ಹುಬ್ಬಳ್ಳಿ-ಧಾರವಾಡ ಸುದ್ದಿ
ನಾಳೆ ಪಾಲಿಕೆ ಚೊಚ್ಚಲ ಸಭೆ – ಸಮಸ್ಯೆಗಳ ಪ್ರತಿಧ್ವನಿ ಸಾಧ್ಯತೆ

ನಾಳೆ ಪಾಲಿಕೆ ಚೊಚ್ಚಲ ಸಭೆ – ಸಮಸ್ಯೆಗಳ ಪ್ರತಿಧ್ವನಿ ಸಾಧ್ಯತೆ

ಪ್ರತ್ಯೇಕ ಧಾರವಾಡ ಪಾಲಿಕೆ ಕೂಗೂ ಮುಂಚೂಣಿಗೆ

ಹುಬ್ಬಳ್ಳಿ: 2019ರ ಫೆಬ್ರುವರಿ ನಂತರ ನಾಳೆ ಮೊದಲ ಬಾರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸರ್ವ ಸದಸ್ಯರ ಸಭೆ ನಡೆಯಲಿದ್ದು, ಅವಳಿನಗರದ ಹಲವು ಜ್ವಲಂತ ಸಮಸ್ಯೆಗಳ ಪ್ರಸ್ತಾಪಕ್ಕೆ ವೇದಿಕೆಯಾಗುವ ಸಾಧ್ಯತೆಯಿದೆ.
ಕಳೆದ ಸಪ್ಟೆಂಬರ್‌ನಲ್ಲಿ ಪಾಲಿಕೆ ಚುನಾವಣಾ ಫಲಿತಾಂಶ ಪ್ರಕಟಗೊಂಡರೂ ಸುಮಾರು 8 ತಿಂಗಳ ಕಾಲ ಅಧಿಕಾರದಿಂದ ವಂಚಿತರಾಗಿದ್ದ ಸದಸ್ಯರಿಗೆ ಕಳೆದ ಮೇಯರ್ ಆಯ್ಕೆಯಾಗುವುದರೊಂದಿಗೆ ಪ್ರಮಾಣ ಭಾಗ್ಯ ದೊರೆತು ಅಧಿಕೃತವಾಗಿ ಬಲಗಾಲಿಟ್ಟಿದ್ದರು. ಕಳೆದ ಬಾರಿ 67 ಇದ್ದ ಸದಸ್ಯರ ಸಂಖ್ಯೆ ಈ ಬಾರಿ ೮೨ ಆಗಿದ್ದು, ಈ ಬಾರಿ ಬಹುತೇಕರು ಹೊಸಬರೇ ಆಯ್ಕೆಯಾಗಿದ್ದು, 17 ಸದಸ್ಯರು ಮಾತ್ರ ಹಳಬರಾಗಿದ್ದಾರೆ.


39 ಸದಸ್ಯ ಬಲ ಹಾಗೂ ಮೂರು ಪಕ್ಷೇತರರ ಬಲ ಹೊಂದಿರುವ ಬಿಜೆಪಿಯ ಈರೇಶ ಅಂಚಟಗೇರಿ ಮೇಯರ್ ಸ್ಥಾನ ಅಲಂಕರಿಸಿದ ನಂತರ ನಡೆಯುತ್ತಿರುವ ಚೊಚ್ಚಲ ಸಭೆ ಇದಾಗಿದ್ದು, ಹಲವು ವಿಷಯಗಳು ಪ್ರಸ್ತಾಪವಾಗಿ ಆಡಳಿತ ಹಾಗೂ ವಿಪಕ್ಷ ಕಾಂಗ್ರೆಸ್ ಮಧ್ಯೆ ಜಂಗಿ ಕುಸ್ತಿ ನಡೆಯುವದು ಬಹುತೇಕ ಖಚಿತವಾಗಿದೆ.
ಇತ್ತೀಚೆಗೆ ಕುಡಿಯುವ ನೀರಿನ ಮಾಹಿತಿ ನೀಡಲು ಸರಬರಾಜು ಸಂಸ್ಥೆ ಎಲ್ ಆಂಡ್ ಟಿ ಕರೆದ ಸಭೆಯಲ್ಲಿಯೇ ವಿಪಕ್ಷ ಕಾಂಗ್ರೆಸ್‌ನ ನಾಲ್ಕೈದು ಸದಸ್ಯರು ನೀರು ಸರಬರಾಜು ಆದ್ವಾನ ಪ್ರಸ್ತಾಪಿಸಿ ಗಮನ ಸೆಳೆದಿದ್ದು, ನಾಳೆಯೂ ಇದರ ಪುನರಾವರ್ತನೆಯಾಗುವುದು ನಿಶ್ಚಿತವಾಗಿದೆ. ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ನಿರಂತರ ನೀರು ಪೂರೈಕೆ ಯೋಜನೆ, ನೀರಿನ ಸಮಸ್ಯೆ, ವಾಲ್ವಮನ್‌ಗಳ ಸಮಸ್ಯೆಗಳ ಬಗ್ಗೆ ಪಕ್ಷಾತೀತವಾಗಿ ಒಕ್ಕೊರಲಿನಿಂದ ಮುಗಿಬೀಳಲಿದ್ದು, ಇದಕ್ಕೆ ಪ್ರತ್ಯೇಕ ಸಭೆಯ ದಿನಾಂಕವೂ ನಾಳೆ ನಿಗದಿಯಾಗುವ ಸಾಧ್ಯತೆಗಳಿವೆ.
ಪೇಡೆನಗರಿಗೆ ಮೇಯರ್ ಪಟ್ಟ ದಕ್ಕಿದ್ದರೂ ಧಾರವಾಡ ಪ್ರತ್ಯೇಕ ಪಾಲಿಕೆಯಾಗಬೇಕೆಂಬ ಕೂಗು ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆ ಠರಾವು ಅಂಗೀಕರಿಸಲು ನಾಳೆ ಅಲ್ಲಿನ ಸರ್ವಸದಸ್ಯರು ಪಟ್ಟು ಹಿಡಿಯುವ ಸಾಧ್ಯತೆಗಳಿವೆ.
ಸ್ಮಾರ್ಟ ಸಿಟಿ ಕಳಪೆ ಕಾಮಗಾರಿ, ಅನುದಾನ ಹಂಚಿಕೆ, ಕಸ ಸಂಗ್ರಹ ತಾರತಮ್ಯ ವಾರ್ಡಿನ ಸಮಸ್ಯೆಗಳ ಬಗ್ಗೆ ಸದನದಲ್ಲಿ ಗಮನಸೆಳೆಯಲು ಬಹುತೇಕ ಸದಸ್ಯರು ತುದಿಗಾಲ ಮೇಲೆ ನಿಂತಿದ್ದು, ಒಟ್ಟಿನಲ್ಲಿ ನಾಳೆಯ ಸಭೆ ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗುವ ಎಲ್ಲ ಲಕ್ಷಣಗಳು ಇವೆ.
ನಾಳೆಯ ಸಭೆಯಲ್ಲಿ 2019ರ ಫೆಬ್ರುವರಿ ತಿಂಗಳಲ್ಲಿ ಅಂದು ಮೇಯರ್ ಆಗಿದ್ದ ದಿ. ಸುಧೀರ ಸರಾಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೊತ್ತುವಳಿಗಳಿಗೆ ಅನುಮೋದನೆ ಪಡೆಯಬೇಕಾಗಿದೆ.
ಕಲಾವಿದರ ನಿವೇಶನ ಗೋಲಮಾಲ್: ೨೦೧೯ರಲ್ಲಿ ಸದಸ್ಯ ಸತೀಶ ಹಾನಗಲ್ ಕೇಳಿದ್ದ ಕಲಾವಿದರ ನಿವೇಶನ ಹಂಚಿಕೆ ಕುರಿತಾದ ಉತ್ತರ ಸಹ ನೀಡಬೇಕಾಗಿದ್ದು, ಈ ವಿಷಯವೂ ತಾರಕಕ್ಕೇರುವ ಸಾಧ್ಯತೆಯಿದೆ. ಆನಂದ ನಗರ ಪ್ರದೇಶದಲ್ಲಿರುವ ಕಲಾವಿದರ ನಿವೇಶನ ಹಂಚಿಕೆಯಲ್ಲಿ ಭಾರೀ ಗೋಲ್‌ಮಾಲ್ ಆಗಿದೆ ಎನ್ನಲಾಗಿದ್ದು, ಮಂಜೂರಾಗಿದ್ದು ಒಬ್ಬರಿಗಾದರೂ ಬೇರೆಯವರ ಹೆಸರಿಗೆ ಖರೀದಿ ಪತ್ರ ಮಾಡಿಕೊಡಲಾಗಿದೆ ಎನ್ನಲಾಗುತ್ತಿದೆ.

ವಿಪಕ್ಷ ಧುರೀಣರಾಗಿ ಮಣಿಕುಂಟ್ಲ

DORERAJ_MANIKUNTLA

ಹುಬ್ಬಳಿ : 33 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ನಿಂದ ವಿರೋಧ ಪಕ್ಷದ ನಾಯಕನಾಗಿ 61ನೇ ವಾರ್ಡಿನಿಂದ ಆಯ್ಕೆಯಾಗಿರುವ ದೊರೆರಾಜ ಮಣಿಕುಂಟ್ಲ ಹಾಗೂ ಪಶ್ಚಿಮ ಕ್ಷೇತ್ರದ ವಾರ್ಡ ನಂ.31ರಿಂದ ಆಯ್ಕೆಯಾಗಿರುವ ಶಂಕ್ರಪ್ಪ ಹರಿಜನ ಅವರು ನೇಮಕಗೊಂಡಿದ್ದಾರೆಂದು ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಪ್ರಕಟಿಸಿದ್ದಾರೆ.

SHANKARAPPA_HARIJAN

ವಿಪಕ್ಷ ಧುರೀಣರಾಗಲು ಹಲವು ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ಪೂರ್ವ ಕ್ಷೇತ್ರದ ಮಣಿಕುಂಟ್ಲ ಪಾಲಾಗಿದೆ. ಇವರು ಮೂರನೇ ಬಾರಿ ಆಯ್ಕೆಯಾದವರಾಗಿದ್ದಾರೆ.

ಭರವಸೆ ಮೂಡಿಸಿರುವ ಮೇಯರ್

ಕಳೆದ ತಿಂಗಳು 28ರಂದು ಮೇಯರ್ ಗೌನ್ ಧರಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಆತ್ಮೀಯ ವಲಯದ ಈರೇಶ ಅಂಚಟಗೇರಿ ಕಳೆದ ಒಂದು ತಿಂಗಳಿನಲ್ಲಿ ಅಕ್ಷರಶಃ ಭರವಸೆ ಮೂಡಿಸುವಂತೆ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಬೆವರಿಳಿಸುತ್ತಿದ್ದ ಎಲ್ಲ ವಾರ್ಡಗಳ ವಾಸ್ತವಿಕ ಸಮಸ್ಯೆಗಳೇನು ಎಂದು ಅರಿಯುವ ಯತ್ನ ಮಾಡುತ್ತಿದ್ದಾರೆ. ಹಿಂದೆ ಒಂದು ಅವಧಿ ಪಾಲಿಕೆ ಸದಸ್ಯರಾಗಿ ಅನುಭವವಿರುವ ಅಂಚಟಗೇರಿಗೆ ಸದನ ನಿಭಾಯಿಸುವುದು ಕಷ್ಟವಲ್ಲವಾದರೂ ’ಬಿಸಿ ರಕ್ತ’ದ ಯುವಕರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಸ್ಪರ ವಾಗ್ವಾದ ತಳ್ಳಾಟಗಳಿಗೆ ಸದನ ಸಾಕ್ಷಿಯಾದರೂ ಅಚ್ಚರಿಯಿಲ್ಲ. ಅಲ್ಲದೇ ಸಭಾನಾಯಕರಾಗಿ ತಿಪ್ಪಣ್ಣ ಮಜ್ಜಗಿ ನೇಮಕಗೊಂಡಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬಲ್ಲವರಾಗಿದ್ದಾರೆ.

ಜನಪರ ಕಳಕಳಿಯ ಆಯುಕ್ತ

ಡಾ. ಸುರೇಶ ಇಟ್ನಾಳ ನಂತರ ಪಾಲಿಕೆ ಆಯುಕ್ತರಾಗಿರುವ ಡಾ. ಬಿ. ಗೋಪಾಲಕೃಷ್ಣ ಅವರು ಸಹ ಪಾಲಿಕೆಯ ಅಭಿವೃದ್ಧಿ ಬಗ್ಗೆ ಕಳಕಳಿ ಹೊಂದಿದವರಾಗಿದ್ದು, ಎಲ್ಲ ಸದಸ್ಯರ ಬೇಡಿಕೆಗಳಿಗೂ ಸ್ಪಂದಿಸುವ ಮನೋಭಾವ ಹೊಂದಿದವರಾಗಿದ್ದು, ಕೆಳ ಹಂತದ ಕೆಲವರು ಹಾದಿ ತಪ್ಪಿಸುವ ಯತ್ನ ಮಾತ್ರ ಮುಂದುವರಿದಿದೆ. ಈಗಾಗಲೇ ಕಳೆದ 2-3 ತಿಂಗಳಲ್ಲಿ ಅವರ ಜನಪರ ಕಳಕಳಿ ಸಾಬೀತಾಗಿದೆ.

administrator

Related Articles

Leave a Reply

Your email address will not be published. Required fields are marked *