ನಗರದ ಹೊಟೆಲ್‌ನಲ್ಲಿ ಮಹತ್ವದ ಸಭೆ
ಹುಬ್ಬಳ್ಳಿ: ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ್ ಗೆಲುವಿಗೆ ರಣತಂತ್ರ ರೂಪಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ನಗರದ ನಗರದ ಕ್ಯುಬಿಕ್ಸ್ ಹೋಟೆಲ್‌ನಲ್ಲಿ ಸಭೆ ನಡೆಸುವ ಮೂಲಕ ರಂಗ ಪ್ರವೇಶಿಸದಂತಾಗಿದೆ.
ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿಯ ಶಾಸಕರು, ಸಂಸದರು, ಪರಿಷತ್ ಸದಸ್ಯರು ಮತ್ತು ಪ್ರಮುಖ ವಿಭಾಗಗಳ ಪದಾಧಿಕಾರಿ ಗಳ ಸಭೆಯಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದರಲ್ಲದೇ ಪ್ರದೀಪ್ ಪ್ರಥಮ ಪ್ರಾಶಸ್ತ್ಯದಲ್ಲೇ ಗೆಲ್ಲಬೇಕೆಂದು ಫರ್ಮಾನು ಹೊರಡಿಸಿದರು.
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಸ್ಪರ್ಧೆಯ ಬಗ್ಗೆ ಮಾತಾಡಿದ ಬೊಮ್ಮಾಯಿ, ’ಮಲ್ಲಿಕಾರ್ಜುನ ನಮ್ಮ ಪಕ್ಷದ ಬಂಡಾಯ ಅಭ್ಯರ್ಥಿ ಅಲ್ಲ. ಕಾಂಗ್ರೆಸ್ ಬೆಂಬಲ ಪಡೆದು ಎಪಿಎಂಸಿ ಅಧ್ಯಕ್ಷರಾಗಿದ್ದಾರೆ. ಕೆಲ ಬಾರಿ ಬಿಜೆಪಿ ಎಂದು ಹೇಳಿಕೊಳ್ಳುತ್ತಾರೆ. ನಿರ್ದಿಷ್ಟ ವಾಗಿ ಯಾವ ಪಕ್ಷ ಎನ್ನುವುದೇ ಅವರಿಗೆ ಖಚಿತತೆ ಇಲ್ಲ. ಮಲ್ಲಿಕಾರ್ಜುನ ಸ್ಪರ್ಧೆ ನಮ್ಮ ಗೆಲುವಿಗೆ ಅಡ್ಡಿಯಾಗುವುದಿಲ್ಲ. ಪ್ರದೀಪ ಶೆಟ್ಟರ್ ಗೆಲುವು ನಿಶ್ಚಿತ’ ಎಂದರು.
ಬೊಮ್ಮಾಯಿ ಮುಖ್ಯಮಂತ್ರಿ ಆದಾಗಿನಿಂದ ಶೆಟ್ಟರ್ ಸಹ ಬೊಮ್ಮಾಯಿ ಯಿಂದ ಅಂತರ ಕಾಯ್ದುಕೊಂಡಿದ್ದರಲ್ಲದೇ ಬೊಮ್ಮಾಯಿ ಅವರು ಸಹ ಸಾರ್ವಜನಿಕ ಸಭಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದು ಬಿಟ್ಟರೆ ಭೇಟಿಯಾಗಿರಲಿಲ್ಲ.
ಅಲ್ಲದೇ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಅವರಿಗೆ ಬೊಮ್ಮಾಯಿ ಪರೋಕ್ಷ ಬೆಂಬಲ ಇದೆ ಎಂಬ ಗುಸು ಗುಸು ಹರಿದಾಡುತ್ತಿತ್ತಲ್ಲದೇ ಶೆಟ್ಟರ್ ಕರೆ ಮಾಡಿ ಹಿಂತೆಗಿಸಿ ಎಂದು ಮನವಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ವಾಪಸ್ ಪಡೆಯಲಿಲ್ಲ ಎನ್ನುವ ಮಾತು ಸಹ ಕೇಳಿ ಬಂದಿದ್ದವು. ಇಂದು ಸ್ವತಃ ಗೆಲುವಿನ ತಂತ್ರಗಾರಿಕೆಗೆ ಬೊಮ್ಮಾಯಿ ಫೀಲ್ಡಿಗಿಳಿದು ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು.
ಸಭೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಅಭ್ಯರ್ಥಿ ಪ್ರದೀಪ ಶೆಟ್ಟರ್, ಸಚಿವರಾದ ಬಿ.ಸಿ.ಪಾಟೀಲ್, ಶಂಕರಪಾಟೀಲ್ ಮುನೇನಕೊಪ್ಪ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗೀಯ ಪ್ರಭಾರಿ ಲಿಂಗರಾಜ ಪಾಟೀಲ ಮತ್ತಿತರರು ಇದ್ದರು.