ಲಿಂಬಿಕಾಯಿ ಪಕ್ಷೇತರರಾಗಿ ಕಣಕ್ಕಿಳಿಯು ವಿಚಾರ ಗೊತ್ತಿಲ್ಲ
ಧಾರವಾಡ: ವಿಧಾನ ಪರಿಷತ್ನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಅವರ ಹೆಸರು ಫೈನಲ್ ಆಗಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಇಲ್ಲಿನ ಉಳವಿ ಚೆನ್ನಬಸವೇಶ್ವರ ವೃತ್ತದಲ್ಲಿನ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವಿಷಯದಲ್ಲಿ ಹೊರಟ್ಟಿ ಅವರಿಗೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ.ಈ ಕುರಿತು ಪಕ್ಷವು ಅಧಿಕೃತವಾಗಿ ಘೋಷಿಸಲಿದೆ. ಟಿಕೆಟ್ ಹೊರಟ್ಟಿ ಅವರಿಗೇ ಫೈನಲ್ ಆಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಬಿಜೆಪಿ ಟಿಕೆಟ್ಗೆ ಮೋಹನ ಲಿಂಬಿಕಾಯಿ ಮೊದನಿಂದಲೂ ಪ್ರಯತ್ನಿಸುತ್ತಿದ್ದಾರೆ. ಆದರೆ ಹೊರಟ್ಟಿ ಪಕ್ಷದ ಅಭ್ಯರ್ಥಿ ಆಗುವುದು ನಿಶ್ಚಿತ. ಟಿಕೆಟ್ ಫೈನಲ್ ಆಗುವುದಕ್ಕಿಂತ ಮುಂಚೆ ಬಿಜೆಪಿ ಕಚೇರಿ ಉದ್ಘಾಟಿಸಿದ ಬಗ್ಗೆ ಪ್ರತಿಕ್ರಿಯಿಸಿದ ಬೆಲ್ಲದ ಅವರು, ಚುನಾವಣೆ ಕೆಲಸ ಬಹಳ ಇರುತ್ತದೆ. ಹೀಗಾಗಿ ಕಚೇರಿ ಆರಂಭಿಸಲಾಗಿದೆ. ಹೊರಟ್ಟಿ ಅವರು ನಿನ್ನೆ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ. ಟಿಕೆಟ್ ಸಿಗುವ ಭರವಸೆಯ ಅವರಿಗಿದೆ. ಕಾರಣ ತಯಾರಿ ನಡೆಸಿದ್ದಾರೆ. ಮೋಹನ ಲಿಂಬಿಕಾಯಿ ಪಕ್ಷೇತರರಾಗಿ ಕಣಕ್ಕಿಳಿಯು ವಿಚಾರ ತಮಗೆ ಗೊತ್ತಿಲ್ಲ. ಈ ಬಗ್ಗೆ ಅವರಿಗೆ ಕೇಳಬೇಕು ಎಂದು ಉತ್ತರಿಸಿದರು.
ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಕವಿವಿ ಸಿಂಡಿಕೇಟ್ ಸದಸ್ಯ ಡಾ.ಕಲ್ಮೇಶ ಹಾವೇರಿಪೇಟ, ಜಿ.ಆರ್.ಭಟ್, ಶ್ಯಾಮ ಮಲ್ಲನಗೌಡರ, ಮೋಹನ ರಾಮದುರ್ಗ, ಸಿದ್ದುಕಲ್ಯಾಣಶೆಟ್ಟಿ, ನಾಗರಾಜ ನಾಯಕ ಇನ್ನಿತರರಿದ್ದರು.