ಹುಬ್ಬಳ್ಳಿ: ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳಿಬ್ಬರು ಹಾವೇರಿ ಲೋಕಸಭೆ ಬಿಜೆಪಿ ಟಿಕೆಟ್‌ಗಾಗಿ ಗುದ್ದಾಟ ನಡೆಸಿದ್ದರೆ, ಟಿಕೆಟ್‌ಗಾಗಿ ಕಾದು ಕುಳಿತಿದ್ದ ಬಿಜೆಪಿ ಮರಿ ಹುಲಿಯೊಂದು ಅನಿವಾರ್ಯವಾಗಿ ಕಾಂಗ್ರೆಸ್ ಕೈ ಹಿಡಿದು ಸ್ಪರ್ಧಿಸುವ ಮುನ್ಸೂಚನೆ ಕಾಣುತ್ತಿದೆ.
ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಅಭ್ಯರ್ಥಿಯಾಗಬೇಕು ಎಂದು ತೀವ್ರ ತೆರನಾದ ಪೈಪೋಟಿಗಿಳಿದಿದ್ದಾರೆ. ಆದರೆ, ಇದರಲ್ಲಿ ಯಾರಿಗೆ ಟಿಕೆಟ್ ಎಂಬುದು ಇನ್ನೂ ಗ್ಯಾರಂಟಿ ಆಗಿಲ್ಲ. ಆದರೆ, ಹಾವೇರಿಯಲ್ಲಿ ಕುರುಬರ ಮತ ಹೆಚ್ಚು, ಜೊತೆಗೆ ಬಿಜೆಪಿ ವರ್ಚಸ್ಸಿನಲ್ಲಿ ಗೆಲುವಿನ ದಡ ಸೇರಬಹುದು ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಧಾರಾಳವಾಗಿ ಕಳೆದೆರಡು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಶಿವಮೊಗ್ಗದ ಮರಿ ಹುಲಿ ಇಲ್ಲಿ ಸ್ಪರ್ಧಿಸಬೇಕು ಎಂಬ ಹಠದಿಂದ ’ಕೈ’ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಅವರೇ ಕಟ್ಟಾ ಆರ್‌ಎಸ್‌ಎಸ್ ಹಾಗೂ ಬಿಜೆಪಿಗರಾದ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಐ. ಕಾಂತೇಶ್.
ಧಾರವಾಡ ಕ್ಷೇತ್ರ ಬಿಡುವುದಿಲ್ಲ ಎಂದು ಪ್ರಹ್ಲಾದ ಜೋಶಿ ಮತ್ತೆ ಪಟ್ಟು ಬಿಗಿ ಹಿಡಿದಿದ್ದರಿಂದ ಶೆಟ್ಟರ ಸ್ಪರ್ಧಿಸುವ ಕ್ಷೇತ್ರ ಧಾರವಾಡದಿಂದ ಹಾವೇರಿಗೆ ಶಿಫ್ಟ್ ಆಗುವ ಸಾಧ್ಯತೆ ಹೆಚ್ಚಿದೆ. ಆಗ ಬೊಮ್ಮಾಯಿ ಹಿಂದೆ ಸರಿದು ಶೆಟ್ಟರ ಅವರಿಗೆ ಅವಕಾಶ ನೀಡಲಿದ್ದಾರೆಂಬ ಮಾತು ದಟ್ಟವಾಗಿದೆ.
ಆದರೆ, ಕಟ್ಟಾ ಬಿಜೆಪಿಗರಾದ ಈಶ್ವರಪ್ಪ ಅವರ ಪುತ್ರ ಕೈ ಹಿಡಿಯುವರು ಎಂಬ ಮಾತನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ಮುಖಂಡರು ಹುಬ್ಬೆರಿಸುವಂತೆ ಮಾಡಿದೆ. ಆದರೆ, ಇಂದು ಶಿವರಾತ್ರಿ ಇದ್ದು ಜಾಗರಣೆ ಮುಗಿಯುವುದರ ಒಳಗೆ ಅಭ್ಯರ್ಥಿ ಫೈನಲ್ ಆದರೂ ಅಚ್ಚರಿಯಿಲ್ಲ. ಇಲ್ಲವೇ ಎರಡು ದಿನ ಕಾದು ನೋಡುವ ತಂತ್ರವನ್ನು ಎರಡೂ ಪಕ್ಷಗಳು ಅನುಸರಿಸಿದರೂ ಆಶ್ಚರ್ಯವೂ ಅಲ್ಲ.