ಹುಬ್ಬಳ್ಳಿ-ಧಾರವಾಡ ಸುದ್ದಿ

ಅಸಮರ್ಪಕ ನೀರು: ಖಾಲಿ ಕೊಡದೊಂದಿಗೆ ’ಕೈ’ ಪ್ರತಿಭಟನೆ

ನೂಕಾಟ, ತಳ್ಳಾಟ, ಪ್ರತಿಪಕ್ಷ ಸದಸ್ಯರು ಹೊರಕ್ಕೆ

ಧಾರವಾಡ: ಅಸಮರ್ಪಕ ನೀರು ಪೂರೈಕೆ ನೀತಿ ಖಂಡಿಸಿ ಕಾಂಗ್ರೆಸ್ ಸದಸ್ಯರು ಇಂದು ಖಾಲಿ ಕೊಡ ಹಿಡಿದು ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೆ ಬಂದ ಪರಿಣಾಮ ಗೊಂದಲದ ಗೂಡಾಯಿತಲ್ಲದೇ, ಪ್ರತಿಪಕ್ಷ ಸದಸ್ಯರ ಹೊರ ಹಾಕಿದ ಘಟನೆ ನಡೆದಿದೆ.


ಪಾಲಿಕೆಯ ಸ್ವಾತಂತ್ರ್ಯೋತ್ಸವ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಗೆ ಆಗಮಿಸಿದ ಕಾಂಗ್ರೆಸ್ ಸದಸ್ಯರು ಮಹಾನಗರದಲ್ಲಿ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಸಭೆ ಆರಂಭವಾಗುತ್ತಿದ್ದಂತೆಯೆ ಖಾಲಿ ಕೊಡದೊಂದಿಗೆ ಧರಣಿ ನಡೆಸಿದರು.


ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಂದ ನೂಕಾಟ ತಳ್ಳಾಟ ನಡೆದಾಗ ಸಭೆಯ ಆಧ್ಯಕ್ಷತೆ ವಹಿಸಿದ್ದ ಮೇಯರ ಈರೇಶ ಅಂಚಟಗೇರಿ ಸಭೆ ಮುಂದೂಡಿದರು.
ಈ ಸಂದರ್ಭದಲ್ಲಿ ಮಹಿಳಾ ಕಾರ್ಪೋರೇಟರ್‌ಗಳ ಮೇಲೆ ಬಿಜೆಪಿ ಪಾಲಿಕೆ ಸದಸ್ಯರು ಹಲ್ಲೆ ನಡೆಸಿದ್ದು ಹಿರಿಯ ಸದಸ್ಯೆ ಸುವರ್ಣ ಕಲಕುಂಟ್ಲಾ ಸಹಿತ ಕೆಲವರಿಗೆಅಲ್ಪ ಸ್ವಲ್ಪ ಗಾಯಗಳಾಗಿವೆ ಎನ್ನಲಾಗಿದೆ.


ಪುನಃ ಸಭೆ ಆರಂಭಗೊಂಡಾಗಲೂ ಆಗಮಿಸಿದ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಐಎಂಐಎಂ ಸದಸ್ಯರು ನೀರು ಪೂರೈಕೆ ಇತರ ಬೇಡಿಕೆಗಳ ಬಗ್ಗೆ ಸ್ಪಷ್ಟ ಭರವಸೆ ನೀಡಬೇಕು ಎಂದು ಆಗ್ರಹಿಸಿ ಕೂಗಾಟ ಆರಂಭಿಸಿದರು. ಆಗ ಮೇಯರ ಸಮಾಧಾನಪಡಿಸಲು ಯತ್ನಿಸಿದರೂ ಕೂಗಾಟ ಮುಂದುವರಸಿದ್ದರಿಂದ ಪುನಃ ಸಭೆ ಮುಂದೂಡಲಾಯಿತು.


ಮೂರನೇ ಬಾರಿ ಮುಂದೂಡಿದ್ದ ಸಭೆ ಆರಂಭಗೊಂಡಾಗಲೂ ವಿಪಕ್ಷ ಸದಸ್ಯರು ಸಭೆಗೆ ಅಡ್ಡಿಪಡಿಸಿದ ಪರಿಣಾಮ ಎಲ್ಲ ಸದಸ್ಯರನ್ನು ಹೊರಹಾಕುವಂತೆ ಮೇಯರ ಆದೇಶ ನೀಡಿದರು. ಮಹಾಪೌರರ ಆದೇಶದಂತೆ ಹೊರಹೋಗಲು ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಮನವಿ ಮಾಡಿದರೂ ಪ್ರಯೋಜನವಾಗದ ಪರಿಣಾಮ ಪ್ರತಿಪಕ್ಷ ಸದಸ್ಯರನ್ನು ಮಾರ್ಷಲ್‌ಗಳು ಹೊರ ಹಾಕಿದರೆ, ಮಹಿಳಾ ಸಿಬ್ಬಂದಿಗಳನ್ನು ಹೊರ ಹಾಕಲು ಮಹಿಳಾ ಸಿಬ್ಬಂದಿ ಕರೆಸಬೇಕಾಯಿತು.


ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಿ ಪಕ್ಷ ನಾಯಕ ದೊರರಾಜ ಮಣಿಕುಂಟ್ಲ ಮತ್ತು ಇತರ ಸದಸ್ಯರು,ಅವಳಿ ನಗರದ ಜನತೆಗೆ ಐದು ದಿನಕ್ಕೊಮ್ಮೆ ನೀರು ಪೂರೈಸಬೇಕು. ನೀರು ಸರಬರಾಜು ಹೊಣೆಯನ್ನು ಮರಳಿ ಜಲಮಂಡಳಿಗೆ ವಹಿಸಬೇಕು. ನೀರು ಪೂರೈಕೆ ಕೆಲಸ ನಿರ್ವಹಿಸುತ್ತಿದ್ದ ತೆಗೆದುಹಾಕಿರುವ ಕಾರ್ಮಿಕರನ್ನು ಮರಳಿ ನೇಮಕ ಮಾಕೊಳ್ಳಬೇಕು. ಇಲ್ಲದಿದ್ದರೆ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಚ್ಚರಿಸಿದರು.


ಮೇಯರ್ ಈರೇಶ ಅಂಚಟಗೇರಿ ಮಾಧ್ಯಮದವರೊಂದಿಗೆ ಮಾತನಾಡಿ, ನೀರು ಪೂರೈಕೆಗಾಗಿ ಒತ್ತಾಯ ಮಾಡುವ ಪದ್ದತಿ ಸರಿ ಇಲ್ಲ. ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಸರಿ ಪಡಿಸುತ್ತೇವೆ. ವಿಪಕ್ಷದವರು ಪ್ರಚಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆಂದು ಆರೋಪಿಸಿದರು. ಧಿಕ್ಕಾರ ಕೂಗುತ್ತ ಹೊರ ನಡೆದ ಕಾಂಗ್ರೆಸ್ ಸದಸ್ಯರು ಸಭಾಭವನದ ಹೊರಗೆ ಪ್ರತಿಭಟನೆ ನಡೆಸಿದರು.

 

administrator

Related Articles

Leave a Reply

Your email address will not be published. Required fields are marked *