ಹುಬ್ಬಳ್ಳಿ-ಧಾರವಾಡ ಸುದ್ದಿ
ನನ್ನ ಅಪ್ಪಾಜಿಯೇ ನನಗೆ ಆದರ್ಶ

ನನ್ನ ಅಪ್ಪಾಜಿಯೇ ನನಗೆ ಆದರ್ಶ

ಧಾರವಾಡ ತಾಲೂಕಿನ ಹಂಗರಕಿಯಲ್ಲಿನ ನಮ್ಮದು ದೊಡ್ಡ ಕುಟುಂಬ. ಸ್ವಗ್ರಾಮ ಮಾತ್ರವಲ್ಲದೇ ಸುತ್ತಲಿನ ಗ್ರಾಮಗಳ ಜನರ ಹಿತರಕ್ಷಣೆಗೆ ಸದಾ ತುಡಿಯುವ ಹೃದಯವರು. ದೊಡ್ಡಮನೆತನದ ಧಣಿ ಆಗಿದ್ದರೂ ಆತ್ಮೀಯರಿಗೆ, ಬಂಧುಗಳಿಗೆ ಆಪದ್ಭಾಂಧವರು. ಶಾಸಕರಾಗಿ ಆಯ್ಕೆಯಾದ ಬಳಿಕವಂತು ಜನರ ಋಣ ತೀರಿಸಲು ಸದಾಕಾಲ ತುಡಿಯುವ ಮನಸ್ಸಿನವರು.
ಅವರೊಬ್ಬ ಪುಸ್ತಕ ಪ್ರೇಮಿ, ಪ್ರಗತಿಪರ ಕೃಷಿಕ, ಮಾನವೀಯತೆಯ ಸಾಕಾರಮೂರ್ತಿ, ಅಭಿವೃದ್ಧಿ ದೂರದೃಷ್ಟಿಯ ನೇತಾರ, ಜನಪರ ಹಾಗೂ ಸಮಾಜಮುಖಿ ಚಿಂತನೆ ಮೈಗೂಡಿಸಿಕೊಂಡವರು.
ನಮ್ಮ ಮನೆತನಕ್ಕೆ ಕೃಷಿಯೇ ಮೂಲಾಧಾರವಾಗಿದ್ದು, ಇಂದಿಗೂ ತಮ್ಮ ಕುಟುಂಬದ ಸುಮಾರು 150 ಎಕರೆ ಕೃಷಿ ಜಮೀನಿನ ಸಾಗುವಳಿಯ ಜವಾಬ್ದಾರಿಯನ್ನು ತಮ್ಮ ತಂದೆಯವರೇ ನೋಡಿಕೊಂಡು ಬರುತ್ತಿದ್ದಾರೆ. ಆಧುನಿಕ ಹಾಗೂ ನಗರ ಜೀವನಕ್ಕೆ ಮಾರು ಹೋಗುತ್ತಿರುವ ಇಂದಿನ ಯುವ ಜನತೆ, ತಾತ್ಕಾಲಿಕ ಸುಖಕ್ಕಾಗಿ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ. ನಮಗಿರುವ ಭೂಮಿಯಲ್ಲಿಯೇ ಸಾಂಪ್ರದಾಯಿಕ ಮತ್ತು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿದಾಗ ಉತ್ತಮ ಆದಾಯ ಪಡೆಯಬಹುದು ಎಂಬುದು ನಾನು ಕೃಷಿಯಿಂದ ಕಂಡುಕೊಂಡ ಬಹುದೊಡ್ಡ ಸತ್ಯ. ಕೃಷಿಯನ್ನು ನಂಬಿದವರಿಗೆ ಯಾವತ್ತೂ ಭೂತಾಯಿ ಕೈ ಬಿಡುವುದಿಲ್ಲ ಎಂಬುದು ತಂದೆಯವರ ಬಲವಾದ ನಂಬಿಕೆ.
ಒಂದು ವರ್ಷವೂ ಕೃಷಿಯಿಂದ ನಮಗೆ ನಷ್ಟವಾದ ಉದಾಹರಣೆ ಇಲ್ಲ. ರೈತನ ಮಕ್ಕಳು ತಮ್ಮ ಭೂಮಿಯನ್ನು ಉಳಿಸಿಕೊಂಡು ಭೂತಾಯಿಗೆ ಭಕ್ತಿಯಿಂದ ನಮಿಸುವ ಮೂಲಕ ಉಳುಮೆ ಮಾಡಿದಲ್ಲಿ ಕೃಷಿಯಲ್ಲಿ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಕೃಷಿಯೇ ಜೀವನಕ್ಕೆ ಮೂಲ ಆಧಾರವಾಗಲಿದ್ದು, ಅದುವೇ ಆದಾಯದ ಬಹುದೊಡ್ಡ ಕ್ಷೇತ್ರವಾಗಲಿದೆ ಎಂಬ ಎಲ್ಲ ಲಕ್ಷಣಗಳು ದಟ್ಟವಾಗಿವೆ ಎಂಬ ತಮ್ಮ ತಂದೆಯವರ ಆಶಾಭಾವ ಅಪರಿಮಿತ.


ಸತ್ಯ, ನ್ಯಾಯ ಮತ್ತು ನಿಷ್ಠುರತೆಗೆ ಹೆಸರಾಗಿರುವ ಅಯ್ಯಪ್ಪ ದೇಸಾಯಿಯವರು, ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಮಾನವೀಯತೆಯ ಸಾಕಾರ
ಮೂರ್ತಿ. ಜನಪರ ಕಾಳಜಿಯೊಂದಿಗೆ ಸಹಾಯ ಹಸ್ತ ಚಾಚುವುದು ಅವರ ದೊಡ್ಡತನ. ಇಂದಿಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಜನರ ಸಂಪರ್ಕ ದಲ್ಲಿದ್ದು, ಅವರಿಗೆ ಜನರು ತೋರಿಸುವ ಪ್ರೀತ್ಯಾದರಗಳಿಗೆ ಕೊರತೆಯೇನಿಲ್ಲ.

ಮನೆತನದ ವೃತ್ತಿಯಾದ ಕೃಷಿ. ಹಂಗರಕಿ ಗ್ರಾಮದ ಅಭ್ಯುದಯ, ಕುಟುಂಬದ ನಿರ್ವಹಣೆ ಜೊತೆ ರಾಜಕೀಯದ ಮೂಲಕ ಸಮಾಜಮುಖಿ ಕೆಲಸ ಮಾಡಿದವರು ತಮ್ಮ ತಂದೆ. ಗ್ರಾಮೀಣ ಕ್ಷೇತ್ರದ ಪ್ರತಿನಿಧಿಯಾಗಿ ಜನರ ಸೇವೆ ಕೂಡ ಮಾಡಿದ್ದಾರೆ.
ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸಬೇಕು ಎಂಬುದು ಅವರ ಸ್ಪಷ್ಟ ನಿಲುವು.
ಮೂಲತಃ ಶ್ರೇಷ್ಠ ಕೃಷಿಕರು, ಹಿರಿಯ ಅನುಭವಿ ರಾಜಕಾರಣಿಗಳು ಹಾಗೂ ಹಂಗರಕಿ ಮನೆತನದ ಪವಿತ್ರ ಸಂಪ್ರದಾಯ ಮತ್ತು ಗೌರವವನ್ನು ಇಂದಿಗೂ ಅಕ್ಷರಶಃ ಕಾಪಾಡಿಕೊಂಡು ಬರುತ್ತಿರುವುದು ನನಗೂ ಹೆಮ್ಮೆ.
ಧಾರವಾಡ ಗ್ರಾಮೀಣ ಕ್ಷೇತ್ರದ ಮಾದರಿ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದು, ಇನ್ನೂ ಜನರಲ್ಲಿ ಅಚ್ಚಳಿಯದೆ ಉಳಿದಿರುವುದು ನನ್ನ ಹಾಗೂ ನನ್ನ ಮನತೆತನದ ಹಿರಿಮೆ.
ಸತ್ಯ, ನಿಷ್ಠೆ, ಪ್ರಮಾಣಿಕತೆಗೆ ಹೆಚ್ಚಿನ ಒತ್ತು ಕೊಟ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಸಲಹೆಗಳನ್ನು ನನಗೆ ಇಂದಿಗೂ ನೀಡುತ್ತಿದ್ದಾರೆ. ಅಜ್ಜ ಹಾಗೂ ತಂದೆಯ ಹಾದಿಯ ಲ್ಲಿಯೇ ನಾನೂ ಕೂಡ ಮುನ್ನಡೆಯುತ್ತಿದ್ದೇನೆ.

ಕೃಷಿ ಪ್ರೇಮಿ
ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿದ್ದು, ಅದು ರೈತರ ಬೆಳೆಗಳ ಮೇಲೆ ದುಷ್ಪರಿಣಾಮ ಉಂಟು
ಮಾಡುತ್ತಿದೆ. ಬರುವ ದಿನಗಳಲ್ಲಿ ರೈತರು ತಮ್ಮ ಬಿತ್ತನೆ ಅವಧಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆÀ. ಅದಕ್ಕೆ ನಾವು ಸಿದ್ಧರಾಗಬೇಕಿದೆ. ಅಷ್ಟೇ ಅಲ್ಲದೇ ಕೃಷಿ ವಿಜ್ಞಾನಿಗಳು ಹಾಗೂ ಸಂಶೋಧಕರು ಕ್ಷೇತ್ರವಾರು ಬಿತ್ತನೆ ಬಗ್ಗೆ ಸಂಶೋಧನೆ ಮಾಡಿ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎನ್ನುವುದು ಅವರ ಪ್ರತಿಪಾದನೆ.

ಶಿಸ್ತಿನ ಬದುಕು
ಇಂದಿಗೂ ಜಮೀನಿನಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಸಾವಯವ ಪದ್ಧತಿಯನ್ನು ಪ್ರತಿಯೊಬ್ಬ ರೈತರು ಅನುಸರಿಸಬೇಕು ಎಂಬುದು ರೈತರಿಗೆ ಅವರ ಸಲಹೆ. ಮನೆ ಊಟ ಮಾಡುವುದರಿಂದ ಪ್ರತಿಯೊಬ್ಬರ ಆರೋಗ್ಯವು ಚೆನ್ನಾಗಿ ಇರುವುದರಲ್ಲಿ ಸಂಶಯವಿಲ್ಲ. ಅಪರೂಪಕ್ಕೆ ಹೊರಗೆ ಊಟ ಮಾಡಬಹುದು. ಬೆಳಗ್ಗೆ ಒಂದು ಗಂಟೆ ಸಂಜೆ ಅರ್ಧ ಗಂಟೆ ವಾಕಿಂಗ್ ಮಾಡುವುದರೊಂದಿಗೆ ಆರೋಗ್ಯ ಚೆನ್ನಾಗಿ ಇಟ್ಟುಕೊಂಡಿದ್ದಾರೆ.

ಆಧ್ಯಾತ್ಮದ ಆರಾಧಕ
ಗುರು ಮಡಿವಾಳೇಶ್ವರರ ಭಖ್ತರಾಗಿರುವ ತಮ್ಮ ತಂದೆಯವರು ಆಧ್ಯಾತ್ಮದತ್ತ ಸದಾ ಒಲವು ಹೊಂದಿದವರು. ಪಾಂಡಿಚೇರಿಯ ಅರವಿಂದ ಆಶ್ರಮದ ಕರ್ನಾಟಕ ನಿಲಯಂ ಟ್ರಸ್ಟ್‍ನ ಅಧ್ಯಕ್ಷರಾಗಿ ಅಯ್ಯಪ್ಪ ದೇಸಾಯಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀ ಅರವಿಂದ ಗುರೂಜಿಯವರ ಸಾಕಷ್ಟು ಗ್ರಂಥಗಳನ್ನು ಇಂದಿಗೂ
ಅಧ್ಯಯನ ಮಾಡುತ್ತಿದ್ದಾರೆ. ತಂದೆ ಹಾಗೂ ಹಲವು ಭಕ್ತರ ಪ್ರೇರಣೆಯಿಂದ ಆಶ್ರಮದ ನಂಟು ಹೊಂದಿದ್ದಾರೆ.


ಸುಮಧುರ ಬಾಂಧವ್ಯ…….

ತಮ್ಮ ಗ್ರಾಮದ ಎಲ್ಲ ಜನರ ಬಗ್ಗೆ ತಮ್ಮ ತಂದೆಯವರಲ್ಲಿರುವ ಪ್ರೀತಿ ಮತ್ತು ಆದರ ಅಪರಿಮಿತ. ಇನ್ನು ಸಾರ್ವಜನಿಕ ಬದುಕಿನಲ್ಲಿ ಜೊತೆಯಾದವರೊಂದಿಗೆ ತಮ್ಮ ಸರಳತೆ, ಸೌಜನ್ಯುತವಾಗಿ ನಡೆದುಕೊಂಡು ಬಂದಿದ್ದಾರೆ. ನಮ್ಮ ಮನೆತನ, ಹಂಗರಕಿ ಗ್ರಾಮ ಅಲ್ಲದೇ ತಮ್ಮ ವೈಯಕ್ತಿಕ ಗೌರವಕ್ಕೆ ಚ್ಯುತಿ ಬಾರದಂತೆ ಬದುಕುತ್ತಿದ್ದಾರೆ ನನ್ನ ಅಪ್ಪಾಜಿ.
ಮನೆಯಲ್ಲಿನ ಎಲ್ಲರೊಂದಿಗೆ ಮನಸಾರೆ ಪಾಲ್ಗೊಂಡು ಸಮಯ ಕಳೆಯುವ ಮೂಲಕ ನಮಗೆಲ್ಲ ಪ್ರೀತಿ ಹಂಚುತ್ತ ಬಂದಿದ್ದಾರೆ.

ಬಾಕ್ಸ್
ತಮ್ಮ ತಂದೆಯವರಾದ ಅಯ್ಯಪ್ಪ ದೇಸಾಯಿ ಅವರದ್ದು ಸದಾ ಶಿಸ್ತು ಹಾಗೂ ಕ್ರಿಯಾಶೀಲ ಜೀವನ. ಅವರ ಪ್ರಾಮಾಣಿಕತೆ ಹಾಗೂ ಬಡವ-ಬಲ್ಲಿದರ ಪರ ಸದಾ ತೋರಿಸುವ ಅನುಕಂಪ ಮತ್ತು ಕರುಣೆ ನನಗಂತೂ ದಾರಿದೀಪ. ಇಂತಹ ಗುಣಗಳೂ ಹಾಗೂ ಜನಪರ ಕೆಲಸಗಳಿಂದ ಇಂದಿಗೂ ಜನಮಾನಸದಲ್ಲಿ ಬೇರೂರಿದ್ದಾರೆ. ಅವರ ಈ ಆದರ್ಶದ ಬದುಕೇ ನನಗೆ ನಿರಂತರ ಮಾರ್ಗದರ್ಶಕ.

administrator

Related Articles

Leave a Reply

Your email address will not be published. Required fields are marked *