ಹುಬ್ಬಳ್ಳಿ-ಧಾರವಾಡ ಸುದ್ದಿ

ದಿಂಗಾಲೇಶ್ವರ ಶ್ರೀಗಳಿಂದ 17ಕ್ಕೆ ನಾಮಪತ್ರ

ವಚನಾನಂದ ಸ್ವಾಮೀಜಿ ಭೇಟಿ: ಬೆಂಬಲ ಕೋರಿಕೆ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮೊದಲ ಬಾರಿಗೆ ನಾಳೆ ಹುಬ್ಬಳ್ಳಿಗೆ ಆಗಮಿಸಲಿದ್ದು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಭಕ್ತ ಸಮೂಹ ನಿರ್ಧರಿಸಿದೆ. ನಾಳೆ ಸಂಜೆ ನಾಲ್ಕು ಗಂಟೆಗೆ ನೆಹರೂ ಮೈದಾನದಿಂದ ಮೂರುಸಾವಿರಮಠದವರೆಗೆ ಬೃಹತ್ ಮೆರವಣಿಗೆ ಮೂಲಕ ಕರೆದೊಯ್ಯಲು ನಿರ್ಧರಿಸಿದ್ದು, ದಿ.17ರಂದು ಅವರು ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾಗಿದೆ.


ದಿಂಗಾಲೇಶ್ವರರ ಸ್ಪರ್ಧೆಯ ಘೋಷಣೆಯಿಂದ ಧಾರವಾಡ ಲೋಕಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿದ್ದು ಎಲ್ಲ ಲೆಕ್ಕಾಚಾರಗಳು ತಿರುವು ಮುರುವಾಗುವ ಲಕ್ಷಣ ಗೋಚರಿಸಲಾರಂಭಿಸಿದೆ. ತನ್ಮಧ್ಯೆ ಪಕ್ಷೇತರರಾಗಿ ಸೆಡ್ಡು ಹೊಡೆಯಲಿರುವ ದಿಂಗಾಲೇಶ್ವರರು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ವಚನಾಂದ ಸ್ವಾಮೀಜಿ ಸಹ ಅತ್ಯಂತ ಪವರಪುಲ್ ಸ್ವಾಮೀಜಿಯಾಗಿರುವ ದಿಂಗಾಲೇಶ್ವರರು ನಮ್ಮ ಬೆಂಬಲ ಕೋರಿದ್ದು ಅವರ ಚುನಾವಣಾ ಸ್ಪರ್ಧೆ ಸ್ವಾಗತಿಸಲಿದ್ದು ಆದರೆ ಬೆಂಬಲ ಕುರಿತು ಭಕ್ತರ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳುವದಾಗಿ ಹೇಳಿದ್ದಾರೆ.


ರಾಜ್ಯದ ನೂರಾರು ಮಠಾಧೀಶರು ಈಗಾಗಲೇ ದಿಂಗಾಲೇಶ್ವರರಿಗೆ ಬೆಂಬಲ ಸೂಚಿಸಿದ್ದಾರೆನ್ನಲಾಗಿದೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಕುಂದಗೋಳ, ಕಲಘಟಗಿ, ನವಲಗುಂದಗಳ ಬಹುತೇಕ ಮಠಗಳಿಗಲ್ಲದೇ ಶಿರಹಟ್ಟಿ ಮಠಕ್ಕೂ ಭೇಟಿ ನೀಡಿ ಆಶೀರ್ವಾದ ಕೋರಿದ್ದು ಅವರ ಪರವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಹ ಪ್ರಚಾರಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಇನ್ನೊಂದೆಡೆ ಸದ್ದಿಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಪರ ಉಸ್ತುವಾರಿ ಸಚಿವ ಸಂತೋಷ ಲಾಡ್ ಮತ ಬೇಟೆ ನಡೆಸಿದ್ದು ವಿವಿಧ ಸಂಘಟನೆಗಳನ್ನು ಕರೆದು ಮಾತನಾಡುತ್ತಿದ್ದು ಅಹಿಂದ ಮತಗಳ ಕ್ರೋಡಿಕರಣಕ್ಕೆ ಮುಂದಾಗಿದ್ದಾರೆ.

administrator

Related Articles

Leave a Reply

Your email address will not be published. Required fields are marked *