ಹುಬ್ಬಳ್ಳಿ-ಧಾರವಾಡ ಸುದ್ದಿ
ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀ

ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀ

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ : ಸ್ವಾಮೀಜಿ ಘೋಷಣೆ

ಬೆಂಗಳೂರು : ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನಮಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಇಂದು ಘೋಷಿಸಿದ್ದಾರೆ.
ಬೆಂಗಳೂರಿನ ವೀರಶೈವ ಲಿಂಗಾಯತ ಭವನದಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರು ತಮ್ಮ ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳ ಜೊತೆ ಸಭೆ ನಡೆಸಿದರು. ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ತಾವು ಕಣಕ್ಕಿಳಿಯಲೇಬೇಕೆಂದು ಬೆಂಬಲಿಗರು ಒಕ್ಕೊರಲಿನಿಂದ ಒತ್ತಾಯಿಸಿದ ಪರಿಣಾಮ ಅಂತಿಮವಾಗಿ ಸ್ಪರ್ಧೆ ಮಾಡುವುದಾಗಿ ಸ್ವಾಮೀಜಿ ತಮ್ಮ ನಿರ್ಧಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.


“ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಇದು ಜನರಿಗೆ ದ್ರೋಹ ಮಾಡಿದಂತೆ ಆಗಲಿದೆ. ಧರ್ಮದಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ ” ಎಂದು ಹೇಳಿದರು.
“ನೊಂದ ಜನರು ನಮ್ಮ ಜೊತೆಗೆ ನೋವು ತೋಡಿಕೊಂಡಿದ್ದರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯದ ಹೊರತುಪಡಿಸಿದರೆ ಕುರುಬ ಸಮುದಾಯ ದೊಡ್ಡದು, ಆದರೆ ಕುರುಬ ಸಮುದಾಯಕ್ಕೆ ಬಿಜೆಪಿ ಒಂದೇ ಒಂದು ಟಿಕೆಟ್ ಕೊಡಲಿಲ್ಲ. ಲಂಬಾಣಿ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ. ಈಶ್ವರಪ್ಪಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹೈಕಮಾಂಡ್ ನಾಯಕರು ಆ ಸಮುದಾಯ ನಮಗೆ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಬಹುದೊಡ್ಡ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ. ಶೇಕಡಾ ೨ರಷ್ಟು ಇರುವ ಸಮುದಾಯದ ನಾಯಕರಿಗೆ ಎರಡು ಕ್ಯಾಬಿನೆಟ್ ಹುದ್ದೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಜೋಶಿ ಅವರು ತಮ್ಮ ಸಮುದಾಯದ ಬೆಳವಣಿಗೆ ಅಷ್ಟೇ ನೋಡುತ್ತಾರೆ. ಅಲ್ಲದೆ, ನಮ್ಮ ಲಿಂಗಾಯತ ಸಮುದಾಯವನ್ನು ಜೋಶಿ ತುಳಿದು ರಾಜಕಾರಣ ಮಾಡಿದ್ದಾರೆ. ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಲು ಜೋಶಿ ಅವರೇ ಕಾರಣ ಎಂದು ಅವರು ಆರೋಪಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಂಬಂಧ ದಿಂಗಾಲೇಶ್ವರ ಸ್ವಾಮೀಜಿ ಈ ಹಿಂದೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಸಭೆಗಳನ್ನು ನಡೆಸಿ ಭಕ್ತರ ಮತ್ತು ಹಲವು ಮಠಾದೀಶರ ಅಭಿಪ್ರಾಯ ಪಡೆದುಕೊಂಡಿದ್ದರು. ಇಂದು ಬೆಂಗಳೂರಿನ ಹಳೇ ಬಳ್ಳಾರಿ ರಸ್ತೆಯ ವೀರಶೈವ ಲಿಂಗಾಯತ ಭವನದಲ್ಲಿ ಚಿಂತನ ಮಂಥನ ಸಭೆ ನಡೆಸಿದ ನಂತರ ಈ ನಿರ್ಧಾರ ಪ್ರಕಟಿಸಿದರು.ಇದರೊಂದಿಗೆ ಧಾರವಾಡ ಕಣ ರೋಚಕ ಸೆಣಸಾಣಕ್ಕೆ ಸಾಕ್ಷಿಯಾಗುವುದು ಖಚಿತವಾಗಿದ್ದು,ದಿಂಗಾಲೇಶ್ವರರ ಈ ನಿರ್ಧಾರ ಕೇಸರಿ ಪಡೆಗೆ ದೊಡ್ಡ ಮಟ್ಟದಲ್ಲೇ ಹಾನಿ ಮಾಡುವ ಸಂಭವವಿದೆ. ಕಮಲ ತಂತ್ರಗಾರಿಕೆ ಯಾವ ರೀತಿಯಲ್ಲಿ ಮಾಡಲಿದೆ ಕಾದು ನೋಡಬೇಕಿದೆ.

administrator

Related Articles

Leave a Reply

Your email address will not be published. Required fields are marked *