ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಬಹಳ ಮುಖ್ಯವಾದ ಘಟ್ಟ! ನಿಜ. ಆದರೆ ಪರೀಕ್ಷೆ ಎನ್ನುವುದು ಒಂದು ಶಿಕ್ಷೆಯಂತಾಗಬಾರದು. ಬದಲಿಗೆ ಅದು ಸಂಭ್ರಮದ ಕಾಲವಾಗಬೇಕು. ವಿದ್ಯಾರ್ಥಿಗಳು ಈ ಘಟ್ಟವನ್ನು ಯಶಸ್ವಿಯಾಗಿ ಕ್ರಮಿಸಬೇಕಾದರೆ, ವಿದ್ಯಾರ್ಥಿಗಳ ಪ್ರಯತ್ನ ಎಷ್ಟು ಮುಖ್ಯವೋ ಅಷ್ಟೇ ಹೆತ್ತವರ ಹಾಗೂ ಅಧ್ಯಾಪಕರ ಒತ್ತಾಸೆ, ಬೆಂಬಲ, ಪ್ರೋತ್ಸಾಹಗಳೂ ಮುಖ್ಯ! ವಿದ್ಯಾರ್ಥಿ ಎಷ್ಟೇ ಬುದ್ಧಿವಂತನಾಗಿರಲಿ ಅಥವ ದಡ್ಡನಾಗಿರಲಿ, ಅವನ ಮನಸ್ಸನ್ನು ಮುದುಡಿಸದೇ ಅರಳಿಸುವ ಎಲ್ಲ ಪ್ರಯತ್ನಗಳನ್ನು ಹೆತ್ತವರು ಹಾಗೂ ಅಧ್ಯಾಪಕರು ಮಾಡಿದರೆ, ಪರೀಕ್ಷೆಯೆನ್ನುವುದು ಎಲ್ಲ ರೀತಿಯ ಆತಂಕಗಳಿಂದ ದೂರವಾಗಿ ಒಂದು ಹಬ್ಬವಾಗುತ್ತದೆ.
ಪ್ರೀತಿಯ ವಿದ್ಯಾರ್ಥಿಗಳೇ! ಪರೀಕ್ಷಾ ದಿನ ಬಹಳ ಮುಖ್ಯವಾದ ದಿನ. ಇಡೀ ವರ್ಷದ ಶ್ರಮ ಫಲ ನೀಡುವ ದಿನ. ಹಾಗಾಗಿ ಪರೀಕ್ಷೆ ನಡೆಯುವ ದಿನದಂದು ನೀವು ಉತ್ಸುಕರಾಗಿರಬೇಕು, ಲವಲವಿಕೆ ಹಾಗೂ ಚೈತನ್ಯದಿಂದ ಕೂಡಿರಬೇಕು. ಪ್ರಫುಲ್ಲವಾಗಿರಬೇಕು. ಆಗ ನೀವು ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರಿಸಬಹುದು. ಒಂದು ವೇಳೆ ಪರೀಕ್ಷಾ ದಿನ ನಿಮ್ಮ ’ಮೂಡ್’ ಚೆನ್ನಾಗಿಲ್ಲವೆಂದರೆ, ಇಡೀ ವರ್ಷ ಪೂರ್ಣ ನೀವು ಓದಿದ ಓದು ವ್ಯರ್ಥವಾಗಬಹುದು. ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕ ಹಾಗೆ ಉತ್ತರವನ್ನು ಬರೆಯಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳಾದ ನೀವು ತಮ್ಮ ಶರೀರ ಹಾಗೂ ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಪರೀಕ್ಷಾ ದಿನಗಳಲ್ಲಿ ಹಾಗೂ ಪರೀಕ್ಷಾ ಸಮಯದಲ್ಲಿ ನೀವು ಕೆಲವು ಶಿಸ್ತನ್ನು ಪಾಲಿಸುವುದು ಒಳ್ಳೆಯದು. ಈ ಅವಧಿಯಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವುದರ ಸ್ಪಷ್ಟ ಪರಿಕಲ್ಪನೆಯಿರಬೇಕು.
1. ಪರೀಕ್ಷಾ ಸಾಮಾಗ್ರಿಗಳ ಬಗ್ಗೆ ಎಚ್ಚರಿಕೆ:
ನಾಳೆ ಬೆಳಿಗ್ಗೆ ಪರೀಕ್ಷೆ ಇದೆ ಎಂದರೆ ಹಿಂದಿನ ರಾತ್ರಿಯೇ ಸಿದ್ಧತೆಗಳನ್ನು ನಡೆಸಬೇಕು.
ಮೊದಲು ನಿಮ್ಮ ’ಹಾಲ್ ಟಿಕೆಟ್’ ತೆಗೆದಿಟ್ಟುಕೊಳ್ಳಿ. (ಹಾಲ್ ಟಿಕೆಟ್ಟಿನ ಎರಡು ನೆರಳುಪ್ರತಿ (ಫೋಟೋಕಾಫಿ) ಮಾಡಿಟ್ಟುಕೊಳ್ಳುವುದು ಒಳ್ಳೆಯದು) ಹಾಲಿ ಟಿಕೆಟನ್ನು ಯಾವ ಕಾರಣಕ್ಕೂ ಲ್ಯಾಮಿನೇಶನ್ ಮಾಡಿಸಲು ಹೋಗಬೇಡಿ.
ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು ನಿಮ್ಮ ಜಾಮಿಟ್ರಿ ಬಾಕ್ಸ್ ಒಳಗೆ ಇಟ್ಟುಕೊಳ್ಳಿ. ಅಕಸ್ಮಾತ್ ನಿಮ್ಮ ಪ್ರವೇಶಪತ್ರ ಕಳೆದುಹೋದರೆ, ತಾತ್ಕಾಲಿಕ ಪ್ರವೇಶಪತ್ರವನ್ನು ನೀಡಲು ಈ ಭಾವಚಿತ್ರಗಳು ನೆರವಾಗುತ್ತವೆ.
ಪರೀಕ್ಷಾ ಕೇಂದ್ರ ಎಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಎಷ್ಟು ದೂರವಿದೆ? ಅಲ್ಲಿಗೆ ಹೋಗಲು ಯಾವ ಯಾವ ಸಂಚಾರ ಸಾಧನಗಳಿವೆ ಎನ್ನುವುದನ್ನು ತಿಳಿದುಕೊಳ್ಳಿ. ’ಗೂಗಲ್ ಮ್ಯಾಪ್’ ಸಹಾಯದಿಂದಲೂ ದಾರಿಯನ್ನು ತಿಳಿದುಕೊಳ್ಳಬಹುದು. ಪರೀಕ್ಷಾ ಕೇಂದ್ರಕ್ಕೆ ಹೇಗೆ ಹೋಗುತ್ತೀರಿ (ಸಂಚಾರ ಮಾಧ್ಯಮ) ಎನ್ನುವುದನ್ನು ನಿಮ್ಮ ಹೆತ್ತವರ ಜೊತೆಯಲ್ಲಿ ಚರ್ಚಿಸಿ ತೀರ್ಮಾನಿಸಿ.
ಪರೀಕ್ಷಾ ವೇಳಾ ಪಟ್ಟಿಯನ್ನು ಗಮನಿಸಿ. ನಾಳೆ ಯಾವ ಪರೀಕ್ಷೆ ಇದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಅನೇಕ ವಿದ್ಯಾರ್ಥಿಗಳು ಸಮಾಜ ಶಾಸ್ತ್ರ ಪರೀಕ್ಷೆಯಿದ್ದ ದಿನ ವಿಜ್ಞಾನವನ್ನು ಓದಿಕೊಂಡು ಹೋದ ಉದಾಹರಣೆಗಳಿವೆ. ಹಾಗಾಗಿ ನಾಳೆ ಯಾವ ಪರೀಕ್ಷೆ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಪರೀಕ್ಷೆಯನ್ನು ಬರೆಯಲು ನಿಮಗೆ ಯಾವ ಯಾವ ವಸ್ತುಗಳು ಬೇಕು ಎನ್ನುವುದನ್ನು ನೋಡಿ ಎತ್ತಿಟ್ಟುಕೊಳ್ಳಿ. ಕನಿಷ್ಟ ಎರಡು ಒಳ್ಳೆಯ ನೀಲಿ ಬಣ್ಣದ ಬಾಲ್ ಪೆನ್ ಬೇಕಾಗುತ್ತದೆ. ಈ ಪೆನ್ನುಗಳು ಚೆನ್ನಾಗಿ ಬರೆಯಬೇಕು. ಮೊದಲೇ ಒಂದೆರಡು ಪುಟ ಬರೆದು ಪೆನ್ನನ್ನು ಪರೀಕ್ಷಿಸಿಕೊಳ್ಳಿ. ಎರಡು ಪೆನ್ಸಿಲ್, ಎರಡು ರಬ್ಬರ್, ಎರಡು ಮೆಂಡರ್ ತೆಗೆದಿಟ್ಟುಕೊಳ್ಳಿ. ಜಾಮಿಟ್ರಿ ಬಾಕ್ಸ್ ಅಥವ ಕಂಪಾಸ್ ಬಾಕ್ಸ್ ತೆಗೆದಿಟ್ಟುಕೊಳ್ಳಿ. ಬಣ್ಣದ ಸ್ಕೆಚ್ ಪೆನ್ನುಗಳನ್ನು ತೆಗೆದಿಟ್ಟುಕೊಳ್ಳಿ. ಮುಖ್ಯವಾಗಿ ನಿಮ್ಮ ಗುರುತಿನ ಚೀಟಿ (ಐಡೆಂಟಿಟಿ ಕಾರ್ಡ್) ಯನ್ನು ತೆಗೆದುಕೊಂಡು ಹೋಗಲು ಮರೆಯದಿರಿ.
ಕೈಗಡಿಯಾರವನ್ನು ಎತ್ತಿಟ್ಟುಕೊಳ್ಳಿ. ಪರೀಕ್ಷಾ ದಿನ ಕಟ್ಟಿಕೊಂಡು ಹೋಗಿ.
2 ಕೇವಲ ಪಕ್ಷಿನೋಟವನ್ನು ಹರಿಸಿ:
ಪರೀಕ್ಷಾ ದಿನ ಬೆಳಿಗ್ಗೆ ನಿಮ್ಮ ದೈನಂದಿನ ಸಮಯಕ್ಕೆ ಏಳಿ. ಪ್ರಾತಃರ್ವಿಧಿಗಳನ್ನು ಮುಗಿಸಿ. ನಿಮ್ಮ ಪಠ್ಯ ಪುಸ್ತಕ ಹಾಗೂ ನಿಮ್ಮ ನೋಟ್ಸ್ ಮುಂತಾದ ಅಧ್ಯಯನ ಸಾಮಾಗ್ರಿಗಳ ಮೇಲೆ ಒಂದು ಪಕ್ಷಿನೋಟವನ್ನು (ಬರ್ಡ್ಸ್ ಐ ವ್ಯೂ = ಗ್ಲಾನ್ಸ್) ಹರಿಸಿ. ಯಾವ ಪಾಠವನ್ನೂ ನೀವು ಇಡಿಯಾಗಿ ಓದಬೇಕಾಗಿಲ್ಲ. ಆದರೆ ಪ್ರತಿಯೊಂದು ಪಾಠವನ್ನೂ ಗಮನಿಸಿ. ಶೀರ್ಷಿಕೆ, ಉಪಶೀರ್ಷಿಕೆ, ಚಿತ್ರಗಳು, ಪಟ್ಟಿಗಳು, ಸೂತ್ರಗಳು, ಸಮೀಕರಣಗಳು, ಮುಖ್ಯ ಪ್ರಶ್ನೆಗಳು ಹಾಗೂ ವಸ್ತುನಿಷ್ಠ ಪ್ರಶ್ನೆ ಇತ್ಯಾದಿಗಳ ಮೇಲೆ ಒಂದು ನೋಟವನ್ನು ಹರಿಸಿ. ಈ ನೋಟ ನಿಮ್ಮ ನೆನಪನ್ನು ಜಾಗೃತಗೊಳಿಸುತ್ತದೆ.
ಯಾವುದೇ ಉತ್ತರಗಳನ್ನು ಪೂರ್ಣ ಓದಲು ಹೋಗಬೇಡಿ. ಹೀಗೆ ಓದಲು ಹೋದಾಗ ಇಡೀ ಪಠ್ಯವನ್ನು ಓದಿ ಮುಗಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮಗೆ ಅನಗತ್ಯ ಗೊಂದಲವುಂಟಾಗುತ್ತದೆ.
ಪರೀಕ್ಷಾ ಕೇಂದಕ್ಕೆ ಪರೀಕ್ಷಾ ಸಾಮಾಗ್ರಿಗಳನ್ನು ಬಿಟ್ಟು ಯಾವುದೇ ಪಠ್ಯ ಪುಸ್ತಕವನ್ನಾಗಲಿ ಅಥವ ನಿಮ್ಮ ನೋಟ್ಸನ್ನಾಗಲಿ ತೆಗೆದುಕೊಂಡು ಹೋಗಬೇಡಿ. ಮೊಬೈಲನ್ನು ಮನೆಯಲ್ಲಿಯೇ ಇಟ್ಟುಹೋಗಿ.
3. ಸರಳ ಹಾಗೂ ಲಘು ಉಪಾಹಾರ ಕಡ್ಡಾಯ:
ಪರೀಕ್ಷಾ ದಿನ ಲಘು ಉಪಾಹಾರವನ್ನು ಸೇವಿಸಿ. ಹಿತ-ಮಿತವಾಗಿ ಸೇವಿಸಿ. ಉಪಾಹಾರ ಕಡಿಮೆಯಾದರೆ ಮಿದುಳಿಗೆ ಸಾಕಷ್ಟು ಗ್ಲೂಕೋಸ್ ಸರಬರಾಜಾಗುವುದಿಲ್ಲ. ಹೆಚ್ಚಾದರೆ ಶರೀರದ ರಕ್ತವೆಲ್ಲ ಹೊಟ್ಟೆಯ ಕಡೆಗೆ ನುಗ್ಗಿ, ತಿಂದಿರುವ ಆಹಾರವನ್ನು ಜೀರ್ಣಗೊಳಿಸುವುದರಲ್ಲಿ ಮಗ್ನವಾಗುತ್ತದೆ. ಮಿದುಳಿಗೆ ರಕ್ತ ಕೊರತೆಯುಂಟಾಗುತ್ತದೆ. ನೀವು ಓದಿದ್ದು ನಿಮ್ಮ ನೆನಪಿಗೆ ಬಾರದೆ ಹೋಗಬಹುದು.
ಇಡ್ಲಿ, ದೋಸೆ, ರೊಟ್ಟಿ, ಚಪಾತಿಯನ್ನು ತಿನ್ನಬಹುದು. ಉಪ್ಪಿಟ್ಟು ಪರವಾಗಿಲ್ಲ.
ಚಿತ್ರಾನ್ನ, ಪಲಾವ್, ಬಿರಿಯಾನಿ, ಬಿಸಿಬೇಳೆಬಾತ್, ಮೊಸರನ್ನು ಮುಂತಾದವನ್ನು ತಿನ್ನಬೇಡಿ. ಮಸಾಲೆ ಪದಾರ್ಥಗಳನ್ನು ವರ್ಜಿಸಿ. ಉದ್ದಿನ ವಡೆ, ಪೂರಿ, ಮಸಾಲೆದೋಸೆಗಳನ್ನು ತಿನ್ನಬೇಡಿ.
ಸಿಹಿ ಪದರ್ಥಗಳನ್ನು ತಿನ್ನಲೇಬೇಡಿ.
ಕಾಫಿ ಅಥವ ಚಹವನ್ನು ಪ್ರತಿದಿನ ಎಷ್ಟು ಸೇವಿಸುತ್ತಿದ್ದೀರೋ ಅಷ್ಟು ಮಾತ್ರ ಸೇವಿಸಿ. ಹೆಚ್ಚಿಗೆ ಕುಡಿಯಬೇಡಿ.
ಪರೀಕ್ಷಾ ಕೇಂದ್ರಕ್ಕೆ ಒಂದು ಬಾಟಲ್ ಶುದ್ಧ ನೀರನ್ನು ಕೊಂಡೊಯ್ಯಿರಿ.
4 ಪರೀಕ್ಷಾ ಕೇಂದ್ರಕ್ಕೆ ಮುಂಚಿತವಾಗಿ ಬನ್ನಿ:
ಪರೀಕ್ಷೆ ಆರಂಭವಾಗುವುದಕ್ಕೆ ಕನಿಷ್ಠ ಅರ್ಧ ಗಂಟೆ ಮೊದಲು ಬನ್ನಿ.
ನಿಮ್ಮ ಪರೀಕ್ಷಾ ಕೊಠಡಿ ಹಾಗೂ ನಿಮ್ಮ ರಿಜಿಸ್ಟರ್ ನಂಬರ್ ಇರುವ ಟೇಬಲ್ ನೋಡಿಕೊಳ್ಳಿ.
ನೆರಳಿರುವ ಕಡೆ ಕುಳಿತುಕೊಳ್ಳಿ. ಸಾಧ್ಯವಾದಷ್ಟು ಏಕಾಂತದಲ್ಲಿರಿ. ಗಂಭೀರವಾಗಿರಿ.
ಗೆಳೆಯರೊಡನೆ ಹರಟಬೇಡಿ. ಚರ್ಚಿಸಬೇಡಿ. ನೀವು ’ನೀನು ಯಾವ ಚಾಪ್ಟರ್ ಓದಿದೆ, ಯಾವ ಚಾಪ್ಟರನ್ನು ಓದಲಿಲ್ಲ, ಕ್ವಶ್ಚನ್ ಪೇಪರ್ ಲೀಕ್ ಆಗಿದೆಯೆಂತೆ ಹೌದ? ಯಾವ ಪ್ರಶ್ನೆಯನ್ನು ಕೇಳಿದ್ದಾರಂತೆ?’ ಮೊದಲಾದ ಅಂತೆ ಕಂತೆಗಳಿಂದ ದೂರವಿರಿ. ಈ ಎಲ್ಲ ಚರ್ಚೆಗಳು ನಿಮ್ಮ ಮೂಡನ್ನು ಹಾಳು ಮಾಡುತ್ತವೆ.
5 ನೀರನ್ನು ಕುಡಿಯಿರಿ:
ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ 10-15 ನಿಮಿಷಗಳ ಮೊದಲು ಎರಡು ಲೋಟ ನೀರನ್ನು (ಸುಮಾರು ೪೦೦ ಎಂ.ಎಲ್. ಅರ್ಧ ಲೀಟರಿನ ಬಾಟಲಿಯನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು) ಕುಡಿಯಿರಿ.
ಪರೀಕ್ಷೆಯನ್ನು ಬರೆಯುವಾಗ ನಿಮ್ಮ ಶರೀರದಲ್ಲಿ ನೀರಿನ ಪ್ರಮಾಣ ಹೆಚ್ಚಿರಬೇಕು. ಮುಖ್ಯವಾಗಿ ನಿಮ್ಮ ಮಿದುಳಿನಲ್ಲಿ ನೀರಿನಂಶ ಹೆಚ್ಚಿರಬೇಕು. ಮಿದುಳು ’ಮಿದುಳು-ಮೇರು ದ್ರವ’ದಲ್ಲಿ (ಸೆರೆಬ್ರೋಸ್ಪೈನಲ್ ಫ್ಲೂಯಿಡ್) ತೇಲುತ್ತಿರುತ್ತದೆ. ಈ ದ್ರವವು ಮಿದುಳಿಗೆ ಕೆಲಸ ಕಾರ್ಯಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ನೀರನ್ನು ಹೆಚ್ಚು ಕುಡಿಯಬೇಕು. ಈ ಹೆಚ್ಚುವರಿ ನೀರು ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲುದು.
ಎರಡು ಲೋಟಕ್ಕಿಂತಲೂ ಹೆಚ್ಚು ನೀರನ್ನು ಕುಡಿಯಬೇಡಿ. ಪರೀಕ್ಷೆಯ ಮಧ್ಯೆ ಮೂತ್ರ ವಿಸರ್ಜನೆಯ ಒತ್ತಡ ತಲೆದೋರಬಹುದು. ಮೂತ್ರವಿಸರ್ಜನೆಗೆಂದು ಎದ್ದು ಹೋದರೆ ಸಮಯ ವ್ಯರ್ಥವಾಗುತ್ತದೆ ಹಾಗೂ ನೋಡುವವರಿಗೆ ನೀವು ’ಕಾಫಿ ಹೊಡೆಯಲು’ ಹೋಗುತ್ತಿರುವಿರೇನೋ ಎನ್ನುವ ಅನುಮಾನ ತಲೆದೊರುತ್ತದೆ.
6 ಭಯ ಬೇಡ! ಟೆನ್ಷನ್ ಬೇಡ!!
ಪರೀಕ್ಷೆಯ ಬಗ್ಗೆ ಯಾವುದೇ ಭಯವನ್ನು ಇಟ್ಟುಕೊಳ್ಳಬೇಡಿ. ಟೆನ್ಷನ್ ಮಾಡಿಕೊಳ್ಳಬೇಡಿ. ಧೈರ್ಯವಾಗಿ ಹೋಗಿ.
’ವರ್ಷದ ಮೊದಲಿನಿಂದ ಅಧ್ಯಯನ ಮಾಡುತ್ತಾ ಬಂದಿದ್ದೇನೆ. ನನಗೆ ಗೊತ್ತಿರುವುದನ್ನು ನಾನು ಪ್ರಾಮಾಣಿಕವಾಗಿ ಬರೆಯುತ್ತೇನೆ, ನನ್ನ ಹೆತ್ತವರ ಹಾಗೂ ಗುರುಹಿರಿಯರ ಆಶೀರ್ವಾದವಿದೆ’ ಎನ್ನುವ ವಿಶ್ವಾಸದೊಡನೆ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿ.
ನಿಮಗೆ ’ಭಯವಾಗುತ್ತಿದೆ’ ಎಂದು ಎನಿಸಿದರೆ ಕುಳಿತಕಡೆಯಲ್ಲಿಯೇ ಆಳವಾಗಿ ಉಸಿರಾಡಿ. ಪ್ರಾಣಾಯಾಮವನ್ನು ಒಂದು ನಿಮಿಷ ಕಾಲ ಮಾಡಿ. ನಿಮ್ಮ ಭಯ ನಿಮ್ಮ ನಿಯಂತ್ರಣಕ್ಕೆ ಬರುತ್ತದೆ. ಆತ್ಮವಿಶ್ವಾಸದೊಡನೆ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿ.
7. ನಿಮ್ಮ ರಿಜಿಸ್ಟರ್ ನಂಬರ್ ಮೊದಲು ಬರೆಯಿರಿ:
ನಿಮ್ಮ ಉತ್ತರ ಪತ್ರಿಕೆಯ ಮೇಲೆ ಮೊದಲು ನಿಮ್ಮ ರಿಜಿಸ್ಟರ್ ನಂಬರ್ ಬರೆಯಿರಿ. ಮತ್ತೇನನ್ನೂ ಬರೆಯಬೇಡಿ.
ನೀವು ತೆಗೆದುಕೊಳ್ಳುವ ಪ್ರತಿಯೊಂದು ಅಡಿಶನಲ್ ಶೀಟ್ ಮೇಲೂ ಮೊದಲು ರಿಜಿಸ್ಟರ್ ನಂಬರ್ ಬರೆಯಿರಿ.
ಅಡಿಶನಲ್ ಶೀಟಿನ ಪ್ರತಿಯೊಂದು ಪುಟಕ್ಕೂ ಪುಟಸಂಖ್ಯೆ ಬರೆಯಿರಿ.
8 ಮೊದಲು ಪ್ರಶ್ನೆಪತ್ರಿಕೆಯನ್ನು ಓದಿ:
ಪ್ರಶ್ನೆಪತ್ರಿಕೆಯನ್ನು ಮೊದಲು ಓದಿ.
ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಿ. ಅವರು ಏನು ಪ್ರಶ್ನೆಯನ್ನು ಕೇಳಿದ್ದಾರೆ? ಅದಕ್ಕೆ ಯಾವ ಉತ್ತರವನ್ನು ಬರೆಯಬೇಕು? ಎಷ್ಟು ಬರೆಯಬೇಕು ಎನ್ನುವುದನ್ನು ನಿರ್ಧರಿಸಿ.
ನಿಮಗೆ ಉತ್ತರ ಚೆನ್ನಾಗಿ ಗೊತ್ತಿರುವ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಿ. ಆ ಪ್ರಶ್ನೆಗಳಿಗೆ ಮೊದಲು ಉತ್ತರವನ್ನು ಬರೆಯಿರಿ.
ಕಷ್ಟವಾಗಿರುವ ಪ್ರಶ್ನೆಗಳನ್ನು ನಂತರ ಉತ್ತರಿಸಿ.
ಆದರೆ ಸಮಯದ ಮಿತಿಯೊಳಗೆ ಬರೆಯಬೇಕಾದುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ. ಯಾವುದೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲವೆಂದು ಬಿಡಬೇಡಿ. ನಿಮಗೆ ಏನು ಗೊತ್ತಿದೆಯೋ ಅದನ್ನೇ ಬರೆಯಿರಿ. ಒಂದೆರಡು ಅಂಕಗಳಾದರೂ ದೊರೆತಾವು.
9 ಪ್ರಶ್ನೆಗಳ ಸಂಖ್ಯೆ ಹಾಗೂ ಉತ್ತರಗಳು ಸ್ಪಷ್ಟವಾಗಿರಲಿ:
ಉತ್ತರ ಪತ್ರಿಕೆಯಲ್ಲಿ ಪ್ರಶ್ನೆಗಳನ್ನು ಹಾಗೂ ಪ್ರಶ್ನೆಯ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಿರಿ.
ಸಾಧ್ಯವಾದಷ್ಟು ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಯನ್ನು ಹೇಗೆ ಕೇಳಿದ್ದಾರೋ ಹಾಗೆಯೇ ಉತ್ತರಗಳನ್ನು ಬರೆಯಲು ಪ್ರಯತ್ನಿಸಿ.
ಪ್ರಶ್ನೆಪತ್ರಿಕೆಯನ್ನು ಭಾಗ-1 ಹಾಗೂ ಭಾಗ-2 ಎಂದು ವಿಂಗಡಿಸಿದ್ದರೆ, ಆ ವಿಂಗಡಣೆಯನ್ನು ಸ್ಪಷ್ಟವಾಗಿ ನಮೂದಿಸಿದ ನಂತರ ಉತ್ತರವನ್ನು ಬರೆಯಿರಿ.
ಒಂದು ಪ್ರಶ್ನೆಗೆ ಉತ್ತರವನ್ನು ಬರೆದಾದ ಮೇಲೆ, ಅದರ ಕೆಳಗೆ ಒಂದು ಪೆನ್ಸಿಲ್ ಹಾಗೂ ಸ್ಕೇಲ್ ಸಹಾಯದಿಂದ ಅಡ್ಡಗೆರೆಯನ್ನು ಬರೆಯಿರಿ. ಇದರಿಂದ ಯಾವ ಪ್ರಶ್ನೆಗೆ ಯಾವುದು ಉತ್ತರ ಎನ್ನುವುದು ಪರೀಕ್ಷಕರಿಗೆ ಸ್ಪಷ್ಟವಾಗಿ ತಿಳಿಯುತ್ತದೆ. ಮೌಲ್ಯಮಾಪನ ಮಾಡಲು ಅವರಿಗೆ ಸುಲುಭವಾಗುತ್ತದೆ.
10. ಉತ್ತರವನ್ನು ಸರಿಯಾದ ವಿಧಾನದಲ್ಲಿ ಬರೆಯಿರಿ:
ಉತ್ತರವನ್ನು ದುಂಡಾದ ಅಕ್ಷರಗಳಲ್ಲಿ ಬರೆಯಿರಿ.
ಉತ್ತರದಲ್ಲಿ ಯಾವುದೇ ಕಾಗುಣಿತ ದೋಷ ಅಥವ ಸ್ಪೆಲ್ಲಿಂಗ್ ದೋಷಗಳು ಇರದಂತೆ ಎಚ್ಚರವಹಿಸಿ.
ಉತ್ತರವನ್ನು ಬರೆದ ಮೇಲೆ ಮುಖ್ಯಾಂಶಗಳ ಕೆಳಗೆ ಪೆನ್ಸಿಲ್ಲಿನಿಂದ ಅಡಿಗೆರೆ ಹಾಕಿ (ಅಡಿಗೆರೆ ಹಾಕಲು ಕೆಂಪು / ಹಸಿರು ಬಣ್ಣದ ಪೆನ್ ಬಳಸಬೇಡಿ) ಪ್ರತಿಯೊಂದು ಉತ್ತರಕ್ಕೆ ಎಲ್ಲಿ ಅಡಿಗೆರೆ ಹಾಕಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿಕೊಂಡಿರಬೇಕು. ಪರೀಕ್ಷೆಯಲ್ಲಿ ಮನಬಂದಂತೆ ಗೆರೆಗಳನ್ನು ಎಳೆಯಬೇಡಿ.
ಸಮೀಕರಣಗಳನ್ನು ಪುಟದ ಮಧ್ಯಭಾಗದಲ್ಲಿ ಬರೆಯಿರಿ.
ಲೆಕ್ಕದ ಹಂತಗಳ ನಡುವೆ ಸ್ಪಷ್ಟ ಅಂತರವಿರಲಿ.
ನಿಮ್ಮ ಉತ್ತರ ಪತ್ರಿಕೆಯನ್ನು ನೋಡುತ್ತಿರುವಂತೆಯೇ ಮೌಲ್ಯಮಾಪಕರು ಮನಸ್ಸಿನಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆ ಮೂಡಬಹುದು ಅಥವ ಕಿರಿಕಿರಿಯಾಗಬಹುದು. ಅಕ್ಷರಗಳು ದುಂಡಾಗಿದ್ದು, ಚಿಕ್ಕ ಚೊಕ್ಕ ಉತ್ತರಗಳನ್ನು ಬರೆದಿದ್ದರೆ, ಅದು ಪರೀಕ್ಷಕರನ್ನು ಆಕರ್ಷಿಸುತ್ತದೆ. ಆಗ ಅವರು ನಿಮ್ಮ ಬಗ್ಗೆ ಪ್ರಸನ್ನರಾಗುತ್ತಾರೆ. ನಿಮ್ಮ ಉತ್ತರಗಳನ್ನು ಸಹಾನುಭೂತಿಯಿಂದ ಮೌಲ್ಯಮಾಪನ ಮಾಡುತ್ತಾರೆ. ಕೈ ಬಿಗಿಹಿಡಿಯದೆ ಅಂಕಗಳನ್ನು ಕೊಡುವ ಸಾಧ್ಯತೆಯು ಹೆಚ್ಚಿರುತ್ತದೆ.
ನೀವು ಕೋಳಿಕಾಲು ಅಕ್ಷರದಲ್ಲಿ ಉತ್ತರವನ್ನು ಬರೆದಿದ್ದರೆ, ವಕ್ರ ವಕ್ರ ಸಾಲುಗಳಲ್ಲಿ ಉತ್ತರವನ್ನು ಬರೆದಿದ್ದರೆ, ಒಂದು ಸಾಲು ಮತ್ತೊಂದು ಸಾಲಿನ ಜೊತೆ ಬೆರೆಯುವ ಹಾಗೆ ಉತ್ತರವನ್ನು ಬರೆದಿದ್ದರೆ, ಕಾಗುಣಿತ ದೋಷಗಳು ಎದ್ದು ಕಾಣುತ್ತಿದ್ದರೆ, ಮೌಲ್ಯಮಾಪಕರಿಗೆ ಬೇಸರ ಬರುತ್ತದೆ. ಇವನ್ಯಾವನೋ ಅಡ್ನಾಡಿ ಮನಸಿಗೆ ಬಂದಂತೆ ಉತ್ತರ ಬರೆದಿದ್ದಾನೆ ಎಂದು ಸ್ವಲ್ಪ ಅಸಡ್ಡೆಯಿಂದ ಮೌಲ್ಯಮಾಪನ ಮಾಡುವ ಸಾಧ್ಯತೆಯಿರುತ್ತದೆ. ನೀವು ನಿಜಕ್ಕೂ ಉತ್ತಮ ಉತ್ತರವನ್ನು ಬರೆದಿದ್ದರೂ ಸಹಾ ಪೂರ್ಣಾಂಕಗಳು ದೊರೆಯದೇ ಹೋಗುವ ಸಾಧ್ಯತೆಯು ಹೆಚ್ಚಿರುತ್ತದೆ.
11. 18 ಸಾಲುಗಳಿಗಿಂತ ಹೆಚ್ಚಿಗೆ ಬರೆಯಬೇಡಿ:
ಉತ್ತರ ಪತ್ರಿಕೆಯ ಎಡ, ಬಲ, ಮೇಲೆ ಹಾಗೂ ಕೆಳಗೆ ಸಾಕಷ್ಟು ಸ್ಥಳವನ್ನು ಬಿಡಿ.
ಒಂದು ಪುಟದಲ್ಲಿ 18 ಸಾಲುಗಳನ್ನು ಮಾತ್ರ ಬರೆಯಬೇಕು. ಅದಕ್ಕಿಂತಲೂ ಹೆಚ್ಚು ಬರೆಯಬೇಡಿ.
ಒಂದು ಪುಟಕ್ಕೆ 18 ಸಾಲುಗಳ ಉತ್ತರವನ್ನು ಬರೆಯುವ ವಿಧಾನವನ್ನು ಮೊದಲೇ ಚೆನ್ನಾಗಿ ಅಭ್ಯಾಸ ಮಾಡಿಕೊಂಡಿರಬೇಕು. ಪರೀಕ್ಷಾ ದಿವಸ ಪ್ರಯೋಗವನ್ನು ಮಾಡಲು ಹೋಗಬೇಡಿ.
ಒಂದು ಪುಟಕ್ಕೆ 18 ಸಾಲುಗಳನ್ನು ಬರೆದಾಗ, ಸಾಲು ಹಾಗೂ ಸಾಲಿನ ನಡುವೆ ಸಾಕಷ್ಟು ಅಂತರವಿರುತ್ತದೆ. ಮೌಲ್ಯ ಮಾಪಕರಿಗೆ ಪ್ರತಿಯೊಂದು ಸಾಲು ಸ್ಪಷ್ಟವಾಗಿ ಕಾಣುತ್ತದೆ. ಅಕ್ಷಗಳು ದುಂಡಾಗಿದ್ದರೆ ಪ್ರತಿಯೊಂದು ಪದವು ನಿಖರವಾಗಿ ಕಾಣುತ್ತದೆ. ಆಗ ಅವರು ಮೌಲ್ಯಮಾಪನವನ್ನು ಸುಲುಭವಾಗಿ ಮಾಡಬಲ್ಲರು.
12 ಚಿತ್ತು ಮಾಡಬೇಡಿ:
ಉತ್ತರಗಳನ್ನು ತಪ್ಪುಗಳಿಲ್ಲದೆ ಬರೆಯಬೇಕು. ಯಾವುದೇ ಚಿತ್ತುಗಳಿರಬಾರದು.
ಬರೆಯುವಾಗ ಅಕಸ್ಮಾತ್ ತಪ್ಪಾದರೆ, ಅದರ ಮೇಲೆ ನಿಮ್ಮ ಶಕ್ತಿಯನ್ನೆಲ್ಲಾ ಬಿಟ್ಟು ಗೀಚಬೇಡಿ.
ತಪ್ಪಾದ ಪದದ ಮೇಲೆ ಒಂದೇ ಒಂದು ಅಡ್ಡಗೆರೆಯನ್ನು ಸ್ಪಷ್ಟವಾಗಿ ಎಳೆಯಿರಿ. ಹೀಗೆ ಮಾಡಿದಾಗ ಮೌಲ್ಯಮಾಪಕರಿಗೆ ನೀವೇನು ತಪ್ಪು ಬರೆದಿದ್ದೀರಿ ಹಾಗೂ ಆ ತಪ್ಪನ್ನು ಹೇಗೆ ಸರಿಪಡಿಸಿಕೊಂಡಿದ್ದೀರಿ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ.
ಯಾರೇ ಆಗಲಿ ಮಾಡಿದ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಾಗ ಅವರ ಬಗ್ಗೆ ಗೌರವ ಮೂಡುತ್ತದೆ.
ತಪ್ಪು ಪದದ ಮೇಲೆ ಹಲವು ಗೆರೆಗಳನ್ನು ಬರೆದು ಹೊಡೆದು ಹಾಕಿದರೆ, ಅದು ಉತ್ತರ ಪತ್ರಿಕೆಯ ಸೌಂದರ್ಯವನ್ನು ಹಾಳು ಮಾಡುತ್ತದೆ.
ನೀವು ಉತ್ತರವನ್ನು ಬರೆದು ಬರೆದು ಅಭ್ಯಾಸ ಮಾಡಿದ್ದರೆ ಇಂತಹ ತಪ್ಪುಗಳು ಸಂಭವಿಸುವುದಿಲ್ಲ.
13. ನಿಯಮಗಳನ್ನು ಪಾಲಿಸಿ:
ವಿಜ್ಞಾನ ವಿಷಯಗಳಲ್ಲಿ ವ್ಯಾಖ್ಯೆಗಳಿರುತ್ತವೆ (ಡೆಫೆನಿಷನ್ಸ್). ಇವನ್ನು ಪಠ್ಯ ಪುಸ್ತಕಗಳಲ್ಲಿ ಇರುವಂತೆಯೇ ಬರೆಯಿರಿ. ಒಂದು ಪದವನ್ನೂ ಬದಲಿಸುವಂತಿಲ್ಲ.
ಮುಖ್ಯ ಉತ್ತರವನ್ನು ಬರೆಯುವಾಗ ಪಠ್ಯಪುಸ್ತಕದಲ್ಲಿ ಇರುವಂತೆಯೇ ಬರೆಯಬೇಕು ಎನ್ನುವ ನಿಯಮವೇನಿರುವುದಿಲ್ಲ. ನಿಮ್ಮದೇ ಆದ ವಾಕ್ಯಗಳಲ್ಲಿ ಬರೆಯಬಹುದು. ಆದರೆ ಪಠ್ಯ ಪುಸ್ತಕದ ವಿವರಣೆಯನ್ನು ಹಾಗೂ ವಿವರಣೆಯ ಶೈಲಿಯನ್ನು ಬಳಸಿಕೊಳ್ಳುವುದು ಒಳ್ಳೆಯದು.
ಉತ್ತರವನ್ನು ಬರೆಯುವಾಗ ಪ್ರಮಾಣ ಬದ್ಧ ಹ್ರಸ್ವ ರೂಪಗಳನ್ನು ಬರೆಯಬಹುದು. 10ಲಿಸೆಲ್ಷಿಯಸ್ ಎನ್ನುವ ಉತ್ತರವನ್ನು 10 ಲಿಅ ಎಂದು ಬರೆಯಬಹುದು. ಇದು ಎಲ್ಲರಿಗೂ ಅರ್ಥವಾಗುತ್ತದೆ. ಅಭ್ಯಾಸ ಮಾಡುವಾಗ ನೀವು ನಿಮ್ಮದೇ ’ಶಾರ್ಟ್ ಫಾರ್ಮ್ಸ್’ಗಳನ್ನು ರೂಪಿಸಿಕೊಂಡಿರಬಹುದು. ಉದಾಹರಣೆಗೆ ’iಟಿಛಿiಜeಟಿಣ ಡಿಚಿಥಿ’ ಎನ್ನುವುದನ್ನು ’Iಖ’ ಎಂದು ಬರೆದು ಅಭ್ಯಾಸ ಮಾಡಿಕೊಂಡಿರಬಹುದು. ಪರೀಕ್ಷೆಯಲ್ಲಿ ಇದನ್ನೇ ಬರೆಯಬೇಡಿ. ಮೌಲ್ಯಮಾಪಕರಿಗೆ ಅಥವಾಗದೇ ಹೋಗಬಹುದು. ಪೂರ್ಣ ರೂಪವನ್ನೇ ಬರೆಯಿರಿ.
14. ಚಿತ್ರಗಳನ್ನು ಬರೆಯಿರಿ:
ವಿಜ್ಞಾನ ವಿಷಯಗಳಲ್ಲಿ ಚಿತ್ರವನ್ನು ಬರೆಯಬೇಕಾಗುತ್ತದೆ.
ನಿಮ್ಮ ಉತ್ತರಕ್ಕೆ ಪೂರಕವಾದ ಚಿತ್ರಗಳನ್ನು ಬರೆಯಿರಿ. ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಹೆಚ್ಚು ಅರ್ಥವನ್ನು ಕೊಡುತ್ತದೆ.
ಚಿತ್ರವನ್ನು ಪುಟದ ಮಧ್ಯ ಭಾಗದಲ್ಲಿ ಬರೆಯಿರಿ.
ಚಿತ್ರದ ವಿವಿಧ ಭಾಗಗಳನ್ನು ಗುರುತಿಸಲು ಬಣ್ಣಗಳನ್ನು ಬಳಸಿ.
ಚಿತ್ರದ ಭಾಗಗಳನ್ನು ಅಲ್ಲಲ್ಲೇ ಗುರುತಿಸಿ. ಸ್ಕೇಲ್ ಸಹಾಯದಿಂದ ಗೆರೆಯನ್ನು ಎಳೆದು ಭಾಗದ ಹೆಸರನ್ನು ಬರೆಯಿರಿ. ಭಾಗದ ಹೆಸರು ಪರೀಕ್ಷಕರಿಗೆ ಸುಲುಭವಾಗಿ ಕಾಣುವಂತೆ ಹಾಗೂ ಅರ್ಥವಾಗುವಂತೆ ಇರಬೇಕು.
ಚಿತ್ರಗಳನ್ನು ತುಂಬಾ ದೊಡ್ಡದಾಗಿ ಬರೆಯಬೇಡಿ; ತುಂಬಾ ಚಿಕ್ಕದಾಗಿಯೂ ಬರೆಯಬೇಡಿ. ಗಾತ್ರ ಹಿತ-ಮಿತವಾಗಿರಬೇಕು. ಇದನ್ನು ಮೊದಲೇ ಅಭ್ಯಾಸ ಮಾಡಿರಬೇಕು.
ಭೌತಶಾಸ್ತ್ರದಲ್ಲಿ ಬೆಳಕಿನ ಕಿರಣಗಳನ್ನು ಬರೆಯುವಾಗ, ಬೆಳಕು ಯಾವ ಕಡೆಯಿಂದ ಯಾವ ಕಡೆಗೆ ಚಲಿಸುತ್ತಿದೆ ಎನ್ನುವುದನ್ನು ಬಾಣದ ಗುರುತಿನಿಂದ ತೋರಿಸಿ. ಹಾಗೆಯೇ ವಿದ್ಯುನ್ಮಂಡಲಗಳನ್ನು ಬರೆಯುವಾಗ ವಿದ್ಯುತ್ತು ಯಾವ ಕಡೆಯಿಂದ ಯಾವ ಕಡೆಗೆ ಚಲಿಸುತ್ತಿದೆ ಎನ್ನುವುದನ್ನು ಗುರುತಿಸಿ.
15 ಪ್ರಬಂಧ ಸ್ವರೂಪದ ಉತ್ತರಗಳು:
ಪರೀಕ್ಷೆಗಳಲ್ಲಿ ಕೆಲವು ಸಲ ಪ್ರಬಂಧ ಸ್ವರೂಪದ ಉತ್ತರಗಳನ್ನು ಕೇಳಬಹುದು. ಇಂತಹ ಉತ್ತರಗಳು ಭಾಷಾ ಪ್ರಶ್ನೆಪತ್ರಿಕೆಗಳಲ್ಲಿ ಹಾಗೂ ಇತಿಹಾಸ ಪತ್ರಿಕೆಗಳಲ್ಲಿ ಸಾಮಾನ್ಯ. ಕೆಲವು ಸಲ ವಿಜ್ಞಾನ ಪ್ರಶ್ನೆ ಪತ್ರಿಕೆಗಳಲ್ಲಿಯೂ ಕೇಳಬಹುದು.
ಮೊದಲು ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಿ. ’ಏನು ಬರೆಯಬೇಕು ಹಾಗೂ ಎಷ್ಟು ಬರೆಯಬೇಕು’ ಎನ್ನುವುದನ್ನು ನಿರ್ಧರಿಸಿ.
ಉತ್ತರವನ್ನು ಕ್ರಮಬದ್ಧವಾಗಿ ಬರೆಯಿರಿ. ಉತ್ತರಕ್ಕೆ ಪ್ರವೇಶ (ಇಂಟ್ರಡಕ್ಷನ್) ಇರಲಿ. ವ್ಯಾಖ್ಯೆಗಳಿದ್ದರೆ ಬರೆಯಿರಿ. ನಿಯಮಗಳಿದ್ದರೆ ಬರೆಯಿರಿ. ಪ್ರಧಾನ ಉತ್ತರಕ್ಕೆ ಬನ್ನಿ. ಎಲ್ಲಾದರೂ ನಿಮ್ಮ ಉತ್ತರಕ್ಕೆ ಪೂರಕವಾದ ಚಿತ್ರಗಳಿದ್ದರೆ ಅವನ್ನು ಬರೆಯಿರಿ. ನಡುವೆ ಸಮೀಕರಣಗಳಿದ್ದರೆ ಅವನ್ನು ಬರೆಯಿರಿ. ಉತ್ತರವನ್ನು ಏಕವಾಗಿ ಬರೆಯುವ ಬದಲು ಪ್ಯಾರಾಗಳಲ್ಲಿ ವಿಂಗಡಿಸಿ ಬರೆಯಿರಿ. ಉಪಶೀರ್ಷಿಕೆಗಳನ್ನು ನೀಡಿ. ಮುಖ್ಯಾಂಶಗಳನ್ನು ಗುರುತಿಸಲು ಸಂಖ್ಯೆಯನ್ನು ಬಳಸಿ. ಬುಲೆಟ್ ಸಹಾ ಬಳಸಬಹುದು. ಉಪಯೋಗಗಳನ್ನು ಬರೆಯಿರಿ. ಅನುಕೂಲತೆ, ಅನಾನುಕೂಲತೆಗಳನ್ನು ಬರೆಯಿರಿ. ಅಂತಿಮ ತೀರ್ಮಾನವನ್ನು ಬರೆಯಿರಿ. ಕೊನೆಯಲ್ಲಿ ಉಪಸಂಹಾರವನ್ನೂ ಬರೆಯಿರಿ.
ಉತ್ತರಗಳು ಸಂಕ್ಷಿಪ್ತವಾಗಿರಲಿ. ವಿಷಯಕ್ಕೆ ಸಂಬಂಧಪಟ್ಟಿರಲಿ ಹಾಗೂ ನೇರವಾಗಿರಲಿ. ವಾಕ್ಯಗಳು ಚಿಕ್ಕದಾಗಿರಲಿ. ಭಾಷಾ ವಿಷಯಗಳಲ್ಲಿ ಉತ್ತರವನ್ನು ಅಲಂಕಾರಿಕವಾಗಿ ಬರೆಯಬಹುದು. ಆದರೆ ವಿಜ್ಞಾನ ವಿಷಯಗಳಲ್ಲಿ ಭಾಷೆ ತೀರಾ ಅಲಂಕಾರಿಕವಾಗಿರಬೇಕಾಗಿಲ್ಲ. ಆದರೆ ವ್ಯಾಕರಣ ಬದ್ಧವಾಗಿದ್ದರೆ ಸಾಕಾಗುತ್ತದೆ.
16. ರಫ್ ವರ್ಕ್ ಸ್ಪಷ್ಟವಾಗಿ ತೋರಿಸಿ:
ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ, ಮುಖ್ಯವಾಗಿ ಭೌತಶಾಸ್ತ್ರದಲ್ಲಿ ಲೆಕ್ಕವನ್ನು ಮಾಡಬೇಕಾಗುತ್ತದೆ.
ಲೆಕ್ಕವನ್ನು ಮಾಡುವಾಗ ಗುಣಿಸಲು, ಭಾಗಿಸಲು, ಶೇಕಡಾವಾರು ಇತ್ಯಾದಿಗಳನ್ನು ತಿಳಿಯಲು ಲೆಕ್ಕ ಹಾಕಬೇಕಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸ್ಥಳವನ್ನು ಇಟ್ಟುಕೊಳ್ಳಬೇಕಾಗುತ್ತದೆ.
ಉತ್ತರ ಪತ್ರಿಕೆಯ ಕೆಳ ಭಾಗವನ್ನು ಒಂದು ಅಡ್ಡ ಗೆರೆಯಿಂದ ಪ್ರತ್ಯೇಕಿಸಿ. ಅದರ ಕೆಳಗೆ ರಫ್ ವರ್ಕ್ ಮಾಡಿ.
ರಫ್‌ವರ್ಕ್ ಪ್ರಧಾನ ಉತ್ತರದಿಂದ ಪ್ರತ್ಯೇಕವಾಗಿರಬೇಕು.
17. 15 ನಿಮಿಷ ಮೊದಲೇ ಮುಗಿಸಿ:
ನೀವು ನಿಗದಿತ ಸಮಯಕ್ಕೆ ಇನ್ನೂ 15 ನಿಮಿಷಗಳು ಇವೆ ಎನ್ನುವಾಗಲೇ ನಿಮ್ಮ ಉತ್ತರವನ್ನು ಬರೆದು ಮುಗಿಸಬೇಕು.
ಈ 15 ನಿಮಿಷಗಳ ಕಾಲದಲ್ಲಿ ನೀವು ಬರೆದ ಉತ್ತರವನ್ನು ಮರು ಪರಿಶೀಲಿಸಿ. ಪ್ರಶ್ನೆಯ ಸಂಖ್ಯೆಗಳನ್ನು ಗಮನಿಸಿ. ಉತ್ತರವನ್ನು ಗಮನಿಸಿ. ಮುಖ್ಯವಾಗಿ ವಸ್ತುನಿಷ್ಠ ಪ್ರಶ್ನೆಗಳಿಗೆ ಉತ್ತರವನ್ನು ಸರಿಯಾಗಿ ಬರೆದಿರುವುದನ್ನು ಖಚಿತಪಡಿಸಿಕೊಳ್ಳಿ.
ಅಡಿಗೆರೆಗಳನ್ನು ಸರಿಯಾಗಿ ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ.
ಈ ಮರುಪರಿಶೀಲನೆಯಿಂದ ನೀವು ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಬರೆದಿದ್ದೀರಿ, ಬರೆದ ಉತ್ತರವೆಲ್ಲ ಸರಿಯಾಗಿದೆ, ಎಲ್ಲಿಯೂ ತಪ್ಪು ಮಾಡಿಲ್ಲ ಎನ್ನುವುದು ನಿಮಗೆ ಮನವರಿಕೆಯಾಗುತ್ತದೆ.
18. ಉತ್ತರ ಪತ್ರಿಕೆಗಳನ್ನೆಲ್ಲ ಒಟ್ಟಿಗೆ ಕಟ್ಟಿ:
ನಿಮ್ಮ ಉತ್ತರ ಪತ್ರಿಕೆಯನ್ನು ಪರಿಶೀಲಿಸಿದ ಮೇಲೆ ಮುಖ್ಯ ಉತ್ತರ ಪತ್ರಿಕೆ ಹಾಗೂ ತೆಗೆದುಕೊಂಡ ಹೆಚ್ಚುವರಿ ಪತ್ರಿಕೆಗಳನ್ನೆಲ್ಲ ಒಟ್ಟಿಗೆ ಸೇರಿಸಿ ಕಟ್ಟಿ.
ಮುಖ್ಯ ಉತ್ತರ ಪತ್ರಿಕೆಯ ಪ್ರತಿಯೊಂದು ಪುಟಕ್ಕೂ ಪುಟ ಸಂಖ್ಯೆ ಇದೆಯೇ ಎನ್ನುವುದನ್ನು ಪರಿಶೀಲಿಸಿ. ಇರದಿದ್ದರೆ ನೀವು ಪುಟ ಸಂಖ್ಯೆಯನ್ನು ಬರೆಯಬೇಕು. ’ಪ್ರತಿ ಅಡಿಶನಲ್ ಶೀಟಿಗೂ ರಿಜಿಸ್ಟ್ರೇಶನ್ ನಂಬರ್ ಹಾಗೂ ಪುಟಸಂಖ್ಯೆಯನ್ನು ಬರೆದಿದ್ದೀರ’ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಉತ್ತರಪತ್ರಿಕೆಗಳನ್ನು ಬಿಗಿಯಾಗಿ ಕಟ್ಟಿರುವುದನ್ನು ಹಾಗೂ ನಡುವೆ ಹಾಳೆಗಳು / ಗ್ರಾಫ್ / ಮ್ಯಾಪ್ ಬೇರ್ಪಡೆಯಾಗುವ ಅವಕಾಶ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡ ಮೇಲೆ ಉತ್ತರ ಪತ್ರಿಕೆಯನ್ನು ಪರೀಕ್ಷಾ ಮೇಲ್ವಿಚಾರಕರಿಗೆ ನೀಡಿ.
19. ಪ್ರಾಮಾಣಿಕತೆಯನ್ನು ಪರಿಪಾಲಿಸಿ:
ಪರೀಕ್ಷೆಯಲ್ಲಿ ಉತ್ತರವನ್ನು ಪ್ರಾಮಾಣಿಕವಾಗಿ ಬರೆಯಿರಿ.
ಪರೀಕ್ಷೆಗೆ ಯಾವುದೇ ರೀತಿಯ ಚೀಟಿಗಳನ್ನು ತರಬೇಡಿ.
ಪರೀಕ್ಷೆಯಲ್ಲಿ ನಕಲು ಹೊಡೆಯಬೇಡಿ.
ನಿಮ್ಮ ಉತ್ತರವನ್ನು ನಕಲು ಹೊಡೆಯಲು ಇತರರಿಗೆ ಅವಕಾಶವನ್ನು ಕೊಡಬೇಡಿ.
ನಿಶಃಬ್ಧತೆಯನ್ನು ಕಾಪಾಡಿ. ನಿಮ್ಮ ಪರಿಪೂರ್ಣ ಗಮನ ಉತ್ತರವನ್ನು ಬರೆಯುವುದರ ಕಡೆಗೆ ಇರಬೇಕು.
20. ಕಳೆದು ಹೋದದ್ದಕ್ಕೆ ಮರುಗದಿರಿ!
ಪರೀಕ್ಷೆಯನ್ನು ಮುಗಿಸಿದ ಮೇಲೆ ಯಾವುದೇ ರೀತಿಯ ’ಪೋಸ್ಟ್ ಮಾರ್ಟಮ್’ ಮಾಡಬೇಡಿ.
ಆಗಿದ್ದು ಆಗಿ ಹೋಯಿತು. ನೀವು ಏನು ಮಾಡಿದರೂ ಕಳೆದುಹೋದದ್ದು ಮತ್ತೆ ಬರುವುದಿಲ್ಲ. ಹಾಗಾಗಿ ಏಕೆ ವೃಥಾ ಚಿಂತಿಸಬೇಕು? ಕೊರಗುವುದರಿಂದ ಏನು ಲಾಭ?
ಪರೀಕ್ಷೆಯನ್ನು ಮುಗಿಸಿ ನೇರವಾಗಿ ಮನೆಗೆ ಹೋಗಿ. ಗೆಳೆಯರೊಡನೆಗೆ ಹರಟೆಗೆ ನಿಲ್ಲಬೇಡಿ. ಚರ್ಚೆಯಿಂದ ನಿಮ್ಮ ಮನಸ್ಸು ಹಾಳಾಗಬಹುದು.
ಮನೆಗೆ ಹೋಗಿ. ಮರುದಿನದ ಪರೀಕ್ಷೆಯ ಬಗ್ಗೆ ನಿರುಮ್ಮಳವಾಗಿ ಯೋಚಿಸಿ.
ನಿಮಗೆ ಶುಭವಾಗಲಿ.
ಸಕಾರಾತ್ಮಕ ಚಿಂತನೆ
ಈ ಕೆಳಗಿನ ಮಾತುಗಳನ್ನು ಬರೆದು ನಿಮ್ಮ ಓದುವ ಕೋಣೆಯಲ್ಲಿ ತೂಗುಹಾಕಿ. ನಿಮ್ಮ ಮನಸ್ಸಿನಲ್ಲಿ ಹತಾಶೆ ಇಣುಕಿದಾಗಲೆಲ್ಲ ಈ ಸ್ಪೂರ್ತಿದಾಯಕ ಮಾತುಗಳನ್ನು ಓದಿ. ನಿಮಗೆ ಧೈರ್ಯ ಬರುತ್ತದೆ. ನಿಮ್ಮ ಮೇಲೆಯೇ ಭರವಸೆ ಮೂಡುತ್ತದೆ.“I can & I will”
“Everything is Possible”
“I trust and believe in myself”
“I will give my best in the exam”
“My Parents, my teachers & God’s goodwill are always there protecting me!”
ಸೋಲಿನ ಬಗ್ಗೆ ಚಿಂತಿಸದಿರಿ. ’ನನ್ನ ಕೈಯಲ್ಲಿ ಸಾಧ್ಯವಾದುದನ್ನು ನಾನು ಮಾಡುತ್ತೇನೆ’ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ನಿಮಗೆ ನೀವು ಮಾತು ಕೊಟ್ಟ ಹಾಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ. ’ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಇರಲಿ’ ಎಂದು ಪರೀಕ್ಷೆಯನ್ನು ತೆಗೆದುಕೊಳ್ಳಿ. ಯಶಸ್ಸು ನಿಮ್ಮದಾಗುತ್ತದೆ.
ಕಾಪಿ ಹೊಡೆಯಬೇಡಿ.
ವಿದ್ಯಾರ್ಥಿಗಳೇ!…… ಯಾವ ಕಾರಣಕ್ಕೂ ಕಾಪಿ ಹೊಡೆಯಬೇಡಿ. ನಿಮಗೆ ಗೊತ್ತಿರುವ ಉತ್ತರವನ್ನು ಪ್ರಾಮಾಣಿಕವಾಗಿ ಬರೆಯಿರಿ. ಕಾಪಿ ಹೊಡೆಯುವವರನ್ನು ಹಾಗೂ ಕಾಪಿ ಹೊಡೆಯಲು ಸಹಾಯ ಮಾಡುವವರನ್ನು ಶಿಕ್ಷೆಗೆ ಒಳಪಡಿಸಬಹುದು. ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ೫ ವರ್ಷಗಳವರೆಗೆ ಶಿಕ್ಷೆಯನ್ನು ನೀಡಬಹುದು. ಇಂದಿನ ದಿನಗಳಲ್ಲಿ ಪರೀಕ್ಷೆ ನಡೆಯುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಗಳಿರುತ್ತವೆ. ನೀವು ನಡೆಸುವ/ನಡೆಸಿದ ಅಕ್ರಮಗಳಿಗೆ ದಾಖಲೆಯಿರುತ್ತದೆ. ಕಾಪಿ ಹೊಡೆದರೆ ನಿಮಗೆ ಕೆಟ್ಟ ಹೆಸರು ಬರುತ್ತದೆ. ನಿಮ್ಮ ಹೆತ್ತವರಿಗೆ ಕೆಟ್ಟ ಹೆಸರು ಬರುತ್ತದೆ. ನಿಮ್ಮ ಶಾಲೆಗೆ ಕೆಟ್ಟ ಹೆಸರು ಬರುತ್ತದೆ. ನಿಮ್ಮ ವ್ಯಕ್ತಿತ್ವಕ್ಕೆ ಸದಾ ಕಾಲಕ್ಕೂ ಕಳಂಕ ಅಂಟುಕೊಳ್ಳುತ್ತದೆ.ಹರ ಕೊಲ್ಲಲ್ ಪರ ಕಾಯ್ವನೆ?
ಹೆತ್ತವರೆ!…… ಪರೀಕ್ಷಾ ಸಮಯದಲ್ಲಿ ನಿಮ್ಮ ಮಕ್ಕಳಿಗೆ ಬೇಕಾಗಿರುವುದು ನಿಮ್ಮ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹ. ಇವನ್ನು ಧಾರಾಳವಾಗಿ ನೀಡಿ. ಯಾವುದೇ ಕಾರಣಕ್ಕೂ ಅವರನ್ನು ಟೀಕಿಸಬೇಡಿ. ನಿಮ್ಮ ಮಗ ಲೆಕ್ಕದಲ್ಲಿ ಸ್ವಲ್ಪ ದಡ್ಡನಿರಬಹುದು. ಅದನ್ನು ಪರೀಕ್ಷಾ ಸಮಯದಲ್ಲಿ ಎತ್ತಿ ಆಡಬೇಡಿ. ಅದರ ಪರಿಣಾಮ ಉಳಿದ ವಿಷಯಗಳ ಮೇಲೂ ಆಗಬಹುದು. ಮನಸ್ಸು ಕೆಟ್ಟು ಉತ್ತರ ಗೊತ್ತಿದ್ದರೂ ಸರಿಯಾಗಿ ಬರೆಯದೇ ಹೋಗಬಹುದು. ಬದಲಿಗೆ ’ಚಿಂತೆಯಿಲ್ಲ… ಲೆಕ್ಕದಲ್ಲಿ ಸ್ವಲ್ಪ ಅಂಕ ಕಡಿಮೆಯಾದರೂ ಪರವಾಗಿಲ್ಲ, ಉಳಿದ ಪತ್ರಿಕೆಗಳಿಗೆ ಚೆನ್ನಾಗಿ ಉತ್ತರ ಬರಿ’ ಎಂದು ಪ್ರೋತ್ಸಾಹವನ್ನು ನೀಡಬೇಕು.
ಹೆತ್ತವರೆ! ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ. ಮನೆಯ ಯಜಮಾನರಾದ ನೀವೇ ಕಂಗಾಲಾದರೆ ನಿಮ್ಮ ಮಕ್ಕಳಿಗೆ ಧೈರ್ಯ ಹೇಳುವವರು ಯಾರು? ನಿಮಗೆಷ್ಟೇ ಯೋಚನೆಯಿದ್ದರೂ ಅದನ್ನು ಮಕ್ಕಳ ಮುಂದೆ ತೋರಿಸಕೊಳ್ಳಬೇಡಿ ಹಾಗೂ ನಕಾರಾತ್ಮಕ ಬೈಗಳನ್ನು ಆಡಬೇಡಿ. ಹರ ಕೊಲ್ಲಲ್ ಪರ ಕಾಯ್ವನೆ? ನಿಮ್ಮ ಮಕ್ಕಳ ಆತಂಕವನ್ನು ಹೆಚ್ಚಿಸಬೇಡಿ. ನಿಮ್ಮ ಮಕ್ಕಳ ವಿಶ್ವಾಸವನ್ನು ನೀವೇ ನಾಶಮಾಡಿದರೆ, ಅವರು ಆಸರೆ ಹಾಗೂ ಭರವಸೆಗೆ ಮತ್ತೆಲ್ಲಿ ಹೋಗಬೇಕು? ದಯವಿಟ್ಟು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ. ಧೈರ್ಯವನ್ನು ತುಂಬಿ. ಅವರೊಡನೆ ಸಹಕರಿಸಿ.’ಸೂತಕದ ದಿನಗಳು’ ಆಗದಿರಲಿ:
’ರಾಶಿ’ಯವರು (ಡಾ|ಎಂ.ಶಿವರಾಂ) ಪರೀಕ್ಷಾ ದಿನಗಳನ್ನು ’ಸೂತಕದ ದಿನಗಳು’ ಎಂದು ಕರೆಯುತ್ತಿದ್ದರು. ಏಕೆಂದರೆ ಹುಡುಗರು ಪರೀಕ್ಷೆಗಾಗಿ ಓದಿಕೊಳ್ಳುವಾಗ ಮನೆಯಲ್ಲಿ ಮಹಾ ಮೌನ ನೆಲೆಸಿರುತ್ತದೆ! ಸತ್ತವರ ಮನೆಯ ಹಾಗೆ!
ವಿದ್ಯಾರ್ಥಿಗಳು ಸಂಜೆ ಒಂದು ಗಂಟೆ ಕಾಲ ಆತ್ಮೀಯರ ಜೊತೆಯಲ್ಲಿ, ಹಿತೈಷಿಗಳ ಜೊತೆಯಲ್ಲಿ ನಕ್ಕು ನಲಿಯಬೇಕು. ಸಂತೋಷವಾಗಿರಬೇಕು. ಪಠ್ಯದ ವಿಷಯವನ್ನು ಬಿಟ್ಟು ಉಳಿದ ವಿಷಯಗಳ ಬಗ್ಗೆ ಮಾತನಾಡಬಹುದು. ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ಯಾವಾಗಲು ಇತ್ಯಾತ್ಮಕ ಪರಿಸರದಲ್ಲಿರಬೇಕು. ತಮ್ಮನ್ನು ಪ್ರೋತ್ಸಾಹಿಸುವ ಜನ ಹಾಗೂ ತಮ್ಮ ಯಶಸ್ಸನ್ನು ಹಾರೈಸುವ ಜನರ ನಡುವೆಯೇ ಇರಬೇಕು.
ಮನಸ್ಸಿಗೆ ಸಂತೋಷವನ್ನು ನೀಡುವ ವಾದ್ಯ ಸಂಗೀತವನ್ನು ಆಲಿಸಬಹುದು.
ವಿದ್ಯಾರ್ಥಿಗಳು ತಮ್ಮ ಬಗ್ಗೆ, ತಮ್ಮ ಕಲಿಕೆಯ ಬಗ್ಗೆ, ತಮ್ಮ ಅಶಕ್ತತೆಯ ಬಗ್ಗೆ, ತಮ್ಮ ಆತಂಕಗಳ ಬಗ್ಗೆ ಆತ್ಮೀಯರ ಬಳಿ ಹಂಚಿಕೊಳ್ಳುವುದು ಒಳ್ಳೆಯದು. ಅವರ ಸೂಕ್ತ ಸಲಹೆಗಳನ್ನು ಪರಿಪಾಲಿಸಬಹುದು.
-ಡಾ.ನಾ.ಸೋಮೇಶ್ವರ