ಹುಬ್ಬಳ್ಳಿ : ಉದ್ಯಮ ಕ್ಷೇತ್ರದಲ್ಲಿನ ಗಣನೀಯ ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಕೊಡ ಮಾಡಿದ ಮಾನವೀಯ ನೆರವಿಗಾಗಿ ಹುಬ್ಬಳ್ಳಿಯ ಸ್ವರ್ಣ ಸಮೂಹದ ಮುಖ್ಯಸ್ಥ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ಅವರಿಗೆ ಪ್ರತಿಷ್ಠಿತ ಮದರ್ ಥೆರೆಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ -2021ರಂದು ದೊರೆತಿದೆ.
ಬೆಂಗಳೂರಿನಲ್ಲಿ ರಾಷ್ಟ್ರಿಯ ಪ್ರೆಸ್ ಕೌನ್ಸಿಲ್ ಆಪ್ ಇಂಡಿಯಾ ,ಎನ್ ಪಿಸಿಎಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ದಿ ನ್ಯೂಸ್ ಪೇಪರ ಅಸೋಸಿಯೇಶನ್ ಕರ್ನಾಟಕ ಆಶ್ರಯದಲ್ಲಿ ದಿ.ದಿ.30ರಂದು ನಡೆದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿಯನ್ನು ಕಲೆ,ಸಾಹಿತ್ಯ,ರಾಜಕೀಯ, ವೈದ್ಯಕೀಯ, ಕ್ರೀಡೆ, ಉದ್ಯಮ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಪ್ರತಿಷ್ಠಿತರಿಗೆ ಪ್ರದಾನ ಮಾಡಲಾಯಿತು.
ನಿವೃತ್ತ ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ, ನಿಮಾನ್ಸ್ ನಿರ್ದೇಶಕಿ ಪ್ರತಿಮಾ ಮರ್ಪಿ, ಕಿದ್ವಾಯಿ ಮಾಜಿ ನಿರ್ದೇಶಕ ಡಾ.ಲಿಂಗೇಗೌಡ, ನ್ಯೂಸಪೇಪರ್ ಅಸೋಸಿಯೇಶನ್‌ನ ಸರವಣ ಲಕ್ಷ್ಮಣ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಪ್ರಸಾದ ಅವರಿಗೆ ಪ್ರಶಸ್ತಿ ನೀಡಿದರು.
ಕಳೆದ ಒಂದೂವರೆ ದಶಕದಿಂದ ಸದ್ದಿಲ್ಲದೇ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಡಾ.ಪ್ರಸಾದ ಅವರು ಕೋವಿಡ್ ಒಂದು ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಅಕ್ಷರಶಃ ’ಆಪತ್ಪಾಂಧವ’ರಾಗಿ ಕಾರ್ಯನಿರ್ವಹಿಸಿದ್ದು, ಹುಬ್ಬಳ್ಳಿ ಧಾರವಾಡ, ಹಾವೇರಿ, ಬೆಳಗಾವಿ ಸೇರಿದಂತೆ ವಿವಿಧೆಡೆ ೫೫ ಆಕ್ಸಿಜನ್ ಕಾನ್ಸನ್ ಟ್ರೇಟರ್, ಕಿಮ್ಸ್ ಆಸ್ಪತ್ರೆಗೆ ಸಹಿತ ಅಗತ್ಯ ಹಾಸಿಗೆ ಅಲ್ಲದೇ ೨೦೦೦ಕ್ಕೂ ಹೆಚ್ಚು ಆಹಾರ ಕಿಟ್‌ಗಳನ್ನು ಹಂಚಿ ಮಾನವೀಯತೆ ಮರೆದಿದ್ದಾರೆ. ಈಗಾಗಲೇ ಅವರಿಗೆ ಅನೇಕ ರಾಜ್ಯಮಟ್ಟದ,ರಾಷ್ಟ್ರಮಟ್ಟದ ಪ್ರಶಸ್ತಿಗಳು ಅರಸಿ ಬಂದಿವೆ.