ಹುಬ್ಬಳ್ಳಿ-ಧಾರವಾಡ ಸುದ್ದಿ

ನೊಂದವರಿಗಾಗಿ ಮಿಡಿವ ನರೇಂದ್ರ ಕುಲಕರ್ಣಿ

ಹುಬ್ಬಳ್ಳಿ: ’ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ತತ್ವವನ್ನು ನೆನಪಿಸಿಕೊಂಡರೆ ಇಂದಿನ ದಿನಗಳಲ್ಲಿ ಈ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವವರು ಬಹಳ ಕಡಿಮೆ. ಆದರೆ ನವನಗರದ ಬಿಜೆಪಿ ಮುಖಂಡ ನರೇಂದ್ರ ಕುಲಕರ್ಣಿ ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಮಹಾಮಾರಿಯ ಸಂಕಷ್ಟ ಜನಸೇವೆಗೆ ತಮಗೆ ಲಭಿಸಿದ ಸದವಕಾಶ ಎಂದೇ ಭಾವಿಸಿ ಎರಡೂ ಅಲೆಯ ಲಾಕ್‌ಡೌನ್ ಸಂಕಷ್ಟ ಸಂದರ್ಭದಲ್ಲಿ ಕೊರೊನಾದಿಂದ ತೊಂದರೆಗೀಡಾದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಅಕ್ಷರಶಃ ಆಪತ್ಬಾಂಧವರಾಗಿದ್ದಾರೆ.

ನವನಗರ ಪ್ರದೇಶದಲ್ಲಿ ಎನ್.ಎಚ್. ಎಂದೇ ಖ್ಯಾತರಾದ ನರೇಂದ್ರ ಕುಲಕರ್ಣಿ ಪ್ರಚಾರ, ಪ್ರಸಿದ್ಧಿ ಬಯಸದೇ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ. ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ನೀಡುತ್ತಿರುವುದು ಉದ್ಯಮಿ ನರೇಂದ್ರ ಕುಲಕರ್ಣಿ ಅವರ ಹೆಗ್ಗಳಿಕೆ. ಕೇವಲ ಆಹಾರ ಸಾಮಗ್ರಿ ಕಿಟ್ ವಿತರಣೆಗೆ ಸೀಮಿತವಾಗಿರದೇ ಅವರು ನವನಗರ ನಿವಾಸಿಗಳ ಬಯಕೆಯಂತೆ ಸೋಂಕು ನಿವಾರಣೆ ದ್ರಾವಣ ಸಿಂಪರಣೆ ಮಾಡಿಸಿದ್ದಾರೆ.

ಎನ್.ಎಚ್. ಅವರ ಸೇವೆ ಇಷ್ಟಕ್ಕೆ ಸೀಮಿತವಾಗಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸಲು, ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕಾರ ನೀಡುತ್ತ ಬಂದಿದ್ದಾರೆ. ನವನಗರದ ಪೊಲೀಸ್ ಠಾಣೆಯ ಪೊಲೀಸ್ ಎಲ್ಲ ಸಿಬ್ಬಂದಿಗೆ ಡಾ. ವಿಶ್ವಾಸ ಕುಲಕರ್ಣಿ ಅವರ ಸಹಕಾರದೊಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಕಿಟ್ ಹಂಚಿದ್ದಾರೆ.
ಕೊರೊನಾ ಸಂದರ್ಭದಲ್ಲಿಯೂ ಪ್ರತಿ ದಿನ ನಗರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರನ್ನು ಸನ್ಮಾನ ಮಾಡಿ ಉಡುಗೆ ನೀಡಿದ್ದಾರೆ. ಪೌರ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ಒದಗಿಸಿದ್ದಾರೆ. ಜಾತಿ ಭೇದ ಮಾಡದೇ ಸಂಕಷ್ಟದಲ್ಲಿದ್ದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಹಲವು ಶಾಲೆಗಳ ಶಿಕ್ಷಕರು ಸಂಬಳವಿಲ್ಲದೇ ತೊಂದರೆಯಲ್ಲಿರುವುದನ್ನು ಮನಗಂಡ ಇವರು ಕೂಡಲೇ ಅವರಿಗೆ ಆಹಾರಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದರು.

ಲಾಕ್‌ಡೌನ್ ಸಂದರ್ಭದಲ್ಲಿ ನವನಗರದ ಹೊರವಲಯದಲ್ಲಿ ಟೆಂಟ್‌ನಲ್ಲಿ ವಾಸವಿದ್ದ ಗೊಂಬೆ ಮಾರುವ ಅಲೆಮಾರಿ ಕುಟುಂಬದವರು ಊಟಕ್ಕೆ ಪರದಾಡುತ್ತಿದ್ದರು. ವಿಷಯ ತಿಳಿದ ಕೂಡಲೇ ಅಲ್ಲಿಗೆ ತೆರಳಿ ಅವರಿಗೆ ತಿಂಗಳಿಗಾಗುವಷ್ಟು ರೇಷನ್ ಕಿಟ್ ನೀಡಿದರು. ಮಹಾರಾಷ್ಟ್ರದ ಪಂಢರಪುರಕ್ಕೆ ದಿಂಡಿ ಹೊರಟ ೩೦ ಕುಟುಂಬದವರು ಮುಂದೆ ಸಾಗಲಾಗದೇ ಊರಿಗೂ ಮರಳಲಾಗದೇ ಬುಡರಶಿಂಗಿಯಲ್ಲಿ ತೊಂದರೆಯಲ್ಲಿದ್ದರು. ಆಗ ನರೇಂದ್ರ ಕುಲಕರ್ಣಿ ಅವರು ಅವರಿದ್ದಲ್ಲಿ ಹೋಗಿ ಅವರಿಗೆ ಹಲವು ದಿನಗಳವರೆಗೆ ಊಟದ ವ್ಯವಸ್ಥೆಗೆ ದವಸ ಧಾನ್ಯಗಳ ಹಿಟ್ಟು ಮತ್ತು ಉಡುಪುಗಳನ್ನು ನೀಡಿದ್ದು ಅವರ ಮಾನವೀಯತೆಯ ಮುಖಕ್ಕೆ ಹಿಡಿದ ಕೈಗನ್ನಡಿ.
ತಮ್ಮ ಉದ್ಯಮ, ವ್ಯವಹಾರದೊಂದಿಗೆ ಸಮಾಜದ ತೊಂದರೆಗೀಡಾದ ಜನರಿಗೆ ಮಿಡಿಯುತ್ತ ಎಲೆಮರೆಯ ಕಾಯಿಯಂತೆ ಕಾರ್ಯ ಮಾಡುತ್ತಿರುವ ನರೇಂದ್ರ ಕುಲಕರ್ಣಿ ಅಕ್ಷರಶಃ ನವನಗರದ ಜನತೆಯ ಮನೆ,ಮನ ಎರಡನ್ನೂ ಗೆದ್ದಿದ್ದಾರೆ.
ಸೇವೆಯನ್ನು ಜನ್ಮದಾರಭ್ಯ ತನ್ನ ಉಸಿರಿನಲ್ಲಿ ಬೆರೆಸಿಕೊಂಡಾತ ಕುಲಕರ್ಣಿಯವರ ಎಲ್ಲ ಕೆಲಸಗಳಿಗೆ ಪತ್ನಿ ಸರಕಾರಿ ಶಾಲಾ ಶಿಕ್ಷಕಿ ಶ್ರೀಮತಿ ನಯನಾ, ಮಗ ಚೈತನ್ಯ, ಪುತ್ರಿ ಚೈತ್ರಾ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ತಮ್ಮ ಸಮಾಜ ಸೇವೆಗೆ ತಂದೆ ದಿ.ಹನುಮಂತರಾವ ಕುಲಕರ್ಣಿಯವರೇ ಸ್ಪೂರ್ತಿ ಎಂದು ಹೇಳುವುದನ್ನು ಮರೆಯುವುದಿಲ್ಲ.

ಬಿಐಎಸ್ ತರಲು ಪರಿಶ್ರಮ
ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪೂರೈಸಿ ವೃತ್ತಿಯಿಂದ ಕಳೆದ ೨೫ ವರುಷಗಳಿಂದ ಹುಬ್ಬಳ್ಳಿಯ ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಮತ್ತು ರೀಸರ್ಚ ಸೆಂಟರ್ (ಎನ್.ಎ.ಬಿ.ಎಲ್ ಪ್ರಮಾಣೀಕೃತ) ನಲ್ಲಿ ಸಂಸ್ಥಾಪಕ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ನರೇಂದ್ರ ಕುಲಕರ್ಣಿಯವರ ಪ್ರವೃತ್ತಿಯ ಪ್ರಪಂಚಕ್ಕೆ ಪರಿಮಿತಿಯೆಂಬುದಿಲ್ಲ. ಶಂಕರ ಎಲೆಕ್ಟೋ ಪ್ಲೇಟಿಂಗ್ (ಐಎಸ್‌ಓ ಪ್ರಮಾಣೀಕೃತ) ಎಂಬ ಉದ್ದಿಮೆಯೊಂದನ್ನು ನಡೆಸುತ್ತ ಸುಮಾರು ೨೫ ಕಾರ್ಮಿಕರಿಗೆ ಉದ್ಯೋಗ ನೀಡಿದ್ದಾರೆ. ಜರ್ಮನಿ ಮತ್ತಿತರ ಹೊರ ದೇಶಗಳಿಗೆ ಭೇಟಿ ನೀಡಿ ಅವಶ್ಯಕ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ. ಹುಬ್ಬಳ್ಳಿಯಲ್ಲಿಯೇ ಐಎಸ್‌ಐ ಮುದ್ರೆಯೊತ್ತಲು ಬಿಐಎಸ್ ಕಚೇರಿ ಸ್ಥಾಪನೆಯ ಹಿಂದೆ ಇವರ ಕಠಿಣ ಪರಿಶ್ರಮವಿದೆ. ಹೀಗಾಗಿಯೇ ಉತ್ತರ ಕರ್ನಾಟಕದ ಬಹುತೇಕ ಉದ್ದಿಮೆ ದಾರರಿಗೆಲ್ಲ ಎನ್‌ಎಚ್ ಅಚ್ಚುಮೆಚ್ಚು.

ಪಕ್ಷದ ಶಿಸ್ತಿನ ಸಿಪಾಯಿ
ಸಂಘದ ಹಿನ್ನೆಲೆ ಹೊಂದಿರುವ ಹುಬ್ಬಳ್ಳಿ-ಧಾರವಾಡಗಳ ಜನಪ್ರಿಯ ಜನಪ್ರತಿನಿಧಿಗಳಾದ ಪ್ರಲ್ಲಾದ ಜೋಶಿ (ಕೇಂದ್ರ ಮಂತ್ರಿ), ಜಗದೀಶ ಶೆಟ್ಟರ (ಕೈಗಾರಿಕ ಮಂತ್ರಿ). ಅರವಿಂದ ಬೆಲ್ಲದ (ಸ್ಥಳೀಯ ಶಾಸಕ) ರ ಪಟ್ಟದ ಶಿಷ್ಯರಾದ ನರೇಂದ್ರ ಕುಲಕರ್ಣಿ ಬಿಜೆಪಿಯ ಬೂತ ಮಟ್ಟದಿಂದ ಹಿಡಿದು ಉನ್ನತ ಮಟ್ಟದವರೆಗೆ ಹಂತ ಹಂತವಾಗಿ ದುಡಿದು ಸಾರ್ವತ್ರಿಕ ಚುನಾವಣೆಗಳ ಪ್ರಚಾರಗಳಲ್ಲಿ ಭಾಗವಹಿಸಿ, ಭಾರತೀಯ ಜನತಾ ಪಕ್ಷಗಳ ವಿವಿಧ ಜವಾಬ್ದಾರಿಗಳನ್ನು ವಹಿಸುತ್ತಾ ಪಕ್ಷಕ್ಕೆ ಬದ್ಧತೆ ತೋರಿದ ಶಿಸ್ತಿನ ಸಿಪಾಯಿ ಅಲ್ಲದೇ ನೆಚ್ಚಿನ ಪ್ರಧಾನಿ ಮೋದಿಯವರ ಕಟ್ಟಾ ಅಭಿಮಾನಿ.

 

ವಿವಿಧ ಸಂಘಟನೆಗಳಲ್ಲಿ ಸಕ್ರೀಯ
ಬ್ರಾಹ್ಮಣ ಸೇವಾ ಸಂಘ ನವನಗರದ ಶ್ರೀರಾಮ ಸಮುದಾಯ ಸಮೀತಿ (ಅಧ್ಯಕ್ಷ), ನವನಗರ ನಾಗರೀಕ ವೇದಿಕೆ (ಅಧ್ಯಕ್ಷ), ಹುಬ್ಬಳ್ಳಿ-ಧಾರವಾಡ ಬಿಜೆಪಿ ಕೈಗಾರಿಕ ಪ್ರಕೋಷ್ಠ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಏಂSSIಂ) ಬೆಂಗಳೂರ, ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘ(ಉಪಾಧ್ಯಕ್ಷ), ಕರ್ನಾಟಕ ವಾಣಿಜ್ಯೋದ್ಯಮ ಸಂಘ ಹುಬ್ಬಳ್ಳಿ, ವಿಜಾಗೃತಿ ಸಮೀತಿ, ಭಗಿನಿ ನಿವೇದಿತಾ ಶಾಲೆ ನವನಗರ, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಮುಂತಾದ ಅನೇಕ ಸಂಘ ಸಂಸ್ಥೆಗಳ ಜೊತೆ ನಿಕಟ ಸಂಪರ್ಕವಿಟ್ಟುಕೊಂಡ ನರೇಂದ್ರ ಕುಲಕರ್ಣಿ ಜಿಎಸ್‌ಟಿ ಬಗ್ಗೆ ತಿಳುವಳಿಕೆ, ನೋಟುಗಳ ನಿಷೇಧ, ಮುದ್ರಾ ಯೋಜನೆ, ಸ್ವಚ್ಛಭಾರತಗಳ ಕುರಿತಾದ ಸಭೆಯ ಮೂಲಕ ಅರಿವು ಮೂಡಿಸಲು ಯತ್ನಿಸಿದ್ದಾರೆ.
ಉಳಿದವರಿಗೆ ಮಾದರಿ
ಪ್ರತಿವರ್ಷ ಜನೆವರಿ ೨೬ ಹಾಗೂ ಅಗಸ್ಟ ೧೫ ರಂದು ಮನೆಯಲ್ಲೇ ನೂರಾರು ಜನರ ಮಧ್ಯೆ ಧ್ವಜಾರೋಹಣ ಮಾಡುತ್ತ ರಾಷ್ಟ್ರೀಯತೆ ಮೆರೆದಿದ್ದಾರೆ. ಬಸವ, ಶಂಕರ, ಶಿವಾಜಿ ಜಯಂತಿಗಳನ್ನು ಪ್ರತಿವರ್ಷ ನವನಗರದಲ್ಲಿ ಒಂದೇ ದಿನ (ಅಕ್ಷಯಾ ತೃತಿಯಾ) ಆಚರಿಸುತ್ತ ಬ್ರಾಹ್ಮಣ, ವೀರಶೈವ, ಮರಾಠಾ ಮೂರೂ ಸಮಾಜಗಳಿಗೆ ಮಾದರಿಯಾಗಿದ್ದಾರೆ. ಹಿರಿಯರ ಆರೋಗ್ಯದಿಂದ ಹಿಡಿದು ವಿದ್ಯಾರ್ಥಿಗಳ ಶಿಕ್ಷಣ, ಶುಲ್ಕ ಪಾವತಿ, ಪಠ್ಯಪುಸ್ತಕ, ನೋಟಬುಕ್ ವಿತರಣೆ, ಪ್ರತಿಭಾ ಪುರಸ್ಕಾರ, ಆಟ, ದೈಹಿಕ ಸದೃಢತ ರಕ್ತದಾನ ಶಿಬಿರ ಮುಂತಾದವುಗಳಲ್ಲಿ ನೇರವಾಗಿ ಗಮನಹರಿಸುತ್ತಾರೆ. ನವನಗರದ ಬಸವೇಶ್ವರ ವೃತ್ತದಲ್ಲಿ ಇವರಿಂದ ಒಂದು ಬಸ್ ತಂಗುದಾಣವೇ ನಿರ್ಮಿಸಲ್ಪಟ್ಟಿದೆ.

 

ಈ ಸಂಕಷ್ಟದಲ್ಲಿ ಜನಸೇವೆಯ ಅವಕಾಶ ಎಂದೇ ಪರಿಗಣಿಸಿ ಕೈಲಾದ ಸೇವೆ ಮಾಡುತ್ತಿದ್ದೇನೆ. ಕನಿಷ್ಟ ೧ ತಿಂಗಳಿಗಾಗುವಷ್ಟು ಸಾಮಗ್ರಿಗಳನ್ನೊಳಗೊಂಡ ಕಿಟ್ ನೀಡುತ್ತಿದ್ದೇನೆ. ಹಸಿದವರಿಗೆ ಅನ್ನ ನೀಡುವುದು ಪರಮ ಪುಣ್ಯ ಕಾರ್ಯ ಎಂದು ಭಾವಿಸಿ ದೇವರು ಕೊಟ್ಟಿದ್ದರಲ್ಲಿ ಒಂದು ಪಾಲನ್ನು ಜನರ ಸೇವೆಗಾಗಿಯೇ ಮುಡುಪಾಗಿಡುವೆ
-ನರೇಂದ್ರ ಕುಲಕರ್ಣಿ, ಬಿಜೆಪಿ ಮುಖಂಡರು ಹಾಗೂ ಉದ್ಯಮಿ.

administrator

Related Articles

Leave a Reply

Your email address will not be published. Required fields are marked *