ಭೈರು ಕೇಟರರ್ಸಗೆ ಏಳನೇ ಬಾರಿ
ಸಾಹಿತ್ಯ ಜಾತ್ರೆಯ ಅಡುಗೆ ಅವಕಾಶ
ಬಾಯಲ್ಲಿ ನೀರೂರಿಸುವ ಉ.ಕ.ಶೈಲಿಯ ಊಟ, ಸಿಹಿ ಖಾದ್ಯ
ಹುಬ್ಬಳ್ಳಿ : ಕಳೆದ ಸಪ್ಟಂಬರ್‌ನಲ್ಲಿ ತಡಸಿನಕೊಪ್ಪದಲ್ಲಿ ಐಐಐಟಿ ನೂತನ ಕ್ಯಾಂಪಸ್ ಉದ್ಘಾಟನೆಗೆ ಆಗಮಿಸಿದ್ದ ರಾಷ್ಟ್ರದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರಿಗೆ ಉ.ಕ.ಶೈಲಿಯ ಸಾಂಪ್ರದಾಯಿಕ ಭೋಜನ ಉಣಬಡಿಸಿ ವಿಶೇಷ ಮೆಚ್ಚುಗೆಗೆ ಪಾತ್ರರಾಗಿದ್ದ ಹುಬ್ಬಳ್ಳಿ ಭೈರು ಕೇಟರರ್ಸದವರಿಗೆ ಏಲಕ್ಕಿ ನಾಡಿನಲ್ಲಿ ನಡೆಯುತ್ತಿರುವ ದಿ.6ರಿಂದ ಮೂರು ದಿನಗಳ ಕಾಲ ನಡೆಯಲಿರುವ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಡುಗೆ ಸಿದ್ದಪಡಿಸುವ ಜವಾಬ್ದಾರಿಯನ್ನು ನೀಡಲಾಗಿದೆ.
ಈಗಾಗಲೇ ಆರು ಸಾಹಿತ್ಯ ಸಮ್ಮೇಳನಗಳಲ್ಲಿ ಮಸ್ತಕದ ಹಸಿವಿನೊಂದಿಗೆ ಬರುವ ಸಾಹಿತ್ಯಾಸಕ್ತರಿಗೆ ಭೋಜನ ನೀಡಿ ಸೈ ಎನ್ನಿಸಿಕೊಂಡಿರುವ ಬಾಬುಲಾಲ ಪ್ರಜಾಪತ್ ಮಾಲೀಕತ್ವದ ಭೈರು ಕೇಟಸರ್ಸನ ಸುಮಾರು ಸಾವಿರದೈನೂರು ಮಹಿಳಾ,ಪುರುಷ ಬಾಣಸಿಗರು ಸಿಹಿ ತಿಂಡಿಗಳ ತಯಾರಿಯಲ್ಲಿ ತೊಡಗಿದ್ದಾರೆ.
ಈಗಾಗಲೇ ಧಾರವಾಡದಲ್ಲಿನ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿಜಯಪುರ,ಕಲಬುರಗಿ,ರಾಯಚೂರ,ಮಡಿಕೇರಿ,ಗಂಗಾವತಿ ನುಡಿ ಸಂಭ್ರಮ ಸೇರಿದಂತೆ ಲಕ್ಷಾಂತರ ಜನ ಸೇರುವ ಕಾರ್ಯಕ್ರಮಗಳಿಗೆ ಸರಿಯಾಗಿ ಊಟ ಉಪಹಾರ ಪೂರೈಸಿರುವ ಹಿರಿಮೆ ಇವರದ್ದಾಗಿದೆ.
ಸಮ್ಮೇಳನ ನಡೆಯುವ 128 ಎಕರೆ ಪ್ರದೇಶದಲ್ಲಿ 35 ಎಕರೆಯಲ್ಲಿ ಕಿಚನ್ ಮತ್ತು ಡೈನಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 250 ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ.
ಆಹಾರ ಸಮಿತಿ ಸದಸ್ಯ ಕಾರ್ಯದರ್ಶಿ ಹಾವೇರಿ ಜಿಲ್ಲಾ ಪಂಚಾಯತಿ ಸಿಇಓ ಮೊಹಮ್ಮದ ರೋಶನ್ ಉಸ್ತುವಾರಿಯಲ್ಲಿ ಊಟ, ಉಪಹಾರದ ವ್ಯವಸ್ಥೆ ನಡೆದಿದ್ದು, ಸಾಮಾನ್ಯವರ್ಗ, ಗಣ್ಯರು ಹಾಗೂ ಅತಿಗಣ್ಯರು ಎಂದು ಮೂರು ಶ್ರೇಣಿಯಲ್ಲಿ ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ.
ಸಮ್ಮೇಳನದಲ್ಲಿ ಸಂಪೂರ್ಣ ಉ.ಕ.ಶೈಲಿಯ ಸಿಹಿಖಾದ್ಯ ನೀಡಲಾಗುತ್ತಿದ್ದು ಬಾಯಲ್ಲಿ ನೀರೂರಿಸುವ ಕೇಸರಿ ಬಾತ್, ಹೆಸರು ಬೇಳೆ ಪಾಯಸ,ಕೀರು,ಶೇಂಗಾ ಹೋಳಿಗೆ, ಲಡಕಿ ಪಾಕ್, ಮೋತಿ ಚೂರು, ಮೈಸೂರ ಪಾಕ್ ರವಾ ಉಂಡಿ, ಗೋಧಿ ಹುಗ್ಗಿ ಇವುಗಳನ್ನು ನೀಡಲಾಗುತ್ತಿದೆ.
ಸಮ್ಮೇಳನಕ್ಕೆ ಇನ್ನೆರಡೆ ದಿನ ಇದ್ದು ಈಗಾಗಲೇ ಸುಮಾರು 1500 ಬಾಣಸಿಗರ ತಂಡ ಹೋಳಿಗೆ, ಲಡಕಿ ಪಾಕ್ ರವಾ ಉಂಡಿ ಮುಂತಾದವುಗಳನ್ನು ಸಿದ್ದಪಡಿಸಿದೆ. ಸಮ್ಮೇಳನದಲ್ಲಿ ಊಟ ಬಡಿಸಲು ಸೇರಿದಂತೆ ಇನ್ನೊಂದು ಸಾವಿರ ಸುಮಾರು ಎರಡುಸಾವಿರದೈನೂರು ಜನ ಕೆಲಸ ಮಾಡಲಿದ್ದಾರೆ. ತಲಾ ಎರಡು ಲಕ್ಷ ಹೋಳಿಗೆ, ಮೋತಿ ಚೂರು, ಮೈಸೂರು ಪಾಕ್,ರವೆ ಉಂಡಿಗಳು ಈಗಾಗಲೇ ಸಿದ್ದಗೊಂಡಿವೆ.
ಮೂರು ದಿನಗಳು ಸೇರಿ ಸುಮಾರು ಏಳರಿಂದ ಒಂಬತ್ತು ಲಕ್ಷದವರೆಗೆ ಊಟದ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಆಹಾರ ಉಪಸಮಿತಿಯವರು ಸೂಚಿಸಿದ್ದು ಉಸ್ತುವಾರಿ ಮೊಹ್ಮದ ರೋಶನ್ ಸಹಿತ ಇತರ ಸದಸ್ಯರು ಸ್ಥಳಕ್ಕೆ ಆಗಮಿಸಿ ಸಿಹಿ ತಿಂಡಿಗಳ ತಯಾರಿಕೆ ಹಾಗೂ ಸ್ವಾದ ಪರಿಶೀಲಿಸಿದ್ದಾರೆ ಎಂದು ಉಸ್ತುವಾರಿ ನೋಡಿಕೊಳ್ಳುತ್ತಿರುವ ರತನ್ ಪ್ರಜಾಪತ್,ವಿಕ್ರಮ ಪ್ರಜಾಪತ್ ಹೇಳಿದರು.
ತಾವು ಸಾಹಿತ್ಯ ಸಮ್ಮೇಳನದ ಅಡುಗೆ ಜವಾಬ್ದಾರಿ ದೊರೆತಿರುವುದು ನಿಜಕ್ಕೂ ನಮಗೆ ಅನ್ನ ನೀಡುತ್ತಿರುವ ಕನ್ನಡಮ್ಮನ ಸೇವೆಗೆ ಸಿಕ್ಕ ಸುವರ್ಣಾವಕಾಶ. ಇದು ನಮ್ಮ ಪಾಲಿಗೆ ಕೇವಲ ವ್ಯವಹಾರದ ಕೆಲಸವಲ್ಲ. ನಾಡಿನ ಮೂಲೆ ಮೂಲೆಯಿಂದ ಬರುವ ಸಾಹಿತಾಸಕ್ತರಿಗೆ ಗುಣಮಟ್ಟದ ಶುಚಿ,ರುಚಿಯಾದ ಊಟ ನೀಡುವ ಮೂಲಕ ಕನ್ನಡ ತಾಯಿಯ ಅಳಿಲು ಸೇವೆ ನಮ್ಮದು ಎಂದು ವಿಕ್ರಮ ಪ್ರಜಾಪತ್ ’ಸಂಜೆ ದರ್ಪಣ’ದೊಂದಿಗೆ ಮಾತನಾಡುತ್ತ ಹೇಳಿದರು.
ಊಟ – ಉಪಹಾರದ ಮೆನು
ಮೊದಲ ದಿನ ( ದಿ.6)
ಬೆಳಗಿನ ಉಪಾಹಾರ: ಶಿರಾ, ಉಪ್ಪಿಟ್ಟು ಹಾಗೂ ಬೆಲ್ಲದ ಚಹಾ
ಮಧ್ಯಾಹ್ನದ ಊಟ: ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯ, ಚಪಾತಿ, ಅನ್ನ-ಸಾಂಬರ್, ಶೇಂಗಾ ಚಟ್ನಿ, ಮೊಸರು,
ರಾತ್ರಿ ಊಟ: ಹೆಸರು ಬೇಳೆ ಪಾಯಸ, ಪುಳಿಯೊಗೆರೆ, ಅನ್ನ, ಸಾಂಬರ್, ಉಪ್ಪಿನಕಾಯಿ
ಎರಡನೇ ದಿನ( ದಿ.7)
ಬೆಳಗಿನ ಉಪಾಹಾರ: ರವೆ ಉಂಟೆ, ವೆಜಿಟೇಬಲ್ ಪುಲಾವ್ ಹಾಗೂ ಬೆಲ್ಲದ ಚಹಾ
ಮಧ್ಯಾಹ್ನದ ಊಟ: ಲಡಕಿ ಪಾಕ, ಮಿಕ್ಸ್ ವೆಜಿಟೇಬಲ್, ಚಪಾತಿ, ಅನ್ನ-ಸಾಂಬರ್, ಶೇಂಗಾ ಚಟ್ನಿ, ಮೊಸರು,
ರಾತ್ರಿ ಊಟ: ಶ್ಯಾವಿಗೆ ಪಾಯಸ, ಬಿಸಿಬೇಳೆ ಬಾತ್, ಅನ್ನ, ಸಾಂಬರ್, ಉಪ್ಪಿನಕಾಯಿ
ಮೂರನೇ ದಿನ ( ದಿ.8)
ಬೆಳಗಿನ ಉಪಾಹಾರ: ಮೈಸೂರು ಪಾಕ, ವಾಂಗಿ ಬಾತ್ ಹಾಗೂ ಬೆಲ್ಲದ ಚಹಾ
ಮಧ್ಯಾಹ್ನದ ಊಟ: ಮೋತಿ ಚೂರು ಲಡ್ಡು, ಕಾಳ ಪಲ್ಲೆ, ಚಪಾತಿ, ಅನ್ನ-ಸಾಂಬರ್, ಬಿರಂಜಿ ಅನ್ನ, ಶೇಂಗಾ ಚಟ್ನಿ, ಮೊಸರು,
ರಾತ್ರಿ ಊಟ: ಗೋಧಿ ಹುಗ್ಗಿ, ಚಿತ್ರಾನ್ನ, ಅನ್ನ, ಸಾಂಬರ್, ಉಪ್ಪಿನಕಾಯಿ