ಬೆಳಗಾವಿ ಐಜಿಪಿ ರಮಣಗುಪ್ತಾ ನೂತನ ಆಯುಕ್ತ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ದಕ್ಷ,ಪ್ರಾಮಾಣಿಕ ಅಧಿಕಾರಿಗಳು ಬಹುದಿನ ನಿಲ್ಲುವದಿಲ್ಲ ಎಂಬುದಕ್ಕೆ ಅಪವಾದವೆಂಬಂತೆ ೨೬ ತಿಂಗಳ ಕಾರ್ಯನಿರ್ವಹಿಸಿದ್ದ ಪೊಲೀಸ್ ಆಯುಕ್ತ ಲಾಬೂರಾಮ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲಾಭೂರಾಮ್ ಅವರನ್ನು ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನದಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ರಮಣ ಗುಪ್ತಾ ಅವರು ನಿಯುಕ್ತಿಗೊಂಡಿದ್ದಾರೆ.
2020 ಅಕ್ಟೋಬರ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದ ಲಾಭೂರಾಮ್ ,ಹುಬ್ಬಳ್ಳಿ ಧಾರವಾಡದ ಅಕ್ರಮ ಚಟುವಟಿಕೆಗಳಿಗೆ ಅಕ್ಷರಶಃ ಕಡಿವಾಣ ಹಾಕಿದ್ದರಲ್ಲದೇ ಇವರ ಕಠಿಣ ನಿರ್ಧಾರಗಳು ಕಮಿಷ್ನರೇಟ್ ವ್ಯಾಪ್ತಿಯ ಅನೇಕ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿತ್ತು.
ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಕೆಲವೆ ಗಂಟೆಗಳಲ್ಲಿ ಹತೋಟಿಗೆ ತಂದಿದ್ದಲ್ಲದೇ ಈದಗಾದಲ್ಲಿ ಗಣೇಶೋತ್ಸವ ಮುಂತಾದವುಗಳು ನಡೆದರೂ ಯಾವುದೇ ಸಣ್ಣ ಅಹಿತಕರ ಘಟನೆ ನಡೆಯದಂತೆ ಲಾಭೂರಾಮ್ ಜಾಗೃತೆ ವಹಿಸಿದ್ದರು. ಚುನಾವಣೆವರೆಗೂ ಮುಂದುವರಿಯುವರೆಂಬ ನಿರೀಕ್ಷೆ ಹುಸಿಯಾಗಿ ವರ್ಗಾವಣೆಯಾಗಿದೆ.
ಕಲಬುರಗಿ ಈಶಾನ್ಯ ವಲಯದಲ್ಲಿದ್ದ ಸತೀಶ ಕುಮಾರ ಬೆಳಗಾವಿ ಉತ್ತರ ವಲಯ ಐಪಿಜಿಯಾಗಿ ನಿಯುಕ್ತಿಗೊಂಡಿದ್ದು, ಮೈಸೂರು ಪೊಲೀಸ್ ಅಕಾಡೆಮಿ ಐಜಿಪಿ ಅನುಪಮ ಅಗರವಾಲ ಕಲಬುರಗಿ ವಲಯಕ್ಕೆ ವರ್ಗಾವಣೆಗೊಂಡಿದ್ದಾರೆ.