ಧಾರವಾಡ: ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಮೂರು ಕ್ಷೇತ್ರಗಳಲ್ಲಿ ಬಾಕಿ ಉಳಿದಿದ್ದು, ಯಾರ ಆಯ್ಕೆ ಎಂಬುದು ಕಗ್ಗಂಟಾಗಿದೆ.
ಅದರಲ್ಲೂ ಉತ್ಸಾಹಿ ಯುವ ಸಂಸದ ಎಂಬ ಹೆಸರು ಹೊಂದಿದ್ದ ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗಿದ್ದು ಆ ಜಾಗಕ್ಕೆ ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಾಜಸ್ಥಾನದ ರಾಜ ಮನೆತನದ ಹಿರಿಯರು, ಮಾಜಿ ಸಂಸದ, ಮೈಸೂರು ಅರಸರ ವಂಶದ ಕುಡಿಗೆ ಮಗಳನ್ನು ಧಾರೆ ಎರೆದು ಕೊಟ್ಟ ಹರ್ಷವರ್ಧನ್ ಡುಂಗರಪುರ ಅವರ ರಾಜಕೀಯ ಒತ್ತಡಕ್ಕೆ ಮಣಿದ ಬಿಜೆಪಿ ವರಿಷ್ಠರು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ ಅವರಿಗೆ ಟಿಕೆಟ್ ನೀಡಲು ಅಂತಿಮಗೊಳಿಸಿದ್ದರು.
ಆದರೆ, ಮೈಸೂರು ಅರಮನೆಯ ರಾಜಮಾತೆ ಪ್ರಮೋದಾದೇವಿ ಒಡೆಯರ್ ದತ್ತು ಪುತ್ರನ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನ್ನು ಈವರೆಗೂ ನೀಡದ್ದಕ್ಕೆ ಬಿಜೆಪಿ ನಾಯಕರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.
ಇನ್ನೊಂದು ಸರ್ವೇ ಪ್ರಕಾರ ಅಯೋಧ್ಯೆ ಬಾಲರಾಮನ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಗೆ ಟಿಕೆಟ್ ನೀಡಲು ’ಪ್ಲ್ಯಾನ್ ಬಿ’ ಹಾಕಿಕೊಂಡಿರುವ ವರಿಷ್ಠರು ಬುಧವಾರ ಸಂಜೆಯ ವೇಳೆಗೆ ಅಂತಿಮಗೊಳಿಸುವರು ಎನ್ನಲಾಗುತ್ತಿದೆ. ಯದುವೀರ ಹಾಗೂ ಅರುಣ್ ಅವರೊಂದಿಗೆ ನೇರವಾಗಿ ಚರ್ಚಿಸಿ ಟಿಕೆಟ್ ಫೈನಲ್ ಮಾಡಲೆಂದು ಬುಧವಾರ ಸಂಜೆಯೊಳಗೆ ದೆಹಲಿಗೆ ಬರಲು ಬುಲಾವ್ ಬಂದಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಶತಾಯ ಗತಾಯ ಗೆಲ್ಲಸಲೇಬೇಕು ಎಂಬ ಹಠ ತೊಟ್ಟಂತಿರುವ ನಾಯಕರು ಗೆಲ್ಲುವ ಕುದುರೆಗಾಗಿ ಗಾಳ ಹಾಕಿದ್ದಾರೆಂಬುದರಲ್ಲಿ ಸಂಶಯವಿಲ್ಲ. ಆದರೂ ಇಂದು ಸಂಜೆಯೊಳಗೆ ಯಾವ ಅಚ್ಚರಿ ಕಾದಿದೆಯೋ ಕಾದು ನೋಡೋಣ.