ಹುಬ್ಬಳ್ಳಿ-ಧಾರವಾಡ ಸುದ್ದಿ

ಮಳೆಗಾಲದ ಹಿನ್ನೆಲೆ ಮುಂಜಾಗ್ರತಾ ಕ್ರಮಕ್ಕೆ ಆಗ್ರಹ

ಧಾರವಾಡ : ಮಳೆಗಾಲ ಸಮೀಪಿಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಗಟಾರ್ ನಾಲಾಗಳಲ್ಲಿನ ಹೂಳೆತ್ತುವ ಕೆಲಸ, ಅಲ್ಲದೇ ಗಾಳಿಯ ರಭಸಕ್ಕೆ ಹಳೆಯ ಗಿಡಗಳು, ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಯಿರುವುದರಿಂದ ಅಗತ್ಯ ಕ್ರಮ ಕೈಗೊಳ್ಳಲು ಪಕ್ಷಾತೀತವಾಗಿ ಸದಸ್ಯರು ಇಲ್ಲಿನ ಪಾಲಿಕೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.


ಮೇಯರ್ ಈರೇಶ ಅಂಚಟಗೇರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಮೇಯರ್ ವೀರಣ್ಣ ಸವಡಿ ಗಮನ ಸೆಳೆವ ಸೂಚನೆ ಮಂಡಿಸಿ ಕೆಲವು ವಾರ್ಡ್‌ಗಳಲ್ಲಿ ಸ್ವಚ್ಛತೆ ಕೊರತೆ ಇದೆ. ಗಟಾರ್, ನಾಲಾಗಳಲ್ಲಿ ಹೂಳು ತುಂಬಿದೆ. ಸ್ವಚ್ಛತೆಗೆ ಅಗತ್ಯ ಕ್ರಮ ಕೈಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲು ಆಗ್ರಹಿಸಿದರಲ್ಲದೇ ಟ್ರ್ಯಾಕ್ಡರ್, ಜೆಸಿಬಿ ಬಳಸಿ, ಪಾಲಿಕೆ ಸದಸ್ಯರ ಸಲಹೆ ಪಡೆದು ಕಾರ್ಯೋನ್ಮುಖ ಆಗಲು ನಿರ್ದೇಶನ ನೀಡಿ ಎಂದು ಮನವಿ ಮಾಡಿದರು.

ಬೀದಿ ದೀಪದ ಸಮಸ್ಯೆ ಆಗುತ್ತಿದೆ. ಟೆಂಡರ್ ಕರೆಯಲು ವಿಳಂಬ ಆಗುತ್ತಿದೆ. ತುರ್ತಾಗಿ ಇರುವ ಹಣದಲ್ಲಿ ಬಲ್ಬ್ ಖರೀದಿಸಿ ಅಳವಡಿಸುವಂತೆ ಒತ್ತಾಯಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬಿಜೆಪಿ ಅವಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಅನುದಾನ ಬಿಡುಗಡೆ ಆಗಿದೆ.ಈಗ ರಾಜ್ಯದಲ್ಲಿ ಹೊಸ ಸರಕಾರ ಬಂದಿದೆ. ಆದರೆ ಹೊಸ ಸರಕಾರ ಟೆಂಡರ್ ಕರೆದು ವರ್ಕ ಆರ್ಡರ್ ಕೊಟ್ಟಿದ್ದನ್ನು ಸ್ಥಗಿತಗೊಳಿಸಲಾಗಿದೆ. ಇದು ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ ಎಂದರು.


ಇನ್ನೋರ್ವ ಮಾಜಿ ಮೇಯರ್ ಶಿವು ಹಿರೇಮಠ ಮಾತನಾಡಿ, ಮಳೆಗಾಲದಲ್ಲಿ ಗಾಳಿಗೆ ರಭಸಕ್ಕೆ ಹಳೆಯ ಮರಗಳು ಬಿದ್ದು ಅವಘಡ ಸಂಭವಿಸುತ್ತಿವೆ.ಕೆಲವು ವಿದ್ಯುತ್ ಕಂಬಗಳು ಕೂಡ ಬೀಳುವ ಹಂತ ತಲುಪಿವೆ. ಅಪಾಯ ಸಂಭವಿಸುವ ಮೊದಲು ಕ್ರಮ ಕೈಕೊಳ್ಳಿ ಒತ್ತಾಯಿಸಿದರು.

ಆಡಳಿತ ಪಕ್ಷದ ಹಿರಿಯ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಒಳಚರಂಡಿ ತುಂಬಿ ಮನೆ ಇನ್ನಿತರ ವಾಸಸ್ಥಳಗಳಿಗೆ ಕಲುಷಿತ ನೀರು ನುಗ್ಗಿ ಸಮಸ್ಯೆ ಆಗುತ್ತಿದೆ. ಬಿಆರ್ ಟಿಎಸ್ ಮಾರ್ಗದಲ್ಲಿನ ಕುಡಿಯುವ ನೀರು, ಒಳಚರಂಡಿ ಇನ್ನಿತರ ಸಂಪರ್ಕಗಳನ್ನು ದುರಸ್ತಿ ಮಾಡಲಾಗು ತ್ತಿಲ್ಲ. ಇದರಿಂದ ಕಲುಷಿತ ನೀರು ತುಂಬಿ ರೋಗ ರುಜಿನಗಳು ಹರಡುವಂತಾಗಿದೆ. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನ ಆಗುತ್ತಿಲ್ಲ. ಮಹಿಳಾ ಅಧಿಕಾರಿಗಳ ಮಾತು ಕೇಳುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲು ಕೋರಿದಾಗ ಇದಕ್ಕೆ ಕಾಂಗ್ರೆಸ್ಸಿನ ಸದಸ್ಯ ನಿರಂಜನ ಹಿರೇಮಠ ಕೂಡ ಧ್ವನಿಗೂಡಿಸಿದರು.


ಒಳಚರಂಡಿ ಸ್ವಚ್ಚಗೊಳಿಸಲು ಪ್ರತಿ ವಲಯಕ್ಕೆ ಒಂದು ಜೆಟ್ ಮಶೀನ ಖರೀದಿಸಲು ಚಂದ್ರಶೇಖರ ಮನಗುಂಡಿ ಒತ್ತಾಯಿಸಿದರೆ,ವಿಜಯಾನಂದ ಶೆಟ್ಟಿ, ಕವಿತಾ ಕಬ್ನೇರ ಸೇರಿದಂತೆ ಬಹುತೇಕ ಸದಸ್ಯರು ತಮ್ಮ ವಾರ್ಡಗಳಲ್ಲಿನ ಸಮಸ್ಯೆಗಳನ್ನು ವಿವರಿಸಿದರು.

ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ, ಮಾಜಿ ಶಾಸಕ ಯು.ಆರ್. ಸಭಾಪತಿ ಸಹಿತ ಗಣ್ಯರ ಅಗಲುವಿಕೆಗೆ ಸಂತಾಪ ಸೂಚಿಸಲಾಯಿತಲ್ಲದೇ ಕುಡಿಯುವ ನೀರಿನ ಸಮಸ್ಯೆ ಕುರಿತು ಕೈ ಸದಸ್ಯ ಇಮ್ರಾನ ಯಲಿಗಾರ ಸಹಿತ ಇತರ ಸದಸ್ಯರು ಪ್ರಸ್ತಾಪ ಮಾಡಿದಾಗ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಮೇಯರ ಭರವಸೆ ನೀಡಿದರು.

ಲಕ್ಷ್ಮೀ ಹಿಂಡಸಗೇರಿ ಗಲಾಟೆ ಮಾಡಿ ನನ್ನ ವಾರ್ಡನಲ್ಲಿ ಕುಡಿಯುವ ನೀರು… ಕೊಳಚೆ ನೀರು ಮಿಕ್ಸ ಆಗುತ್ತಿದೆ ಆಯುಕ್ತರು ಗಮನಕ್ಕೆ ತಂದರೆ ಪ್ರಯೋಜನ ಆಗುತ್ತಿಲೆ ಗಮನ ಹರಿಸಿ ಆಂತಾ ಮೇಯರ್ ಪೀಠದ ಎದುರು ನಿಂತು ಗಮನ ಸೆಳೆದರು.

 

administrator

Related Articles

Leave a Reply

Your email address will not be published. Required fields are marked *