ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ಇಂದು ಬೆಳಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಎರಡೂ ಪಕ್ಷಗಳ ರಾಜಕೀಯ ಮುಖಂಡರು ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಗೆ ಕೆಲವೆ ತಿಂಗಳುಗಳು ಇರುವಾಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಅದರಲ್ಲಿಯೂ ಬಿಜೆಪಿಯ ಮಾಜಿ ಶಾಸಕರೊಬ್ಬರು ಇರುವುದು ತೀವ್ರ ಕುತುಹಲ ಮೂಡಿಸಿದೆ.
ಜಿಲ್ಲೆಯ ಹು-ಧಾ ಪೂರ್ವ ಮತ್ತು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿರುವ ಈ ಮುಖಂಡರಿಗೆ ಟಿಕೆಟ್ ತಪ್ಪುವ ಕಾರಣ ಈ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ತಮಗೆ ಟಿಕೆಟ್ ಸಿಗಲಿದೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ ಕೊನೆಗಳಿಗೆಯಲ್ಲಿ ಈ ಮುಖಂಡರಿಗೆ ಟಿಕೆಟ್ ಕೈ ತಪ್ಪಿದರೆ ಜೆಡಿಎಸ್‌ನಿಂದ ಸ್ಪರ್ಧೆಗಿಳಿಯಲು ತಯಾರಿ ನಡೆಸಿದ್ದಾರೆ. ಶತಾಯಗಥಾಯ ಸ್ಪರ್ಧಿಸಲೆಬೇಕು ಎಂಬ ಉತ್ಸಾಹದಲ್ಲಿರುವ ಮುಖಂಡರು ಇದೀಗ ಜೆಡಿಎಸ್ ಕದ ತಟ್ಟುತ್ತಿದ್ದಾರೆ.
ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಉಳಿದಿರುವಾಗ ಟಿಕೆಟ್ ಕೈತಪ್ಪಲಿರುವ ಮುಖಂಡರು ಪಕ್ಷಾಂತರಕ್ಕೆ ಸಜ್ಜಾಗುತ್ತಿದ್ದಾರೆ. ಇದು ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಂದಿಗ್ಧತೆ ತರಲಿದೆ. ಕಾರಣ ಎರಡೂ ಪಕ್ಷಗಳ ನಾಯಕರು ಹೇಗೆ ಪರಿಸ್ಥಿತಿ ನಿಭಾಯಿಸುವರು ಎಂಬುದು ಪ್ರಶ್ನೆಯಾಗಿದೆ.