ಜಿಲ್ಲಾ ಬಿಜೆಪಿಯಲ್ಲಿ ಮುಂದುವರಿದ ಆಂತರಿಕ ಸಂಘರ್ಷ
ಹುಬ್ಬಳ್ಳಿ : ಈಗಾಗಲೇ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘೋಷಣೆಯಾಗಿ ಕ್ಷೇತ್ರದ ಎಲ್ಲೆಡೆ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಈಗಾಗಲೇ ಮೊದಲ ಸುತ್ತಿನ ಪ್ರಚಾರ ಆರಂಭಿಸಿರುವಾಗಲೇ ಧಾರವಾಡ ಪ್ರಭಾರಿ , ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ಸುಮಾರು ೪೩ ವಿಭಾಗಗಳಲ್ಲಿ ನೂರಾರು ಪ್ರಮುಖರನ್ನು ಒಳಗೊಂಡಂತೆ ಚುನಾವಣಾ ನಿರ್ವಹಣಾ ಸಮಿತಿ ರಚಿಸಲಾಗಿದ್ದು ಆದರೆ ಈ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬೆಂಬಲಿಗರೊಬ್ಬರಿಗೂ ಸ್ಥಾನ ಸಿಕ್ಕಿಲ್ಲ.
ಶೆಟ್ಟರ್ ಮರಳಿ ಬಿಜೆಪಿಗೆ ಸೇರ್ಪಡೆಯಾದ ನಂತರ ಅವರ ಹಿಂಬಾಲಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮೀನ ಮೇಷ ಎಣಿಸಿದ್ದ ಮುಖಂಡರು ಈಗ ಚುನಾವಣಾ ನಿರ್ವಹಣಾ ಸಮಿತಿಯಿಂದ ಶೆಟ್ಟರ್,ಅಲ್ಲದೇ ಪ್ರದೀಪ ಶೆಟ್ಟರ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮುಂತಾದವರ ಬೆಂಬಲಿಗ ಕಾರ್ಯಕರ್ತರೊಬ್ಬರನ್ನೂ ಸಮಿತಿಯಲ್ಲಿ ಸೇರಿಸಿಲ್ಲವಾಗಿದ್ದು ಉಭಯ ಬಣಗಳ ಬಿರುಕು ಮತ್ತಷ್ಟು ದೊಡ್ಡದಾಗುವ ಸಾಧ್ಯತೆ ಇದೆ.
ಕಳೆದ ಸುಮಾರು ಮೂರು ದಶಕಗಳ ಕಾಲ ಜಿಲ್ಲೆಯ ಕಮಲ ಪಡೆಯ ಹಿಡಿತ ಇಟ್ಟುಕೊಂಡಿದ್ದ ಶೆಟ್ಟರ್ ಅವರ ಪ್ರಮುಖ ಬೆಂಬಲಿಗರಾದ ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ, ವಿರೂಪಾಕ್ಷ ರಾಯನಗೌಡರ, ಸತೀಶ ಮಾಡಳ್ಳಿ, ಮಹೇಶ ಬುರ್ಲಿ ಸೇರಿದಂತೆ ಯಾರೊಬ್ಬರ ಹೆಸರು ನಿರ್ವಹಣಾ ಸಮಿತಿಯಲ್ಲಿಲ್ಲ.
ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ,ಎಂ.ಆರ್.ಪಾಟೀಲ ಬೆಂಬಲಿಗರು ಅಲ್ಲದೇ ಮಾಜಿ ಶಾಸಕರಾದ ಅಶೋಕ ಕಾಟವೆ, ಸೀಮಾ ಮಸೂತಿ ಮುಂತಾದವರು ಸ್ಥಾನ ಪಡೆದಿದ್ದಾರೆ.
ಈಗಾಗಲೇ ಧಾರವಾಡ ಮತ್ತು ಹಾವೇರಿಯ ಲೋಕಸಭಾ ಟಿಕೆಟ್‌ನ್ನು ನಿರಾಕರಿಸಿರುವ ಬಿಜೆಪಿ ಪಡೆ ಶೆಟ್ಟರ್‌ಗೆ ಬೆಳಗಾವಿಯ ಆದ್ಯತೆ ನೀಡಿದ್ದು ಅವರಿಗೆ ಅಂತಿಮಗೊಳ್ಳಬಹುದಾದರೂ ವಿರೋಧವೂ ಸಾಕಷ್ಟಿದೆ.ಹೀಗಿರುವಾಗಲೇ ಸೆಂಟ್ರಲ್ ಅಧ್ಯಕ್ಷರಾಗಿ, ಮಹಾನಗರ ಅಧ್ಯಕ್ಷರಾಗಿ ಅವಳಿನಗರದಲ್ಲಿ ದಾಖಲೆಯ ಸದಸ್ಯತ್ವ ಮಾಡಿದ ಹಿರಿಮೆಯಿರುವ ನಾಗೇಶ ಕಲಬುರ್ಗಿಯಂತಹವರನ್ನು ಲೆಕ್ಕಕ್ಕೂ ತೆಗೆದುಕೊಳ್ಳದೆ ಇರುವುದು ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೋ ಕಾದು ನೋಡಬೇಕಿದೆ.
ಪ್ರಭಾರಿ, ಸಹ ಪ್ರಭಾರಿ, ಪ್ರತಿನಿಧಿ ಪ್ರಮುಖರು, ಚುನಾವಣಾ ನಿರ್ವಹಣಾ ಸಮಿತಿ,ಕಾರ್ಯಾಲಯ ಸಮಿತಿ, ಕಂಪೂಟರ್ ವಿಭಾಗ, ನೂತನ ಕಾರ್ಯಾಲಯ,ಕಾಲ್ ಸೆಂಟರ್, ವಾಹನ ಉಸ್ತುವಾರಿ, ಪ್ರಚಾರ ಸಾಮಗ್ರಿ, ಚುನಾವಣಾ ಪ್ರಚಾರ,ಸಾಮಾಜಿಕ ಜಾಲ ತಾಣ, ಹೈಟೆಕ್ ಚುನಾವಣಾ ಪ್ರಚಾರ, ಮಾಧ್ಯಮ ಜವಾಬ್ದಾರಿ, ಬೂತ್ ಕಾರ್ಯ, ಸಂಪನ್ಮೂಲ ಕ್ರೋಡಿಕರಣ,ಲೆಕ್ಕಪತ್ರ, ಕಾನೂನು ಮತ್ತು ಚುನಾವಣಾ ಸಮನ್ವಯ,ದಾಖಲೀಕರಣ, ಪ್ರಣಾಳಿಕೆ ಉಸ್ತುವಾರಿ, ವಿಡಿಯೋ ವಾಹನ, ಆರೋಪ ಪಟ್ಟಿ, ಫಲಾನುಭವಿಗಳ ಸಂಪರ್ಕ,ಯುವಕರ ಸಂಪರ್ಕ,ಮಹಿಳೆಯರ, ಎಸ್.ಸಿ,ಎಸ್ಟಿ ಸಂಪರ್ಕ, ಅತಿಥಿ ಸತ್ಕಾರ, ಜಾಹಿರಾತು, ವಸತಿ, ಹೆಲಿಕ್ಯಾಪ್ಟರ್ ಮುಂತಾದವುಗಳ ನಿರ್ವಹಣೆಗೆ ಪ್ರಮುಖರನ್ನು ಬಳಸಿಕೊಂಡು ಈ ಸಮಿತಿ ಮಾಡಲಾಗಿದೆ.