ಹುಬ್ಬಳ್ಳಿ-ಧಾರವಾಡ ಸುದ್ದಿ
ಮಣ್ಣಲ್ಲಿ ಮಾಯವಾದ ’ಯುವರತ್ನ’; ತಂದೆ- ತಾಯಿ ಸಮಾಧಿ ಪಕ್ಕದಲ್ಲೇ ಪುನೀತ್ ಅಂತ್ಯಕ್ರಿಯೆ

ಮಣ್ಣಲ್ಲಿ ಮಾಯವಾದ ’ಯುವರತ್ನ’; ತಂದೆ- ತಾಯಿ ಸಮಾಧಿ ಪಕ್ಕದಲ್ಲೇ ಪುನೀತ್ ಅಂತ್ಯಕ್ರಿಯೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದು ಪಂಚಭೂತಗಳಲ್ಲಿ ಲೀನರಾದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಳಿಗ್ಗೆ ಇಲ್ಲಿನ ಕಂಠೀರವ ಸ್ಟುಡಿಯೊದಲ್ಲಿ ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು.


ಈಡಿಗ ಸಂಪ್ರದಾಯದಂತೆ ರಾಘವೇಂದ್ರ ರಾಜಕುಮಾರ್ ಮಗ ವಿನಯ್ ರಾಜ್‌ಕುಮಾರ್ ಪುನೀತ್ ಪಾರ್ಥಿವ ಶರೀರಕ್ಕೆ ಅಂತಿಮ ಸಂಸ್ಕಾರ ನೆರವೇರಿಸಿದರು.
ಮೂರು ಬಾರಿ ಕುಶಾಲು ತೋಪು ಸಿಡಿಸಿ ಅಪ್ಪುಗೆ ಗೌರವ ಸಲ್ಲಿಸಲಾಯಿತು. ವಿನಯ್ ರಾಜ್ ಕುಮಾರ್ ಅವರು ಮೂರು ಸುತ್ತು ಸಮಾಧಿ ಸುತ್ತಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.


ನಂತರ ರಥದಲ್ಲಿ ಪುನೀತ್ ಶವವವನ್ನು ಮಲಗಿಸಿ ಪೂಜೆ ಸಲ್ಲಿಸಲಾಯಿತು. ಇದಾದ ಬಳಿಕ ಮೃತದೇಹವನ್ನು ಗುಂಡಿಗೆ ಇಳಿಸಿ ಅಲ್ಲಿ ಕೆಲವೊಂದು ವಿಧಿವಿಧಾನಗಳು ನಡೆದ ನಂತರ ಅಪ್ಪುವನ್ನು ಮಣ್ಣಲ್ಲಿ ಮಣ್ಣು ಮಾಡ ಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ನಟ ಶಿವರಾಜಕುಮಾರ ಬಿಕ್ಕಿಬಿಕ್ಕಿ ಅತ್ತರು.
ಡಾ.ರಾಜ್‌ಕುಮಾರ್ ಕುಟುಂಬಸ್ಥರು ಹಾಗೂ ಮುಖ್ಯಮಂತ್ರಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿ ಗಣ್ಯಾತಿಗಣ್ಯರು, ಚಿತ್ರರಂಗದ ನಟ-ನಟಿಯರು ದೊಡ್ಮನೆ ಹುಡುಗನಿಗೆ ಅಂತಿಮ ನಮನ ಸಲ್ಲಿಸಿದರು.
ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕಂಠೀರವ ಸ್ಟೇಡಿಯಂನಿಂದ ಪುನೀತ್ ರಾಜ್‌ಕಮಾರ್ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಮೂಲಕ ಸ್ಟುಡಿಯೊಕ್ಕೆ ಕರೆತರಲಾಯಿತು. ನಂತರ ಡಾ. ರಾಜ್‌ಕುಮಾರ್ ಸಮಾಧಿಯಿಂದ 125 ಅಡಿ ಅಂತರ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂಭಾಗ ಜಮಾಯಿಸಿದ್ದರು.


ಮಂಗಳವಾರ ಪುನೀತ್ ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ಇದೆ. ಅಲ್ಲಿ ವರೆಗೂ ಕಂಠೀರವ ಸ್ಟುಡಿಯೋಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕಂಠೀರವ ಸ್ಟುಡಿಯೋ ಬಳಿ144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿಕೊಂಡು ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ.
ಶುಕ್ರವಾರ, ಅಕ್ಟೋಬರ್ 29 ನಟ ಪುನೀತ್ ರಾಜ್‌ಕುಮಾರ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು.ಇದು ನಂಬಲಾಗದ, ಅರಗಿಸಿ ಕೊಳ್ಳಲಾಗದ ಸುದ್ದಿಯಾಗಿತ್ತು. ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ದೂರದೂರುಗಳಿಂದ ಬಂದಿದ್ದರು. ವರದಿಗಳ ಪ್ರಕಾರ, ಕಳೆದ ಎರಡು ದಿನಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನರು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ನಿನ್ನೆಯೇ ಪುನೀತ್ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಅವರ ಹಿರಿಯ ಮಗಳು ಧೃತಿ ಅಮೆರಿಕಾದಿಂದ ಭಾರತಕ್ಕೆ ಬರುವುದು ತಡವಾಗುವ ಹಿನ್ನೆಲೆಯಲ್ಲಿ ರವಿವಾರ ಮುಂಜಾನೆಗೆ ಅಂತ್ಯಕ್ರಿಯೆಯನ್ನು ಮುಂದೂಡಲಾಯಿತು. ಜೊತೆಗೆ ಕತ್ತಲಾಗುವ ಸಮಯದಲ್ಲಿ ಅಂತ್ಯಸಂಸ್ಕಾರ ಮಾಡುವುದು ಬೇಡ ಎಂದು ಕುಟುಂಬಸ್ಥರು ನಿರ್ಧರಿಸಿದ್ದರು.

 

 

administrator

Related Articles

Leave a Reply

Your email address will not be published. Required fields are marked *