ಹುಬ್ಬಳ್ಳಿ-ಧಾರವಾಡ ಸುದ್ದಿ
ಸಂಕ್ರಾಂತಿಯೊಳಗೆ ಉಭಯ ಬಿಜೆಪಿ ಅಧ್ಯಕ್ಷರ ನೇಮಕ ಖಚಿತ

ಸಂಕ್ರಾಂತಿಯೊಳಗೆ ಉಭಯ ಬಿಜೆಪಿ ಅಧ್ಯಕ್ಷರ ನೇಮಕ ಖಚಿತ

ಲೋಕ ಚುನಾವಣೆ ಹಿನ್ನೆಲೆ : ಬಹುಸಂಖ್ಯಾತ, ಒಬಿಸಿಗೆ ಮಣೆ ಸಾಧ್ಯತೆ

ಕೇಂದ್ರ ಸಚಿವ ಜೋಶಿಯವರ ಅಭಿಮತವೇ ‘ಫೈನಲ್’

ಹುಬ್ಬಳ್ಳಿ : ರಾಜ್ಯ ಬಿಜೆಪಿಯ ನೂತನ ಸಾರಥಿ ಬಿ.ವೈ.ವಿಜಯೇಂದ್ರ ನೇತೃತ್ವದ ರಾಜ್ಯ ಘಟಕ ಜಿಲ್ಲಾ ಘಟಕಗಳನ್ನು ಪುನರ್ರಚಿಸಲು ಮುಂದಾಗಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ವ್ಯಾಪಕ ಪೈಪೋಟಿಯಿದ್ದು ಈಗಾಗಲೇ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದು ದಿ. ೧೩ರಂದು ಅಥವಾ ಮಕರ ಸಂಕ್ರಾಂತಿಯೊಳಗೆ ನೇಮಕ ನಿಶ್ಚಿತ ಎಂದು ಅಧಿಕೃತ ಮೂಲಗಳು ಹೇಳಿವೆ.
ಮಹಾನಗರ ವೀಕ್ಷಕರಾಗಿ ಬಹುಕಾಲದಿಂದ ಸಂಘಟನೆಯಲ್ಲಿರುವ ಫಣೀಶ,ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಗ್ರಾಮೀಣ ವೀಕ್ಷಕರಾಗಿ ಉಡುಪಿ ಶಾಸಕ ಯಶಪಾಲ ಸುವರ್ಣ ಆಗಮಿಸಿ ಆಕಾಂಕ್ಷಿಗಳ ಅಭಿಪ್ರಾಯ ಆಲಿಸಿದ್ದಾರಲ್ಲದೇ ಶಾಸಕರು, ಪ್ರಮುಖರ ಅಹವಾಲು ಗಣನೆಗೆ ತೆಗೆದುಕೊಂಡಿದ್ದು ಹು.ಧಾ.ಮಹಾನಗರ ಅಧ್ಯಕ್ಷ ಪಟ್ಟ ಬಹುಸಂಖ್ಯಾತ ಸಮುದಾಯಕ್ಕೆ ಧಕ್ಕಿದರೆ, ಗ್ರಾಮೀಣ ಇತರೆ ಹಿಂದುಳಿದ ವರ್ಗಕ್ಕೆ ಧಕ್ಕಲಿದ್ದು, ಗ್ರಾಮೀಣ ಒಬಿಸಿ ಪಾಲಾದರೆ ಹು.ಧಾ. ಅವಳಿನಗರ ಲಿಂಗಾಯತರಿಗೆ ನಿಕ್ಕಿ ಎನ್ನುವಂತಹ ಮಾತು ಕೇಳಿ ಬಂದಿದ್ದು ಮುಂಬರುವ ಅತಿ ಮಹತ್ವದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೇ ಮತ್ತೆ ಕಣಕ್ಕಿಳಿಯುವದರಿಂದ ಅವರ ಅಭಿಪ್ರಾಯಕ್ಕೆ ವರಿಷ್ಠರು ಅಂತಿಮ ಹಾಕುವುದು ನಿಶ್ಚಿತವಾಗಿದೆ.


ಈಗಾಗಲೇ ಮಹಾನಗರ ಅಧ್ಯಕ್ಷ ಸ್ಥಾನಕ್ಕೆ 15 ಆಕಾಂಕ್ಷಿಗಳಿದ್ದರೆ, ಗ್ರಾಮೀಣಕ್ಕೆ ಅದರ ಡಬಲ್ 31 ಅರ್ಜಿಗಳು ಬಂದಿದ್ದು ಲೋಕಸಭಾ ಚುನಾವಣೆ ನಿರ್ಣಾಯಕ ಘಟ್ಟದಲ್ಲಿ ಹೊಣೆಗಾರಿಕೆ ನಿಭಾಯಿಸಲು ವ್ಯಾಪಕ ಪೈಪೋಟಿಯಿದೆ.
ಮಹಾನಗರ ಅಧ್ಯಕ್ಷ ಸ್ಥಾನಕ್ಕೆ ಕೇವಲ 17 ತಿಂಗಳ ಹಿಂದಷ್ಟೆ ಅಧ್ಯಕ್ಷರಾಗಿರುವ ಸಂಜಯ ಕಪಟಕರ,ಹಾಲಿ ಮಹಾನಗರ ಪ್ರಧಾನ ಕಾರ್ಯದರ್ಶಿ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಮಾಜಿ ಮಹಾಪೌರ ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ವಿರೇಶ ಸಂಗಳದ, ಮಹಾನಗರ ವಕ್ತಾರ ರವಿ ನಾಯಕ, ಸತೀಶ ಶೇಜವಾಡಕರ, ಶಿವು ಮೆಣಸಿನಕಾಯಿ, ಪ್ರಶಾಂತ ಜಾಧವ, ಕಿರಣ ಉಪ್ಪಾರ ಸೇರಿದಂತೆ 15 ಜನರು ಅರ್ಜಿ ಸಲ್ಲಿಸಿದ್ದರೂ ೮ ಜನ ಮಾತ್ರ ವೀಕ್ಷಕರೆದುರು ಸಂದರ್ಶನ ನೀಡಿದ್ದಾರೆನ್ನಲಾಗಿದೆ. ಲೋಕ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲದೇ ಇಲ್ಲಿನ ಮತಗಳೇ ನಿರ್ಣಾಯಕವಾಗಿರುವುದರಿಂದ ಸಂಘಟನೆಯ ಆಳ ಅಗಲ ಬಲ್ಲವರಿಗೆ ಮಣೆ ಹಾಕುವ ಸಾಧ್ಯತೆಗಳು ದಟ್ಟವಾಗಿವೆ.


ಗ್ರಾಮೀಣ ಅಧ್ಯಕ್ಷ ಸ್ಥಾನಕ್ಕೂ ಹಿಂದೆಂದೂ ಇರದ ಪೈಪೋಟಿಯಿದ್ದು ಇಲ್ಲಿ ಸಹ 31 ಜನ ಅರ್ಜಿ ಹಾಕಿದ್ದು, ಹಾಲಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಹಾಲಿ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಗುಂಡಗೋವಿ, ಮಾಲತೇಶ ಶ್ಯಾಗೋಟಿ, ನಿಂಗಪ್ಪ ಸುತಗಟ್ಟಿ ಮೂವರೂ ತೀವ್ರ ಯತ್ನ ನಡೆಸಿದ್ದಾರೆ. ನಾಗರಾಜ ಗಾಣಿಗೇರ, ಶಂಕರ ಕೊಮಾರ ದೇಸಾಯಿ, ಶಿವು ಬೆಳಾರದ, ಮಾಜಿ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ,ಮಾಜಿ ಜಿ.ಪಂ ಅಧ್ಯಕ್ಷ ಅಡಿವೆಪ್ಪ ಮನಮಿ, ಮಾಜಿ ಹುಬ್ಬಳ್ಳಿ ತಾಲೂಕಾ ಅಧ್ಯಕ್ಷ ರಾಜು ಕಂಪ್ಲಿ, ಅಳ್ನಾವರದ ಶಿವಾಜಿ ಡೊಳ್ಳಿನ , ಕರಿಯಪ್ಪ ಕುರ್ಲಗೇರಿ, ಜಿಲ್ಲಾ ಯುವ ಮೋರ್ಚಾ ಮಾಜಿ ಉಪಾಧ್ಯಕ್ಷ ಪರಮೇಶ್ವರ ಉಳವಣ್ಣವರ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮುಂತಾದವರು ಅವಕಾಶ ಕೋರಿದ್ದಾರೆ.

ಈಗಾಗಲೇ ಇಬ್ಬರೂ ವೀಕ್ಷಕರು ಹುಬ್ಬಳ್ಳಿ ಧಾರವಾಡದ ಅಲ್ಲದೇ ಗ್ರಾಮೀಣದ ವಿವರ ಪಕ್ಷದ ಪ್ರಮುಖರಿಗೆ ನೀಡಿದ್ದು ಇಷ್ಟರಲ್ಲೇ ಕೇಂದ್ರ ಸಚಿವ ಜೋಶಿಯವರ ಇಶಾರೆಯೊಂದಿಗೆ ಪ್ರಕಟವಾಗುವುದು ನಿಶ್ಚಿತವಾಗಿದೆ. ಅಲ್ಲದೇ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಪ್ರದೀಪ ಶೆಟ್ಟರ್ ಮತ್ತು ಮಾಜಿ ಶಾಸಕರ ಅಭಿಪ್ರಾಯವೂ ಅಲ್ಪ ಮಟ್ಟಿಗೆ ಗಣನೆಗೆ ಬರಬಹುದಾಗಿದೆ.

ವೀಕ್ಷಕರು ಈಗಾಗಲೇ ಅಭಿಪ್ರಾಯ ಪಡೆದಿದ್ದು ಸಂಕ್ರಾಂತಿಯೊಳಗೆ ಉಭಯ ಜಿಲ್ಲಾ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಗಳಿವೆ. ಎರಡೂ ಕಡೆಗಳಲ್ಲಿ ತೀವ್ರ ಪೈಪೋಟಿಯಿದ್ದರೂ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪೂರಕ ಅಂಶ ಲಕ್ಷ್ಯದಲ್ಲಿಟ್ಟು ನಿಯುಕ್ತಿಗೊಳಿಸಲಿದ್ದಾರೆ.

ಎಂ.ಆರ್.ಪಾಟೀಲ
ಶಾಸಕರು ,ಕುಂದಗೋಳ ಕ್ಷೇತ್ರ

 

 

administrator

Related Articles

Leave a Reply

Your email address will not be published. Required fields are marked *