ವೀರಶೈವ ಲಿಂಗಾಯತ ಭವನದಲ್ಲಿ ಮಹತ್ವದ ಚಿಂತನ ಮಂಥನ
ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಐದನೇ ಬಾರಿಗೆ ಕಣಕ್ಕಿಳಿದಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆಯೋ ಅಥವಾ ಸ್ವಾಮೀಜಿಗಳ ಸ್ಪರ್ಧೆಯಿಂದ ತ್ರಿಕೋಣ ಹಣಾಹಣಿಯಾಗುವುದು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಈಗಾಗಲೇ ಜೋಶಿಯವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಭಕ್ತರ ಸಭೆ ನಡೆಸಿದ್ದು ಅಂತಿಮ ನಿರ್ಧಾರ ಪ್ರಕಟಿಸಲು ನಾಳೆ ಬೆಳಿಗ್ಗೆ ೯-೩೦ಕ್ಕೆ ಹಳೇ ಬಳ್ಳಾರಿ ರಸ್ತೆಯ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಚಿಂತನ ಮಂಥನ ಸಭೆ ಕರೆಯಲಾಗಿದೆ.
ವಿವಿಧ ಮಠಾಧಿಪತಿಗಳ ಸಾನಿಧ್ಯದಲ್ಲಿ ನಡೆಯಲಿರುವ ಸಭೆಯ ನೇತೃತ್ವವನ್ನು ದಿಂಗಾಲೇಶ್ವರ ಸ್ವಾಮೀಜಿ ವಹಿಸಲಿದ್ದು ಈಗಾಗಲೇ ಧಾರವಾಡದಲ್ಲಿ ನಡೆದ ಭಕ್ತರ ಸಭೆಯಲ್ಲಿ ಲೋಕ ಕಣಕ್ಕೆ ಇಳಿಯುವಂತೆ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ. ನಾಳಿನ ಸಭೆಯಲ್ಲಿ ಚರ್ಚೆ ನಡೆಸಿ ದಿಂಗಾಲೇಶ್ವರರು ತಮ್ಮ ಮುಂದಿನ ನಡೆ ಪ್ರಕಟಿಸಲಿದ್ದಾರೆ. ಇಡೀ ಕ್ಷೇತ್ರದಾದ್ಯಂತ ಸ್ವಾಮೀಜಿ ಕಣಕ್ಕಿಳಿಯಲಿದ್ದಾರೆನ್ನುವ ಗುಸು ಗುಸು ವಿದ್ಯುತ್‌ನಂತೆ ಪ್ರವಹಿಸುತ್ತಿದೆ.
ಕಾಂಗ್ರೆಸ್ ಪಕ್ಷ ಸಹ ದಿಂಗಾಲೇಶ್ವರರನ್ನು ಸೆಳೆದು ಅಸೂಟಿಯವರಿಗೆ ಬೇರೆ ಸ್ಥಾನ ಮಾನದ ಭರವಸೆ ನೀಡುವ ಯತ್ನ ನಡೆಸಿದ್ದರೂ ಆ ಸಾಧ್ಯತೆ ಕಡಿಮೆ ಆಗಿದ್ದು ಸ್ವಾಮೀಜಿಯವರೇ ಕಣಕ್ಕಿಳಿಯಲಿದ್ದು ದಿ. ೧೬ರಂದು ನಾಮ ಪತ್ರ ಸಲ್ಲಿಸಲಿದ್ದಾರೆನ್ನುವ ಮಾತು ಆಂತರಿಕ ವಲಯಗಳಿಂದ ಕೇಳಿ ಬರುತ್ತಿವೆ.
ತಮ್ಮ ಪ್ರವಚನ ಅಲ್ಲದೇ ಇತ್ತೀಚಿನ ಶಿರಹಟ್ಟಿ ಹಿರಿಯ ಗುರುಗಳ ಆನೆ ಅಂಬಾರಿ ತುಲಾಬಾರದಂತಹ ಐತಿಹಾಸಿಕ ಕಾರ್ಯಕ್ರಮಗಳ ಮೂಲಕ ದೊಡ್ಡ ಭಕ್ತ ಸಮೂಹ ಹೊಂದಿರುವ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕಿಳಿದಲ್ಲಿ ಕ್ಷೇತ್ರದ ಚುನಾವಣಾ ಚಿತ್ರಣವೇ ಬದಲಾಗುವ ಸಾದ್ಯತೆಗಳಿವೆ. ಅಲ್ಲದೇ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ತಮ್ಮ ಹಿಂದೆ ಎಲ್ಲ ಪಕ್ಷದವರು ಇದ್ದಾರೆ ಎನ್ನುವ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಈಗಾಗಲೇ ಪ್ರಹ್ಲಾದ ಜೋಶಿಯವರ ಪ್ರಚಾರ ಬಿರುಸಿನಿಂದ ಸಾಗಿದೆಯಲ್ಲದೇ ಕಾಂಗ್ರೆಸ್ ಸಹ ಕಳೆದ ಮೂರ್‍ನಾಲ್ಕು ದಿನಗಳಿಂದ ಸಚಿವ ಲಾಡ್ ಉಸ್ತುವಾರಿಯಲ್ಲಿ ಪ್ರಚಾರ ಚುರುಕುಗೊಳಿಸಿದ್ದು ದಿಂಗಾಲೇಶ್ವರರ ನಾಳಿನ ನಿರ್ಧಾರದತ್ತ ಎಲ್ಲರ ದೃಷ್ಟಿ ನೆಟ್ಟಿದ್ದು ಅಂತಿಮ ನಿರ್ಧಾರವನ್ನು ಬೆಂಗಳೂರಲ್ಲೇ ಪ್ರಕಟಿಸುವುದಾಗಿ ದಿಂಗಾಲೇಶ್ವರರು ಹೇಳಿದ್ದರು.