ಹುಬ್ಬಳ್ಳಿ-ಧಾರವಾಡ ಸುದ್ದಿ
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ?

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ?

ನನ್ನ ಕಣ್ಣಿನಿಂದ ನೋಡುವ ಎಚ್ಚರದಿಂದ ಹರಿಸುವ ಮೂಲ ದನಿಯಾದ ಅರ್ಥ ವಿಚಾರಗಳನ್ನು ಶೋಧಿಸುವ ಹುಡುಕುವ ಪ್ರತಿಯೊಬ್ಬ ಜೀವಂತ ವ್ಯಕ್ತಿಗೂ ಬದುಕು ಮೊದಮೊದಲು ಕಾಣಿಸಿಕೊಳ್ಳುವುದು ಸಂಕೀರ್ಣ ಸ್ಥಿತಿಯಲ್ಲಿ. ನಾಯಕನಾಗಿ ಅಂದರೆ ರಾಜ್ಯದ ಒಂದು ಕುರುಬರಾಗಿ ಹುಟ್ಟಿಕೊಂಡಿದ್ದ ತಿಮ್ಮಪ್ಪನಿಗೂ ಸತತ ನಡೆಯುತ್ತಿದ್ದ ಸಾಧನೆ ಕೀರ್ತನೆ ಭಜನೆ ಹಿನ್ನೆಲೆಯಲ್ಲಿ ಅವರ ಜಾನಪದ ಮನಸ್ಸು ಕ್ರಮೇಣವಾಗಿ ವಾಸ್ತವವನ್ನು ತಳ್ಳಿಹಾಕುತ್ತಾ ಆಧ್ಯಾತ್ಮಿಕ ಭದ್ರಬುನಾದಿ ಕಡೆಗೆ ಸಾಗಿತ್ತು. ಜೀವನದಲ್ಲಿ ಈ ಜಗತ್ತಿನ ವಿಪರ್ಯಾಸದ ಶೋಧನೆ ನಡೆಸಲು ಹೊರಟ, ಕನಕದಾಸರು ಅದಕ್ಕಾಗಿ ಅವರು ಬಹಳಷ್ಟು ಶ್ರಮಿಸಿದರು; ಕಷ್ಟವನ್ನ ಅನುಭವಿಸಿದರು. ಅಷ್ಟೇ ಅಲ್ಲ ಸಾಧಿಸಿದರು.
’ಕುಲ ಕುಲಕುಲವೆನ್ನುತಿಹರು
ಕಲವ್ಯಾವುದು ಸತ್ಯಸುಖವುಳ್ಳ ಜನರಿಗೆ
ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ತ್ವೇಂದ್ರಿಯಗಲ ಕುಲ ಪೇಳಿರಯ್ಯ’
ಎಂಬ ಅವರ ಸಾಲುಗಳ ಇಂದಿಗೂ ಪ್ರಸ್ತುತವಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅದಕ್ಕೆ ಬೇಂದ್ರೆಯವರು ತಮ್ಮ ಕನಕ ಪದ್ಯದಲ್ಲಿ “ಹೊರಗಣ್ಣು-ಒಳಗಣ್ಣು-ಹೊಳೆಗಣ್ಣು ತಿಳಿಗಣ್ನು ನಿಣೆ ತಿನಿಸಿದ ಹಣ್ಣು ಓ ದಾಸ ದಾಸರದಾಸ!” ಎಂದಿದ್ದಾರೆ.
ಅವರ ಉದಾತ್ತ ಮತ್ತು ಉನ್ನತ ಮನಸ್ಸಿನ ಭಾವವನ್ನು ಅವರ ಕೀರ್ತನೆಗಳು ತೋರಿಸುತ್ತವೆ. ಅವರ ಆಧ್ಯಾತ್ಮಿಕ ಗುರಿಯ ಉದಾತ್ತತೆಯನ್ನು ಎಲ್ಲಿಯವರೆಗೆ ಎಂದರೆ ಅವರ ಕೀರ್ತನೆಗಳಲ್ಲಿ ನಾವು ಕಾಣಬಹುದು.

‘ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ನೀ ದೇಹದೊಳಗೊ ನಿನ್ನೊಳು ದೇಹವೊ ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಗಳಿಗೆ ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ’

ಎಲ್ಲವನ್ನ ಕಣ್ಣುಮುಚ್ಚಿಕೊಂಡು ಪರಂಪರೆಗೆ ಬಂದು ಕರ್ಮಕ್ಕೆ ದಾಸರಾಗುವುದು, ಹಂಬಲಿಸುವುದು, ತೊಳಲುವುದು, ಬಳಲುವುದು. ಕೊನೆಗೆ ಶ್ರೀಹರಿಗೆ ಮೊರರೆ ಹೋಗುವುದೇ ಮಾರ್ಗ ಅನ್ನುವ ನಿಶ್ಚಲ ನಿಲುವನ್ನು ಕನಕದಾಸರು ತಾಳಿದರು. ಎಂಬುದು ಅವರ ಬರವಣಿಗೆ ಮೂಲಕ ನಮಗೆ ವ್ಯಕ್ತವಾಗುತ್ತದೆ. ಇಂತಹ ಅನುಭವವನ್ನ ಹೊಂದಿದ ಕನಕದಾಸರು ಎಲ್ಲ ಸಮಸ್ಯೆಗಳಿಗೂ ತಮ್ಮ ಜೀವನದಲ್ಲಿ ಅನುಭವದ ನೆರಳಲ್ಲೇ ಅರ್ಥೈಸುವುದು ಅತ್ಯಂತ ಸ್ಪಷ್ಟವಾಗಿತ್ತು. ಕನಕದಾಸರ ವ್ಯಕ್ತಿತ್ವ ಮತ್ತು ಪ್ರತಿಭೆ ವಿಶಿಷ್ಟ ಬಗೆಯದು. ಅವರು ನಡೆದು ಬಂದ ಹಾದಿಯ ಹಿನ್ನೆಲೆಯಲ್ಲಿ ಸತ್ವವಿದೆ, ತತ್ವವಿದೆ.
ರಾಯರ ಶಿಷ್ಯನಾಗಬೇಕೆಂಬ ಬಯಕೆಯಿಂದ ಕನಕದಾಸರು ಗುರುಗಳ ದರ್ಶನಕ್ಕೆ ಹೊರಟರು. ಅವರಿಗೆ ವ್ಯಾಸರಾಯರಿಂದ ಮಂತ್ರೋಪದೇಶ ಲಭಿಸಿದ್ದೇ ಪವಾಡ. ಗುರುಗಳು ನಿನಗೆ ಎಂತಹ ಮಂತ್ರ ಕೋಣ ಮಂತ್ರ ಎಂದರಂತೆ. ಅಷ್ಟೇ ಶೃದ್ಧೆಯಿಂದ ಕೋಣ ಮಂತ್ರ ಜಪಿಸಿದರು. ತಕ್ಷಣ ಪ್ರತ್ಯಕ್ಷವಾಯಿತು ಕೋಣ. ನಂತರ ಕನಕದಾಸರು ವ್ಯಾಸರಾಯರ ಹತ್ತಿರ ಕೋಣನಿಂದ ಏನು ಮಾಡಿಸಲಿ ಎಂದರಂತೆ. ಆದಕ್ಕೆ ರಾಯರು ಕಟ್ಟಿಸುತ್ತಿದ್ದ ಕೆರೆಗೆ ಅಡ್ಡವಾಗಿದ್ದ ದೊಡ್ಡ ಬಂಡೆ ಕಿತ್ತೊಗೆಸು ಎಂದರಂತೆ. ಅದೇ ರೀತಿ ಕನಕದಾಸರು ಮಾಡಿಸಿದರು. ಹೀಗೆ ಪವಾಡಗಳ ಮೂಲಕ, ತಮ್ಮ ಸಾಹಿತ್ಯದ ವರ್ಣನೆಗಳ ಮೂಲಕ ಈಗಲೂ ನಮ್ಮ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಂತಹ ಕನಕದಾಸರು, ಸಾಹಿತ್ಯದಲ್ಲಿ ಅನೇಕ ಕಾವ್ಯ ಮೌಲ್ಯಗಳನ್ನು ಸಂದೇಶಗಳನ್ನು ಉಳಿಸಿ ಹೋಗಿದ್ದಾರೆ. ಇಂದಿನ ಬದುಕಿಗೆ ಕನಕದಾಸರ ಕೀರ್ತನೆಗಳಲ್ಲಿ ಒಂದು ನೆಮ್ಮದಿ ಸಮಾಧಾನ ತೋರುತ್ತದೆ. ಅಸ್ತವ್ಯಸ್ತವಾಗಿರುವ ನಮ್ಮ ಸಮಾಜ ಜೀವನಕ್ಕೆ ಅವುಗಳಲ್ಲಿ ಒಂದು ಮಾರ್ಗ ಕಾಣಿಸುತ್ತದೆ. ಹೀಗೆ ಕನಕದಾಸರು ಇಂದಿಗೂ ಕನ್ನಡಿಗರ ಹೃದಯದಲ್ಲಿ ನೆಲೆಯೂರಿದ್ದಾರೆ.

bhagyajyoti
ಡಾ.ಭಾಗ್ಯಜ್ಯೋತಿ ಕೋಟಿಮಠ
ಮುಖ್ಯಶಿಕ್ಷಕಿ, ಶಿರೂರು, ತಾ.ನವಲಗುಂದ

 

administrator

Related Articles

Leave a Reply

Your email address will not be published. Required fields are marked *