ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಶಂಕೆ
ಹುಬ್ಬಳ್ಳಿ: ರೇಲ್ವೆ ಮಂಡಳಿಯ ಭೂ ಹರಾಜು ವಿಷಯದಲ್ಲಿ ಭಾರೀ ಸುದ್ದಿಯಾಗಿದ್ದ ಇಲ್ಲಿನ ಕಾರವಾರ ರಸ್ತೆ ಎಂಟಿಎಸ್ ಕಾಲೋನಿಯ ಖಾಲಿ ಜಾಗದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಮೃತನನ್ನು ಹಳೇಹುಬ್ಬಳ್ಳಿ ಹೆಗ್ಗೇರಿ ಮಾರುತಿ ನಗರದ ವಿಜಯ ಸುರೇಶ ಬಸವಾ (26) ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ ಮಂಗಳವಾರ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದಿದ್ದ.
ನಂತರ ಹೊರಗೆ ಹೋಗಿದ್ದ. ತಡರಾತ್ರಿಯಾದರೂ ವಾಪಸ್ಸು ಬಂದಿರಲಿಲ್ಲ. ಬುಧವಾರ ಬೆಳಗ್ಗೆ ಆತನ ಶವ ಅರೆಬೆಂದ ಸ್ಥಿತಿಯಲ್ಲಿ ಎಂಟಿಎಸ್ ಕಾಲೋನಿ ಪಾಳುಬಿದ್ದ ಜಾಗದಲ್ಲಿ ದೊರೆತಿದೆ. ಯಾರೋ ಆತನನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿರಬಹುದೆಂದು ಆತನ ಸಹೋದರ ವಿಶಾಲ ಬಸವಾ ಹೇಳುತ್ತಾರೆ.
ಯುವಕನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಸುಡುವ ಯತ್ನ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಘಟನೆ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ನೂರಾರು ಜನತೆ ಜಮಾಯಿಸಿದ್ದರು. ಪ್ರಾಥಮಿಕ ತನಿಖೆಯಿಂದ ಇದು ಕೊಲೆಯೋ? ಆತ್ಮಹತ್ಯೆಯೋ ತಿಳಿದುಬಂದಿಲ್ಲ.
ಮರಣೋತ್ತರ ಪರೀಕ್ಷೆ ಮತ್ತು ತನಿಖೆ ನಂತರವೇ ನಿಜಾಂಶ ತಿಳಿಯಲಿದೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಆಯುಕ್ತೆ ರೇಣುಕಾ ಸುಕುಮಾರ, ಡಿಸಿಪಿ ರಾಜೀವ ಎಂ, ದಕ್ಷಿಣ ಎಸಿಪಿ ವಿಜಯಕುಮಾರ ತಳವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರು ಮೃತನ ಕುಟುಂಬಸ್ಥರು, ಸ್ನೇಹಿತರು, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.