ್ಚಿಟ್ಟರು. ನನ್ನ ಲಕ್ಕಿ ಅಂಬಾಸೆಡರ್ ಕಾರು ಸಹಿತ ನಾನು ಇರೋವರೆಗೆ ನನ್ನ ಜೊತೆಗೆ ಇರುತ್ತದೆ ಹೇಳಿದರು.


ಬೇಡಿಕೆ ಇಟ್ಟಿಲ್ಲ

ನಾನು ಪರಿಷತ್ ಸದಸ್ಯನಾಗಿ ಯಾವುದೇ ಅಧಿಕಾರವನ್ನು ಕೇಳುವುದಿಲ್ಲ, ತಮ್ಮ ಮೇಲೆ ನಂಬಿಕೆಯಿಟ್ಟು ಯಾವುದೇ ಹುದ್ದೆ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ. ಸಭಾಪತಿ ಹುದ್ದೆಯನ್ನು ನೀಡಿದರೆ ಒಪ್ಪಿಕೊಳ್ಳುವೆ. ಮಂತ್ರಿಗಿರಿಗಾಗಿ ಯಾವುದೇ ಲಾಬಿ ಮಾಡುವುದಿಲ್ಲ. ಕೊಟ್ಟಿಲ್ಲವೆಂದರೂ ಶಿಕ್ಷಕರ ಸಮಸ್ಯೆ ಆಲಿಸುತ್ತ ವಾರಕ್ಕೆರಡು ಸಭೆ ಕರೆಯುತ್ತ ಸಾಗುವೆ.ಸಭಾಪತಿ ಹುದ್ದೆಯಲ್ಲಿದ್ದರೂ ಉತ್ತಮವಾಗಿ ಕಾರ್ಯ ಮಾಡಬಹುದು.ನನ್ನ ಆತ್ಮಸಾಕ್ಷಿಗೆ ವಿರುದ್ದವಾಗಿ ಎಂದೂ ನಡೆಯುವುದಿಲ್ಲ ಎಂದರು.

ಪತ್ರ ಬರೆದರೂ ಉತ್ತರ ಬರಲಿಲ್ಲ

ತಾವು ಕಳೆದ ಅವಧಿ ಸಭಾಪತಿ ಹುದ್ದೆಯಲ್ಲಿದ್ದಾಗ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ೧೧೨ ಪತ್ರಗಳನ್ನು ಬರೆದಿದ್ದೆ. ಅದರ ಪೈಕಿ ಕೇವಲ ಒಂದು ಉತ್ತರ ಬಂದಿದೆ.ಯಾವುದೇ ಸಚಿವರು ಉತ್ತರಿಸಲಿಲ್ಲ ಎಂದು ಹೇಳಿದರು.

 

 

administrator

Related Articles

Leave a Reply

Your email address will not be published. Required fields are marked *