ಹುಬ್ಬಳ್ಳಿ-ಧಾರವಾಡ ಸುದ್ದಿ
ಸಂಸ್ಮರಣಾ ಗ್ರಂಥ ’ಹಚ್ಚಿಟ್ಟ ಕರ್ಪೂರ’ ಲೋಕಾರ್ಪಣೆ

ಸಂಸ್ಮರಣಾ ಗ್ರಂಥ ’ಹಚ್ಚಿಟ್ಟ ಕರ್ಪೂರ’ ಲೋಕಾರ್ಪಣೆ

ಲಿಂಗಯ್ಯ ಯರಂತೆಲಿಮಠ ಜನ್ಮಶತಮಾನೋತ್ಸವ

ನಿಡಗುಂದಿ: ಜನಪದ ಸಾಹಿತಿ, ಸಂಸ್ಕೃತ ಪಂಡಿತ ಲಿಂ.ಲಿಂಗಯ್ಯ ಯರಂತೆಲಿಮಠ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಅಭಿಮಾನಿಗಳು, ಕುಟುಂಬ ವರ್ಗದವರು ಸೇರಿ ವಿಭಿನ್ನ ಶೈಲಿಯಲ್ಲಿ ಪಟ್ಟಣದ ಕಮದಾಳ ಮುದ್ದೇಶಪ್ರಭು ಮಂಗಲ ಕಾರ್ಯಾಲಯದಲ್ಲಿ ರವಿವಾರ ಆಚರಿಸಿದರು.
ಹಿರಿಯ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಬಡ ಶಾಲಾ ಮಕ್ಕಳಿಗೆ ಪುರಸ್ಕಾರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಜನಪದ ಕವಿ, ನಾಟಕಕಾರ ಪ್ರೊ.ಬಿ.ಆರ್.ಪೋಲಿಸಪಾಟೀಲ ಮಾತನಾಡಿ, ನಿಡಗುಂದಿಯ ಯರಂತೆಲಿಮಠ ಕುಟುಂಬವು ಸುಸಂಸ್ಕೃತ ಮನೆತನವಾಗಿ ಬೆಳಗಲು ಹಿರಿಯ ಚೇತನರಾಗಿದ್ದ ಲಿಂ. ಲಿಂಗಯ್ಯ ಯರಂತೆಲಿಮಠ ಗುರುಗಳು ಮೂಲಕಾರಣಿಕರ್ತರು, ಈ ಒಂದು ಸಮಾರಂಭವನ್ನು ಕುಟುಂಬ ವರ್ಗವು ಮತ್ತು ಊರಿನವರು ಜಾತ್ರೆಯಾಗಿ ಆಚರಿಸುತ್ತಿದ್ದಾರೆ ಎಂದರು.
ಸದಾಶಿವಯ್ಯ ಹಿರೇಮಠ ಮಾತನಾಡಿ, ಹಿರಿಯರನ್ನು ಕಡೆಗಣಿಸುತ್ತಿರುವ ಈ ದಿನಗಳಲ್ಲಿ ಇಂತಹ ಸಮಾರಂಭವನ್ನು ಆಯೋಜಿಸಿದ ಯರಂತೆಲಿಮಠ ಕುಟುಂಬವನ್ನು ಶ್ಲಾಘಿಸಿದರು.


ಲಿಂಗಯ್ಯನವರ ಸಂಸ್ಕರಣಾ ಗ್ರಂಥ ’ಹಚ್ಚಿಟ್ಟ ಕರ್ಪೂರ’ವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಅಕ್ಕಮಹಾದೇವಿ ಪಾಟೀಲರು ಬರೆದ ’ಚೈತ್ರದ ಚೆಲುವು’ ಕವನ ಸಂಕಲನ ಲೋಕಾರ್ಪಣೆಯಾಯಿತು. ಪುಸ್ತಕ ಪರಿಚಯ ಮಾಡಿಕೊಟ್ಟ ಸಾಹಿತಿ ಅಶೋಕ ಹಂಚಲಿ, ಕವಿಯಿತ್ರಿ ಅಕ್ಕಮಹಾದೇವಿ ಪಾಟೀಲ ಭಾವ- ನಾತ್ಮಕವಾಗಿ ರಚಿಸಿರುವ ಕವನಗಳಲ್ಲಿ ಬಗ್ಗೆ, ಖಾಸ್ತತ ಅಜ್ಜನವರ ಬಗ್ಗೆ, ತಾಳಿಕೋಟೆಯ ಸುತ್ತಲಿನ ಪರಿಸರ, ಹೆತ್ತವರ ಬಗ್ಗೆ ಬರೆದ ಕವನಗಳ ಬಗ್ಗೆ ವಿಮರ್ಶಿಸಿದರು.
ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ವೈದ್ಯರಾದ ಗೌತಮ ವಗ್ಗರ, ಪ್ರಸನ್ನಕುಮಾರ ಕಾಂಬಳೆ, ಯಲಗೂರಸ್ವಾಮಿ ಕೋಸ್ಕರ, ಅಜಿತ ಜನಗೊಂಡ ಹಾಗೂ ಮುನಿರ್ ಅಹ್ಮದ್ ನಾಕ್ಕೋಡಿಯವರು ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡಿ ಚಿಕಿತ್ಸೆಯನ್ನೂ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ಧಾರವಾಡ ಕೆಯುಡಿಯ ಇಂಗ್ಲಿಷ್ ಭಾಷಾ ನಿವೃತ್ತ ಎಚ್‌ಓಡಿ ಡಾ.ಸಿ.ಆರ್. ಯರವಿನತೆಲಿಮಠರವರು ತಮ್ಮೂರಿನ ನೆನಪುಗಳನ್ನು ಮೆಲುಕು ಹಾಕಿದರು.


ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಬಿಲ್ ಕೆರೂರಿನ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಿದ್ದಣ್ಣ ನಾಗಠಾಣ, ಬಸವರಾಜ ಕುಂಬಾರ, ಬಸಮ್ಮ ಪೂಜಾರಿ, ಮಹಾಂತೇಶ ಯರಂತೆಲಿಮಠ, ಶಶಿಧರ ಪಾಟೀಲ, ಜಗದೀಶ ಗಲಗಲಿ, ಸಂಗಮೇಶ ಕೆಂಭಾವಿ, ಬಸವರಾಜ ಯರವಿನತೆಲಿಮಠ ಇದ್ದರು. 80 ವರ್ಷ ಮೇಲ್ಪಟ್ಟ 15 ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

administrator

Related Articles

Leave a Reply

Your email address will not be published. Required fields are marked *