ಹುಬ್ಬಳ್ಳಿ-ಧಾರವಾಡ ಸುದ್ದಿ
ಪೂರ್ವದ ’ಪ್ರಸಾದ’ಕ್ಕೆ ಕಮಲ ಪಾಳೆಯದಲ್ಲೇ ಪೈಪೋಟಿ!

ಪೂರ್ವದ ’ಪ್ರಸಾದ’ಕ್ಕೆ ಕಮಲ ಪಾಳೆಯದಲ್ಲೇ ಪೈಪೋಟಿ!

ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಜೆಡಿಎಸ್, ಎಂಐಎಂ ಕಸರತ್ತು

ಹುಬ್ಬಳ್ಳಿ : 2008ರ ನಂತರ ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿರುವ ಹುಬ್ಬಳ್ಳಿ ಶಹರದಲ್ಲಿ ಚುನಾವಣೆ ಕಾವು ನಿಧಾನವಾಗಿ ಆರಂಭಗೊಂಡಿದ್ದು ಕಳೆದೆರಡು ಅವಧಿ ಕಾಂಗ್ರೆಸ್‌ಗೆ ಮಣೆ ಹಾಕಿರುವ ಕ್ಷೇತ್ರದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದರೂ ಕಮಲ ಅರಳಿಸುವುದು ಸವಾಲಿನ ಕೆಲಸವಾಗಿದೆ.


2008ರಲ್ಲಿ ಬಿಜೆಪಿ ವಶದಲ್ಲಿದ್ದ ಪೂರ್ವ ಕ್ಷೇತ್ರದಲ್ಲಿ 2013 ಮತ್ತು 2018 ಎರಡೂ ಬಾರಿ ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ ಗೆಲುವಿನ ಸಮೀಪವೂ ಯಾರೂ ಬಂದಿಲ್ಲವಾಗಿದೆ. ಈ ಬಾರಿಯೂ ಬಿಜೆಪಿಯಲ್ಲಿ ಆಕಾಂಕ್ಷಿಗಳ ದಂಡೆ ಇದ್ದು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಹಾಲಿ ಶಾಸಕ ಅಬ್ಬಯ್ಯ ಅವರನ್ನು ವಯಕ್ತಿಕವಾಗಿ ವಿರೋಧಿಸುವವರೂ ಸಹ ಬೆರಳು ಮಾಡದಂತೆ ಕಾರ್ಯ ಮಾಡಿದ್ದು, ಅಲ್ಲದೇ ಎಲ್ಲ ಸಮುದಾಯದವರೂ ’ಇವ ನಮ್ಮವ’ ಎನ್ನುವಂತೆ ಇದ್ದು ಅವರೇ ಮತ್ತೆ ಕಣಕ್ಕಿಳಿಯುವುದು ಬಹತೇಕ ಖಚಿತವಾಗಿದ್ದರೂ ಮಾಜಿ ಮಹಾನಗರಪಾಲಿಕೆ ಸದಸ್ಯ ಮೋಹನ ಹಿರೇಮನಿ, ಪ್ರಭಾವಿ ಮುಖಂಡ ಹನುಮಂತಪ್ಪ ಬಂಕಾಪುರ ಆಕಾಂಕ್ಷಿಗಳಾಗಿ ಅರ್ಜಿ ಹಾಕಿದ್ದಾರೆ. ಎಫ್ .ಎಚ್.ಜಕ್ಕಪ್ಪನವರ ಸಹ ಯತ್ನ ನಡೆಸಿದ್ದಾರೆ.

ಕಲಘಟಗಿ ಕ್ಷೇತ್ರದಂತೆಯೇ ಬಿಜೆಪಿಯಲ್ಲಿ ಇಲ್ಲೂ ಸುಮಾರು ಒಂದು ಡಜನ್ ಆಕಾಂಕ್ಷಿಗಳು ಇದ್ದು ತೀವ್ರ ಪೈಪೋಟಿ ನಡೆಸಿದ್ದಾರೆ. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಕಳೆದ ತಿಂಗಳವರೆಗೂ ಮುಂಚೂಣಿಯ ಆಕಾಂಕ್ಷಿಯಾಗಿದ್ದರೂ ಪಕ್ಷದ ಮುಖಂಡರ ವರ್ತನೆಗೆ ಬೇಸತ್ತು ಕಮಲದ ಹೊರೆ ಇಳಿಸಿ ತೆನೆ ಹೊತ್ತಿದ್ದಾರೆ.ಹೀಗಾಗಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಒಬ್ಬರ ಸಂಖ್ಯೆ ಕಡಿಮೆಯಾದಂತಾಗಿದೆ.


2018ರಲ್ಲಿ ಬ್ಯಾಂಕಿಂಗ್ ಕ್ಷೇತ್ರದಿಂದ ದಿಢೀರ್ ಆಗಿ ರಾಜಕೀಯಕ್ಕೆ ಅಂಗಳಕ್ಕೆ ಬಂದು ಕಣಕ್ಕಿಳಿದ ಹುಡಾ ಮಾಜಿ ಸದಸ್ಯರೂ ಆಗಿರುವ ಚಂದ್ರಶೇಖರ ಗೋಕಾಕಗೆ ಸಂಘ ಪರಿವಾರದ ಹಿನ್ನೆಲೆಯಿದ್ದು ಮತ್ತೊಮ್ಮೆ ತೀವ್ರ ಯತ್ನ ನಡೆಸಿದ್ದಾರೆ. ಸಾಮೂಹಿಕ ವಿವಾಹ, ಕ್ರಿಕೆಟ್ ಪಂದ್ಯಾವಳಿ ಸಹಿತ ರಚನಾತ್ಮಕ ಚಟುವಟಿಕೆಗಳನ್ನು ಮಾಡುತ್ತ ಜನರ ಮನೆ ಮನ ಮುಟ್ಟುತ್ತಿರುವ ಎಸ್ ಸಿ ಮೋರ್ಚಾ ಅಧ್ಯಕ್ಷ ಬಸವರಾಜ ಅಮ್ಮಿನಬಾವಿ ಸಹ ಟಿಕೆಟ್‌ನ ಪ್ರಭಲ ಆಕಾಂಕ್ಷಿಯಾಗಿದ್ದಾರೆ.ಈ ಹಿಂದೆ ಉಪಮೇಯರ್ ,ಮೇಯರ್ ಹುದ್ದೆ ಅಲಂಕರಿಸಿರುವ ವೆಂಕಟೇಶ ಮೇಸ್ತ್ರಿ ಪೂರ್ವದಲ್ಲಿ ಮತ್ತೊಮ್ಮೆ ಕೇಸರಿ ಬಾವುಟ ಹಾರಿಸಲೇ ಬೇಕೆಂಬ ನಿಟ್ಟಿನಲ್ಲಿ ಯತ್ನ ನಡೆಸಿದ್ದು ಅಲ್ಲದೇ ಅನೇಕ ವಾರ್ಡಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ ಸಹಿತ ಅನೇಕ ಜನಪರ ಕಾರ್ಯ ಮಾಡುತ್ತಿದ್ದಾರೆ.ಕಳೆದ ಚುನಾವಣೆ ವೇಳೆ ಕೇಳಿ ಬಂದಿದ್ದ ಖ್ಯಾತ ವೈದ್ಯ ಡಾ.ಕ್ರಾಂತಿಕಿರಣ ಈ ಬಾರಿ ಗಂಭೀರವಾಗಿಯೇ ಪೂರ್ವದ ಟಿಕೆಟ್‌ಗೆ ಯತ್ನಿಸಿದ್ದು, ಆ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಮೊಬೈಲ್ ಆಸ್ಪತ್ರೆ ಮೂಲಕ ಜನತೆಗೆ ಹತ್ತಿರವಾಗುತ್ತಿದ್ದಾರೆ. ಬಿಜೆಪಿ ಎಸ್ ಸಿ ಮೋರ್ಚಾ ಮಾಜಿ ಉಪಾಧ್ಯಕ್ಷ ಹಾಗೂ ವಕೀಲರಾಗಿರುವ ಲಕ್ಷ್ಮಣ ಬೀಳಗಿ ಸಹ ಕಮಲ ಹುರಿಯಾಳಾಗಲು ಯತ್ನ ನಡೆಸಿದ್ದಾರೆ. ಮಾಜಿ ಸಚಿವ ದಿ. ಕೆ.ಎಸ್.ಬೀಳಗಿಯವರ ಪುತ್ತ ಲಕ್ಷ್ಮಣ ಅವರ ಹಿರಿತನ ಹಾಗೂ ಕ್ಷೇತ್ರದ ಬಹುಸಂಖ್ಯಾತರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಬಿಜೆಪಿ ಮುಖಂಡ ಶಶಿಕಾಂತ ಬಿಜವಾಡ ಸಹ ತೀವ್ರ ಯತ್ನ ನಡೆಸಿದ್ದಾರೆ. ಈ ಹಿಂದೆ ಕೆಜೆಪಿ ಅಭ್ಯರ್ಥಿಯಾಗಿ ಗಮನಾರ್ಹ ಮತ ಪಡೆದಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಣ್ಣ ಬಿಜವಾಡ, ಮಹೇಂದ್ರ ಕೌತಾಳ ಸಹ ಅವಕಾಶ ಸಿಕ್ಕಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ದವಾಗಿದ್ದಾರೆ.


ಕಳೆದ ಪಾಲಿಗೆ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆದ್ದಿರುವ ಏ ಐಎಂಐಎಂ ಸಹ ಅಭ್ಯರ್ಥಿ ಹಾಕುವುದು ನಿಶ್ಚಿತವಾಗಿದ್ದು ಕಳೆದ ತಿಂಗಳವರೆಗೂ ಚಾಲ್ತಿಯಲ್ಲಿದ್ದ ವಿಜಯ ಗುಂಟ್ರಾಳರನ್ನು ಪಕ್ಷದಿಂದಲೇ ಉಚ್ಚಾಟಿಸಿದ್ದು, ಮಾಜಿ ಪಾಲಿಕೆ ಸದಸ್ಯ ದುರ್ಗಪ್ಪ ಬಿಜವಾಡ ಅಲ್ಲದೇ ರಾಕೇಶ ಬಸವರಾಜ ಸ್ಪರ್ಧೆಗಿಳಿಯಬಹುದು ಎನ್ನಲಾಗುತ್ತಿದೆ.ಆಮ್ ಆದ್ಮಿ ಪಕ್ಷದಿಂದ ಬಸವರಾಜ ತೇರದಾಳ ಉತ್ಸುಕರಾಗಿದ್ದು ಈಗಾಗಲೇ ಆ ನಿಟ್ಟಿನಲ್ಲಿ ಚಟುವಟಿಕೆ ಆರಂಭಿಸಿದ್ದಾರೆ.

ಮಾಜಿ ಶಾಸಕ ಹಾಲಹರವಿಯವರನ್ನು ಸೆಳೆಯುವ ಮೂಲಕ ಜೆಡಿಎಸ್ ಈ ಬಾರಿ ಪೈಪೋಟಿ ಮುನ್ಸೂಚನೆ ನೀಡಿದ್ದು ಅಲ್ಲದೇ ಮಾದಿಗ ಸಮುದಾಯದ ನಿರ್ಣಾಯಕ ಮತಗಳ ಮೇಲೆ ಅಲ್ಲದೇ ಅಲ್ಪಸಂಖ್ಯಾತ ಮತಗಳ ಮೇಲೂ ಕಣ್ಣು ನೆಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕಡೆಯ ಮತ ಬಾಚುವ ಹುನ್ನಾರ ನಡೆಸಿದೆ.

ಅಲ್ಪಸಂಖ್ಯಾತರೇ ನಿರ್ಣಾಯಕವಾಗಿರುವ 23 ವಾರ್ಡಗಳ ವ್ಯಾಪ್ತಿಯ ಪೂರ್ವ ಕ್ಷೇತ್ರದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ಮಹಾನಗನಗರಪಾಲಿಕೆಯ ಕಾಂಗ್ರೆಸ್‌ನ 12, ಬಿಜೆಪಿಯ 8 ಹಾಗೂ ಮೂರು ಎಂಐಎಂ ಸದಸ್ಯರಿದ್ದಾರೆ. ಪಕ್ಷೇತರರಾಗಿ ಗೆದ್ದಿದ್ದ ಅಕ್ಷತಾ ಅಸುಂಡಿ, ದುರ್ಗಮ್ಮ ಬಿಜವಾಡ ಇಬ್ಬರೂ ಕೈ, ಕಮಲಕ್ಕೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿಯ ಆಕಾಂಕ್ಷಿಗಳಲ್ಲಿ ಬಹುತೇಕರು ಸೆಟ್ಲಮೆಂಟ್ ಪ್ರದೇಶದವರೆಂಬುದು ವಿಶೇಷವಾಗಿದೆ. ಚಂದ್ರಶೇಖರ ಗೋಕಾಕ,ಅಮ್ಮಿನಬಾವಿ,ಶಂಕ್ರಪ್ಪ ಬಿಜವಾಡ, ಶಶಿಕಾಂತ ಬಿಜವಾಡ ಎಲ್ಲರೂ ಅಲ್ಲಿಯವರೆ. ದುರ್ಗಪ್ಪ ಬಿಜವಾಡ ಸಹ ಇಲ್ಲಿನವರೇ ಆಗಿದ್ದು ಎಂಐ ಎಂ ಅವರಿಗೆ ಗಾಳ ಹಾಕಿದೆ. ಆದರೆ ಅವರು ಗಾಳಿಪಟ ಹಿಡಿಯುವರೋ ಅಥವಾ ಪಕ್ಷೇತರರಾಗುವರೋ ಎಂಬುದು ನಿಗೂಡವಾಗಿದೆ. ಶಂಕ್ರಪ್ಪ ಬಿಜವಾಡ ಸಹ ಪಕ್ಷೇತರರಾಗಿ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದು ಇನ್ನು ಸ್ಪಲ್ಪ ದಿನಗಳಲ್ಲಿ ಸ್ಪಷ್ಟ ಚಿತ್ರಣ ಗೋಚರಿಸಲಿದೆ.

ಒಟ್ಟಿನಲ್ಲಿ ಪೂರ್ವದಲ್ಲಿ ಈ ಬಾರಿ ಪಕ್ಷಗಳ ಮೇಲಾಟ ಜೋರಾಗಿದ್ದು 1957ರ ನಂತರ ಈ ಕ್ಷೇತ್ರದಲ್ಲಿ ನಡೆದ 15 ಚುನಾವಣೆಗಳಲ್ಲಿ ಐದು ಬಾರಿ ಜನಸಂಘ ಹಾಗೂ ಬಿಜೆಪಿ ಗೆದ್ದಿದ್ದರೆ, ಹತ್ತು ಸಲ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ.

 

 

administrator

Related Articles

Leave a Reply

Your email address will not be published. Required fields are marked *