ಅವ್ವ ಅರಿವಿನ ಮೊದಲ ಶಬ್ದ
ಅಂತರಾಳದ ಕೂಗು, ಒಡಲ ನುಡಿ
ಅಂತಃಕರಣದ ಸೆಳೆತಕೆ ಸಮ್ಮಿಳಿತವಿದು.
ನಖಶಿಖಾಂತ ಕಂಪನಗೊಳ್ಳುವ ಇಂಪಾದ ಧ್ವನಿ
ಜನಿತ ಜೀವಿಗೆ ಕರುಳ ನೀಡಿದ ಜನನಿ. !
ಉದರದಿ ಉದಿಸಿದೆಲ್ಲರ ಉಸಿರಿನ ಮೂಲ
ನೋವು ಭಾವಗಳಿಗೆ ನಲಿವು ಗೆಲುವುಗಳಿಗೆ
ಒಲಿದು ಒಂದಾಗುವ ಒದ್ದಾಡುವ ಜೀವ
ಕೊರಗುವ ಮರಗುವ ಮುಗ್ಧ ಭಾವ
ಅವ್ವನಿಗೆ ಅವ್ವನೇ ಸಾಟಿ, ಈಕೆ ವರ್ಣನಾತೀತ. !
ಕಕ್ಕುಲತೆಯ ಕಟ್ಟೆ ಕಟ್ಟಿ ಅಕ್ಕರದಿ ಪೊರೆವಳು
ಚೊಕ್ಕ ಮನದಿ ಹಕ್ಕಿನಿಂದ ಹರಕೆ ಕೊಡುವಳು
ಮಕ್ಕಳಿಚ್ಛೆ ಅರಿತು ಬೆರೆತು ನಕ್ಕೇ ನಗುವಳು
ಅಕ್ಕರೆಯ ಅವ್ವನಾಗಿ ಸಕ್ಕರೆಯನೆ ಉಣಿಸುವಳು
ಮಿಕ್ಕಿ ಯಾರು ಇಲ್ಲ ಜಗದಿ ಇವಳ ಮರೆಸಲು. !
‘ಜೀವಿ’
ಗದಿಗೆಯ್ಯ ವಿ. ಹಿರೇಮಠ