ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡ ಕೈ ಕೋಟಾ: ಒಬಿಸಿಗೆ ಫಿಕ್ಸ್?

ಹಾವೇರಿಗೆ ಆನಂದಸ್ವಾಮಿ ಗಡ್ಡದೇವರಮಠ: ಬದಲಾದ ಸಮೀಕರಣ

ಬಿಜೆಪಿಯಲ್ಲೂ ’ಪೇಡೆ’ ಹಂಚಿಕೆ: ತೀವ್ರ ಕುತೂಹಲ

ಹುಬ್ಬಳ್ಳಿ : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ 39ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದ್ದು ರಾಜ್ಯದ ಕ್ಷೇತ್ರಗಳಿಗೆ ಉಮೇದುವಾರರನ್ನು ಪ್ರಕಟಿಸುವ ಮೂಲಕ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗುವಲ್ಲಿ ಯಶಸ್ವಿಯಾಗಿದೆ.
ನೆರೆಯ ಹಾವೇರಿ ಕ್ಷೇತ್ರದಿಂದ ಮಾಜಿ ಶಾಸಕ ಜಿ.ಎಸ್.ಗಡ್ಡದೇವಮಠ ಅವರ ಪುತ್ರ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮಣೆ ಹಾಕಿದ್ದು, ಬೆಂಗಳೂರು ಗ್ರಾಮೀಣದಿಂದ ಡಿ.ಕೆ.ಸುರೇಶ, ಗೀತಾ ಶಿವರಾಜ ಕುಮಾರ( ಶಿವಮೊಗ್ಗ), ಮಾಜಿ ಶಾಸಕ ರಾಜು ಅಲಗೂರ( ವಿಜಯಪುರ) ವೆಂಕಟರಮಣೇಗೌಡ ( ಮಂಡ್ಯ), ಶ್ರೇಯಸ್ ಪಟೇಲ( ಹಾಸನ) ಹಾಗೂ ಮುದ್ದಹನುಮೇಗೌಡ ( ತುಮಕೂರ) ಕೈ ಹುರಿಯಾಳುಗಳಾಗಿ ಕಣಕ್ಕಿಳಿಯಲಿದ್ದಾರೆ.
ಈಗಾಗಲೇ 14 ಕ್ಷೇತ್ರಗಳಿಗೆ ಅಂತಿಮಗೊಳಿಸಲಾಗಿದ್ದರೂ ಬಿಜೆಪಿ ಪಟ್ಟಿ ನೋಡಿ ಬಿಡುಗಡೆ ಮಾಡುವ ತಂತ್ರಗಾರಿಕೆ ಕಾಂಗ್ರೆಸ್‌ನದ್ದಾಗಿದ್ದು ಧಾರವಾಡ ಕ್ಷೇತ್ರಕ್ಕೆ ಕೈ ಹುರಿಯಾಳು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.


ಪಕ್ಕದ ಹಾವೇರಿ ಕ್ಷೇತ್ರದಲ್ಲಿ ಬಹುಸಂಖ್ಯಾತ ಲಿಂಗಾಯತ (ಜಂಗಮ)ರಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಧಾರವಾಡದ ಲೆಕ್ಕಾಚಾರ ತೀವ್ರ ಕುತೂಹಲ ಕೆರಳಿಸಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮಾಜಿ ಸಂಸದ ಡಿ.ಕೆ.ನಾಯ್ಕರ ಪುತ್ರ ಲೋಹಿತ ನಾಯ್ಕರ, ವಿನಯ ಕುಲಕರ್ಣಿ ಪತ್ನಿ ಶಿವಲೀಲಾ, ಅನಿಲಕುಮಾರ ಪಾಟೀಲ, ರಜತ ಉಳ್ಳಾಗಡ್ಡಿಮಠ ಹೆಸರು ಚಾಲ್ತಿಯಲ್ಲಿತ್ತಾದರೂ ನಿನ್ನೆ ಮೊದಲ ಪಟ್ಟಿ ಪ್ರಕಟವಾದ ನಂತರ ಸಾಮಾಜಿಕ ನ್ಯಾಯ ಮತ್ತು ಜಾತಿ ಸಮೀಕರಣ ಬದಲಾಗಿದೆ.


ಧಾರವಾಡ ಕ್ಷೇತ್ರದಲ್ಲಿ ಇತರೇ ಹಿಂದುಳಿದವರಿಗೂ ಅಥವಾ ಬಹುಸಂಖ್ಯಾತರಿಗೊ ಎಂಬುದರ ಮೇಲೆ ಟಿಕೆಟ್ ಭವಿಷ್ಯ ನಿರ್ಧಾರವಾಗಲಿದ್ದು ಅಲ್ಲದೇ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಮೊನ್ನೆ ಅಧಿಕಾರ ಸ್ವೀಕರಿಸಿದ ನವಲಗುಂದ ಮೂಲದ ವಿನೋದ ಅಸೂಟಿ ಹೆಸರು ಮುನ್ನಲೆಗೆ ಬಂದಿದ್ದು. ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ, ಅಲ್ಲದೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ ಕರೆಸಿ ಚರ್ಚೆ ಮಾಡಿದ್ದಾರೆನ್ನಲಾಗಿದೆ. ಮೂರು ದಶಕಗಳ ಹಿಂದೆ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಧಾರವಾಡದಲ್ಲಿ ಪಕ್ಷಕ್ಕೆ ಗೆಲುವು ಮರೀಚಿಕೆಯಾಗಿದ್ದು ಹಾಗಾಗಿ ಈ ಬಾರಿ ಗೆಲ್ಲಲೇ ಬೇಕೆಂಬ ಲೆಕ್ಕಾಚಾರದಲ್ಲಿದ್ದು ಅಲ್ಲದೇ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರೂ ಕಳೆದ ಒಂದು ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರವಾಸ ಕೈಗೊಂಡಿದ್ದಾರೆ.

ವಿನಯ ಕುಲಕರ್ಣಿಯವರಿಗೆ ಜಿಲ್ಲಾ ಪ್ರವೇಶ ಇನ್ನೂ ದೊರೆತಿಲ್ಲವಾದ್ದರಿಂದ ಅವರ ಪತ್ನಿ ಶಿವಲೀಲಾ ಕಣಕ್ಕಿಳಿವ ಸಾಧ್ಯತೆ ಕಡಿಮೆಯಾಗಿದ್ದು ಅಂತಿಮವಾಗಿ ಲೋಹಿತ ನಾಯ್ಕರ, ವಿನೋದ ಅಸೂಟಿ ಹಾಗೂ ಮೋಹನ ಲಿಂಬಿಕಾಯಿ ಮೂವರಲ್ಲೊಬ್ಬರು ಅಂತಿಮಗೊಳ್ಳಬಹುದು ಎನ್ನುವ ಮಾತುಗಳು ನಿನ್ನೆ ರಾತ್ರಿಯಿಂದ ಕೇಳಿ ಬರಲಾರಂಬಿಸಿವೆ.
ವಿನೋದ ಅಸೂಟಿ 2018ರಲ್ಲಿ ಯುವ ಕಾಂಗ್ರೆಸ್ ಕೋಟಾದಲ್ಲಿ ನವಲಗುಂದ ಕೈ ಅಭ್ಯರ್ಥಿಯಾಗಿದ್ದರಲ್ಲದೇ ತ್ರಿಕೋನ ಸ್ಪರ್ಧೆಯಲ್ಲಿ ಉತ್ತಮ ಮತವನ್ನೂ ಪಡೆದಿದ್ದರಲ್ಲದೇ ಕಳೆದ ಚುನಾವಣೆಯಲ್ಲಿ ಎನ್.ಎಚ್. ಕೋನರೆಡ್ಡಿ ಅಭ್ಯರ್ಥಿಯಾದಾಗ ಅವರ ಗೆಲುವಿಗೂ ಶ್ರಮ ಹಾಕಿದ್ದರು. ಅಲ್ಲದೇ ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರೂ ಆಗಿರುವ ಅವರು ಎಲ್ಲ ತಾಲೂಕುಗಳಲ್ಲೂ ತಮ್ಮದೇ ಆದ ಪಡೆ ಹೊಂದಿದ್ದಾರೆ.

ಬಿಜೆಪಿಯಲ್ಲೂ ’ಪೇಡೆ’ ಹಂಚಿಕೆ: ತೀವ್ರ ಕುತೂಹಲ

ಕರ್ನಾಟಕದ ಅಭ್ಯರ್ಥಿಗಳ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸರಣಿ ಸಭೆಗಳನ್ನು ನಡೆಸಿದೆಯಾದರೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲವಾಗಿದ್ದು ಧಾರವಾಡ ಕ್ಷೇತ್ರದ ಹಂಚಿಕೆಯೂ ದೊಡ್ಡ ಸವಾಲಾಗಿ ಪರಿಣಮಿಸಿದೆ.


ಪ್ರತಿ ಬಾರಿಯೂ ಅಂತರ ಹೆಚ್ಚಿಸಿಕೊಳ್ಳುತ್ತ ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಪ್ರಸಕ್ತ ಮೋದಿ ಸಂಪುಟದ ಪ್ರಭಾವಿ ಸಚಿವರಲ್ಲಿ ಒಬ್ಬರಾಗಿರುವ ಪ್ರಹ್ಲಾದ ಜೋಶಿಯವರಿಗೆ ನಿಶ್ಚಿತ ಎನ್ನಲಾಗುತ್ತಿದ್ದರೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೋಶಿ ಹೆಸರಿನೊಂದಿಗೆ ಶಾರ್ಟ ಲೀಸ್ಟಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೆಸರು ಸೇರಿಸಿರುವುದಲ್ಲದೇ ಬ್ಯಾಟಿಂಗ್‌ಗೆ ಸಹ ಇಳಿದಿರುವುದು ಗೊಂದಲಕ್ಕೆ ಕಾರಣವಾಗಿದೆ. ನಿನ್ನೆ ನಗರದಲ್ಲಿ ನಡೆದ ಶಿವರಾತ್ರಿ ಸಂಭ್ರಮದಲ್ಲಿ ಪಾಲ್ಗೊಂಡ ಜೋಶಿಯವರು ಮಾಧ್ಯಮದವರಿಗೆ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುವರು. ಅಲ್ಲದೇ ಕೇವಲ ಊಹಾಪೋಹಗಳಿಗೆ ಉತ್ತರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇಂದು ನಾಳೆಯೊಳಗೆ ಬಿಜೆಪಿ ಇನ್ನೊಂದು ಪಟ್ಟಿ ಹೊರ ಬೀಳುವ ಸಾಧ್ಯತೆಗಳಿದ್ದು ಅದರಲ್ಲಿ ಅಂತಿಮಗೊಳ್ಳುವುದೋ ಕಾದು ನೋಡಬೇಕಿದೆ.

administrator

Related Articles

Leave a Reply

Your email address will not be published. Required fields are marked *