ಜೋಶಿ ಎಂಟ್ರಿ ನಂತರವೇ ಬಿಜೆಪಿ ತಂತ್ರ
ಕೈ ಪಾಳೆಯದಿಂದಲೂ ವ್ಯಾಪಕ ಕಸರತ್ತು
ಗೌನಭಾಗ್ಯದ ರೇಸ್‌ನಲ್ಲಿ
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಪ್ರಸಕ್ತ ಅವಧಿಯ ಎರಡನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಮಂಗಳವಾರ ಚುನಾವಣೆ ನಡೆಯಲಿದ್ದು, ಬಿಜೆಪಿ ಬಹುತೇಕ ಸದಸ್ಯರು ದಾಂಡೇಲಿಯ ರೆಸಾರ್ಟನಲ್ಲಿದ್ದು ಕಾಂಗ್ರೆಸ್ ಸಹ ಈ ಬಾರಿ ತನ್ನ ಕರಾಮತ್ತು ತೋರಿಸಲು ತಂತ್ರಗಾರಿಕೆ ರೂಪಿಸುತ್ತಿದೆ.
ಬಿಜೆಪಿಯು ಕಾಂಗ್ರೆಸ್ ಆಮಿಷದಿಂದ ರಕ್ಷಿಸಿಕೊಳ್ಳಲು ದಾಂಡೇಲಿಗೆ ತನ್ನ ಸದಸ್ಯರನ್ನು ಸ್ಥಳಾಂತರಿಸಿದ್ದು ನಾಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬ್ರೆಜಿಲ್ ಪ್ರವಾಸದಿಂದ ಮರಳಲಿದ್ದು ಅವರ ಎಂಟ್ರಿಯೊಂದಿಗೆ ಚಟುವಟಿಕೆ ವೇಗ ಪಡೆಯಲಿದೆ.ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸಹ ಭಾಗಿಯಾಗಲಿದ್ದು, ಮುಂದಿನ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಹುಸಂಖ್ಯಾತರಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತು ಬಿಜೆಪಿ ಹಿರಿಯ ಸದಸ್ಯರಿಂದಲೇ ಬಂದಿದೆ.
ಬಿಜೆಪಿಯ ಬಹುತೇಕ ಸದಸ್ಯರು ಈಗಾಗಲೇ ರೆಸಾರ್ಟನಲ್ಲಿ ವಿಶ್ರಾಂತಿಯಲ್ಲಿದ್ದು ಕೆಲ ಹಿರಿಯ ಸದಸ್ಯರು ಇಂದು ದಾಂಡೇಲಿ ಹಾದಿ ಹಿಡಿದಿದ್ದು ಸಂಜೆಯ ವೇಳೆಗೆ ತಲುಪಲಿದ್ದಾರೆ.
ಕಾಂಗ್ರೆಸ್ ಪಾಳೆಯದಲ್ಲೂ ನಿನ್ನೆಯಿಂದ ಚಟುವಟಿಕೆ ಗರಿಗೆದರಿದ್ದು ಶತಾಯ ಗತಾಯ ಪಾಲಿಕೆ ಕೈವಶ ಮಾಡಲು ಗ್ರೀನ ಸಿಗ್ನಲ್ ದೊರೆತಿದ್ದು, ಉಸ್ತುವಾರಿ ಸಚಿವ ಸಂತೋಷ ಲಾಡ್ ನಿನ್ನೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಸ್ಥಳೀಯ ಶಾಸಕರ ಸಭೆ ನಡೆಸಿರುವುದು ಕೇಸರಿ ಪಾಳೆಯದ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿದೆ.
ಸಂಖ್ಯಾ ಲೆಕ್ಕಾಚಾರದಲ್ಲಿ ಬಿಜೆಪಿಗೆ 46 ರಿಂದ 48 ಮತಗಳು ಪಕ್ಕಾ ಎಂಬತ್ತಿದ್ದರೂ ಕಾಂಗ್ರೆಸ್ ಕೂಡಾ 40ರ ಗಡಿ ದಾಟಿದ್ದು, ಶಾಸಕ ವಿನಯ ಕುಲಕರ್ಣಿ ಮತ ಹಾಗೂ ಬಿಜಪಿಯ ಪರಿಷತ್ ಸದಸ್ಯ ಸಂಕನೂರ ಅವರ ಮತದ ಭವಿಷ್ಯವೂ ನಾಳೆ ಕೋರ್ಟನಲ್ಲಿ ಇತ್ಯರ್ಥಗೊಳ್ಳುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪಾಳೆಯದ ಪಾಲಿಕೆ ಸದಸ್ಯರ ಮುಂದಿನ ನಡೆ ಅಲ್ಲದೇ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಕುರಿತು ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿನ ಇಂದಿನ ಸಭೆಯಲ್ಲಿ ತೀರ್ಮಾನವಾಗಬಹುದಾಗಿದೆ. ಮೇಯರ್ ಚುನಾವಣೆ ಹಿನ್ನಲೆಯಲ್ಲಿ ಸಚಿವ ಲಾಡ್ ನಾಳೆ ಆಗಮಿಸಲಿದ್ದು ಶಾಸಕ ಪ್ರಸಾದ ಅಬ್ಬಯ್ಯ ಮತ್ತಿತರರು ನಾಳೆ ಇನ್ನೊಮ್ಮೆ ಸಭೆ ಸೇರಿ ಅಗತ್ಯ ಬೆಂಬಲ ಮತ್ತಿತರ ವಿಷಯ ಗುಪ್ತವಾಗಿ ಚರ್ಚಿಸಬಹುದು ಎನ್ನಲಾಗುತ್ತಿದೆ.
ನಾಳೆ ಸಂಜೆ ವೇಳೆಗೆ ಮೇಯರ್ ಚುನಾವಣೆಯ ಬಗೆಗೆ ಒಂದು ಸ್ಪಷ್ಟ ಚಿತ್ರಣ ಬರುವ ಸಾಧ್ಯತೆಗಳಿದ್ದು ಮೇಲ್ನೋಟಕ್ಕೆ ಬಿಜೆಪಿಯ ಬಾವುಟ ಹಾರುವ ಸಾಧ್ಯತೆಗಳಿದ್ದರೂ ಮಾಜಿ ಸಿಎಂ ಶೆಟ್ಟರ್ ಮೌನ ಅಲ್ಲದೇ ಕೈ ಪಾಳೆಯದಲ್ಲಿನ ಹೊಸ ಹುಮ್ಮಸ್ಸು ಪಾಲಿಕೆಯಲ್ಲಿನ ಅಧಿಕಾರದ ಬರಗಾಲಕ್ಕೆ ಅಂತ್ಯ ಹಾಡಿದರೂ ಅಚ್ಚರಿಯಿಲ್ಲ ಎಂಬ ಸಣ್ಣ ಸುಳಿವಂತೂ ಇದೆ.
ಗೌನಭಾಗ್ಯದ ರೇಸ್‌ನಲ್ಲಿ
ಮೇಯರ್ ರೇಸ್‌ನಲ್ಲಿ ಕಮಲ ಪಡೆಯ ಮೀನಾಕ್ಷಿ ವಂಟಮೂರಿ, ಜ್ಯೋತಿ ಪಾಟೀಲ ಹಾಗೂ ಪೂಜಾ ಶೇಜವಾಡಕರ ಮೂವರೇ ಶಾರ್ಟ ಲೀಸ್ಟನಲ್ಲಿದ್ದಾರೆಂಬ ಮಾತು ಕೇಳಿ ಬರುತ್ತಿದೆ.ಕಾಂಗ್ರೆಸ್‌ನಲ್ಲಿ ಸಹ ಅಕ್ಷತಾ ಅಸುಂಡಿ, ಸುವರ್ಣಾ ಕಲಕುಂಟ್ಲಾ, ಕವಿತಾ ಕಬ್ಬೇರ ಹೆಸರು ಮುನ್ನೆಲೆಯಲ್ಲಿದೆ.