ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;  ಅರ್ಚನೆ ಪೂಜನೆ ನೇಮವಲ್ಲ

ವಚನ ಬೆಳಕು; ಅರ್ಚನೆ ಪೂಜನೆ ನೇಮವಲ್ಲ

ಅರ್ಚನೆ ಪೂಜನೆ ನೇಮವಲ್ಲ

ಅರ್ಚನೆ ಪೂಜನೆ ನೇಮವಲ್ಲ;
ಮಂತ್ರ ತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.
                                                                                -ಸತ್ಯಕ್ಕ
ಮೂರ್ತಿ ಮುಂತಾದವುಗಳ ಅರ್ಚಿಸುವುದು – ಪೂಜಿಸುವುದು ವ್ರತ ಮುಂತಾದ ನೇಮಗಳಾಗುವುದಿಲ್ಲ. ಅವುಗಳಿಗೆ ಸಂಬಂಧಿಸಿದ ಮಂತ್ರ-ತಂತ್ರಗಳೂ ನಿಯಮವಾಗುವುದಿಲ್ಲ. ಮೂರ್ತಿಗೆ ಧೂಮ – ದೀಪ ಬೆಳಗುವುದೂ ನಿಯಮವಾಗುವುದಿಲ್ಲ. ಲಿಂಗವಂತ ಧರ್ಮದಲ್ಲಿ ಇವುಗಳಿಗೆ ಯಾವುದೇ ತೆರನಾದ ಬೆಲೆ ಇಲ್ಲ. ಇವೆಲ್ಲ ಮಾಡಲು ಈ ಧರ್ಮದಲ್ಲಿ ಗುಡಿಗಳು-ಮೂರ್ತಿಗಳು ಇಲ್ಲ. ಗುಡಿಗಳನ್ನು ಕಟ್ಟುವುದು ಮತ್ತು ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಲಿಂಗವಂತ ಧರ್ಮದಲ್ಲಿ ನಿಷಿದ್ಧವಾಗಿದೆ. ’ಸ್ಥಾವರ ಪ್ರತಿಷ್ಠೆ ನಾಯಕ ನರಕ’ ಎಂದು ಬಸವಣ್ಣನವರು ಹೇಳಿದ್ದಾರೆ. ಲಿಂಗವಂತ ಧರ್ಮದಲ್ಲಿ ಮಾನವರೇ ಚಲಿಸುವ ದೇವಾಲಯಗಳು ಮತ್ತು ಅವರೊಳಿಗಿನ ಚೈತನ್ಯವೇ ದೇವರು. (ನೀನು ದೇವರ ಜೀವಂತ ದೇವಾಲಯ ಎಂದು ಬೈಬಲ್ ಕೂಡ ಹೇಳಿದೆ) ನಿಜವಾದ ಅರ್ಥದಲ್ಲಿ ಲಿಂಗವಂತ ಧರ್ಮದಲ್ಲಿ ಪೂಜೆ ಎಂಬುದು ವೈದಿಕರ ವಿಧಿವಿಧಾನಗಳಿಂದ ಪೂಜೆ ಅಲ್ಲ. ಇಷ್ಟಲಿಂಗಧಾರಿಗಳು ನಿಜವಾದ ಅರ್ಥದಲ್ಲಿ ಪೂಜೆ ಮಾಡುವುದಿಲ್ಲ, ಪೂಜೆ ಮಾಡಿಕೊಳ್ಳುತ್ತಾರೆ. ಪೂಜೆ ಮಾಡಿಕೊಳ್ಳುವುದೆಂದರೆ ನಮ್ಮೊಳಗಿನ ಪರಮಾತ್ಮನ ಪೂಜೆ ಮಾಡುವುದು. ಹೀಗೆ ಪೂಜೆ ಮಾಡಿಕೊಳ್ಳುವುದಕ್ಕಾಗಿಯೆ ಬಸವಣ್ಣನವರು ಇಷ್ಟಲಿಂಗವನ್ನು ಕೊಟ್ಟಿದ್ದಾರೆ. ಇಷ್ಟಲಿಂಗವು ನಮ್ಮೊಳಗಿನ ಪರಮಾತ್ಮನ ಕುರುಹು. ಆ ಮೂಲಕ ಲಿಂಗಾಂಗಯೋಗದೊಂದಿಗೆ ಶೂನ್ಯಸ್ಥಿತಿಯನ್ನು ಸಾಧಿಸಿ ನಮ್ಮೊಳಗಿನ ಪರಮಾತ್ಮನೊಡನೆ ಒಂದಾಗುವುದೇ ಪೂಜೆ. ಲಿಂಗವಂತ ಧರ್ಮದಲ್ಲಿ ಪೂಜೆ ಮಾಡಿಕೊಳ್ಳುವುದೆಂದರೆ ಮನಸ್ಸನ್ನು ಶೂನ್ಯ (ಪೂಜೆ) ಮಾಡಿಕೊಂಡು ನಮ್ಮೊಳಗಿನ ದೇವರೊಂದಿಗೆ ಒಂದಾಗುವುದನ್ನು ಅನುಭಾವಿಸುವುದು. ಲಿಂಗಪೂಜೆಯನ್ನು ಬರಿ ಸಾಂಪ್ರದಾಯಿಕ ಪೂಜೆ ಎಂದು ಭಾವಿಸಲಿಕ್ಕಾಗದು. ಹಾಗೆ ಭಾವಿಸುವವರ ಕುರಿತು ಅಲ್ಲಮಪ್ರಭುಗಳು ’ಅರಿವು ಹಿಡಿಯೆಂದಡೆ ಕುರುಹು ಹಿಡಿದರು ನೋಡಾ’ ಎಂದು ತಿಳಿಸಿದ್ದಾರೆ. ಕಸಗುಡಿಸುವ ಸತ್ಯಕ್ಕ ಇಂಥ ಮಹತ್ವದ ಗಹನವಾದ ಸೈದ್ಧಾಂತಿಕ ವಿಚಾರವನ್ನು ಈ ವಚನದಲ್ಲಿ ಮನಮುಟ್ಟುವಂತೆ ಸರಳ ಸಹಜವಾದ ರೀತಿಯಲ್ಲಿ ತಿಳಿಸಿದ್ದಾಳೆ.
ಇನ್ನು ಲಿಂಗವಂತ ಧರ್ಮದ ನೀತಿ ನಿಯಮಗಳ ಕುರಿತು ಅಷ್ಟೇ ಸಹಜವಾಗಿ ತಿಳಿಸಿದ್ದಾಳೆ. ಬೇರೆಯವರ ಹಣವನ್ನು ಲಪಟಾಯಿಸದೆ ಇರುವುದೊಂದು ನೇಮ. ಪರಸ್ತ್ರೀಯರ ಮೋಹಕ್ಕೆ ಒಳಗಾಗದಿರುವುದು ಮತ್ತೊಂದು ನೇಮ. ಪರದೈವಗಳ ಪೂಜೆ ಪುನಸ್ಕಾರಗಳಲ್ಲಿ ತೊಡಗದೆ ಇರುವುದು ಮತ್ತೊಂದು ನೇಮ. ಕಾಯಕ ಮಾಡಿ ಹಣ ಗಳಿಸಬೇಕು, ಮದುವೆಯಾಗಿ ಕೂಡಬೇಕು ಮತ್ತು ಇಷ್ಟಲಿಂಗಾಚಾರವನ್ನು ಪಾಲಿಸುವ ಮೂಲಕ ಏಕದೇವೋಪಾಸಕರಾಗಬೇಕು ಎಂದು ಈ ಮೂಲಕ ಸೂಚಿಸಿದ್ದಾಳೆ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *