ಹುಬ್ಬಳ್ಳಿ-ಧಾರವಾಡ ಸುದ್ದಿ
ಸಮಾಜಸ್ನೇಹಿ ಜಿತೇಂದ್ರ

ಸಮಾಜಸ್ನೇಹಿ ಜಿತೇಂದ್ರ

೨೦೦೮ರಲ್ಲಿ ಮಜೇಥಿಯಾ ಫೌಂಡೇಷನ್ ಸ್ಥಾಪನೆ |

ಸಾಮಾಜಿಕ ಕಾರ್ಯದಲ್ಲಿ ಸಂತೃಪ್ತಿ, ಸಾಧನೆ

ಸಾಮಾಜಿಕ ಕಾರ್ಯದಲ್ಲೇ ಸಂತೃಪ್ತಿ ಕಾಣುವ ಮಜೇಥಿಯಾ ಕುಟುಂಬ

ಲೋಕ ಕಲ್ಯಾಣ ಕಾರ್ಯಗಳಿಗಾಗಿ ಫೌಂಡೇಶನ್ ರಚನಾತ್ಮಕ ಕಾರ್ಯಗಳ ಹಿರಿಮೆ

 

image description

ಹುಬ್ಬಳ್ಳಿ: ಭೂಮಿಯಲ್ಲಿ ಜನಿಸಿದ ಎಲ್ಲರೂ ಕರ್ಮಜೀವಿಗಳೆ.ಈ ಕರ್ಮ ಅಥವಾ ಕಾಯಕ ಬೆನ್ನಿಗಂಟಿಕೊಂಡು ಬಂದ ಬಳುವಳಿ.ಸಾರ್ಥಕ ಬದುಕಿಗೆ ಮಾಡುವ ಕಾಯಕ ಆ ವ್ಯಕ್ತಿಗೆ ಹಿಡಿದ ಕೈಗನ್ನಡಿ ಎಂಬುದು ದಾರ್ಶನಿಕರ ಅಭಿಮತ.ಈ ನುಡಿಯಂತೆಯೇ ಅಕ್ಷರಶಃ ಮುನ್ನಡೆಯುತ್ತಿರುವವರು ಬಹುಮುಖ ಚಿಂತನೆಯುಳ್ಳ ವ್ಯಕ್ತಿತ್ವದ ಹುಬ್ಬಳ್ಳಿಯ ಉದ್ಯಮಿ ಜಿತೇಂದ್ರ ಮಜೇಥಿಯಾ.
ಪ್ರತಿಯೊಬ್ಬ ಮನುಷ್ಯ ಇತರರಿಗೆ ತನ್ನ ಕೈಲಾದ ಸೇವೆ ಸಲ್ಲಿಸಬೇಕು.ಆದರೆ ಆ ರೀತಿ ಮಾಡುವಾಗ ನಾನು ಲೋಕ ಕಲ್ಯಾಣ ಮಾಡುತ್ತಿದ್ದೇನೆಂಬ ಅಹಂ ಮನುಷ್ಯನಲ್ಲಿರಬಾರದು. ಈ ಎಲ್ಲ ಸೇವೆಗಳ ಪರಮಗುರಿ ಆತ್ಮ ಪರಿಶುದ್ದತೆ ಆಗಿರಬೇಕು ಅದೇ ಸರ್ವೋಚ್ಛ ಸೇವೆ. ಬಡವರು, ದೀನ-ದಲಿತರು, ಅನಾಥರು, ರೋಗಿಗಳು ಮುಂತಾದವರಿಗೆ ಸಲ್ಲಿಸುವ ಸೇವೆ ಭಗವಂತ ಸೇವೆ ಎಂದು ಸೇವೆ ಸಲ್ಲಿಸುತ್ತಿರುವ ವಾಣಿಜ್ಯ ರಾಜಧಾನಿಯ ಬೆರಳೆಣಿಕೆಯ ಉದ್ಯಮಿಗಳ ಸಾಲಿನಲ್ಲಿ ಮಜೇಥಿಯಾ ನಿಲ್ಲುತ್ತಾರೆ.
ಮಜೇಥಿಯಾ ಕುಟುಂಬ ಬದುಕು ಕಟ್ಟಿಕೊಳ್ಳಲು ಹುಬ್ಬಳ್ಳಿಗೆ ಬಂದಿದ್ದು ೧೯೭೪ ರಲ್ಲಿ. ಕೆಲಸದ ನಿಮಿತ್ತಿ ಬೇರೆ ಬೇರೆ ಕಡೆ ಓಡಾಡುತ್ತಿದ್ದ ಜಿತೇಂದ್ರ ಮಜೇಥಿಯಾ ಅವರು ಸಮಾಜದಲ್ಲಿನ ಬಡತನ, ಅವ್ಯವಸ್ಥೆ, ರೋಗ-ರುಜಿನದಿಂದ ನರಳುತ್ತಿದ್ದ ಬಡ ರೋಗಿಗಳನ್ನು ಕಂಡರು.

ಭಾರತ ವಿಕಾಸ ಪರಿಷತ್‌ನ ಒಡನಾಟದಿಂದ ಅವರಿಗೆ ಮತ್ತೆ ಸಮಾಜ ಸೇವೆಯ ತುಡಿತ ಹೆಚ್ಚಿತು. ತಾನು ದುಡಿದ ಹಣದಲ್ಲಿಯೇ ಜನರ ಸೇವೆ ಮಾಡಲು ಶುರುವಿಟ್ಟುಕೊಂಡರು. ಆದರೆ ಫೌಂಡೇಷನ್ ಮಾಡುವ ಕಲ್ಪನೆ ಇರಲಿಲ್ಲ. ಹಲವಾರು ಸಂಘ-ಸಂಸ್ಥೆಗಳ ಜತೆ ಕೈಜೋಡಿಸಿ ಸಮಾಜ ಸೇವೆ ಮಾಡಿದರು. ೨೦೦೮ರಲ್ಲಿ ತಾವೇ ಫೌಂಡೇಷನ್ ಸ್ಥಾಪನೆ ಮಾಡಿದ ಬಳಿಕ ಶಿಕ್ಷಣ ಮತ್ತು ಆರೋಗ್ಯ ವಿಷಯದ ಸುಧಾರಣೆಗಾಗಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಸಮಾಜ ಸೇವೆ ಮಾಡುವ ತುಡಿತ ಹೆಚ್ಚಾಗುತ್ತಲೇ ಇದ್ದು, ಪ್ರತಿ ಬಡವ ಕಂಡಾಗಲೂ ಏನಾದರೊಂದು ಸಹಾಯ ಮಾಡಬೇಕು ಎಂಬ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಇವರಷ್ಟೇ ಅಲ್ಲ, ಅವರ ಇಡೀ ಕುಟುಂಬವೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ದುಡಿದ ಹಣವನ್ನು ಉಳಿಸಬೇಕು. ಮುಂದಿನ ದಿನಗಳಲ್ಲಿ ತಮ್ಮ ವಂಶವೇ ಉದ್ಧಾರವಾಗಬೇಕು ಎಂಬ ಮನೋಸ್ಥಿತಿಯವರ ಮಧ್ಯೆ ಈ ಕುಟುಂಬ ತಾವು ದುಡಿದ ಹಣವನ್ನು ಸಮಾಜಕ್ಕೆ ನೀಡಬೇಕೆಂಬುವರ ಸಾಲಿನಲ್ಲಿ ಭಿನ್ನವಾಗಿ ನಿಲ್ಲುತ್ತದೆ. ಮಜೇಥಿಯಾ ಫೌಂಡೇಷನ್ ಸದ್ದಿಲ್ಲದೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಸ್ಪರ್ಧಾಕಾಂಕ್ಷಿಗಳಿಗೆ ಪುಸ್ತಕ, ರೋಗಿಗಳಿಗೆ ಉಪಚಾರ, ವೈದ್ಯಕೀಯ ಸವಲತ್ತು, ಗೋ ಸಾಕಣೆ. ಹೀಗೆ ಹತ್ತು ಹಲವು ಸಮಾಜಮುಖಿ ಕೆಲಸಗಳ ಮೂಲಕ ಮನ್ನಣೆ ಗಳಿಸಿದೆ.
ಜಿತೇಂದ್ರ ಮಜೇಥಿಯಾ ಅವರಿಗೆ ಮುಂಬೈನಲ್ಲಿ ತನ್ನ ಒಡನಾಡಿಗಳೊಂದಿಗೆ ಓಡಾಡುತ್ತಿದ್ದಾಗಲೇ ಸಮಾಜ ಸೇವೆಯ ಗೀಳು ಅಂಟಿಕೊಂಡಿದ್ದು. ಅವರ ಅನೇಕ ಸ್ನೇಹಿತರು ಸಮಾಜ ಸೇವೆಯಲ್ಲಿ ತೊಡಗುತ್ತಿದ್ದರು. ಜಿತೇಂದ್ರ ಅವರು ಇವರೊಟ್ಟಿಗೆ ಭಾಗವಹಿಸುತ್ತಿದ್ದರು. ಕಾಲ ಕಳೆದಂತೆ ಬಹುತೇಕ ಸಮಯವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಆಗ ಇವರ ಮಾವನವರು ‘ಮೊದಲು ನೀನು ದುಡಿ, ಆ ಮೇಲೆ ಸಮಾಜ ಸೇವೆ ಮಾಡು’ ಎಂಬ ಸಲಹೆ ಮೇರೆಗೆ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ಸು ಗಳಿಸಿ ಈಗ ಸಮಾಜಸೇವೆಯಲ್ಲೇ ಸಂತಸ ಕಾಣುತ್ತಿದ್ದಾರೆ.
’ಕೆಲವಂ ಬಲ್ಲವರಿಂ ಕಲ್ತು’ ಎಂದು ಸೋಮೇಶ್ವರನ ಶತಕದಲ್ಲಿ ಹೇಳಿದಂತೆ ಅನುಭವಿಗಳು, ಜ್ಞಾನಿಗಳು, ಹಿರಿಯರಿಂದ ಸಲಹೆ ಪಡೆದು ತಮ್ಮ ಕತೃತ್ವ ಶಕ್ತಿಯನ್ನು ಬೆಳೆಸಿಕೊಂಡ ಜಿತೇಂದ್ರ ಮಜೇಥಿಯಾ ಅವರು ತಮ್ಮ ವ್ಯಕ್ತಿತ್ವದ ವೈಶಿಷ್ಠ್ಯಗಳನ್ನು ಮರೆತು ಸರಳತೆಯೇ ಮೂರ್ತಿವತ್ತ ಸಾಮಾನ್ಯರಂತಿದ್ದು ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕಿಮ್ಸ್‌ನಲ್ಲಿ ಸಹಾಯವಾಣಿ

ಜಿತೇಂದ್ರ ಮಜೇಥಿಯಾ ಅವರ ಪತ್ನಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಕಿಮ್ಸ್‌ಗೆ ದಾಖಲಿಸುವುದು ಹೇಗೆಂಬುದು ಗೊತ್ತಿರಲಿಲ್ಲ. ಜಿತೇಂದ್ರ ಅವರ ಪುತ್ರ ಕಶ್ಯಪ್ ಅವರು ಕಿಮ್ಸ್ ತುಂಬೆಲ್ಲ ಓಡಾಡಿದರೂ ಮಾಹಿತಿ ಕೊಡುವವರು ಇರಲಿಲ್ಲ. ಅದ್ಹೇಗೋ ಮಾಹಿತಿ ಪಡೆದು ರಮಿಲಾ ಮಜೇಥಿಯಾ ಅವರನ್ನು ಚಿಕಿತ್ಸೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣವಾಗಿ ಹೊರಬಂದರು. ಜೀವ ಉಳಿಸಿದ ಕಿಮ್ಸ್ ಆಸ್ಪತ್ರೆಗೆ ಏನಾದರೂ ಒಂದು ಕೊಡಬೇಕೆಂದು ನಿರ್ಧರಿಸಿದರು. ಉತ್ತರ ಕರ್ನಾಟಕದಿಂದ ಬಹಳಷ್ಟು ರೋಗಿಗಳು ಕಿಮ್ಸ್‌ಗೆ ಬರುತ್ತಾರೆ. ಇಲ್ಲಿರುವ ತಜ್ಞ ವೈದ್ಯರು, ಔಷಧ, ಒಪಿಡಿ, ಐಪಿಡಿ, ಲ್ಯಾಬ್, ಎಕ್ಸ್‌ರೇ, ಸ್ಕ್ಯಾನಿಂಗ್ ಸೆಂಟರ್ ಎಲ್ಲಿವೆ? ಎಂಬುದು ಗೊತ್ತಾಗುವುದಿಲ್ಲ. ಇಂಥವರಿಗೆ ಸಮಗ್ರ ಮಾಹಿತಿ ಸಿಗುವಂತಾಗಲು ಮಜೇಥಿಯಾ ಫೌಂಡೇಷನ್ ವತಿಯಿಂದ ‘ನಾನು ನಿಮಗೆ ಸಹಾಯ ಮಾಡಬಹುದೇ?’ (ಮೇ ಐ ಹೆಲ್ಪ್ ಯು) ಎಂಬ ತಂಡವನ್ನು ಸಿದ್ಧಗೊಳಿಸಿದರು. ೨೦ ಸ್ವಯಂ ಸೇವಕರನ್ನು ನೇಮಕ ಮಾಡಿದರು. ಇದಕ್ಕೂ ಮೊದಲು ಮಜೇಥಿಯಾ ಫೌಂಡೇಷನ್ ಮತ್ತು ಕಿಮ್ಸ್ ಆಡಳಿತ ಮಂಡಳಿ ಮಧ್ಯೆ ಒಡಂಬಡಿಕೆ (ಎಂಒಯು) ಮಾಡಿಕೊಳ್ಳಲಾಯಿತು. ಮೊದಲು ೫ ತಿಂಗಳು ಸ್ವಯಂ ಸೇವಕರು ಅದ್ಭುತವಾಗಿ ಕೆಲಸ ಮಾಡಿದರು. ಕೊರೊನಾ ಸಂದರ್ಭದಲ್ಲಂತೂ ಬಹಳಷ್ಟು ರೋಗಿಗಳಿಗೆ ಸಹಾಯ ಮತ್ತು ಮಾಹಿತಿ ಸಿಗುವಂತಾಗಲು ಕಾರಣವಾಯಿತು. ಇದನ್ನು ಕಿಮ್ಸ್ ಆಡಳಿತ ಮಂಡಳಿ ಅರಿತು ಒಡಂಬಡಿಕೆ ಅವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ. ಜನರು ಹೊರಗಡೆ ಊಟ ಮಾಡಿದ್ದಲ್ಲದೆ ಗಲೀಜು ಮಾಡುತ್ತಿರುವುದನ್ನು ಫೌಂಡೇಷನ್ ಗಮನಕ್ಕೆ ಬಂದಿತು. ಹಾಗಾಗಿಯೇ ಕಿಮ್ಸ್ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ‘ಊಟ ಮಾಡುವ ಮನೆ’ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಒಂದು ಸುತ್ತಿನಲ್ಲಿ ೧೫೦ಕ್ಕೂ ಹೆಚ್ಚು ಜನರು ಒಂದೆಡೆ ಕುಳಿತು ಊಟ ಮಾಡುವಂತಾಗಲು ಹೈಟೆಕ್ ಯೋಜನೆ ರೂಪಿಸಲಾಗಿದೆ. ಕಟ್ಟಡದ ನೀಲಿನಕ್ಷೆ ಸಿದ್ಧಪಡಿಸಲಾಗಿದ್ದು, ಶೀಘ್ರವೇ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಿದ್ಧತೆ ನಡೆದಿದೆ.

ಮಾದರಿ ಹಾಸ್ಪೈಸ್ ಸೆಂಟರ್
ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಹಾಸ್ಪೈಸ್ ಸೆಂಟರ್ (ನೋವು ನಿವಾರಕ ಹಾಗೂ ವಿಶ್ರಾಂತಿ ಧಾಮ) ಸ್ಥಾಪಿಸಲಾಗಿದೆ. ಇದಕ್ಕೆ ‘ರಮಿಲಾ ಪ್ರಶಾಂತಿ ಮಂದಿರ’ ಎಂದು ಹೆಸರಿಡಲಾಗಿದೆ. ಕೆಲವರಿಗೆ ಹಾಸ್ಪೈಸ್ ಏನೆಂಬುದು ಗೊತ್ತಿಲ್ಲ. ೪ನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳು ಇತ್ತ ಮನೆಗೆ ಹೋಗಲಾಗದೆ, ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯದ ಸ್ಥಿತಿ ತಲುಪಿರುತ್ತಾರೆ. ಇಂಥವರನ್ನು ಸಲಹುವುದೇ ಈ ಹಾಸ್ಪೈಸ್. ಬದುಕಿನ ಕೊನೆಯ ಕಾಲಘಟ್ಟದಲ್ಲಿರುವ ಜನರಿಗೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಚಿಕಿತ್ಸೆ, ಊಟ, ವಸತಿ ಎಲ್ಲವೂ ಸಿಗಲಿದೆ. ಮನೆಯ ವಾತಾವರಣವೆಲ್ಲ ಈ ಹಾಸ್ಪೈಸ್ ಕಲ್ಪಿಸಲಿದೆ. ಬೆಂಗಳೂರು, ಮುಂಬೈನಂಥ ಮಹಾನಗರಗಳಲ್ಲಿ ಈ ವ್ಯವಸ್ಥೆ ಇದೆ. ಆದರೆ, ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಇಂಥ ಯೋಜನೆ ರೂಪಿಸಿದ್ದು ಮಜೇಥಿಯಾ ಫೌಂಡೇಷನ್. ಸದ್ಯ ಈ ಕಟ್ಟಡ ‘ಕೋವಿಡ್ ಕೇರ್’ ಸೆಂಟರ್ ಆಗಿ ಪರಿವರ್ತನೆಗೊಂಡಿದೆ. ೫೦ ಹಾಸಿಗೆಗಳ ಆಸ್ಪತ್ರೆಗಳಲ್ಲಿ ಸುಮಾರು ೪೫ಕ್ಕೂ ಹೆಚ್ಚು ಸೋಂಕಿತರು ಇಲ್ಲಿ ದಾಖಲಾಗಿದ್ದು, ಬಿಪಿಎಲ್ ಕಾರ್ಡು ಹೊಂದಿದವರಿಗೆ ಎಲ್ಲವೂ ಉಚಿತವಾಗಿದೆ. ಇಸ್ಕಾನ್ ಜತೆ ಸೇರಿ ಇಲ್ಲಿ ಕೋವಿಡ್ ಪೀಡಿತರಿಗೆ ಊಟವನ್ನೂ ನೀಡಲು ಫೌಂಡೇಶನ್ ಮುಂದಾಗಿದೆ. ಕೋವಿಡ್ ಸೋಂಕು ಸಂಪೂರ್ಣವಾಗಿ ಕಡಿಮೆಯಾದ ಬಳಿಕ ಹಾಸ್ಪೈಸ್ ಮತ್ತೆ ಸೇವೆಗೆ ಸಜ್ಜಾಗಲಿದೆ.

 

ಫೌಂಡೇಷನ್‌ಗೆ ಬೆನ್ನೆಲುಬು…

ಜಿತೇಂದ್ರ ಮಜೇಥಿಯಾ ಅವರು ಮಜೇಥಿಯಾ ಫೌಂಡೇಷನ್ ಬೆನ್ನೆಲುಬಾದರೆ, ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ್, ಪುತ್ರ ಕಶ್ಯಪ್ ಮಜೇಥಿಯಾ, ಪತ್ನಿ ರಮಿಲಾ ಜಿತೇಂದ್ರ ಮಜೇಥಿಯಾ ಎಲ್ಲರೂ ಪ್ರತಿಷ್ಠಾನದ ಕಾರ್ಯಗಳಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಸಮಾಜಕ್ಕೆ ಅಗತ್ಯವೆನಿಸಿದ ವೇಳೆ ಸಹಾಯ ಹಸ್ತ ಚಾಚುತ್ತಿದೆ ಈ ಫೌಂಡೇಷನ್. ಅದೂ ಸಣ್ಣದಾಗಿ ಸಹಾಯ ಮಾಡುವುದಲ್ಲ. ಬೃಹತ್ ಪ್ರಮಾಣದಲ್ಲಿಯೇ ಸಹಾಯ ಮಾಡಿ, ಜನರಿಂದ ಮೆಚ್ಚುಗೆ ಗಳಿಸಿದೆ. ಈ ಫೌಂಡೇಷನ್‌ಗೆ ಡಾ. ವಿ.ಬಿ. ನಿಟಾಲಿ, ಡಾ. ಕೆ. ರಮೇಶ ಬಾಬು, ಅಮರೇಶ ಹಿಪ್ಪರಗಿ, ಪ್ರಲ್ಹಾದರಾವ್ ಎಚ್.ಆರ್. ಅವರು ಸಲಹೆಗಾರರಾಗಿದ್ದು, ಅಹರ್ನಿಶಿ ಸೇವೆ ಮಾಡಲು ಸಿದ್ದರಾಗಿದ್ದಾರೆ. ಈ ಸಲಹೆಗಾರರ ತಂಡ ಸಹಾಯಹಸ್ತ ನೀಡುವ ಮುನ್ನ ನಿಗದಿತ ಸ್ಥಳಕ್ಕೆ ಭೇಟಿ ನೀಡುತ್ತದೆ. ಅವರು ಕೊಡುವ ಸಲಹೆ ಆಧರಿಸಿ ಫೌಂಡೇಷನ್‌ನಿಂದ ಹಣ, ಪರಿಕರ ಸೇರಿ ಇತರ ಸವಲತ್ತುಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ.

 

ಗ್ರಂಥಾಲಯ

ಶಾಲಾ-ಕಾಲೇಜ್‌ಗಳಿಗೆ ಬರುವ ವಿದ್ಯಾರ್ಥಿಗಳು ಬಸ್ ಸಿಗದೆ ನಗರದಲ್ಲಿ ಓಡಾಡುತ್ತಾರೆ. ಅವರ ಸಮಯ ಹಾಗೂ ಹಣ ಪೋಲಾಗುವುದನ್ನು ಅರಿತ ಫೌಂಡೇಷನ್, ಜನನಿಬಿಡ ಪ್ರದೇಶದಲ್ಲಿ ಗ್ರಂಥಾಲಯವನ್ನು ತೆರೆದಿದೆ. ಬಹಳಷ್ಟು ಪುಸ್ತಕ ಸಂಗ್ರಹಿಸಿಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೂಲಕ ಉತ್ತಮ ಆಡಳಿತಗಾರರು, ಶಿಕ್ಷಕರು, ವೈದ್ಯರು ಸಮಾಜಕ್ಕೆ ಲಭಿಸಲಿ ಎಂಬ ಸದುzಶವನ್ನು ಹೊಂದಿದೆ. ಹಾಗಾಗಿಯೇ ಯಾವ ಪುಸ್ತಕಗಳನ್ನು ಓದಿದರೆ, ವಿದ್ಯಾರ್ಥಿಗಳು ಸುಲಭವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಹುದು? ಎಂಬ ಮಾಹಿತಿ ಕಲೆ ಹಾಕಿ ಉತ್ತಮ ಪುಸ್ತಕಗಳನ್ನು ರಾಜ್‌ನಗರದ ಸರ್ಕಾರಿ ಪದವಿ ಕಾಲೇಜ್, ವೀರಾಪುರ ಓಣಿ, ಗದಗ ಸೇರಿ ಇತರೆಡೆ ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಅಲ್ಲದೇ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ಭವನದಲ್ಲೂ ಸಂಗ್ರಹಯೋಗ್ಯ ಗ್ರಂಥಾಲಯ ಮಾಡಲು ಮುಂದಾಗಿದ್ದು ಲೋಕಾರ್ಪಣೆಗೊಳ್ಳಬೇಕಿದೆ.

 

ನೊಂದವರ ಪಾಲಿನ ಕಾಮಧೇನು

ಮಜೇಥಿಯಾ ಫೌಂಡೇಷನ್ ಇರುವುದೇ ನೊಂದವರ ಕಣ್ಣೀರು ಒರೆಸಲು. ವಿವಿಧ ಕಾಯಿಲೆಗೆ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಪಡೆದವರು, ಉನ್ನತ ಅಧ್ಯಯನಕ್ಕೆ ಹಣದ ಸಹಾಯ ಕೇಳುವವರು. ಹೀಗೆ ಹತ್ತು ಹಲವು ಸಮಸ್ಯೆಗಳಿರುವ ಜನರಿಗೆ ಫೌಂಡೇಷನ್ ಸಹಾಯ ಹಸ್ತ ನೀಡುತ್ತಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ವೆಚ್ಚ ಭರಿಸಲು ಹಾಗೂ ಉನ್ನತ ಅಧ್ಯಯನಕ್ಕೆ ಹಣದ ಸಹಾಯಧನ ಕೇಳಿದವರಿಗೆ ಚೆಕ್ ರೂಪದಲ್ಲಿ ಇತ್ತೀಚೆಗೆ ಕಿಮ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೆರವು ನೀಡಲಾಯಿತು. ಇದು ಉದಾಹರಣೆ ಅಷ್ಟೇ, ಬಹಳಷ್ಟು ಜನರು ನೆರವು ಕೇಳಿದರೆ, ಸ್ವಲ್ಪ ಸಮಯಾವಕಾಶ ಪಡೆದು ವಿತರಿಸುವ ಪ್ರಕ್ರಿಯೆ ನಿರಂತರವಾಗಿ ಫೌಂಡೇಷನ್‌ನಿಂದ ನಡೆದಿದೆ.

’ನೆಮ್ಮದಿ’ಯ ನಿಟ್ಟುಸಿರು

ಮಜೇಥಿಯಾ ಫೌಂಡೇಷನ್ ವತಿಯಿಂದ ಹಳೇ ಕೋರ್ಟ ಸರ್ಕಲ್ ಬಳಿಯ ಗಿರಿರಾಜ ಅನೆಕ್ಸದಲ್ಲಿ ‘ನೆಮ್ಮದಿ’ ಕೇಂದ್ರವನ್ನು ಆರಂಭಿಸಲಾಗಿದೆ. ಇದು ಕೌನ್ಸಲಿಂಗ್ ಸೆಂಟರ್. ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು, ಯಾರೇ ಬರಲಿ ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ಹೆಸರು ದಾಖಲಾದರೆ, ಹೊರಗಡೆ ಬಹಿರಂಗ ಪಡಿಸುವುದಿಲ್ಲ. ಅಷ್ಟೊಂದು ಜಾಗರೂಕತೆ ವಹಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಇರುವ ಕೇಂದ್ರಗಳಂತೆ ಇದು ಕರ್ತವ್ಯ ನಿರ್ವಹಿಸುತ್ತಿದೆ ಎಂಬುದು ವಿಶೇಷವಾಗಿದೆ.

ಗೋ ಶಾಲೆ
ವಯಸ್ಸಾದ ಗೋವುಗಳನ್ನು ಯಾರೂ ಸಾಕುವುದಿಲ್ಲ. ಆದರೆ, ಮಜೇಥಿಯಾ ಪ್ರತಿಷ್ಠಾನದಡಿಯಲ್ಲಿನ ‘ಗೋಪಾಲ ಗೋಸೇವಾ ಸಮಿತಿ’ ಇಂಥ ಗೋವುಗಳ ನಿರ್ವಹಣೆ ಹೊಣೆ ಹೊತ್ತಿದೆ. ಕೆಲವರು ಗೋವು ಸಾಕಲಾಗದೆ ಮಾರಾಟ ಮಾಡುತ್ತಾರೆ. ಆದರೆ, ವಯಸ್ಸಾದ ಗೋವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಮಾರಾಟ ಮಾಡಿದರೂ ತೆಗೆದುಕೊಳ್ಳಲು ಯಾರು ಇರುವುದಿಲ್ಲ. ಇಂಥ ಗೋವುಗಳನ್ನು ಇಲ್ಲಿಗೆ ತಂದು ಬಿಡಲಾಗಿದ್ದು, ಕಾರವಾರ ರಸ್ತೆಯಲ್ಲಿರುವ ಈ ಗೋ ಶಾಲೆಯಲ್ಲಿ ಸದ್ಯ ೩೩ ಗೋವುಗಳಿವೆ.

ಕೃತಕ ಕೈ-ಕಾಲು ಜೋಡಣಾ ಕೇಂದ್ರ

ಕೃತಕ ಕೈ-ಕಾಲು ಜೋಡಣೆ ಮತ್ತು ಅಳತೆ ಪಡೆಯುವ ಕೇಂದ್ರ ಸ್ಥಾಪಿಸುವ ಉzಶವನ್ನು ಫೌಂಡೇಷನ್ ಹೊಂದಿದೆ. ಬೇರೆ ಬೇರೆ ರಾಜ್ಯದಲ್ಲಿ ಓಡಾಡಿರುವ ಜಿತೇಂದ್ರ ಮಜೇಥಿಯಾ ಅವರು, ಉದಯಪುರದ ನಾರಾಯಣ ಸೇವಾ ಸಂಸ್ಥೆ ಮತ್ತು ಟ್ರಸ್ಟ್‌ನ್ನು ಇವರು ಮಾದರಿಯಾಗಿಟ್ಟುಕೊಂಡಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ್ದ ಈ ತಂಡವನ್ನು ನೋಡಿ ಜಿತೇಂದ್ರ ಅವರು ಬೆರಗಾಗಿದ್ದರು. ಇದೇ ಮಾದರಿಯಲ್ಲಿಯೇ ಕೇಂದ್ರ ತೆರೆಯಲು ಉzಶಿಸಿದ್ದು, ಈಗಾಗಲೇ ಪೂರ್ವಭಾವಿ ಸಭೆಗಳು ನಡೆದಿವೆ. ೨೦೦೮ರಿಂದ ಸುಮಾರು ಸಾವಿರಾರು ಜನರಿಗೆ ಕೃತಕ ಕಾಲು, ಕೈ ಜೋಡಣೆ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಮೂರುಸಾವಿರಮಠದಲ್ಲಿ ನಡೆದ ಇಂತಹ ಒಂದು ಶಿಬಿರದಲ್ಲಿ ಸಾವಿರಾರು ವಿಕಲಚೇತನರು ಭರವಸೆಯ ಹೆಜ್ಜೆಯನ್ನಿಟ್ಟಿದ್ದಾರೆ.

ಹೋಮ್ ಮೆಡಿಕೇರ್ ಇಕ್ವಿಪ್‌ಮೆಂಟ್ ಸೆಂಟರ್

ಫೌಂಡೇಷನ್ ವತಿಯಿಂದ ಹೋಮ್ ಮೆಡಿಕೇರ್ ಸೆಂಟರ್ ಆರಂಭಿಸಲಾಗಿದೆ. ಸಾರ್ವಜನಿಕರು, ರೋಗಿಗಳು ಮತ್ತು ಅಂಗವಿಕಲರಿಗೆ ತಾತ್ಕಾಲಿಕ ಉಪಯೋಗಕ್ಕಾಗಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದಕ್ಕೆ ಮುಂಗಡ ಹಣ ಕಟ್ಟಬೇಕು. ಸಾಮಗ್ರಿಗಳನ್ನು ಮರಳಿ ಕೊಟ್ಟ ಮೇಲೆ ಡೆಪಾಸಿಟ್ ಹಣವನ್ನು ವಾಪಸ್ ನೀಡಲಾಗುತ್ತಿದೆ. ಮಡಚುವ ಗಾಲಿ ಕುರ್ಚಿ, ಶೌಚಗೃಹದ ಗಾಲಿ ಕುರ್ಚಿ, ಮಲಗುವ ಮಂಚ, ಅಲ್ಯುಮಿನಿಯಂ ನಡಿಗೆ ಕೋಲು, ಮೂರು ಕಾಲಿನ ಅಲ್ಯುಮಿನಿಯಂ ನಡಿಗೆ ಕೋಲು, ನಾಲ್ಕು ಕಾಲಿನ ಅಲ್ಯುಮಿನಿಯಂ ನಡಿಗೆ ಕೋಲು, ಗಾಳಿ ತುಂಬಿದ ಮಲಗುವ ಹಾಸಿಗೆ, ವಿರಾಮ ದಿಂಬು, ಕಫ ತೆಗೆಯುವ ಯಂತ್ರ, ಆಮ್ಲಜನಕ ಮುಖಸಾಧನ (ಸಿಲಿಂಡರ್ ರಹಿತ).

ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ

ಎಲ್‌ಕೆಜಿಯಿಂದ ಹಿಡಿದು ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುವ ಬಡ ವಿದ್ಯಾರ್ಥಿಗಳಿಗೆ ಫೌಂಡೇಷನ್ ವತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಗಳು ಯಾರೆಂಬುದನ್ನು ಸಲಹೆಗಾರರ ತಂಡ ಪತ್ತೆ ಹಚ್ಚುತ್ತದೆ. ಆರ್ಥಿಕವಾಗಿ ದುರ್ಬಲರಾಗಿರುವವರ ವರದಿಯನ್ನು ಸಂಗ್ರಹಿಸಿ ಶಿಷ್ಯ ವೇತನ ಮಂಜೂರು ಮಾಡಲಾಗುತ್ತಿದೆ. ಮೊದಲು ೩ ವಿದ್ಯಾರ್ಥಿಗಳಿಂದ ಪ್ರಾರಂಭವಾದುದು, ಈಗ ಪ್ರತಿ ವರ್ಷ ೩೦೦ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಶಿಷ್ಯ ವೇತನ ಪಡೆಯುತ್ತಿದ್ದಾರೆ.

ಮಕ್ಕಳಿಗೆ ಮಧ್ಯಾಹ್ನ ಊಟ
ಅದಮ್ಯ ಚೇತನ ಫೌಂಡೇಷನ್ ಹಾಗೂ ಮಜೇಥಿಯಾ ಫೌಂಡೇಷನ್ ಸಹಯೋಗದಲ್ಲಿ ಪ್ರಮುಖ ಮೂರು ಶಾಲೆಗಳ ಸಾವಿರಾರು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಣೆ ಮಾಡಲಾಗುತ್ತಿದೆ. ರೇವಡಿಹಾಳದ ದಯಾನಂದ ವಿದ್ಯಾರಣ್ಯ ಭಾರತಿ ಗುರುಕುಲ ಶಾಲೆ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಜೋಳದ ಓಣಿಯ ಸಹಸ್ರಾರ್ಜುನ ಶಾಲೆಯ ಮಕ್ಕಳಿಗೆ ಬಿಸಿಯೂಟ ವಿತರಿಸಲಾಗುತ್ತಿದೆ. ಮಕ್ಕಳಲ್ಲಿನ ಅಪೌಷ್ಟಿಕತೆ ತೊಲಗಬೇಕೆಂಬ ಆಶಯದಿಂದ ಇದನ್ನು ಮಾಡಲಾಗುತ್ತಿದೆ.

೨೩ ಹಳ್ಳಿಗಳಿಗೆ ವಾಟರ್ ವೀಲ್

ಗ್ರಾಮೀಣ ಭಾಗದಲ್ಲಿ ಬೇಸಿಗೆ ಬಂದಾಗ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಬಹಳಷ್ಟು ಜನರು ಸೈಕಲ್, ಬಂಡಿ ದೂಡಿಕೊಂಡು ೫-೬ ಕಿ.ಮೀ. ದೂರದಿಂದ ನೀರು ತರಬೇಕು. ಇದನ್ನು ಅರಿತ ಫೌಂಡೇಷನ್ ಸಲಹೆಗಾರರು ‘ಹಳ್ಳಿ ಕಟ್ಟೆ’ ಮೇಲೆ ಕುಳಿತು ನೀರು ತರುವವರನ್ನು ನೋಡುತ್ತಿದ್ದರು. ಕಷ್ಟ ಪಡುತ್ತಿದ್ದ ಜನರ ಹೆಸರು ದಾಖಲಿಸಿಕೊಂಡು ಅವರ ಮನೆಗೆ ತೆರಳಿ ‘ವಾಟರ್ ವೀಲ್’ಗಳನ್ನು ನೀಡಿದ್ದಾರೆ. ಈಗಾಗಲೆ ಧಾರವಾಡ ಜಿಲ್ಲೆಯ ೨೮ ಹಳ್ಳಿಗಳಲ್ಲಿ ೨೩ ಹಳ್ಳಿಯ ಬಹಳಷ್ಟು ಜನರಿಗೆ ೨೦ ಲೀಟರ್ ಸಾಮರ್ಥ್ಯದ ವಾಟರ್ ವೀಲ್‌ಗಳನ್ನು ನೀಡಲಾಗಿದೆ.

ಕೋವಿಡ್ ವೇಳೆ ಜಾಗೃತಿ

ಕೋವಿಡ್ ಸಂದರ್ಭದಲ್ಲಿ ಮಜೇಥಿಯಾ ಫೌಂಡೇಷನ್ ಅತ್ಯುತ್ತಮ ಕೆಲಸ ಮಾಡಿದೆ. ಜಾಗೃತಿ ಮೂಡಿಸುವುದರೊಂದಿಗೆ ೧ ಲಕ್ಷ ೫೦ ಸಾವಿರ ಮಾಸ್ಕ್‌ಗಳನ್ನು ಜನರಿಗೆ ವಿತರಿಸಿದೆ. ಬಸ್ ನಿಲ್ದಾಣ, ಆಸ್ಪತ್ರೆ, ಶಾಲೆ-ಕಾಲೇಜ್, ಪೊಲೀಸ್ ಠಾಣೆ ಇತರೆಡೆ ೫೩೨ ಸ್ಯಾನಿಟೈಸರ್ ಸಹಿತ ಸ್ಟಾಂಡ್‌ಗಳನ್ನು ನೀಡಿದೆ. ನಿರ್ಗತಿಕರು, ಕಾರ್ಮಿಕರಿಗೆ ಊಟ, ನೀರಿನ ಬಾಟಲ್‌ಗಳನ್ನು ಫೌಂಡೇಷನ್ ವತಿಯಿಂದ ಉಚಿತವಾಗಿ ವಿತರಿಸಲಾಗಿದೆ.

ದೊಡ್ಡ ಸಂಸ್ಥೆಗಳು ಶಿಕ್ಷಣ ಮತ್ತು ಆರೋಗ್ಯ ವಿಷಯವನ್ನಿಟ್ಟುಕೊಂಡು ಮುಂದೆ ಬಂದರೆ ನನ್ನ ಮನೆಯ ಹಾಗೂ ಕಚೇರಿಯ ಬಾಗಿಲು ಮುಕ್ತವಾಗಿದೆ. ಉತ್ತರ ಕರ್ನಾಟಕದ ಜನರು ಶಿಕ್ಷಣ ಮತ್ತು ಆರೋಗ್ಯದಲ್ಲಿ ಉತ್ಕೃಷ್ಟತೆ ಹೊಂದಬೇಕೆಂಬ ಆಶಯ ನನ್ನದು. ಇದಕ್ಕಾಗಿ ಯೋಜನೆ ರೂಪಿಸುತ್ತಿದ್ದೇನೆ. ಯಾವುದೇ ಕಾರ್ಪೋರೇಟ್ ಸಂಸ್ಥೆಗಳು ಬಂದರೂ ಸ್ವಾಗತಿಸುವೆ. ಈ ಭಾಗದ ಜನರ ನೋವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಂತಹವರಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂದು ತಿಳಿದುಕೊಂಡು ಮಜೇಥಿಯಾ ಫೌಂಡೇಷನ್ ವತಿಯಿಂದ ಶಕ್ತಿ ಮೀರಿ ಸಹಾಯ ಮಾಡುವೆ.
 ಜಿತೇಂದ್ರ ಮಜೇಥಿಯಾ
ಹುಬ್ಬಳ್ಳಿಯ ಮಜೇಥಿಯಾ ಫೌಂಡೇಷನ್ ಚೇರ್ಮನ್

ಮಜೇಥಿಯಾ ಫೌಂಡೇಷನ್ ವಿಳಾಸ
ಮಜೇಥಿಯಾ ಫೌಂಡೇಷನ್, ನಂ. ೭, ನೆಲಮಹಡಿ, ಗಿರಿರಾಜ ಅನೆಕ್ಸ್, ಟಿಬಿ ರಸ್ತೆ, ಕೋರ್ಟ್ ವೃತ್ತ, ಹುಬ್ಬಳ್ಳಿ -೫೮೦೦೨೯. ದೂರವಾಣಿ: ೦೮೩೬-೪೮೫೦೯೦೧,ಮೊ.ಸಂ. ೯೬೮೬೩೯೬೯೦೧

 

  • mail Id: majethiafoundation2008@gmail.com
  • web adress: <www.majethiafoundation.org>
  • facebook: MajethiaFoundation
  • in: majethia-foundation
  • youtube: majethiafoundation
  • tweeter: Majethia_Hubli
  • instragram: majethiafoundation

 

administrator

Related Articles

Leave a Reply

Your email address will not be published. Required fields are marked *