ಯಾಕೇ ಅಂತ ಅಚ್ಚರಿ ಆಯಿತಾ ಒಮ್ಮೆ ಈ ಸ್ಟೋರಿ ಓದಿ ನಿಮಗೆ ಗೊತ್ತಾಗುತ್ತೆ
ಹುಬ್ಬಳ್ಳಿ: ನಮ್ಮ ತಂದೆಗೆ ಆರೋಗ್ಯ ಸರಿಯಿಲ್ಲ.. ಡಯಾಲಿಸಿಸ್ ಮಾಡಿಸಬೇಕಿದೆ.. ಹೃದಯದ ಆಪರೇಶನ್ ಮಾಡಿಸಬೇಕಿದೆ.. ದಯವಿಟ್ಟು ಸಹಾಯ ಮಾಡಿ… ಒಂದು ಜೀವ ಉಳಿಸಿ ನಾವು ಚಿಕಿತ್ಸೆ ಕೊಡಿಸುವಷ್ಟು ಹಣವಂತರಲ್ಲ.. ಅವರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ.. ಅವರ ಚಿಕಿತ್ಸೆಗೆ ಹಣ ಬೇಕಾಗಿದೆ ದಯವಿಟ್ಟು ಸಹಾಯ ಮಾಡಿ.. ಪುಣ್ಯ ಕಟ್ಟಿಕೊಳ್ಳಿ..!
ಇಂತಹದೊಂದು ದಯನೀಯ ಸ್ಟೈಲ್ನಲ್ಲಿ ಸಹಾಯ ಕೇಳುತ್ತ ಆಗಮಿಸುವ ಆಗಂತುಕನೊಬ್ಬ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮನೆ ಮನೆಗೆ ಸಂಚರಿಸುತ್ತಿದ್ದಾನೆ. ಈತನ ದಯನೀಯ ನಾಟಕ ಕಂಡು ದುಡ್ಡು ಕೊಟ್ಟು ಜನ ಮೋಸ ಹೋಗುತ್ತಿದ್ದಾರೆ.
ನನ್ನ ಹೆಸರು ದಿನೇಶ, ಹುಬ್ಬಳ್ಳಿಯ ಕೇಶ್ವಾಪುರ ಹತ್ತಿರ ನನ್ನ ಮನೆಯಿದೆ ಎಂದು ಪರಿಚಯ ಹೇಳಿಕೊಂಡು ಬರುವ ಈತನ ಈ ಹೀನಾಯ ಸ್ಥಿತಿ ಕಂಡವರು, ಆತನ ಮನಕಲಕುವಂಥ ಮಾತಿಗೆ ಮನಸೋತು ಅಯ್ಯೋ ಪಾಪ ಎಂದು ಮಮ್ಮಲ ಮರುಗಿ ತಮ್ಮ ಕೈಲಾದಷ್ಟು ಹಣ ನೀಡಲು ಮುಂದಾಗುತ್ತಾರೆ. ಆಗ ಈ ದಿನೇಶ ವಿವಿಧ ಚಿಕಿತ್ಸೆಗಳ ಹೆಸರು ಹೇಳಿ ಅದಕ್ಕೆ ಅಗತ್ಯವಾದ 11 ಸಾವಿರ, 5ಸಾವಿರ ಹೀಗೆ ಬೇರೆ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಇರುವಷ್ಟು ಹಣವನ್ನು ನೀಡಲು ಅಂಗಲಾಚುತ್ತಾನೆ. ಆಸ್ಪತ್ರೆಗಳಲ್ಲಿ ಆ ಚಿಕಿತ್ಸೆ ಕುರಿತು ವಿಚಾರಿಸಿದರೆ ಅಷ್ಟೇ ಬಿಲ್ ಇರುತ್ತದೆ. ಹೀಗಾಗಿ ಈತನನ್ನು ನಂಬಿದ ಕೆಲವರು ಆತ ಕೇಳಿದಷ್ಟು ಹಣ ಕೊಟ್ಟು ಧನ್ಯರಾಗಿದ್ದಾರೆ.
ಮೋಸ ತಿಳಿದದ್ದು ಹೇಗೆ?:
ಧಾರವಾಡದ ಒಂದಷ್ಟು ಸಹೃದಯರು ಈತನು ಕೇಳಿದಷ್ಟು ಹಣ ಸಹಾಯ ಮಾಡಿದ್ದಾರಲ್ಲದೇ, ಪಾಪ ಇಂತಹ ಬಡವರಿಗೆ ಏನು ಅಗತ್ಯವಿದೆಯೋ? ಆತನ ತಂದೆಗೆ ಏನಾಗಿದೆಯೋ ನೋಡಿ ಅಗತ್ಯ ಏರ್ಪಾಡುಗಳನ್ನು ಮಾಡಿದರಾಯಿತು ಎಂದು ಮಾರನೇ ದಿನ ಆತ ಹೇಳಿದ ಆಸ್ಪತ್ರೆಗೆ ಹಣ್ಣುಹಂಪಲುಗಳೊಂದಿಗೆ ತೆರಳಿದ್ದಾರೆ. ಅಲ್ಲಿ ನೋಡಿದರೆ ಈತ ಹೇಳಿದ ಹೆಸರಿನ ಯಾವ ವ್ಯಕ್ತಿಯೂ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ತಿಳಿದು ತಾವು ಮೋಸಹೋಗಿರುವ ಸಂಗತಿ ತಿಳಿದಿದ್ದು, ತಮ್ಮಂತೆ ಯಾರೂ ವಂಚನೆಗೊಳಗಾಗಬಾರದು ಎನ್ನುವ ಉದ್ದೇಶದಿಂದ ಪತ್ರಿಕೆಯೊಂದಿಗೆ ವಿಷಯ ಹಂಚಿಕೊಂಡಿದ್ದಾರೆ.