ಹುಬ್ಬಳ್ಳಿ : ಒಂದೆಡೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ದಿನಗಣನೆ ಆರಂಭವಾಗಿದ್ದು ತರಾತುರಿಯಲ್ಲಿ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದ್ದು ಹೀಗಿರುವಾಗಲೇ ಪರಿಶಿಷ್ಟ ಜಾತಿಗೆ ನೀಡಲಾದ ಮೀಸಲಾತಿಯಲ್ಲಿ ನ್ಯೂನ್ಯತೆ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟ ಪೀಠ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಇಂದು ನೋಟಿಸ್ ಜಾರಿ ಮಾಡಿದೆ.
ಮೀಸಲಾತಿಯಲ್ಲಿ ಎಸ್ ಸಿಗೆ ಶೇ.೧೫ ಹಾಗೂ ಎಸ್ ಟಿ ಶೇ.೩ ಮೀಸಲಾತಿ ದೊರೆಯಬೇಕಿದ್ದು ಎಸ್ ಟಿಗೆ ಮೂರು ಸ್ಥಾನ ದೊರೆತಿದ್ದು, ಎಸ್ ಸಿ ಕೇವಲ ೮ ಸ್ಥಾನ ದೊರೆತಿದೆ.ಇದು ಶೇ.೧೫ರಷ್ಟು ಮೀಸಲು ಪ್ರಕಾರ ಕನಿಷ್ಠ ೧೧ ಸ್ಥಾನಗಳಾದರೂ ದೊರೆಯಬೇಕೆಂದು ಹೈಕೋರ್ಟ ಪೀಠದಲ್ಲಿ ಬಸವ ಜನಶಕ್ತಿಯ ಬಸವರಾಜ ತೇರದಾಳ ರಿಟ್ ಅರ್ಜಿ ದಾಖಲಿಸಿದ್ದರು.
ಈ ಬಗ್ಗೆ (ಡಬ್ಲು ಪಿ ನಂ ೧೦೨೩೦೮/೨೦೨೧)
ವಿಚಾರಣೆ ನಡೆಸಿದ ಪೀಠದ ನ್ಯಾಯಾಧೀಶರಾದ ಎಚ್.ಜಿ.ನರೇಂದ್ರಪ್ರಸಾದ ಅವರು ಚುನಾವಣಾ ಆಯೋಗ,ರಾಜ್ಯ ಸರ್ಕಾರದ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಸರಕಾರ ಹೊರಡಿಸಿರುವ ೮೨ ವಾರ್ಡ್ಗಳ ಮೀಸಲು ಪಟ್ಟಿಯಲ್ಲಿ ಮಹಿಳೆಯರಿಗೆ ಶೆ. ೪೯% ಸೀಟುಗಳನ್ನು ಕಲ್ಪಿಸಿದೆ. ಉಳಿದಂತೆ ೪೪ ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದು, ಇದರಲ್ಲಿ ೨೧ ವಾರ್ಡ್ಗಳನ್ನು ಮಹಿಳೆಯರಿಗೆ ಕೊಡಲಾಗಿದೆ. ಹಾಗೆಯೇ ಹಿಂದುಳಿದ ವರ್ಗದ ಸಮುದಾಯಕ್ಕೆ ಒಟ್ಟು ೨೨ ವಾರ್ಡ್ಗಳನ್ನು ಮೀಸಲಿಡಲಾಗಿದ್ದು, ಅದರಲ್ಲಿ ಮಹಿಳೆಯಿರಗೆ ೧೧ ವಾರ್ಡ್ಗಳಲ್ಲಿ ಪ್ರತಿನಿಧಿಸಲು ಅವಕಾಶ ಸಿಕ್ಕಿದೆ. ಹಿಂದುಳಿದ ಬ ವರ್ಗದವರಿಗೆ ೫, ಪರಿಶಿಷ್ಟ ಜಾತಿ ಸಮುದಾಯಕ್ಕೆ ೮ ಹಾಗೂ ಪರಿಶಿಷ್ಟ ಪಂಗಡದವರಿಗೆ ೩ ವಾರ್ಡ್ಗಳನ್ನು ಮೀಸಲಿರಿಸಲಾಗಿದ್ದು ಎಸ್ ಸಿಗೆ ಕನಿಷ್ಠ ೧೧ ಸ್ಥಾನಗಳನ್ನಾದರೂ ದೊರೆಯಬೇಕೆಂಬ ಹಿನ್ನೆಲೆಯಲ್ಲಿ ತಾವು ರಿಟ್ ಅರ್ಜಿ ಸಲ್ಲಿಸಿದ್ದಾಗಿ ಬಸವರಾಜ ತೇರದಾಳ ತಿಳಿಸಿದರು.
ವಾದಿ ತೇರದಾಳ ಪರ ಅವಿನಾಶ ಬಣಕಾರ ವಕೀಲರಾಗಿದ್ದಾರೆ.
ದಿ.೯ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಬೇಕಿದ್ದು ರಿಟ್ ಅರ್ಜಿ ಹಿನ್ನೆಲೆಯಲ್ಲಿ ಈಗ ಮೀಸಲಾತಿ ಕುರಿತು ಸರ್ಕಾರಕ್ಕೆ ಮತ್ತು ಆಯೋಗಕ್ಕೆ ನೋಟಿಸ್ ಜಾರಿಯಾಗಿರುವುದರಿಂದ ಮತ್ತೆ ಏನಾಗಲಿದೆ ಎಂಬ ಪ್ರಶ್ನೆ ಮೂಡುವಂತಾಗಿದೆ.