ಸೆಳೆಯಲು ಕೈ, ಜೆಡಿಎಸ್ ಕಸರತ್ತು
ಬೆಂಗಳೂರು: ಇಂದು ಬಿಜೆಪಿಗೆ ಬಸವರಾಜ ಹೊರಟ್ಟಿ ಸೇರ್ಪಡೆಯಾಗುವು ದರೊಂದಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಅವರಿಗೆ ಎಂಬುದು ನಿಶ್ಚಿತವಾಗಿದ್ದು ಈ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದ ಮಾಜಿ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ನಡೆ ನಿಗೂಢವಾಗಿದೆ.
ಈಗಾಗಲೇ ಒಂದ ಸುತ್ತು ಅವಿಭಾಜ್ಯ ಧಾರವಾಡ ಜಿಲ್ಲೆ ಹಾಗೂ ಕಾರವಾರ ಕ್ಷೇತ್ರದಲ್ಲಿ ಪ್ರವಾಸ ಮುಗಿಸಿದ್ದ ಲಿಂಬಿಕಾಯಿ ಅವರನ್ನು ಮನವೊಲಿಸುವ ಯತ್ನ ನಡೆದಿದ್ದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದು ಮಾತನಾಡಿ ದ್ದಾರೆನ್ನಲಾಗಿದೆ.
ತನ್ಮಧ್ಯೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸಹ ಲಿಂಬಿಕಾಯಿಯವರನ್ನು ಸೆಳೆಯಲು ಯತ್ನ ನಡೆಸಿವೆ. ಜೆಡಿಎಸ್ ಮುಖಂಡರ ನಿಯೋಗವೊಂದು ಲಿಂಬಿಕಾಯಿ ಅವರನ್ನು ಭೇಟಿ ಮಾಡಿ ಟಿಕೆಟ್ ನೀಡುವುದಾಗಿ ಹೇಳಿದೆಯೆನ್ನ ಲಾಗಿದ್ದು, ಕಾಂಗ್ರೆಸ್‌ನವರು ಪ್ರಬಲ ಸಮುದಾಯದ ಮುಖಂಡರನ್ನುಸೆಳೆಯಲು ಉನ್ನತ ಮಟ್ಟದಿಂದಲೇ ಸಂಪರ್ಕಿಸಿದೆ.ಆದರೆ ಲಿಂಬಿಕಾಯಿಯವರು ಯಾವುದೇ ಸ್ಪಷ್ಟ ನಿರ್ಧಾರ ತಿಳಿಸಿಲ್ಲವೆನ್ನಲಾಗಿದೆ.
ಪಂಚಮಸಾಲಿ ಸಮುದಾಯ ಹಾಗೂ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಲಿಂಬಿಕಾಯಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಅವರ ಹಿಂಬಾಲಕರು ಒತ್ತಡ ಹಾಕಿದ್ದರೂ ಇನ್ನೂ ತಮ್ಮ ಇಂಗಿತ ಬಿಟ್ಟುಕೊಟ್ಟಿಲ್ಲ ವಾಗಿದೆ.
ಹೊರಟ್ಟಿ ಅವರು ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂದು ಕೆಲ ಕಾರ್ಯಕರ್ತರ ಒತ್ತಡಕ್ಕೆ ಸಿಲುಕಿರುವ ಲಿಂಬಿಕಾಯಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಗುಸು ಗುಸು ಇದೆಯಾದರೆ ಖಚಿತಪಟ್ಟಿಲ್ಲ. ಅಲ್ಲದೇ ಲಿಂಬಿಕಾಯಿಯವರ ಅನೇಕ ಹಿಂಬಾಲಕರೇ ಪಕ್ಷ ವಿರೋಧ ಕಟ್ಟಿಕೊಂಡು ಸೆಡ್ಡು ಹೊಡೆಯಬೇಡಿ ಎಂದು ಹೇಳಿದ್ದಲ್ಲದೇ ಅವರೆಲ್ಲರೂ ಈಗ ಹೊರಟ್ಟಿಯವರಿಗೆ ಜೈ ಎನ್ನಲು ಸಿದ್ದತೆ ನಡೆಸಿದ್ದಾರೆ.
ತಮ್ಮದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಸಮಾನಮನಸ್ಕರ ಒತ್ತಡಕ್ಕೆ ಮಣಿದು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಇದು ಹೊರಟ್ಟಿ ಅವರ ವಿರುದ್ಧ ಹೋರಾಟವಲ್ಲ. ನನ್ನದು ಸೈದ್ದಾಂತಿಕ ಹೋರಾಟ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರೂ ಪಕ್ಷದ ಹಿರಿಯರ ಮಾತಿಗೆ ಮಣಿದು ಈ ನಿರ್ಧಾರದಿಂದ ಹಿಂದೆ ಸರಿವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಆಪ್ತ ಮೂಲಗಳು ಹೇಳಿವೆ.