ಹುಬ್ಬಳ್ಳಿ-ಧಾರವಾಡ ಸುದ್ದಿ

ಕೈ ಕಮಲ ’ಮಹಾದಾಯಿ’ ಸಮರ

ನಾಳೆ ಕಾಂಗ್ರೆಸ್ ಜಲಾಂದೋಲನ

ಇಂದು ಬಿಜೆಪಿ ವಿಜಯೋತ್ಸವ

ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆ ಕುರಿತಂತೆ ಬಿಜೆಪಿ ಕ್ರೆಡಿಟ್ ತನ್ನದಾಗಿಸಿಕೊಳ್ಳಲು ಹೊರಟಿರುವಾಗಲೇ ನಾಳೆ ಕಾಂಗ್ರೆಸ್ ಪಕ್ಷ ನಗರದ ನೆಹರು ಮೈದಾನದಲ್ಲಿ ಮಹದಾಯಿ ಜಲ ಹಾಗೂ ಜನಾಂದೋಲನ ಹಮ್ಮಿಕೊಂಡಿದ್ದು ಭಾರೀ ಮಹತ್ವ ಪಡೆದಿದ್ದು ಸಿದ್ದತೆಗಳು ಭರದಿಂದ ನಡೆದಿವೆ ಇನ್ನೊಂದೆಡೆ ಬಿಜೆಪಿ ಇಂದು ವಿಜಯೋತ್ಸವ ಆಚರಿಸಿದೆ.

ಕಾಂಗ್ರೆಸ್ ಸಮಾವೇಶಕ್ಕೆ ಮುಂದಾದ ಬೆನ್ನಲ್ಲೇ ಕಳಸಾ ಬಂಡೂರಿ ವಿಸ್ತ್ರತ ಯೋಜನಾ ವರದಿಗೆ ಎರಡು ದಿನಗಳ ಹಿಂದಷ್ಟೆ ಕೇಂದ್ರ ಜಲ ಆಯೋಗ ಅನುಮತಿ ದೊರಕಿಸಿ ಕೇಸರಿ ಪಡೆ ವಿಜಯೋತ್ಸವಕ್ಕೆ ಮುಂದಾಗಿರುವ ಹಂತದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುವ ಮೂಲಕ ಬಿಜೆಪಿ ಮುಖವಾಡ ಕಳಚಲು ಮುಂದಾಗಿದೆ.


ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ. ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಮುಂಚೂಣಿ ನಾಯಕರ ಹಿಂಡೆ ಹರಿದು ಬರಲಿದೆ.


ಈಗಾಗಲೇ ಮಾಜಿ ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ, ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ ಹುಬ್ಬಳ್ಳಿಯಲ್ಲೇ ಇದ್ದು ಸಮಾವೇಶ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಮಹದಾಯಿ ವ್ಯಾಪ್ತಿಯ ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟ ಜಿಲ್ಲೆಗಳ ವ್ಯಾಪ್ತಿಯ ಸುಮಾರು ಒಂದು ಲಕ್ಷ ಜನರನ್ನು ಸೇರಿಸಲು ಸಿದ್ಧತೆ ನಡೆಸಿದ್ದು ಅವರಿಗೆ ಊಟ, ನೀರು ಪೂರೈಸಲು ಎಲ್ಲ ಸಿದ್ಧತೆ ಮಾಡಲಾಗಿದೆ.


ಕಳಸಾ ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿರುವ ದಾಖಲೆ ನಿರ್ಗತಿಕ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ ಬಿಜೆಪಿ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸುವ ಮಾತನಾಡುತ್ತಿದ್ದು ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಪೂರ್ಣ ಲಾಭ ಪಡೆಯಲು ಮುಂದಾಗಿವೆ.


ನ್ಯಾಯಾಧಿಕರಣ ಆದೇಶ ಬಂದು ನಾಲ್ಕು ವರ್ಷ ಕಳೆದಿದ್ದರೂ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಕುರಿತಾದ ಸಣ್ಣ ಪ್ರಗತಿಯೂ ಆಗದಿರುವ ಬಗ್ಗೆ ಬಿಜೆಪಿ ಬಂಡವಾಳ ಬಿಚ್ಚಿಡುವ ಸಾಧ್ಯತೆಗಳಿವೆ. ಈಗಾಗಲೇ 2002 ರಲ್ಲಿ ಕಳಸಾ ನಾಲಾ ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಅಲ್ಲಿ ಕಾಮಗಾರಿ ಕೂಡ ಆಗಿದೆ. ಈ ಎಲ್ಲಾ ಕಾರ್ಯಗಳು ಡಿಪಿಆರ್ ಇಲ್ಲದೆ ನಡೆದಿದೆಯೇ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ.


ತನ್ಮಧ್ಯೆ ಇಂದು ಕಳಸಾ-ಬಂಡೂರಿ ನಾಲಾ ವಿಸ್ತೃತ ಯೋಜನೆಗೆ ಕೇಂದ್ರದ ಜಲ ಆಯೋಗ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಬಿಜೆಪಿ ಹು-ಧಾ ಮಹಾನಗರ ಹಾಗೂ ಗ್ರಾಮಾಂತರ ಘಟಕದಿಂದ ವಿಜಯೋತ್ಸವ ಆಚರಿಸಲಾಯಿತು.
ಇಲ್ಲಿನ ನೆಹರೂ ಮೈದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಜಯೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ತೆರೆದ ವಾಹನದಲ್ಲಿ ಶಾಸಕ ಅರವಿಂದ ಬೆಲ್ಲದ್ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಚೆನ್ನಮ್ಮ ವೃತ್ತದವರೆಗೆ ನೂರಾರು ಜನರೊಂದಿಗೆ, ಗೊಂಬೆ ಕುಣಿತ, ಡೊಳ್ಳು ವಾದ್ಯಗಳೊಂದಿಗೆ ಮಹದಾಯಿ ರ್‍ಯಾಲಿ ವಿಜಯೋತ್ಸವ ಆಚರಣೆ ಮಾಡಿದರು.


ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮ ಪುತ್ಥಳಿ ಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೂವಿನ ಮಾಲೆ ಹಾಕಿದರು. ರ್‍ಯಾಲಿ ಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರವಾಗಿ ಘೋಷಣೆಗಳು ಮೊಳಗಿದವು.

administrator

Related Articles

Leave a Reply

Your email address will not be published. Required fields are marked *